ADVERTISEMENT

ಸಮರ ಸಲ್ಲದು, ಬೇಕಿದೆ ಮಮತೆ: ‘ಯುದ್ಧಭೂಮಿಯಲ್ಲಿ ತಾಯಂದಿರು’ ಗೋಷ್ಠಿಯಲ್ಲಿ ಚರ್ಚೆ

ಸುಕೃತ ಎಸ್.
Published 10 ಆಗಸ್ಟ್ 2025, 23:30 IST
Last Updated 10 ಆಗಸ್ಟ್ 2025, 23:30 IST
ಗೋಷ್ಠಿಯಲ್ಲಿ ಪಿ.ಎಂ. ನಾರಾಯಣನ್‌ (ಎಡದಿಂದ) ಕ್ಯಾಪ್ಟನ್‌ ಸಜಿತಾ ನಾಯರ್‌, ಫ್ಲೈಟ್‌ ಲೆಫ್ಟೆನೆಂಟ್‌ ಪೂರ್ಣಿಮಾ ಮಾಳಗಿಮನಿ ಮತ್ತು ಲೆಫ್ಟಿನೆಂಟ್‌ ಕರ್ನಲ್‌ ವಿಜಯಲಕ್ಷ್ಮಿ ಭಾಗವಹಿಸಿದ್ದರು
ಗೋಷ್ಠಿಯಲ್ಲಿ ಪಿ.ಎಂ. ನಾರಾಯಣನ್‌ (ಎಡದಿಂದ) ಕ್ಯಾಪ್ಟನ್‌ ಸಜಿತಾ ನಾಯರ್‌, ಫ್ಲೈಟ್‌ ಲೆಫ್ಟೆನೆಂಟ್‌ ಪೂರ್ಣಿಮಾ ಮಾಳಗಿಮನಿ ಮತ್ತು ಲೆಫ್ಟಿನೆಂಟ್‌ ಕರ್ನಲ್‌ ವಿಜಯಲಕ್ಷ್ಮಿ ಭಾಗವಹಿಸಿದ್ದರು   

ಬೆಂಗಳೂರು: ಯುದ್ಧ ಮತ್ತು ತಾಯ್ತನವು ಒಂದಕ್ಕೊಂದು ವಿರುದ್ಧವಾದವು. ಆಧುನಿಕ ಯುಗದಲ್ಲಿ ಯುದ್ಧಭೂಮಿಯಲ್ಲಿ ಮಹಿಳೆಯರ ಭಾಗವಹಿಸುವಿಕೆ ಪ್ರಮಾಣ ಏರಿಕೆಯಾಗಿದೆ. ಇದರಿಂದ ಯುದ್ಧದಂಥ ಪುರುಷ ಕೇಂದ್ರಿತ ಆಲೋಚನೆ ಮತ್ತು ಕಾರ್ಯಚಟುವಟಿಕೆಯಲ್ಲಿ ತಾಯ್ತನವನ್ನು ಕಾಣುತ್ತಿದ್ದೇವೆಯೇ? ಈ ಹುಡುಕಾಟ ಸಾಧ್ಯವೇ? ಅದು ಅಗತ್ಯವೇ?

ಬುಕ್‌ಬ್ರಹ್ಮ ಸಂಸ್ಥೆಯು ನಗರದಲ್ಲಿ ಆಯೋಜಿಸಿದ್ದ ‘ಸಾಹಿತ್ಯ ಉತ್ಸವ 2025’ರಲ್ಲಿ, ‘ಯುದ್ಧಭೂಮಿಯಲ್ಲಿ ತಾಯಂದಿರು: ಧೈರ್ಯ, ಸಂಘರ್ಷ ಮತ್ತು ಆರೈಕೆ’ ಗೋಷ್ಠಿಯಲ್ಲಿ ಈ ತೆರನ ವಿಶ್ಲೇಷಣೆ ನಡೆಯಿತು.

ಯುದ್ಧದಾಯಿ ಆಗಿರುವ ಇಂದಿನ ಜಗತ್ತಿಗೆ ಬೇಕಾದ ತಾಯ್ತನವನ್ನು, ಶಾಂತಿ ಸ್ಥಾಪನೆಯ ಅಗತ್ಯವನ್ನು ಗೋಷ್ಠಿಯು ಒತ್ತಿ ಹೇಳಿತು. ಲೆಫ್ಟಿನೆಂಟ್‌ ಕರ್ನಲ್‌ ವಿಜಯಲಕ್ಷ್ಮಿ, ಫ್ಲೈಟ್‌ ಲೆಫ್ಟಿನೆಂಟ್ ಪೂರ್ಣಿಮಾ ಮಾಳಗಿಮನಿ ಮತ್ತು ಕ್ಯಾಪ್ಟನ್‌ ಸಜಿತಾ ನಾಯರ್‌ ತಮ್ಮ ಅಭಿಪ್ರಾಯಗಳನ್ನು ನೇರವಾಗಿ ಹಂಚಿಕೊಂಡರು.

ADVERTISEMENT

‘ಯಾವುದಕ್ಕಾಗಿ ಜಗಳ ಮಾಡಬಹುದು. ಜಗಳ ಮಾಡುವುದಕ್ಕೂ ಒಂದು ಮಹತ್ವದ ಕಾರಣ ಬೇಕಲ್ಲವೇ? ನಾವು ಮಕ್ಕಳು ಹೊಡೆದಾಡಿಕೊಂಡಾಗ ಅಮ್ಮ ಕಲಿಸುವ ಪಾಠವಿದು. ಸಣ್ಣವರ ಬಗ್ಗೆ ಸಹಾನುಭೂತಿ ಇರಬೇಕು. ಜೊತೆಗೆ, ಜಗಳವನ್ನು ಹೇಗೆ ಬಗೆಹರಿಸಿಕೊಳ್ಳಬೇಕು ಎನ್ನುವುದೂ ಅವಳ ಪಾಠವೇ ಆಗಿದೆ. ಆದ್ದರಿಂದ, ಯುದ್ಧಭೂಮಿಯ ವಿಚಾರಗಳು ಮಹಿಳೆಗೆ ಮನೆಯಲ್ಲಿಯೇ ಕರಗತವಾಗಿರುತ್ತದೆ’ ಎಂದರು ಪೂರ್ಣಿಮಾ.

ಇದಕ್ಕೆ ದನಿಗೂಡಿಸಿದ ವಿಜಯಲಕ್ಷ್ಮಿ ಅವರು , ‘ನಾನೊಂದು ಸಣ್ಣ ಅಂಕಿ–ಅಂಶ ನೀಡುತ್ತೇನೆ. 1992ರಿಂದ 2009ರವರೆಗೆ ಶಾಂತಿ ಸ್ಥಾಪನೆಗಾಗಿ ಜಗತ್ತಿನೆಲ್ಲೆಡೆ ನಡೆದ ಮಾತುಕತೆಗಳಲ್ಲಿ ಮಹಿಳೆಯರ ಪಾತ್ರ ಶೇ 13ರಷ್ಟಿತ್ತು. ಒಂದು ಅಂದಾಜಿನ ಪ್ರಕಾರ, ಮಹಿಳೆಯರು ಶಾಂತಿ ಸ್ಥಾಪನೆ ಮಾತುಕತೆಯಲ್ಲಿ ಭಾಗವಹಿಸಿದರೆ ಶಾಂತಿ ಸ್ಥಾಪನೆಯಾಗುವುದು ಶೇ 35ರಷ್ಟು ಖಚಿತ ಎನ್ನಲಾಗುತ್ತದೆ. ಜೊತೆಗೆ, ಮಹಿಳೆಯರು ನಡೆಸುವ ಮಾತುಕತೆಗಳಲ್ಲಿ ಸರಾಸರಿಯಲ್ಲಿ 15 ವರ್ಷಗಳವರೆಗೆ ಶಾಂತಿ ಸ್ಥಾಪನೆ ಸಾಧ್ಯವಾಗುತ್ತದೆ ಎನ್ನುತ್ತಾರೆ’ ಎಂದರು.

‘ಯುದ್ಧಭೂಮಿಯಲ್ಲಿ ಅಥವಾ ಸೇನೆಯ ಸಾಂಸ್ಥಿಕ ವ್ಯವಸ್ಥೆಯಲ್ಲಿ ಮಹಿಳೆಯು ಪುರುಷನ ಬದಲಿಗೆ ಬರುತ್ತಿಲ್ಲ. ಆದರೆ, ಈ ವ್ಯವಸ್ಥೆಯಲ್ಲಿ, ಯುದ್ಧಭೂಮಿಯಲ್ಲಿ ತನ್ನ ಶಕ್ತಿಯನ್ನು, ತನ್ನ ತನವನ್ನು ಧಾರೆ ಎರೆಯುತ್ತಿದ್ದಾಳೆ’ ಎಂದು ಸಜಿತಾ ಅಭಿಪ್ರಾಯಪಟ್ಟರು.

ಈ ಮೂವರು ತಮ್ಮ ಸೇವಾವಧಿಯನ್ನು ಪೂರ್ಣಗೊಳಿಸಿ, ಸಾಹಿತ್ಯ ರಚನೆಯಲ್ಲಿ ತೊಡಗಿಕೊಂಡಿದ್ದಾರೆ. ಹಲವು ಪುಸ್ತಕಗಳನ್ನು ಬರೆದಿದ್ದಾರೆ. ಪಿ.ಎಂ. ನಾರಾಯಣನ್‌ ಗೋಷ್ಠಿಯನ್ನು ಸಮನ್ವಯಕಾರರಾಗಿದ್ದರು.

‘ಯುದ್ಧಯು ಐಪಿಎಲ್‌ ಪಂದ್ಯವೇ?’
‘ಆಪರೇಷನ್‌ ಸಿಂಧೂರ’ದ ಬಳಿಕ ಸಾಮಾಜಿಕ ಜಾಲತಾಣಗಳಲ್ಲಿ ಭಾರಿ ಸಂಖ್ಯೆಯಲ್ಲಿ ಚರ್ಚೆ ನಡೆದಿತ್ತು. ‘ನಾವು ಪಾಕಿಸ್ತಾನವನ್ನು ನಾಶ ಮಾಡಿಬಿಡಬೇಕಿತ್ತು’ ಎಂದೆಲ್ಲಾ ವೀರಾವೇಶದ ಪೋಸ್ಟ್‌ಗಳನ್ನು ಹಂಚಿಕೊಳ್ಳಲಾಯಿತು. ಇಂಥ ಪೋಸ್ಟ್‌ಗಳನ್ನು ಹಂಚಿಕೊಂಡ ಯಾರಿಗೂ ಯುದ್ಧ ಎಂದರೇನು ಎನ್ನುವುದೇ ತಿಳಿದಿಲ್ಲ. ಯುದ್ಧದ ಪರಿಣಾಮಗಳ ಬಗ್ಗೆಯೂ ಅರಿವಿಲ್ಲ’ ಎಂದು ಫ್ಲೈಟ್‌ ಲೆಫ್ಟಿನೆಂಟ್‌ ಪೂರ್ಣಿಮಾ ಮಾಳಗಿಮನಿ ಬೇಸರ ವ್ಯಕ್ತಪಡಿಸಿದರು. ‘ಭಾರತದ ಗೆದ್ದುಬಿಟ್ಟಿತು ಎಂದು ಪೋಸ್ಟ್‌ ಹಂಚಿಕೊಳ್ಳುತ್ತಾರೆ. ಯುದ್ಧ ಎನ್ನುವುದು ಐಪಿಎಲ್ ಪಂದ್ಯವೇ? ಜನರು ಮನೆ ಕಳೆದುಕೊಳ್ಳುತ್ತಾರೆ. ಮಕ್ಕಳು ಅನಾಥರಾಗುತ್ತಾರೆ. ಯುದ್ಧದಲ್ಲಿ ಭಾಗವಹಿಸಿದವರೇ ಯುದ್ಧದ ಭೀಕರತೆಯ ಬಗ್ಗೆ ತಮ್ಮ ಅನುಭವಗಳನ್ನು ಬರೆಯುವಂತಾಗಬೇಕು. ಆ ಮೂಲಕ ಜನರಿಗೆ ಯುದ್ಧದ ಪರಿಣಾಮಗಳ ಬಗ್ಗೆ ಮಾಹಿತಿ ನೀಡಬೇಕು. ಏಕೆ ಯುದ್ಧವಾಗಬಾರದು ಎನ್ನುವುದನ್ನು ತಿಳಿಸಿಕೊಡಬೇಕು. ಸಾಹಿತ್ಯಕ್ಕೆ ಇಂಥದ್ದೊಂದು ಶಕ್ತಿ ಇದೆ’ ಎಂದರು.
‘ಜಗಳ ಬಗೆಹರಿಸಿಕೊಳ್ಳುವುದೇ ಉತ್ತಮ’ –ಶಾಂತಿ ತಂದುಕೊಡುವುದಾದರೆ ಯುದ್ಧ ಮಾಡುವುದು ಸರಿ. ಈ ಕಾರಣವಲ್ಲದಿದ್ದರೆ ಜಗಳವನ್ನು ಬಗೆಹರಿಸಿಕೊಳ್ಳುವುದೇ ಉತ್ತಮ. ಯುದ್ಧವೇ ಗೆಲುವಲ್ಲ. ಶಾಂತಿಯನ್ನು ಕಾಪಾಡಿಕೊಳ್ಳುವುದೇ ನಿಜವಾದ ಗೆಲುವು. ಆಗ ಮಾತ್ರ ಕರುಣೆ ಸಹಾನುಭೂತಿ ಹುಟ್ಟಿಕೊಳ್ಳುತ್ತದೆ
ಲೆಫ್ಟಿನೆಂಟ್‌ ಕರ್ನಲ್‌ ವಿಜಯಲಕ್ಷ್ಮಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.