ಬೆಳಗಾವಿ/ಕಲಘಟಗಿ: ‘ರಾಷ್ಟ್ರೀಯ ಸ್ವಯಂಸೇವಕ ಸಂಘ (ಆರ್‌ಎಸ್‌ಎಸ್) ರಾಜಕೀಯ ಸಂಘಟನೆಯೇ ಹೊರತು ಸಾಮಾಜಿಕ ಸಂಘಟನೆ ಅಲ್ಲ. ಆರ್‌ಎಸ್‌ಎಸ್ ಅನ್ನೇ ನಿಷೇಧಿಸಬೇಕಿದೆ’ ಎಂದು ಆರೋಗ್ಯ ಸಚಿವ ದಿನೇಶ ಗುಂಡೂರಾವ್ ತಾಕೀತು ಮಾಡಿದರು.
ಮಂಗಳವಾರ ಸುದ್ದಿಗಾರರ ಜೊತೆಗೆ ಮಾತನಾಡಿದ ಅವರು ‘ಆರ್‌ಎಸ್‌ಎಸ್ ಕಾರ್ಯಕ್ರಮ ಅಥವಾ ಚಟುವಟಿಕೆಗಳಲ್ಲಿ ಸರ್ಕಾರಿ ನೌಕರರು ಭಾಗವಹಿಸಬಾರದು’ ಎಂದು ಹೇಳಿದರು.
‘ಆರ್‌ಎಸ್‌ಎಸ್ ನಾಯಕರು ವಿವಿಧ ಸರ್ಕಾರಗಳನ್ನು ರಚಿಸುವಲ್ಲಿ ಮತ್ತು ಉರುಳಿಸುವಲ್ಲಿ ಭಾಗಿಯಾಗಿದ್ದಾರೆ. ಚುನಾವಣೆಯಲ್ಲೂ ಆ ಸಂಘಟನೆಯ ನಾಯಕರು ಸ್ಪರ್ಧಿಸುತ್ತಾರೆ. ಹೀಗಾಗಿ ಅದು ಸಾಮಾಜಿಕ ಸಂಘಟನೆಯಲ್ಲ’ ಎಂದು ಪ್ರತಿಪಾದಿಸಿದರು.
ಧಾರವಾಡ ಜಿಲ್ಲೆ ಕಲಘಟಗಿಯಲ್ಲಿ ಮಾತನಾಡಿದ ಅವರು, ‘ಆರ್‌ಎಸ್‌ಎಸ್ ಮತ್ತು ಬಿಜೆಪಿ ಎರಡೂ ಒಂದೇ ಆಗಿದ್ದು, ರಾಜಕೀಯ ಸಂಘಟನೆಗಳು’ ಎಂದು ಪುನರುಚ್ಚರಿಸಿದರು.
ಸರ್ಕಾರಿ ಕಚೇರಿ, ಶಾಲೆ ಹಾಗೂ ಆವರಣದಲ್ಲಿ ರಾಜಕೀಯ ಸಂಘಟನೆಗಳು ಕಾರ್ಯಕ್ರಮ ಆಯೋಜಿಸ
ಬಾರದು. ಸಚಿವ ಪ್ರಿಯಾಂಕ್ ಖರ್ಗೆ ಹೇಳಿದ್ದರಲ್ಲಿ ಏನೂ ತಪ್ಪಿಲ್ಲ. ಕಾನೂನು ಎಲ್ಲರಿಗೂ ಒಂದೇ’ ಎಂದರು.
ಆರ್‌ಎಸ್‌ಎಸ್‌ನ ಕಾರ್ಯ ಮತ್ತು ಅದರ ಸ್ಥಾಪಕರ ಧ್ಯೇಯೋದ್ಧೇಶ ಅರಿತು ಸಚಿವ ಪ್ರಿಯಾಂಕ್ ಖರ್ಗೆ ಮಾತನಾಡಬೇಕೆ ಅಸಂಬದ್ಧವಾಗಿ ಹೇಳಿಕೆ ನೀಡುವುದು ಅವರಿಗೆ ಶೋಭೆ ತರಲ್ಲಅರವಿಂದ ಬೆಲ್ಲದ ವಿರೋಧ ಪಕ್ಷದ ಉಪನಾಯಕ ವಿಧಾನಸಭೆ
ಆಡಳಿತ ವೈಫಲ್ಯ ಮರೆಮಾಚಿ ಜನರ ಗಮನ ಬೇರೆಡೆ ಸೆಳೆಯಲು ಕಾಂಗ್ರೆಸ್ ನಾಯಕರು ಆರ್‌ಎಸ್‌ಎಸ್ ಟೀಕಿಸುತ್ತಾರೆ. ಸಂಘದ ನೂರು ವರ್ಷದ ಅದ್ದೂರಿ ಆಚರಣೆ ನೋಡಿ ಅವರಿಗೆ ಸಹಿಸಲು ಆಗುತ್ತಿಲ್ಲ.ವಿಶ್ವೇಶ್ವರ ಹೆಗಡೆ, ಕಾಗೇರಿ ಸಂಸದ ಉತ್ತರ ಕನ್ನಡ
‘ತಪ್ಪು ಗ್ರಹಿಕೆ: ಶಾಖೆಗೆ ಬನ್ನಿ ನಿವಾರಿಸುತ್ತೇವೆ’
ಬೆಳಗಾವಿ: ‘ಆರ್‌ಎಸ್‌ಎಸ್ ಬಗ್ಗೆ ಪ್ರಿಯಾಂಕ್ ಖರ್ಗೆ ಆಧಾರ ರಹಿತ ಹೇಳಿಕೆಗಳಿಂದ ದೇಶದ ಏಕಾಗ್ರತೆಗೆ ಧಕ್ಕೆಯಾಗಿದೆ. ತಪ್ಪುಗ್ರಹಿಕೆ ದೂರವಾಗಬೇಕಾದರೆ ಅವರು ಎಂಟು ದಿನ ಆರ್‌ಎಸ್‌ಎಸ್ ಶಾಖೆಗೆ ಬರಲಿ’ ಎಂದು ಬಿಜೆಪಿ ವಕ್ತಾರ ಎಂ.ಬಿ.ಝಿರಲಿ ಹೇಳಿದರು. ‘ಆರ್‌ಎಸ್‌ನಲ್ಲಿ ಜಾತಿ ಸ್ವಾರ್ಥ ಇಲ್ಲ. ಆದರೆ ದೇಶದ ಏಕತೆ ಮತ್ತು ಸಂವಿಧಾನದ ಆಶಯಕ್ಕೆ ವಿರುದ್ಧವಾಗಿ ಆರ್‌ಎಸ್‌ಎಸ್‌ನಿಂದ ಜನರಿಗೆ ನಕಾರಾತ್ಮಕ ಆಲೋಚನೆ ತುಂಬಲಾಗುತ್ತಿದೆ ಎಂದು ಪ್ರಿಯಾಂಕ್ ತಿಳಿಸಿದ್ದಾರೆ. ಯಾವ ರೀತಿಯ ನಕಾರಾತ್ಮಕ ಆಲೋಚನೆ ಎಂದು ಸಾಬೀತುಪಡಿಸಬೇಕು. ಇಲ್ಲದಿದ್ದರೆ ತಕ್ಷಣವೇ ಸಚಿವ ಸಂಪುಟದಿಂದ ಅವರನ್ನು ವಜಾಗೊಳಿಸಬೇಕು’ ಎಂದು ಮಂಗಳವಾರ ಸುದ್ದಿಗಾರರಿಗೆ ತಿಳಿಸಿದರು. ‘ಪ್ರಿಯಾಂಕ್ ಖರ್ಗೆ ಅವರು ಮುಖ್ಯಮಂತ್ರಿಗೆ ಬರೆದ ಪತ್ರದಲ್ಲಿ ಸಂವಿಧಾನದ ಬಗ್ಗೆ ಪ್ರಸ್ತಾಪಿಸುತ್ತ ಆರ್ಟಿಕಲ್ 19 ಉಲ್ಲಂಘಿಸಿದ್ದಾರೆ. ಸಂವಿಧಾನವು ಆರ್ಟಿಕಲ್ 19ರಡಿ ಸಂಘವನ್ನು ಕಟ್ಟಿಕೊಳ್ಳುವ ಸ್ವಾತಂತ್ರ್ಯ ನೀಡುತ್ತದೆ ಎಂದು ಹೇಳಿದ್ದಾರೆ.
ಆರ್‌ಎಸ್‌ಎಸ್‌ನಲ್ಲಿ ಇದ್ದವರಷ್ಟೇ ದೇಶಭಕ್ತರಲ್ಲ’
ಬೀದರ್: ‘ಆರ್‌ಎಸ್‌ಎಸ್‌ನಲ್ಲಿ ಇದ್ದವರಷ್ಟೇ ದೇಶಭಕ್ತರಲ್ಲ ಈ ದೇಶದಲ್ಲಿ ಇರುವ ಎಲ್ಲರೂ ದೇಶ ಭಕ್ತರೇ’ ಎಂದು ಕಾರ್ಮಿಕ ಸಚಿವ ಸಂತೋಷ್ ಲಾಡ್ ಹೇಳಿದರು. ಮಂಗಳವಾರ ಪತ್ರಕರ್ತರೊಂದಿಗೆ ಮಾತನಾಡಿದ ಅವರು ‘ಸರ್ದಾರ್ ವಲ್ಲಭಭಾಯಿ ಪಟೇಲ್ ಅವರು ದೇಶದ ಗೃಹಮಂತ್ರಿ ಇದ್ದಾಗ ಎರಡು ಸಲ ಆರ್‌ಎಸ್‌ಎಸ್ ನಿಷೇಧಿಸಿದ್ದರು. ಬಿಜೆಪಿಯವರು ಅದನ್ನು ಮರೆತಿದ್ದಾರೆ’ ಎಂದು ನೆನಪಿಸಿದರು. ಪ್ರಿಯಾಂಕ್ ಖರ್ಗೆ ಅವರು ಯಾವುದೇ ಬೆದರಿಕೆಗಳಿಗೆ ಹೆದರುವ ಅಗತ್ಯವಿಲ್ಲ. ತಾಲಿಬಾನ್ ಹಾಗೂ ಮನುಸ್ಮೃತಿ ಇಬ್ಬರದೂ ಒಂದೇ ಒಂದೇ ಮನಸ್ಥಿತಿ’ ಎಂದು ಟೀಕಿಸಿದರು.
‘ಆರ್‌ಎಸ್‌ಎಸ್ ಇಲ್ಲದಿದ್ದರೆ ಇತಿಹಾಸವೇ ಬದಲಾಗುತ್ತಿತ್ತು’
ಹಾಸನ: ‘ನರಿಯ ಕೂಗು ಗಿರಿಗೆ ಮುಟ್ಟಲಾರದು. ಯಾರು ಎಷ್ಟೇ ಕಿರುಚಿದರೂ ಗಿರಿ ಕಳಚಿ ಬೀಳದು. ಸಂಘದ ಶಕ್ತಿ ಅಂಥದ್ದು. ಅದಿಲ್ಲದಿದ್ದರೆ ದೇಶದ ಚರಿತ್ರೆ ಬೇರೆ ಆಗುತ್ತಿತ್ತು’ ಎಂದು ಮೇಲ್ಮನೆ ಪ್ರತಿಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ ಹೇಳಿದರು. ಮಂಗಳವಾರ ಇಲ್ಲಿ ಮಾತನಾಡಿದ ಅವರು ಆರ್‌ಎಸ್‌ಎಸ್ ವಿರೋಧಿ ಹೇಳಿಕೆಗಳಿಂದ ನಮ್ಮನ್ನು ಹಿಮ್ಮೆಟ್ಟಿಸಲಾಗದು. ಈ ಸಂಘಟನೆಯಿಂದಲೇ ದೇಶ ಸುರಕ್ಷಿತವಾಗಿದೆ. ಮುಂದೆಯೂ ಬಲಿಷ್ಠವಾಗಿ ಬೆಳೆಯಲಿದೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.