ADVERTISEMENT

ಆರ್‌ಟಿಇ ಶುಲ್ಕ ಮರುಪಾವತಿ ವಿಳಂಬ ಖಾಸಗಿ ಶಾಲೆಗಳ ಒಕ್ಕೂಟ ಆಕ್ಷೇಪ

ಪೋಷಕರಿಂದಲೇ ಸಂಗ್ರಹಿಸುವುದು ಅನಿವಾರ್ಯ’

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 20:15 IST
Last Updated 4 ಜೂನ್ 2019, 20:15 IST
   

ಬೆಂಗಳೂರು: ರಾಜ್ಯದಲ್ಲಿ ಶಿಕ್ಷಣ ಸಚಿವರಿಲ್ಲದೆ ಖಾಸಗಿ ಶಾಲೆಗಳ ಗೋಳು ಕೇಳುವವರೇ ಇಲ್ಲವಾಗಿದೆ. ಅಧಿಕಾರಿಗಳು ಕೇವಲ ಸುತ್ತೋಲೆ ಹೊರಡಿಸುತ್ತ ದಬ್ಬಾಳಿಕೆ ನಡೆಸುತ್ತಿದ್ದಾರೆ. ಆರ್‌ಟಿಇ ಶುಲ್ಕ ಮರುಪಾವತಿ ಸಹಿತ ಹಲವಾರು ವಿಷಯಗಳಲ್ಲಿ ಸರ್ಕಾರ ವಿಳಂಬ ಧೋರಣೆ ಅನುಸರಿಸುತ್ತಿದೆ ಎಂದು ಖಾಸಗಿ ಶಾಲೆಗಳಒಕ್ಕೂಟ ಆರೋಪಿಸಿದೆ.

‘ಆರ್‌ಟಿಇ ಶುಲ್ಕ ಮರುಪಾವತಿ ರೂಪದಲ್ಲಿ ಕಳೆದ ವರ್ಷದ ₹ 600 ಕೋಟಿ ನೀಡಲು ಬಾಕಿ ಇದೆ. ಈ ವರ್ಷ ಅದರ ಮೊತ್ತ ₹ 1,400 ಕೋಟಿಯಷ್ಟಾಗುತ್ತದೆ. ಸರ್ಕಾರಕ್ಕೆ ಒಂದು ತಿಂಗಳು ಗಡುವು ನೀಡುತ್ತೇವೆ. ಅಷ್ಟರೊಳಗೆ ಶುಲ್ಕ ಮರುಪಾವತಿ ಮಾಡದ ಇದ್ದರೆ ಪೋಷಕರಿಂದಲೇ ಹಣ ಪಾವತಿ ಮಾಡಿಸಿಕೊಳ್ಳುವುದು ಅನಿವಾರ್ಯವಾಗುತ್ತದೆ. ಸರ್ಕಾರ ಬಳಿಕ ಪೋಷಕರಿಗೇ ನೇರ ಹಣ ಸಂದಾಯ ಮಾಡಲಿ’ ಎಂದು ಕರ್ನಾಟಕ ಪ್ರಾಥಮಿಕ ಮತ್ತು ಪ್ರೌಢಶಾಲೆಗಳ ಸಂಘಟಿತ ಆಡಳಿತ ಮಂಡಳಿಯ (ಕೆಎಎಂಎಸ್‌) ಪ್ರಧಾನ ಕಾರ್ಯದರ್ಶಿ ಡಿ.ಶಶಿಕುಮಾರ್‌ ಮಂಗಳವಾರ ಇಲ್ಲಿ ಪತ್ರಿಕಾಗೋಷ್ಠಿಯಲ್ಲಿ ತಿಳಿಸಿದರು.

‘ಡಿಡಿಪಿಐ ಹಂತದಲ್ಲಿ ವಿನಾ ಕಾರಣ ಲಂಚಕ್ಕಾಗಿ ಕಿರುಕುಳ ನೀಡಲಾಗುತ್ತಿದೆ. ಹಿರಿಯ ಅಧಿಕಾರಿಗಳಿಗೆ ಗೊತ್ತಿದ್ದೇ ಇದೆಲ್ಲ ನಡೆಯುತ್ತಿದೆ’ ಎಂದರು.

ADVERTISEMENT

ಸಿಬಿಎಸ್‌ಇ, ಐಸಿಎಸ್‌ಇ ಶಾಲೆಗಳಲ್ಲಿ ಕನ್ನಡ ಅನುಷ್ಠಾನ ವಿಚಾರದಲ್ಲಿ ತೊಡಕು ನಿವಾರಿಸುವ ಕ್ರಮವನ್ನು ಸರ್ಕಾರ ಕೈಗೊಂಡಿಲ್ಲ. ಇದರಿಂದಾಗಿ ಅನಿವಾರ್ಯವಾಗಿ ದ್ವಿತೀಯ ಭಾಷೆಯಾಗಿ ಕನ್ನಡದ ಜತಗೆ ಇನ್ನೊಂದು ಭಾಷೆಯನ್ನು ಕಲಿಸಬೇಕಾಗಿದೆ.ರ್ಈ ವರ್ಷ ಪಠ್ಯಪುಸ್ತಕಗಳನ್ನೂ ಸರಿಯಾಗಿ ಪೂರೈಸಿಲ್ಲ ಎಂದ ಅವರು, 1 ಮತ್ತು 2ನೇ ತರಗತಿಗೆ ಹೋಂ ವರ್ಕ್‌ ಬೇಡ ಎನ್ನುವುದು, ಶಾಲಾ ಬ್ಯಾಗ್‌ ತೂಕ ಇಳಿಸುವಂತಹ ವಿಚಾರಗಳಲ್ಲಿ ಕೆಲವು ವ್ಯಕ್ತಿಗಳ ಮನವೊಲಿಕೆಗಾಗಿ ಆದೇಶಗಳನ್ನು ಹೊರಡಿಸಲಾಗುತ್ತಿದೆ. ಶಾಲೆಗಳ ಮಾನ್ಯತೆ ರದ್ದುಪಡಿಸುವ ಬೆದರಿಕೆ ಒಡ್ಡುವುದು ಸರ್ವಾಧಿಕಾರಿ ಧೋರಣೆ ಎಂದರು.

ಪತ್ರಿಕಾಗೋಷ್ಠಿಯಲ್ಲಿ ‘ಮಿಕ್ಸಾ‘ ಸಂಘಟನೆಯ ಅಧ್ಯಕ್ಷ ಶ್ರೀನಿವಾಸನ್‌, ಐಸಿಎಸ್‌ಇ ವಕ್ತಾರೆ ಗಾಯತ್ರಿ ದೇವಿ, ‘ಮಾಸ್‌’ ಸಂಘಟನೆಯ ಕಾರ್ಯದರ್ಶಿ ರಮೇಶ್‌ ರಾಜು ಇದ್ದರು.

ಮಾನದಂಡ ನಿಗದಿಪಡಿಸಿ

ಸಿಬಿಎಸ್‌ಇ ಮತ್ತು ಐಸಿಎಸ್‌ಇ ಪಠ್ಯಕ್ರಮದ ಶಾಲೆಗಳಲ್ಲಿ ಕನ್ನಡ ಅನುಷ್ಠಾನಕ್ಕೆ ಕಾನೂನು ತೊಡಕು ಇದೆ. ಇದನ್ನು ಸರ್ಕಾರ ನಿವಾರಿಸಿಲ್ಲ. ಕನ್ನಡ ಕಲಿಸಿದ್ದಕ್ಕೆ ಅಧಿಕೃತ ಮಾನದಂಡವನ್ನು ನಿಗದಿಪಡಿಸಿದರೆ ಶಾಲೆಗಳು ಯಾವುದೇ ತೊಂದರೆ ಇಲ್ಲದೆ ಕನ್ನಡ ಕಲಿಸಬಹುದು ಎಂದು ಮಿಕ್ಸಾ ಸಂಸ್ಥೆಯ ಶ್ರೀನಿವಾಸನ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.