ಬೆಂಗಳೂರು: ಗುತ್ತಿಗೆದಾರ ಸಚಿನ್ ಪಾಂಚಾಳ ಆತ್ಮಹತ್ಯೆ ಪ್ರಕರಣದಲ್ಲಿ ಆರೋಪಿಯಾಗಿರುವ ಕಲಬುರಗಿ ಕಾಂಗ್ರೆಸ್ ಮುಖಂಡ ರಾಜು ಕಪನೂರ್ ಅವರ ಜತೆಗೆ ಬಿಜೆಪಿ ಮುಖಂಡರು ಇರುವ ಪೋಟೊಗಳನ್ನು ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ ಮಂಗಳವಾರ ಬಿಡುಗಡೆ ಮಾಡಿದ್ದಾರೆ.
ಗ್ರಾಮೀಣಾಭಿವೃದ್ಧಿ ಸಚಿವ ಪ್ರಿಯಾಂಕ್ ಖರ್ಗೆ, ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಇರುವ ಪೋಟೊಗಳನ್ನು ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ವೈ. ವಿಜಯೇಂದ್ರ ಸೋಮವಾರ ಬಿಡುಗಡೆ ಮಾಡಿ, ಪ್ರಿಯಾಂಕ್ ಖರ್ಗೆ ರಾಜೀನಾಮೆಗೆ ಒತ್ತಾಯಿಸಿದ್ದರು. ಅದಕ್ಕೆ ಪರ್ಯಾಯವಾಗಿ ಬಿಜೆಪಿ ಶಾಸಕ ಬಸವರಾಜ್ ಮತ್ತಿಮೋಡ್ ಮತ್ತಿತರರ ಜತೆ ಆರೋಪಿ ಇರುವ ಪೋಟೊಗಳನ್ನು ಸಾಮಾಜಿಕ ಜಾಲತಾಣಗಳಲ್ಲಿ ಹಂಚಿಕೊಂಡಿರುವ ಪ್ರಿಯಾಂಕ್, ‘ಮತ್ತಿಮೋಡ್ ಅವರು ನನ್ನ ಸಹೋದರರೇ’ ಎಂದು ಪ್ರಶ್ನಿಸಿದ್ದಾರೆ.
‘ನಿಮ್ಮದೇ ಪಕ್ಷದ ಅಭ್ಯರ್ಥಿಗಳು ಯಾರು? ನಿಮ್ಮದೇ ಪಕ್ಷದ ಶಾಸಕರು ಯಾರು?, ನಿಮ್ಮದೇ ಪಕ್ಷದ ಮುಖಂಡರು ಯಾರು ಎಂದು ಗುರುತು ಹಿಡಿಯಲು ಸಾಧ್ಯವಾಗುವುದಾದರೆ ಈ ಫೋಟೋಗಳಲ್ಲಿ ಇರುವ ನಿಮ್ಮವರನ್ನು ಗುರುತಿಸಿ. ಹಲವು ಬಿಜೆಪಿ ಮುಖಂಡರು, ಶಾಸಕರು ರಾಜು ಕಪನೂರ್‌ಗೆ ಪರಮಾಪ್ತರಿದ್ದಾರೆ. ಅವರ ರಾಜೀನಾಮೆ ಯಾವಾಗ ಕೇಳುವಿರಿ’ ಎಂದು ಸವಾಲು ಹಾಕಿದ್ದಾರೆ.
‘ನಮ್ಮ ಮನೆಗೆ ಮುತ್ತಿಗೆ ಹಾಕಲು ಬರುವಾಗ ವಿಜಯೇಂದ್ರ ಅವರು ತಮ್ಮ ಪಕ್ಷದ ಯಾವ ಶಾಸಕರು ಕಪನೂರ್ ಜತೆಗೆ ಆಪ್ತರಾಗಿದ್ದಾರೆ ಎನ್ನುವ ಬಗ್ಗೆ ಹೋಂವರ್ಕ್ ಮಾಡಿಕೊಂಡು ಬರುವುದು ಉತ್ತಮ. ಈ ಎಲ್ಲಾ ಫೋಟೊಗಳನ್ನೂ ಹಿಡಿದು ಬನ್ನಿ’ ಎಂದಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.