ADVERTISEMENT

ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ: ಪ್ರಕಾಶ್ ರಾಜ್‌

​ಪ್ರಜಾವಾಣಿ ವಾರ್ತೆ
Published 15 ಅಕ್ಟೋಬರ್ 2025, 15:42 IST
Last Updated 15 ಅಕ್ಟೋಬರ್ 2025, 15:42 IST
ಪ್ರಕಾಶ್ ರಾಜ್‌
ಪ್ರಕಾಶ್ ರಾಜ್‌   

ಮೈಸೂರು: ‘ಕತ್ತೆ ವಯಸ್ಸಾದರೂ ಬುದ್ಧಿ ಬಂದಿಲ್ಲ ಎಂಬ ಗಾದೆಯಂತೆ, ಒಂದು ಸಂಸ್ಥೆಗೆ 100 ವರ್ಷವಾದರೂ ಬುದ್ಧಿ ಬಂದಿಲ್ಲ. ದೊಣ್ಣೆ ಹಿಡಿದುಕೊಂಡು ಓಡಾಡುತ್ತಿರುವ ಅವರು ಯಾವುದೇ ಧರ್ಮಕ್ಕೆ ಸೇರಿದವರಲ್ಲ’ ಎಂದು ನಟ ಪ್ರಕಾಶ್‌ರಾಜ್ ಟೀಕಿಸಿದರು.

ನಗರದ ಮಹಾರಾಜ ಕಾಲೇಜು ಮೈದಾನದಲ್ಲಿ ಬುಧವಾರ ಬೌದ್ಧ ಸಮ್ಮೇಳನದ ಸಮಾರೋಪ ಭಾಷಣ ಮಾಡಿದ ಅವರು, ‘ಮಾತೆತ್ತಿದ್ದರೆ ಹಿಂದೂ ಧರ್ಮ ಎನ್ನುತ್ತಾರೆ. ಆ ಧರ್ಮಕ್ಕೆ ಸೇರದ ಕಳ್ಳರು ಅವರು. ಸಗಣಿ ಆಲ್‌ರೌಂಡರ್ಸ್. ಒಲೆಗೆ ಬಿದ್ದರೆ ಇಂಧನ, ಹೊಲಕ್ಕೆ ಬಿದ್ದರೆ ಗೊಬ್ಬರ, ತಲೆಗೆ ಬಿದ್ದರೆ ಅಂಧ ಭಕ್ತ’ ಎಂದರು.

‘ಎಲ್ಲರನ್ನೂ ತುಳಿಯಬೇಕೆಂದುಕೊಂಡಿರುವ ನಿಮ್ಮ ಇತಿಹಾಸ ಕೇವಲ ಒಂದು ಶತಮಾನವಷ್ಟೇ. ಆದರೆ, ಶತಶತಮಾನಗಳ ಬುದ್ಧ, ಬಸವ ಹಾಗೂ‌ ಅವರನ್ನು ನಂಬಿ ದಾರಿದೀಪವಾಗಿರುವ ಅಂಬೇಡ್ಕರ್ ಅವರು ನಮ್ಮ ಹಿಂದೆ ಶಕ್ತಿಯಾಗಿ ನಿಂತಿದ್ದಾರೆ. ಈ ಮೂವರ ಮುಂದೆ ನಿಮಗೆ ನಿಲ್ಲಲಾಗದು. ಅಸಮಾನತೆಯನ್ನು ಪ್ರತಿಪಾದಿಸುವ ನಿಮಗೆ ಧರ್ಮದೇಟು ಕೊಡಬೇಕು’ ಎಂದು ಹೇಳಿದರು.

ADVERTISEMENT

‘ರಾಜಕಾರಣಿಗಳು ಬುದ್ಧ, ಬಸವ, ಅಂಬೇಡ್ಕರ್ ಬಗ್ಗೆ ಭಾಷಣ ಮಾಡುವುದಲ್ಲ. ಸಂಘಿಗಳ ಕಾರ್ಯಕ್ರಮಗಳಿಗೆ ಅತಿಥಿಗಳಾಗಿ ಹೋಗಬಾರದು, ಸದನದಲ್ಲೂ ಅವರ ಮಂತ್ರಗಳನ್ನು ಪಠಿಸಬಾರದು ಎಂದು ಹೇಳಬೇಕು’ ಎಂದರು.

‘ರಾಕ್ಷಸರ ಜಗತ್ತಿನಲ್ಲಿ ಕರುಣೆ, ಪ್ರೀತಿಯಿಂದಷ್ಟೇ ಅಲ್ಲ, ಹೋರಾಟದಿಂದಲೇ ಮಾತ್ರ ಗೆಲ್ಲಲು ಸಾಧ್ಯ ಎಂಬುದನ್ನು ಅರ್ಥಮಾಡಿಕೊಳ್ಳಬೇಕು. ಸಂಘಟಿತರಾಗಬೇಕು’ ಎಂದು ಸಲಹೆ ನೀಡಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.