ADVERTISEMENT

ಸಾಹಿತ್ಯ ಸಮ್ಮೇಳನ: ಅಧ್ಯಕ್ಷರ ಆಯ್ಕೆ ನಾಳೆ

​ಪ್ರಜಾವಾಣಿ ವಾರ್ತೆ
Published 20 ಜನವರಿ 2021, 19:33 IST
Last Updated 20 ಜನವರಿ 2021, 19:33 IST
ಮನು ಬಳಿಗಾರ್
ಮನು ಬಳಿಗಾರ್   

ಬೆಂಗಳೂರು: ಹಾವೇರಿಯಲ್ಲಿ ನಡೆಯಲಿರುವ 86ನೇ ಅಖಿಲ ಭಾರತ ಕನ್ನಡ ಸಾಹಿತ್ಯ ಸಮ್ಮೇಳನದ ಅಧ್ಯಕ್ಷರ ಆಯ್ಕೆಯು ಕನ್ನಡ ಸಾಹಿತ್ಯ ಪರಿಷತ್ತಿನ ಕೇಂದ್ರ ಕಚೇರಿಯಲ್ಲಿ ಶುಕ್ರವಾರ (ಜ.22) ನಡೆಯಲಿದೆ.

ಈ ಸಂಬಂಧ ಪರಿಷತ್ತು ಕಾರ್ಯಕಾರಿ ಸಮಿತಿಯ ಸಭೆ ಕರೆದಿದೆ. ಮುಂಬರುವ ಫೆ.26ರಿಂದ 28ರವರೆಗೆ ಸಮ್ಮೇಳನ ನಡೆಯಲಿದ್ದು, ಈಗಾಗಲೇ ವೇದಿಕೆಗಳ ಸ್ಥಳ ನಿಗದಿ, ಗೋಷ್ಠಿಗಳ ಸ್ವರೂಪ ಮತ್ತು ವಿಷಯ ಆಯ್ಕೆಗೆ ಸಮಿತಿ ರಚನೆ ಸೇರಿದಂತೆ ವಿವಿಧ ಪ್ರಕ್ರಿಯೆಗಳು ನಡೆದಿವೆ.

ಸಮ್ಮೇಳನದ ಅಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ದೊಡ್ಡರಂಗೇಗೌಡ, ಗೊ.ರು.ಚನ್ನಬಸಪ್ಪ, ವೀಣಾ ಶಾಂತೇಶ್ವರ ಹಾಗೂ ಕೆ.ಎಸ್. ಭಗವಾನ್ ಅವರ ಹೆಸರು ಪರಿಷತ್ತಿನ ಮುಂದಿದೆ. ಈ ನಾಲ್ವರ ಹೆಸರನ್ನು ಪರಿಷತ್ತಿನ ಜಿಲ್ಲಾ ಘಟಕದ ಅಧ್ಯಕ್ಷರು ಹಾಗೂ ಸಾಹಿತ್ಯ ವಲಯದ ಪ್ರಮುಖರು ಶಿಫಾರಸು ಮಾಡಿದ್ದಾರೆ.

ADVERTISEMENT

‘ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಸಂಬಂಧಿಸಿದಂತೆ ಶಿಫಾರಸು ಬಂದಿರುವ ನಾಲ್ಕೂ ಹೆಸರುಗಳನ್ನು ಶುಕ್ರವಾರ ನಡೆಯಲಿರುವ ಸಭೆಯ ಮುಂದಿಟ್ಟು, ಚರ್ಚಿಸಲಾಗುತ್ತದೆ. ಈ ಹೆಸರುಗಳೇ ಸಮ್ಮೇಳನಾಧ್ಯಕ್ಷರ ಆಯ್ಕೆಗೆ ಅಂತಿಮವಲ್ಲ. ಆ ವೇಳೆ ಬೇರೆಯವರ ಹೆಸರು ಕೂಡ ಪ್ರಸ್ತಾಪವಾಗಬಹುದು. ಪ್ರತಿಭೆ ಮತ್ತು ಅರ್ಹತೆ ಇದ್ದವರನ್ನು ಆಯ್ಕೆ ಮಾಡಲಾಗುತ್ತದೆ. ಸಾಮಾಜಿಕ ನ್ಯಾಯ ಮತ್ತು ಪ್ರಾದೇಶಿಕ ಸಮಾನತೆಯನ್ನೂ ಪರಿಗಣಿಸಲಾಗುತ್ತದೆ’ ಎಂದು ಪರಿಷತ್ತಿನ ಅಧ್ಯಕ್ಷ ಮನು ಬಳಿಗಾರ್ ‘ಪ್ರಜಾವಾಣಿ’ಗೆ ತಿಳಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.