
ಬೆಂಗಳೂರು: ‘ಮಹಾತ್ಮ ಗಾಂಧಿ ರಾಷ್ಟ್ರೀಯ ಗ್ರಾಮೀಣ ಉದ್ಯೋಗ ಖಾತರಿ ಯೋಜನೆ (ನರೇಗಾ) ಹೆಸರಿನಲ್ಲಿ ಗಾಂಧಿ ಹೆಸರು ಕೈಬಿಟ್ಟು, ಯೋಜನೆಯನ್ನೇ ಬದಲಿಸಿದ ಕೇಂದ್ರದ ನಿಲುವನ್ನು ಹೇಗೆ ವಿರೋಧಿಸಬೇಕು ಎಂದು ಇದೇ 27ರಂದು ನಡೆಯಲಿರುವ ಕಾಂಗ್ರೆಸ್ ಕಾರ್ಯಕಾರಿ ಸಮಿತಿ (ಸಿಡಬ್ಲ್ಯುಸಿ) ಸಭೆಯಲ್ಲಿ ಚರ್ಚಿಸಲಾಗುವುದು’ ಎಂದು ಎಐಸಿಸಿ ಪ್ರಧಾನ ಕಾರ್ಯದರ್ಶಿ ಸಚಿನ್ ಪೈಲಟ್ ತಿಳಿಸಿದರು.
ಕೆಪಿಸಿಸಿ ಕಚೇರಿಯಲ್ಲಿ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಕೇಂದ್ರದ ಈ ನೀತಿಯನ್ನು ಇಂಡಿಯಾ ಮೈತ್ರಿಕೂಟ ಸೇರಿದಂತೆ ಇಡೀ ದೇಶ ಒಟ್ಟಾಗಿ ವಿರೋಧಿಸಬೇಕಿದೆ. ಈ ಬದಲಾವಣೆಯನ್ನು ಕೇಂದ್ರ ಸರ್ಕಾರ ಹಿಂಪಡೆಯುವಂತೆ ಒತ್ತಡ ಹಾಕಲಾಗುವುದು’ ಎಂದರು.
‘ಇದು ಕಾಂಗ್ರೆಸ್ ಸರ್ಕಾರದ ದೂರದೃಷ್ಟಿ ಯೋಜನೆಯಾಗಿದ್ದು, ಆರ್ಥಿಕವಾಗಿ ತೀರಾ ಹಿಂದುಳಿದ ಜನರಿಗೆ ಸಾಂವಿಧಾನಿಕವಾಗಿ ಉದ್ಯೋಗ ಖಾತರಿ ಹಕ್ಕು ನೀಡಿತ್ತು. ಆದರೆ, ಬಿಜೆಪಿ ನೇತೃತ್ವದ ಕೇಂದ್ರ ಸರ್ಕಾರ ಯೋಜನೆಯಲ್ಲಿನ ಅನುದಾನದ ಪಾಲನ್ನು 60:40 ಹಂಚಿಕೆ ಮೂಲಕ ರಾಜ್ಯ ಸರ್ಕಾರದ ಮೇಲೆ ಹೆಚ್ಚು ಹೊರೆ ಹಾಕುತ್ತಿದೆ. ತನ್ನ ತಪ್ಪು ಮರೆಮಾಚಲು 100 ದಿನಗಳಿಂದ 125 ಉದ್ಯೋಗ ದಿನಗಳನ್ನು ಏರಿಕೆ ಮಾಡಲಾಗುತ್ತಿದೆ ಎಂದು ಬಿಂಬಿಸುತ್ತಿದೆ’ ಎಂದು ಟೀಕಿಸಿದರು.
‘ಇಷ್ಟು ದಿನ ಈ ಯೋಜನೆ ಬೇಡಿಕೆ ಆಧಾರಿತವಾಗಿತ್ತು. ಈಗ ಕೇಂದ್ರೀಕೃತ ಯೋಜನೆಯಾಗಿ ಪರಿವರ್ತಿಸಲಾಗಿದ್ದು, ಕೇಂದ್ರ ಸರ್ಕಾರ ಎಲ್ಲಿ, ಎಷ್ಟು ಕೆಲಸ ನಡೆಯಬೇಕು ಎಂದು ನಿರ್ಧಾರ ಮಾಡುವಂತಾಗಿದೆ. ಸಂಸತ್ತಿನಲ್ಲಿ ಚರ್ಚೆ ಮಾಡದೆ, ರಾಜ್ಯ ಸರ್ಕಾರಗಳ ಅಭಿಪ್ರಾಯ ಪಡೆಯದೆ, ಸಂಸತ್ತಿನ ಸ್ಥಾಯಿಸಮಿತಿಯ ಪರಾಮರ್ಶೆಗೂ ಅವಕಾಶ ನೀಡದೆ ಯೋಜನೆಗೆ ಬದಲಾವಣೆ ತರಲಾಗಿದೆ. ಇದರ ಹಿಂದೆ ರಾಷ್ಟ್ರಪಿತಗೆ ಅಪಮಾನ ಮಾಡುವ ಉದ್ದೇಶವಿದೆ. ಬಡ ಜನರ ಜೀವನದ ಮೇಲಿನ ದಾಳಿಯಿದು’ ಎಂದು ಹರಿಹಾಯ್ದರು.
ಷಡ್ಯಂತ್ರ: ‘2014ರಿಂದ ಬಿಜೆಪಿ ಸರ್ಕಾರ ದ್ವೇಷ ರಾಜಕಾರಣವನ್ನು ಮಾಡಿಕೊಂಡು ಬಂದಿದೆ. 11 ವರ್ಷಗಳಿಂದ ಕೇಂದ್ರ ಸರ್ಕಾರ ತನಿಖಾ ಸಂಸ್ಥೆಗಳನ್ನು ದುರ್ಬಳಕೆ ಮಾಡಿಕೊಂಡು ಸೋನಿಯಾ ಗಾಂಧಿ ಹಾಗೂ ರಾಹುಲ್ ಗಾಂಧಿ ಅವರ ಘನತೆಗೆ ಧಕ್ಕೆ ತರುವ ಪ್ರಯತ್ನ ಮಾಡುತ್ತಿದೆ. ಈ ಪ್ರಕರಣದಲ್ಲಿ ಇಬ್ಬರು ನಾಯಕರು ಯಾವುದೇ ವ್ಯವಹಾರ ನಡೆಸಿಲ್ಲ. ಆದರೂ ಅವರನ್ನು ಆರೋಪದಲ್ಲಿ ಸಿಲುಕಿಸುವ ಷಡ್ಯಂತ್ರ ನಡೆಯುತ್ತಿದೆ’ ಎಂದೂ ಸಚಿನ್ ಆರೋಪಿಸಿದರು.
‘ಪ್ರಿಯಾಂಕ್ ನೇತೃತ್ವದಲ್ಲಿ ದೆಹಲಿಯಲ್ಲಿ ಸಭೆ ’
‘ಮಹಾತ್ಮ ಗಾಂಧಿ ಅವರ ಹೆಸರನ್ನು ತೆಗೆಯುವ ಮೂಲಕ ಕೇಂದ್ರ ಸರ್ಕಾರ ನರೇಗಾ ಯೋಜನೆ ಸಮಾಧಿಗೆ ಹೊರಟಿದೆ. ಇದು ಕೇಂದ್ರ ಬಿಜೆಪಿ ಸರ್ಕಾರದ ಕೊನೆಯ ದಿನಗಳ ಆರಂಭ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಹೇಳಿದರು. ‘ಈ ಯೋಜನೆಯ ಕುರಿತು ಚರ್ಚಿಸಲು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಅವರು ದೆಹಲಿಯಲ್ಲಿ ಮಂಗಳವಾರ (ಡಿ. 23) ಸಭೆ ಕರೆದಿದ್ದಾರೆ. ಕೇಂದ್ರ ಸರ್ಕಾರ ಹೇಳಿದ ಅನುಪಾತದಲ್ಲಿ ಯಾವ ರಾಜ್ಯ ಸರ್ಕಾರವೂ ಹಣ ನೀಡಲು ಸಾಧ್ಯವಿಲ್ಲ. ಈ ರೀತಿಯಾದರೆ ಕಾರ್ಯಕ್ರಮ ಸತ್ತು ಹೋದಂತೆ’ ಎಂದರು. ‘ಕೇಂದ್ರದ ಬಿಜೆಪಿ ಸರ್ಕಾರ ತೆಗೆದುಕೊಂಡಿರುವ ಈ ತೀರ್ಮಾನವನ್ನು ವಿರೋಧಿಸಿ ಸರ್ಕಾರ ಮತ್ತು ಪಕ್ಷ ಒಟ್ಟಾಗಿ ಹೋರಾಟ ಮಾಡುತ್ತೇವೆ’ ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.