ADVERTISEMENT

ಶಿವಸೇನಾ ಮುಖಂಡ ಸಂಜಯ ರಾವುತ್‌ ಹೇಳಿಕೆಗೆ ತಿರುಗೇಟು ನೀಡಿದ ಸತೀಶ ಜಾರಕಿಹೊಳಿ

‘ಮಣಗುತ್ತಿ; ಹೊರಗಡೆಯವರ ಮಧ್ಯೆಸ್ಥಿಕೆ ಅವಶ್ಯಕತೆ ಇಲ್ಲ’

​ಪ್ರಜಾವಾಣಿ ವಾರ್ತೆ
Published 10 ಆಗಸ್ಟ್ 2020, 13:51 IST
Last Updated 10 ಆಗಸ್ಟ್ 2020, 13:51 IST
ಸತೀಶ ಜಾರಕಿಹೊಳಿ
ಸತೀಶ ಜಾರಕಿಹೊಳಿ   

ಬೆಳಗಾವಿ: ‘ಛತ್ರಪತಿ ಶಿವಾಜಿ ಮಹಾರಾಜರ ಪ್ರತಿಮೆ ಪ್ರತಿಷ್ಠಾಪನೆ ವಿಷಯವು ಸ್ಥಳೀಯ ಸಮಸ್ಯೆಯಾಗಿದ್ದು, ಸ್ಥಳೀಯರೇ ಬಗೆಹರಿಸಿಕೊಳ್ಳುತ್ತಾರೆ. ಮುಂಬೈನವರು, ದೆಹಲಿಯವರು, ಬೆಂಗಳೂರಿನವರ ಮಧ್ಯೆಸ್ಥಿಕೆಯ ಅಗತ್ಯವಿಲ್ಲ’ ಎಂದು ಕೆಪಿಸಿಸಿ ಕಾರ್ಯಾಧ್ಯಕ್ಷ ಸತೀಶ ಜಾರಕಿಹೊಳಿ ಅವರು ಶಿವಸೇನಾ ಮುಖಂಡ ಸಂಜಯ ರಾವುತ್‌ ಹೇಳಿಕೆಗೆ ಪ್ರತಿಕ್ರಿಯೆ ನೀಡಿದರು.

ನಗರದಲ್ಲಿ ಸೋಮವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಮಣಗುತ್ತಿ ಗ್ರಾಮದಲ್ಲಿ ಶಿವಾಜಿ ಪ್ರತಿಮೆ ಕೂರಿಸಲು ಯಾರಿಗೂ ವಿರೋಧವಿಲ್ಲ. ಜಾಗದ ಸಮಸ್ಯೆಯಿಂದಾಗಿ ಉಳಿದುಕೊಂಡಿದೆ ಅಷ್ಟೆ. ಅದನ್ನು ಸ್ಥಳೀಯರು ಬಗೆಹರಿಸಿಕೊಳ್ಳುತ್ತಾರೆ. ಆದರೆ, ಈ ವಿಷಯದಲ್ಲಿ ಮಹಾರಾಷ್ಟ್ರದ ಮಾಧ್ಯಮಗಳು ಪ್ರಚೋದನೆ ನೀಡುತ್ತಿವೆ’ ಎಂದು ಆರೋಪಿಸಿದರು.

‘ಕೆಲವರು ಉದ್ದೇಶಪೂರ್ವಕವಾಗಿ ದೊಡ್ಡ ವಿಷಯವಾಗಿ ಬಿಂಬಿಸುತ್ತಿದ್ದಾರೆ. ಇಂತಹವರೇ ಕರಾಳ ದಿನ ಆಚರಿಸುತ್ತಾರೆ. ಮಹಾರಾಷ್ಟ್ರದಲ್ಲಿ ಕರ್ನಾಟಕದ ಬಸ್‌ಗಳಿಗೆ ಕಲ್ಲು ಎಸೆಯುತ್ತಾರೆ. ಇದರಿಂದ ಏನೂ ಸಾಧನೆ ಮಾಡಲು ಸಾಧ್ಯವಾಗುವುದಿಲ್ಲ. ನಾವು ಕೂಡ ಶಿವಾಜಿ ಮಹಾರಾಜರಿಗೆ ಗೌರವ ನೀಡುತ್ತೇವೆ. ಶಿವಾಜಿ ಜಯಂತಿಯನ್ನು ರಾಜ್ಯ ಸರ್ಕಾರದ ವತಿಯಿಂದ ಆಚರಿಸುತ್ತೇವೆ’ ಎಂದು ಹೇಳಿದರು.

ADVERTISEMENT

ಪ್ರಧಾನಿಗೆ ಕಾಳಜಿ ಇಲ್ಲ:‘ಅತಿವೃಷ್ಠಿ ಹಾಗೂ ಪ್ರವಾಹದಿಂದ ರಾಜ್ಯದಲ್ಲಿ ಸಾಕಷ್ಟು ಹಾನಿಯಾಗಿದ್ದರೂ ಪ್ರಧಾನಿ ನರೇಂದ್ರ ಮೋದಿ ಅನುದಾನ ಕೊಟ್ಟಿಲ್ಲ. ಅವರಿಗೆ ನಮ್ಮ ರಾಜ್ಯದ ಮೇಲೆ ಪ್ರೀತಿ, ಕಾಳಜಿ ಇಲ್ಲ’ ಎಂದು ವ್ಯಂಗ್ಯವಾಡಿದರು.

‘ಮುಖ್ಯಮಂತ್ರಿ ಬಿ.ಎಸ್‌. ಯಡಿಯೂರಪ್ಪ ಹಲವು ಬಾರಿ ಕೇಳಿಕೊಂಡಿದ್ದರೂ ಅನುದಾನ ಸಿಕ್ಕಿಲ್ಲ. ಯಾವ ರಾಜ್ಯ ಕೇಳಿಲ್ಲವೋ, ಎಲ್ಲಿ ಪ್ರವಾಹ ಅಷ್ಟಾಗಿ ಗಂಭೀರವಾಗಿರಲಿಲ್ಲವೋ ಅಂತಹ ರಾಜ್ಯಗಳಿಗೆ ಹೆಚ್ಚಿನ ಅನುದಾನ ನೀಡಿದ್ದಾರೆ. ಅತಿ ಹೆಚ್ಚು ಹಾನಿಗೊಳಗಾದ ನಮ್ಮ ರಾಜ್ಯಕ್ಕೆ ಅತ್ಯಂತ ಕಡಿಮೆ ಅನುದಾನ ನೀಡಿದ್ದರೆ’ ಎಂದು ಆರೋಪಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.