ಪ್ರಿಯಾಂಕ್ ಖರ್ಗೆ
ಬೆಂಗಳೂರು: 'ನಮ್ಮ ಮೇಲೆ ಆರ್‌ಎಸ್‌ಎಸ್ ಋಣವಿದೆ. ನನ್ನ ಪುತ್ರ ಆಡಿದ ಮಾತಿನಿಂದ ನೋವಾಗಿದ್ದರೆ ನಿಮ್ಮ ಕ್ಷಮೆ ನಮ್ಮ ಮೇಲಿರಲಿ' ಎಂಬ ಬರಹವನ್ನು ಒಳಗೊಂಡ ಮಲ್ಲಿಕಾರ್ಜುನ ಖರ್ಗೆ ಹೆಸರಿನ ಪೋಸ್ಟರ್‌ವೊಂದು ಸಾಮಾಜಿಕ ಜಾಲತಾಣದಲ್ಲಿ ಹರಿದಾಡುತ್ತಿದೆ. ಆ ಪೋಸರ್ ಅನ್ನು ಉಲ್ಲೇಖಿಸಿ ‘ಸುಳ್ಳು ಮಾರ್ಗವು ಸಂಘನೀತಿ‘ ಎಂದು ಸಚಿವ ಪ್ರಿಯಾಂಕ್ ಖರ್ಗೆ ಕಿಡಿಕಾರಿದ್ದಾರೆ.
ಸಾಮಾಜಿಕ ಮಾಧ್ಯಮದಲ್ಲಿ(ಫೇಸ್‌ಬುಕ್) ಪೋಸ್ಟ್ ಮಾಡಿರುವ ಅವರು, ಸತ್ಯಮಾರ್ಗದಲ್ಲಿ ಗೆಲ್ಲಲು ಸಾಧ್ಯವಾಗದಿದ್ದಾಗ ಸುಳ್ಳಿನ ಮಾರ್ಗದಲ್ಲಾದರೂ ಗೆಲ್ಲಬೇಕು ಎನ್ನುವುದು ಸಂಘನೀತಿ!
ಸುಳ್ಳಿನ ಗೋಪುರ ಕಟ್ಟಿ ತಮ್ಮ ಕರಾಳ ಇತಿಹಾಸಕ್ಕೆ ಸಚ್ಚಾರಿತ್ರ್ಯದ ಬಣ್ಣ ಲೇಪಿಸಲು ಪ್ರಯತ್ನಿಸುವ ಸಂಘಪರಿವಾರವು ಮಲ್ಲಿಕಾರ್ಜುನ ಖರ್ಗೆಯವರ ಇತಿಹಾಸವನ್ನೂ ಕೆಡಿಸಲು ಮುಂದಾಗುವ ಮೂಲಕ ತಮ್ಮ ಹತಾಶೆಯನ್ನು ವ್ಯಕ್ತಪಡಿಸುತ್ತಿದ್ದಾರೆ ಎಂದು ಕುಟುಕಿದ್ದಾರೆ.
ಸಂಘಪಾರಿವಾರ ಮೊದಲಿನಿಂದಲೂ ಇಂತಹ ಕುತಂತ್ರ, ಕುಕೃತ್ಯ, ಕುಯುಕ್ತಿಗಳನ್ನು ಮಾಡಿದ ಕುಖ್ಯಾತಿಯನ್ನು ಹೊಂದಿದೆ. ಈ ಕೃತ್ಯಕ್ಕೆ ಕಾನೂನಿನ ಮೂಲಕವೇ ಉತ್ತರ ನೀಡಲಾಗುವುದು ಎಂದೂ ಎಚ್ಚರಿಸಿದ್ದಾರೆ
ಆದರ್ಶ್ ಅರಸ್ ಎಂಬುವವರು ಈ ಪೋಸ್ಟ್ ಹಂಚಿಕೊಂಡಿದ್ದಾರೆ. ಏನಿದು ಅಪ್ಪ ಮಕ್ಕಳ ಡಬಲ್ ಸ್ಟ್ಯಾಂಡ್ ಎಂದು ಶೀರ್ಷಿಕೆ ಬರೆದಿದ್ದಾರೆ. ಆ ಪೋಸ್ಟ್‌ನಲ್ಲಿ ಸಮಸ್ತ ಕನ್ನಡಿಗರೇ, ನಾನು ಮತ್ತು ನನ್ನ ಕುಟುಂಬ ಎಂದೂ ಆರ್‌ಎಸ್‌ಎಸ್‌ಗೆ ವಿರೋಧವಾಗಿರಲಿಲ್ಲ, ಆಗೋದೂ ಇಲ್ಲ. ನನ್ನ ಕುಟುಂಬವನ್ನು ಅಂದು ರಜಾಕಾರರ ದಾಳಿಯಿಂದ ರಕ್ಷಿಸಿದ್ದೇ ಆರ್‌ಎಸ್‌ಎಸ್ ಕಾರ್ಯಕರ್ತರು. ನನ್ನ ಪುತ್ರ ಪ್ರಿಯಾಂಕ್ ಖರ್ಗೆ ತಪ್ಪಿ ಆಡಿದ ಮಾತಿನಿಂದ ನೋವಾಗಿದ್ದಾರೆ, ನಿಮ್ಮ ಕ್ಷಮೆ ನಮ್ಮ ಮೇಲಿರಲಿ. ನನ್ನ ರಾಜಕೀಯ ನಿಲುವು ಏನೇ ಇರಲಿ, ರಾಜಕೀಯೇತರ ಸಂಸ್ಥೆ ಆರ್‌ಎಸ್‌ಎಸ್‌ನ ಶತಮಾನದ ಉತ್ಸವಕ್ಕೆ ನಮ್ಮ ಕುಟುಂಬದ ಹಾರೈಕೆ, ಋಣ ಎಂದೂ ಇದೆ. ಮಲ್ಲಿಕಾರ್ಜುನ ಖರ್ಗೆ ರಾಷ್ಟ್ರೀಯ ಅಧ್ಯಕ್ಷರು, ಇಂಡಿಯನ್ ನ್ಯಾಷನಲ್ ಕಾಂಗ್ರೆಸ್ ಎಂದು ಬರೆಯಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.