
ಗಣಿಗಾರಿಕೆ ಪ್ರದೇಶ
ಬೆಂಗಳೂರು: ತುಮಕೂರು ಜಿಲ್ಲೆಯ ವಿವಾದಿತ ಸಾರಂಗಪಾಣಿ ಗಣಿಗಾರಿಕೆ ಪ್ರಸ್ತಾವವನ್ನು ತಿರಸ್ಕರಿಸಲು ಕೇಂದ್ರ ಪರಿಸರ, ಅರಣ್ಯ ಹಾಗೂ ಹವಾಮಾನ ಬದಲಾವಣೆ ಸಚಿವಾಲಯವು ಶಿಫಾರಸು ಮಾಡಿದ್ದು, ಇದರಿಂದ ಗಣಿಗಾರಿಕೆಗೆ ಅನುಮತಿ ನೀಡಲು ನಿರಂತರ ಪ್ರಯತ್ನ ಮಾಡಿದ್ದ ರಾಜ್ಯ ಸರ್ಕಾರಕ್ಕೆ ಮುಖಭಂಗ ಆಗಿದೆ.
ಗಣಿಗಾರಿಕೆ ಅನುಮತಿ ನೀಡುವುದು ವಿನಾಶಕಾರಿ ಆಗಲಿದ್ದು ಅಲ್ಲಿನ ಜನಜೀವನ ಹಾಗೂ ಜೀವ ಪರಿಸರದ ಮೇಲೆ ಗಂಭೀರ ಪರಿಣಾಮ ಬೀರಲಿದೆ ಎಂದು ಸಚಿವಾಲಯ ಎಚ್ಚರಿಕೆ ನೀಡಿದೆ. ಯೋಜನೆಯ ತಿರಸ್ಕಾರದಿಂದ ಹದಿನೇಳು ಸಾವಿರಕ್ಕೂ ಹೆಚ್ಚು ಮರಗಳು ನಾಶವಾಗುವುದು ಹಾಗೂ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಾಗುವುದು ತಪ್ಪಿದೆ.
ಪ್ರಸ್ತಾಪಿತ ಪ್ರದೇಶವು ಬುಕ್ಕಾಪಟ್ಟಣ ಚಿಂಕಾರಾ ಅಭಯಾರಣ್ಯದ ಪರಿಭಾವಿತ ಪರಿಸರ ಸೂಕ್ಷ್ಮ ವಲಯದ
ವ್ಯಾಪ್ತಿಯಲ್ಲಿದ್ದು, ಸಚಿವಾಲಯದ ಪ್ರಾದೇಶಿಕ ಕಚೇರಿಗೆ ವನ್ಯಜೀವಿ ಸಂರಕ್ಷಣಾವಾದಿ ಗಿರಿಧರ್ ಕುಲಕರ್ಣಿ
ಸಲ್ಲಿಸಿದ ಆಕ್ಷೇಪಣೆಗಳನ್ನು ತನ್ನ ಪರಿಶೀಲನಾ ವರದಿಯಲ್ಲಿ ಔಪಚಾರಿಕವಾಗಿ ಒಪ್ಪಿಕೊಂಡಿದೆ.
ಮಿನರಲ್ ಎಂಟರ್‌ಪ್ರೈಸಸ್ ಪ್ರೈವೇಟ್ ಲಿಮಿಟೆಡ್ ಎಂಬ ಕಂಪನಿಯು ಸಾರಂಗಪಾಣಿ ಮ್ಯಾಂಗನೀಸ್ ಮತ್ತು ಕಬ್ಬಿಣದ ಅದಿರು ಗಣಿಗಾರಿಕೆ ಯೋಜನೆಗಾಗಿ ತುಮಕೂರು ಜಿಲ್ಲೆಯ ಚಿಕ್ಕನಾಯಕನಹಳ್ಳಿ ತಾಲ್ಲೂಕಿನ ಗೊಲ್ಲರಹಳ್ಳಿ, ಲಕ್ಮೇನಹಳ್ಳಿ, ಕೋಡಿಹಳ್ಳಿ, ಹೊಸಹಳ್ಳಿ, ತೋನಲಾಪುರ ಗ್ರಾಮಗಳಲ್ಲಿ ಅಂದಾಜು 48 ಹೆಕ್ಟೇರ್ ಅರಣ್ಯ ಭೂಮಿ ಪರಿವರ್ತನೆ ಕೋರಿ ಅರಣ್ಯ ಇಲಾಖೆಗೆ ಪ್ರಸ್ತಾವ ಸಲ್ಲಿಸಿತ್ತು. ಇದರ ಪರವಾಗಿ ಸ್ಥಳೀಯ ಡಿಸಿಎಫ್ ಮತ್ತು ಹಾಸನ ವೃತ್ತದ ಸಿಸಿಎಫ್ ಶಿಫಾರಸು ಮಾಡಿದ್ದರು.
ಉದ್ದೇಶಿತ ಗಣಿ ಯೋಜನೆಯಿಂದ ಮಾನವ- ವನ್ಯಜೀವಿ ಸಂಘರ್ಷ ಹೆಚ್ಚಲಿದೆ, ಸ್ಥಳೀಯ ಜನಜೀವನದ ಮೇಲೆ ಪರಿಣಾಮ ಬೀರಲಿದ್ದು ಪ್ರಸ್ತಾವವನ್ನು ತಿರಸ್ಕರಿಸಲು ಕ್ರಮ ವಹಿಸುವಂತೆ ಗಿರಿಧರ್ ಅವರು ಅರಣ್ಯ ಸಚಿವ ಈಶ್ವರ್ ಖಂಡ್ರೆ ಅವರಿಗೆ ಕಳೆದ ವರ್ಷ ಡಿಸೆಂಬರ್‌ನಲ್ಲಿ ಪತ್ರ ಬರೆದು ಮನವಿ ಮಾಡಿದ್ದರು. ಈ ಗಣಿಗಾರಿಕೆಯ ಬೆಳವಣಿಗೆ ಬಗ್ಗೆ ‘ಪ್ರಜಾವಾಣಿ’ ಸಹ ವರದಿ ಮಾಡಿತ್ತು.
ಇಷ್ಟೆಲ್ಲಾ ವಿರೋಧಗಳ ಮಧ್ಯೆಯೂ ಅರಣ್ಯ ಪಡೆಯ ಮುಖ್ಯಸ್ಥರು ಇದೇ ವರ್ಷ ಮೇ 14 ರಂದು ಪ್ರಸ್ತಾವಕ್ಕೆ ಕೇಂದ್ರ ಸರ್ಕಾರದ ಮೊದಲನೇ ಹಂತದ ಅನುಮತಿ ಪಡೆಯಲು ಅರಣ್ಯ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಗೆ ಶಿಫಾರಸು ಮಾಡಿದ್ದರು. ಪರಿಸರವಾದಿಗಳ ವಿರೋಧದ ನಡುವೆಯೂ ಗಣಿಗಾರಿಕೆಗೆ ಮೊದಲನೇ ಹಂತದ ಅನುಮತಿ ನೀಡುವಂತೆ ರಾಜ್ಯ ಸರ್ಕಾರವು ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯಕ್ಕೆ ಇದೇ ವರ್ಷ ಆಗಸ್ಟ್ ತಿಂಗಳಿನಲ್ಲಿ ಮನವಿ ಮಾಡಿತ್ತು.
ಇದೇ ವರ್ಷದ ಸೆಪ್ಟೆಂಬರ್ 23ರಂದು ಸ್ಥಳ ಪರಿಶೀಲನೆಯ ನಂತರ, ಬೆಂಗಳೂರಿನ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯದ ಪ್ರಾದೇಶಿಕ ಕಚೇರಿಯು ಕಚೇರಿಯ ಡಿಐಜಿ ಪ್ರಣೀತಾ ಪೌಲ್
ಪ್ರಸ್ತಾವವನ್ನು ತಿರಸ್ಕರಿಸಲು ಸಚಿವಾಲಯದ ನವದೆಹಲಿಯ ಕೇಂದ್ರ ಕಚೇರಿಗೆ ಶಿಫಾರಸು ಮಾಡಿದ್ದಾರೆ.
ತಪಾಸಣಾ ವರದಿಯು ಹಲವಾರು ಲೋಪಗಳನ್ನು ದಾಖಲಿಸಿದೆ. ಅಮಾನ್ಯ ಪರಿಸರ ಅನುಮತಿ, ಅರಣ್ಯ ಭೂಮಿಯ ಕಾನೂನು ಸ್ಥಿತಿಯಲ್ಲಿನ ಅಸ್ಪಷ್ಟತೆ, ರಾಷ್ಟ್ರೀಯ ವನ್ಯಜೀವಿ ಮಂಡಳಿಯ ಅನುಮೋದನೆ ಇಲ್ಲದಿರುವುದು ಮತ್ತು ಬುಕ್ಕಾಪಟ್ಟಣ ಅಭಯಾರಣ್ಯದ ಪರಿಭಾವಿತ ಪರಿಸರ-ಸೂಕ್ಷ್ಮ ವಲಯದಲ್ಲಿ ವಾಣಿಜ್ಯ ಗಣಿಗಾರಿಕೆಯು ನಿಷೇಧಿತ ಚಟುವಟಿಕೆಯಾಗಿದೆ ಎಂಬ ಅಂಶವನ್ನು ತನ್ನ ವರದಿಯಲ್ಲಿ ಉಲ್ಲೇಖಿಸಿದೆ.
ಗಣಿಗಾರಿಕೆಗೆ ಪ್ರಸ್ತಾವಿತ ಸ್ಥಳ ನೀರಿನ ಕೊರತೆಯಿರುವ ಚಿಕ್ಕನಾಯಕನಹಳ್ಳಿ ತಾಲ್ಲೂಕಿನಲ್ಲಿದ್ದು, ತೀರ್ಥರಂಪುರ ಮೀಸಲು ಅರಣ್ಯ ಮತ್ತು ಜನ್ನೇರು ಅರಣ್ಯ ಬ್ಲಾಕ್ ಪ್ರಮುಖ ಜಲಾನಯನ ಪ್ರದೇಶಗಳು. ಇಲ್ಲಿ ಅರಣ್ಯ ನಾಶ ನೀರಿನ ಕೊರತೆಯನ್ನು ಇನ್ನಷ್ಟು ಹದಗೆಡಿಸುತ್ತದೆ
1999 ರಲ್ಲಿ ಗಣಿಗಾರಿಕೆ ಸ್ಥಗಿತಗೊಂಡ ನಂತರ ಅರಣ್ಯ ಪ್ರದೇಶವು ನೈಸರ್ಗಿಕವಾಗಿ ಮತ್ತೆ ಚಿಗುರುತ್ತಿದೆ
ವನ್ಯಜೀವಿ ಸಮೀಕ್ಷೆಗಳು ಕರಡಿ, ಚಿರತೆ, ಕತ್ತೆ ಕಿರುಬ, ತೋಳ, ನರಿ, ಕಾಡುಹಂದಿ, ನಾಲ್ಕು ಕೊಂಬಿನ ಹುಲ್ಲೆ ಮತ್ತು ಕಾಡು ಬೆಕ್ಕು ಪ್ರಭೇದಗಳು ಇರುವುದಕ್ಕೆ ಪುರಾವೆ ದೊರಕಿದೆ
ಮಾನವ-ವನ್ಯಜೀವಿ ಸಂಘರ್ಷ ದಾಖಲೆಗಳು (2015–16 ರಿಂದ 2025–26) ಒಟ್ಟು ₹43,01,720 ಪರಿಹಾರದೊಂದಿಗೆ 380ಕ್ಕೂ ಹೆಚ್ಚು ಘಟನೆಗಳನ್ನು ತೋರಿಸುತ್ತವೆ, ಇದು ಆರೋಗ್ಯಕರ ವನ್ಯಜೀವಿ ಜನಸಂಖ್ಯೆ ಯನ್ನು ದೃಢಪಡಿಸುತ್ತದೆ. ಇಲ್ಲಿ ಗಣಿಗಾರಿಕೆಗೆ ಅನುಮತಿ ದೊರಕಿದರೆ ಸಂಘರ್ಷ ಹೆಚ್ಚಾಗುತ್ತದೆ.
ಅರಣ್ಯ ಪಡೆಯ ಮುಖ್ಯಸ್ಥರ ಶಿಫಾರಸ್ಸಿನ ಪ್ರಕಾರ ಕಂಪನಿಯು ಯಾವುದೇ ಮಾನ್ಯ ಗಣಿಗಾರಿಕೆ ಗುತ್ತಿಗೆಯನ್ನು ಹೊಂದಿಲ್ಲ. ಆದ್ದರಿಂದ ಕೇಂದ್ರ ಪರಿಸರ ಹಾಗೂ ಅರಣ್ಯ ಸಚಿವಾಲಯದ 2017ರ ಮಾರ್ಗಸೂಚಿಗಳನ್ವಯ ಹಾಲಿ ಗುತ್ತಿಗೆ ಇಲ್ಲದ ಅರ್ಜಿಗಳನ್ನು ಪರಿಗಣಿಸಲಾಗುವುದಿಲ್ಲ
ಸಾರಂಗಪಾಣಿ ಪ್ರಸ್ತಾವದ ಜೊತೆಗೆ, ತೀರ್ಥರಂಪುರ ಮೀಸಲು ಅರಣ್ಯ ಮತ್ತು ಜನ್ನೇರು ಅರಣ್ಯ ಬ್ಲಾಕ್ ವ್ಯಾಪ್ತಿಯೊಳಗಿನ 18 ಇತರ ಗಣಿಗಾರಿಕೆ ಗುತ್ತಿಗೆಗಳು ಅರಣ್ಯ ಅನುಮೋದನೆ ಪಡೆಯಲು ಬಾಕಿ ಉಳಿದಿವೆ. ಗಣಿಗಾರಿಕೆ ಯೋಜನೆಯ ಅನುಮೋದನೆಯು ಈ ಪ್ರದೇಶದ ಪರಿಸರ ವಿಜ್ಞಾನ ಮತ್ತು ಈ ಪ್ರದೇಶಗಳಲ್ಲಿರುವ ಹಳ್ಳಿಗಳ ಸಾಮಾಜಿಕ-ಆರ್ಥಿಕತೆಯ ಮೇಲೆ ಹಾನಿಕಾರಕ ಪರಿಣಾಮಗಳನ್ನು ಬೀರುತ್ತದೆ
ಪ್ರಸ್ತಾವವನ್ನು ತಿರಸ್ಕರಿಸಲು ಶಿಫಾರಸು ಮಾಡಿದ್ದಕ್ಕಾಗಿ ಕೇಂದ್ರದ ಪರಿಸರ, ಅರಣ್ಯ ಮತ್ತು ಹವಾಮಾನ ಬದಲಾವಣೆ ಸಚಿವಾಲಯಕ್ಕೆ ಧನ್ಯವಾದ. ಇದು ತುಮಕೂರು ಜಿಲ್ಲೆಯ ಜನರಿಗೆ ಸಿಕ್ಕ ಜಯ.-ಗಿರಿಧರ್ ಕುಲಕರ್ಣಿ, ವನ್ಯಜೀವಿ ಸಂರಕ್ಷಣಾವಾದಿ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.