ADVERTISEMENT

Security Breach: ಅತಿಯಾಗಿ ಓದಿದ್ದೇ ಆತನಿಗೆ ತಿರುವಾಯಿತೋ–ಮನೋರಂಜನ್‌ ತಂದೆ ಬೇಸರ

ಬೆಂಗಳೂರು, ದೆಹಲಿಯ ಸಂಪರ್ಕದಲ್ಲಿದ್ದ ಮನೋರಂಜನ್‌

​ಪ್ರಜಾವಾಣಿ ವಾರ್ತೆ
Published 14 ಡಿಸೆಂಬರ್ 2023, 0:30 IST
Last Updated 14 ಡಿಸೆಂಬರ್ 2023, 0:30 IST
<div class="paragraphs"><p>ಮನೋರಂಜನ್ ಮನೆಯಲ್ಲಿ ದೊರೆತ ಪುಸ್ತಕಗಳು</p></div>

ಮನೋರಂಜನ್ ಮನೆಯಲ್ಲಿ ದೊರೆತ ಪುಸ್ತಕಗಳು

   

– ಪ್ರಜಾವಾಣಿ ಚಿತ್ರ

ಮೈಸೂರು: ಲೋಕಸಭೆಯಲ್ಲಿ ಕಲಾಪ ನಡೆಯುತ್ತಿದ್ದಾಗ ಪ್ರೇಕ್ಷಕರ ಗ್ಯಾಲರಿಯಿಂದ ಜಿಗಿದು ಗಮನ ಸೆಳೆದಿರುವ ಡಿ.ಮನೋರಂಜನ್ (34) ಇಲ್ಲಿನ ವಿಜಯನಗರದ 2ನೇ ಹಂತದಲ್ಲಿರುವ ಮನೆಯಲ್ಲಿ ವಾಸಿಸುತ್ತಿದ್ದು, ಎರಡು ದಿನಗಳ ಹಿಂದೆ ಬೆಂಗಳೂರಿಗೆ ತೆರಳಿದ್ದರು. ಅವರ ಮನೆಯಲ್ಲಿ ಕ್ರಾಂತಿಕಾರಿ ಬರಹವುಳ್ಳ ಪುಸ್ತಕಗಳು ದೊರೆತಿದ್ದು, ಅವುಗಳೇ ಅವರಿಗೆ ಪ್ರೇರಣೆಯಾಗಿತ್ತೇ ಎಂಬ ಪ್ರಶ್ನೆ ಮೂಡಿದೆ.

ADVERTISEMENT

ಅವರು ದೇವರಾಜೇ ಗೌಡ–ಶೈಲಜಾ ದಂಪತಿ ಪುತ್ರ. ಜೆ.ಕೆ ಟಯರ್ಸ್‌ ಹಾಗೂ ವಿಕ್ರಾಂತ್‌ ಕಂಪನಿಯ ಉದ್ಯೋಗಿಯಾಗಿದ್ದ ದೇವರಾಜೇಗೌಡ, ನಿವೃತ್ತಿಯ ಬಳಿಕ ಕೃಷಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಮೂಲತಃ ಹಾಸನ ತಾಲ್ಲೂಕಿನ ರಾಮನಾಥಪುರ ಹೋಬಳಿಯ ಮಲ್ಲಾಪುರದವರಾಗಿದ್ದು, 15 ವರ್ಷದ ಹಿಂದೆ ಮಗನ ವಿದ್ಯಾಭ್ಯಾಸಕ್ಕಾಗಿ ವಿಜಯನಗರಕ್ಕೆ ಬಂದು ಮೂರಂತಸ್ತಿನ ಸ್ವಂತ ಮನೆಯಲ್ಲಿ ವಾಸವಿದ್ದಾರೆ. ಮನೋರಂಜನ್‌ ಅವರಿಗೆ ಮರಿಮಲ್ಲಪ್ಪ ಶಾಲೆಯಲ್ಲಿ ಪ್ರೌಢ ಶಿಕ್ಷಣ ಮತ್ತು ಸೇಂಟ್‌ ಜೋಸೆಫ್‌ ಕಾಲೇಜಿನಲ್ಲಿ ಪಿಯು ಶಿಕ್ಷಣ ಕೊಡಿಸಿದ್ದರು. ಬಳಿಕ ಬಿ.ಇ ಶಿಕ್ಷಣಕ್ಕಾಗಿ ಬೆಂಗಳೂರಿನ ಬಿಐಟಿ ಕಾಲೇಜಿಗೆ ಸೇರಿಸಿದ್ದರು.

‘ಬಾಲ್ಯದಿಂದಲೇ ಮಗನಿಗೆ ವಿವೇಕಾನಂದರ ಕುರಿತ ಪುಸ್ತಕಗಳ ಬಗ್ಗೆ ಆಸಕ್ತಿಯಿತ್ತು. ಮನೆಯಲ್ಲಿ ಸಾವಿರಾರು ಪುಸ್ತಕಗಳಿವೆ’ ಎನ್ನುವ ಅವರ ಮಾತಿಗೆ ಪೂರಕವೆಂಬಂತೆ ಮನೆಯಲ್ಲಿ ಕೌಟಿಲ್ಯನ ‘ಅರ್ಥಶಾಸ್ತ್ರ’, ಪ್ಲೇಟೊ ರಚಿತ ‘ರಿಪಬ್ಲಿಕ್‌’, ಚೆಗುವರಾ ಅವರ ‘ಗೆರಿಲ್ಲಾ ವಾರ್‌ಫೇರ್‌’, ಲಾವೋಶೆಯ ‘ದಾವ್‌ ದ ಜಿಂಗ್‌’, ವಂದನಾ ಶಿವ ಅವರ ‘ಒನ್‌ನೆಸ್‌’, ‘ವಯಲೆನ್ಸ್‌ ಆಫ್‌ ಗ್ರೀನ್‌ ರೆವಲೂಷನ್’, ‘ವಾಟರ್‌ ವಾರ್ಸ್‌’, ‘ಹು ರಿಯಲೀ ಫೀಡ್ಸ್‌ ದ ವರ್ಲ್ಡ್‌’, ರಿಚರ್ಡ್‌ ಡಿ. ವೂಲ್ಫ್‌ ಅವರ ‘ಡೆಮಾಕ್ರಸಿ ಅಟ್‌ ವರ್ಕ್ಸ್’, ಆ್ಯಡಂ ಸ್ಮಿತ್‌ನ ‘ವೆಲ್ತ್‌ ಆಫ್‌ ನೇಷನ್ಸ್’, ಲಿಯೊ ಟಾಲ್‌ಸ್ಟಾಯ್‌ನ ‘ವಾರ್‌ ಆ್ಯಂಡ್‌ ಪೀಸ್‌’, ರಿಚರ್ಡ್‌ ಡಾಕಿನ್ಸ್‌ನ ‘ದ ಗ್ರೇಟೆಸ್ಟ್‌ ಶೋ ಆನ್ ಅರ್ಥ್‌, ಚಾರ್ಲ್ಸ್‌ ಡಿಕನ್ಸ್‌ನ ‘ಗ್ರೇಟ್‌ ಎಕ್ಸ್‌ಪೆಕ್ಟೇಶನ್ಸ್’, ‘ಆಲಿವರ್‌ ಟ್ವಿಸ್ಟ್’, ‘ಡೇವಿಡ್‌ ಕಾಪರ್‌ಫೀಲ್ಡ್‌’, ಹುಸೈನ್‌ ಝೈದಿ ಅವರ ‘ಬೈಕುಲಾ ಟು ಬ್ಯಾಂಕಾಕ್’, ಸನ್‌ ತ್ಸು ಅವರ ‘ದ ಆರ್ಟ್‌ ವಾರ್’, ಅಗ್ನಿಶ್ರೀಧರ್‌ ಅವರ ದಾದಾಗಿರಿಯ ದಿನಗಳು 1, 2, ಎದೆಗಾರಿಕೆ, ಟೈಗರ್‌ ಅಶೋಕ್‌ ಕುಮಾರ್‌ ಅವರ ‘ಹುಲಿಯ ನೆನಪುಗಳು’, ಅಮಿಶ್‌ ಮೆಕ್‌ ಡೊನಾಲ್ಡ್‌ ‘ಅಂಬಾನಿ ಅಂಡ್‌ ಸನ್ಸ್‌’ ಪುಸ್ತಕಗಳ ಸಾಲೇ ಇವೆ.

‘ಅತಿಯಾಗಿ ಓದಿದ್ದೇ ಆತನಿಗೆ ತಿರುವಾಯಿತೋ, ಏನೋ’ ಎಂದು ತಂದೆ ಅವಲತ್ತುಕೊಳ್ಳುತ್ತಾರೆ.

2013–14ರಲ್ಲಿ ಶಿಕ್ಷಣ ಮುಗಿಸಿದ ಬಳಿಕ ಹಾಸನದ ಕೃಷಿ ಜಮೀನಿನಲ್ಲಿ ದುಡಿಯಲು ತಂದೆ ತಿಳಿಸಿದರೂ, ಮನೋರಂಜನ್ ಮನೆಯಲ್ಲೇ ಹೆಚ್ಚಿನ ಸಮಯ ಕಳೆಯುತ್ತಿದ್ದರು. ಆಗಾಗ್ಗೆ ಬೆಂಗಳೂರು ಹಾಗೂ ದೆಹಲಿಗೆ ಭೇಟಿ ನೀಡುತ್ತಿದ್ದರು. ಬೆಂಗಳೂರಿನಲ್ಲಿರುವ ವಿವಾಹಿತ ತಂಗಿಯನ್ನು ಭೇಟಿ ಮಾಡಲು ಹೋಗುತ್ತಿರಬಹುದೆಂದು ಪಾಲಕರು ತಿಳಿದಿದ್ದರು.

‘ನಾವು ಪ್ರತಾಪ ಸಿಂಹ ವೋಟರ್ಸ್‌, ನನಗೂ ಅವರು ಆತ್ಮೀಯರು. ಹೀಗಾಗಿ ಪಾಸ್‌ ಪಡೆದಿದ್ದಾನೋ ಗೊತ್ತಿಲ್ಲ. ಪ್ರಧಾನಿ ಮೋದಿ ಬಗ್ಗೆ ಅಭಿಮಾನವಿತ್ತು. ಮಗನೇ ನಮ್ಗೆ ರಾಜಕೀಯದ ಸಾವಾಸ ಬೇಡ. ಅದರಲ್ಲಿ ನಮ್ ಹಿರಿಯರು ಯಾರೂ ಉದ್ದಾರವಾಗಿಲ್ಲ ಎಂದು ಹೇಳಿದ್ದೆ. ಸಮಾಜಕ್ಕೆ ಅನ್ಯಾಯ ಮಾಡಿದ್ದರೆ ಆತ ನನ್ನ ಮಗನೇ ಅಲ್ಲ. ತಪ್ಪು ಮಾಡಿದವರಿಗೆ ಗಲ್ಲು ಶಿಕ್ಷೆಯಾಗಲಿ’ ಎಂದು ದೇವರಾಜೇ ಗೌಡ ಆಕ್ರೋಶದಿಂದ ನುಡಿದರು.

‘ಮಗನಿಗೆ ಗೆಳೆಯರ‍್ಯಾರೂ ಇರಲಿಲ್ಲ. ಎರಡು ದಿನಗಳ ಹಿಂದೆ ಕರೆ ಮಾಡಿ, ಆತನ ತಂಗಿ ಮಗು ನೋಡಬೇಕೆಂದಿದ್ದ. ಅದೇ ಕೊನೆ. ಇದೀಗ ಈ ಸುದ್ದಿ ಕೇಳಿ ಬೇಸರವಾಗಿದೆ. ಮನೆಯಲ್ಲಿ ಬಾಣಂತಿ, ಮಗುವಿದೆ. ನಾನೂ ಹೃದಯ ಸಮಸ್ಯೆಯಿಂದ ಬಳಲುತ್ತಿದ್ದೇನೆ’ ಎಂದು ತಾಯಿ ಶೈಲಜಾ ಬೇಸರ ವ್ಯಕ್ತಪಡಿಸಿದರು.

ಮಾಹಿತಿ ಸಂಗ್ರಹಿಸಿದ ಎಸಿಪಿ: ವಿಜಯನಗರ ಎಸಿಪಿ ಗಜೇಂದ್ರ ಪ್ರಸಾದ್‌ ಹಾಗೂ ಇನ್‌ಸ್ಪೆಕ್ಟರ್‌ ಸುರೇಶ್‌ ಅವರು ಮನೋರಂಜನ್‌ ಮನೆಗೆ ತೆರಳಿ ಪೋಷಕರಿಂದ ಮಾಹಿತಿ ಪಡೆದರು.

ಮನೋರಂಜನ್ ಅವರ ವಿಜಯನಗರದ 2ನೇ ಹಂತದಲ್ಲಿರುವ ಮನೆ–

ಮೈಸೂರಿನಲ್ಲಿ ಸಂಸದರ ಕಚೇರಿಗೆ ಮುತ್ತಿಗೆ ಹಾಕುವುದನ್ನು ಪೊಲೀಸರು ತಡೆದಾಗ ಕಾಂಗ್ರೆಸ್‌ ಕಾರ್ಯಕರ್ತರು ಹುಣಸೂರು ರಸ್ತೆಯಲ್ಲೇ ಮಲಗಿ ಪ್ರತಿಭಟಿಸಿದರು

ಮೈಸೂರಿನ ಸಂಸದರ ಕಚೇರಿಗೆ ಬುಧವಾರ ಮುತ್ತಿಗೆ ಹಾಕಲು ನುಗ್ಗಿದ ಕಾಂಗ್ರೆಸ್ ಕಾರ್ಯಕರ್ತರು

ತಪ್ಪಿದ್ದರೆ ಗಲ್ಲು ಶಿಕ್ಷೆ ವಿಧಿಸಲಿ ಎಂದ ತಂದೆ ಮಗ ಮನೋರಂಜನ್‌ ವಿರುದ್ಧ ಆಕ್ರೋಶ ‘ರಾಜಕೀಯದ ಸಹವಾಸ ಬೇಡವೆಂದಿದ್ದೆ’

ಸಂಸದರ ಕಚೇರಿಗೆ ಮುತ್ತಿಗೆ ಯತ್ನ

ಸಂಸದ ಪ್ರತಾಪ ಸಿಂಹ ಪಾಸ್ ನೀಡಿರುವುದನ್ನು ಖಂಡಿಸಿ ಕಾಂಗ್ರೆಸ್ ಕಾರ್ಯಕರ್ತರು ಜಲದರ್ಶಿನಿಯಲ್ಲಿರುವ ಸಂಸದರ ಕಚೇರಿಗೆ ಮುತ್ತಿಗೆ ಹಾಕಲು ನುಗ್ಗಿದರು. ಪೊಲೀಸರು ತಡೆದಾಗ ತಡೆಗೋಡೆ ಹಾಗೂ ಗೇಟ್‌ ಏರಿದರು. ‘ದೇಶದ್ರೋಹದ ಕೆಲಸಕ್ಕೆ ಸಂಚು ರೂಪಿಸಿದ್ದ ಸಂಸದರ ಕಚೇರಿಯನ್ನು ನಮ್ಮ ಎದುರೇ ಮಹಜರು ಮಾಡಿ ಬೀಗ ಜಡಿಯಬೇಕು’ ಎಂದು ಒತ್ತಾಯಿಸಿದರು. ಪ್ರತಾಪ ಸಿಂಹ ಅವರನ್ನು ಬಂಧಿಸಿ ತನಿಖೆ ನಡೆಸಬೇಕು ಎಂದು ಒತ್ತಾಯಿಸಿ ಮೈಸೂರು– ಮಂಗಳೂರು ಹೆದ್ದಾರಿಯಲ್ಲಿ ಮಲಗಿದರು. ಅದರಿಂದಾಗಿ ಸಂಚಾರ ದಟ್ಟಣೆಯೂ ಉಂಟಾಯಿತು. ‘ದೇಶದ್ರೋಹಿ ಪ್ರತಾಪ‌ ಸಿಂಹನಿಗೆ ಧಿಕ್ಕಾರ’ ‘ಪ್ರತಾಪ ಸಿಂಹ ಬಂಧಿಸಿ’ ‘ದೇಶ ಒಡೆದ ಪ್ರತಾಪ ಸಿಂಹನಿಗೆ ಧಿಕ್ಕಾರ’ ‘ಲೋಕಸಭಾ ಸದಸ್ಯತ್ವದಿಂದ ಅಮಾನತು ಮಾಡಿ’ ಘೋಷಣೆಗಳನ್ನು ಕೂಗಿದರು. ಕೆಪಿಸಿಸಿ ವಕ್ತಾರ ಲಕ್ಷ್ಮಣ್‌ ಮಾತನಾಡಿ ‘ಮನೋರಂಜನ್ ಬಿಜೆಪಿ ಐಟಿ ಸೆಲ್‌ನಲ್ಲಿ ಕೆಲಸ ಮಾಡುತ್ತಿದ್ದರು. ಡಿ.7ರಂದು ಸಂಸದರ ಕಚೇರಿಯಲ್ಲಿ ಸಭೆ ಮಾಡಿ ಇಂದಿನ ಘಟನೆಗೆ ರೂಪರೇಷೆ ಹಾಕಿದ್ದರು. ಅಲ್ಲಿನ ಸಿಸಿಟಿವಿ ದೃಶ್ಯಗಳನ್ನು ಪರಿಶೀಲಿಸಬೇಕು ಹಾಗೂ ಕಡತಗಳನ್ನು ಪರಿಶೀಲನೆ ನಡೆಸಬೇಕು’ ಎಂದು ಒತ್ತಾಯಿಸಿದರು.

‘ಪ್ರತಾಪ್ ವಿರುದ್ಧ ತನಿಖೆಯಾಗಲಿ’

‘ಭದ್ರತಾ ದೃಷ್ಟಿಯಿಂದ ಸಂಸದ ಪ್ರತಾಪ್ ಅವರನ್ನು ತನಿಖೆಗೆ ಒಳಪಡಿಸಬೇಕು. ನೈಜ ಕಾರಣವನ್ನು ಕೇಂದ್ರ ಸರ್ಕಾರ ಪತ್ತೆ ಹಚ್ಚಬೇಕು’ ಎಂದು ಸಮಾಜ ಕಲ್ಯಾಣ ಸಚಿವ ಡಾ.ಎಚ್‌.ಸಿ.ಮಹದೇವಪ್ಪ ಆಗ್ರಹಿಸಿದ್ದಾರೆ. ‘ಲೋಕಸಭಾ ಚುನಾವಣೆ ಬಂತೆಂದರೆ ಒಂದಿಲ್ಲೊಂದು ರೀತಿಯ ಭದ್ರತಾ ವೈಫಲ್ಯ ಉಂಟಾಗುತ್ತದೆ. ಇದೀಗ ಮತ್ತೆ ಆತಂಕ ಸೃಷ್ಟಿಯಾಗಿದ್ದು ಸಂಸದರೇ ಆಗಂತುಕ ಆರೋಪಿಗೆ ಪಾಸ್ ನೀಡಿದ್ದಾರೆ’ ಎಂದು ಪ್ರಕಟಣೆಯಲ್ಲಿ ಆಕ್ರೋಶ ವ್ಯಕ್ತಪಡಿಸಿದ್ದಾರೆ.  ‘2001ರಲ್ಲಿ ಎಲ್.ಕೆ.ಅಡ್ವಾಣಿ ಗೃಹ ಸಚಿವರಾಗಿದ್ದಾಗ ಸಂಸತ್ ಮೇಲೆ ದಾಳಿ ನಡೆದಿತ್ತು. ಕಳೆದ ಬಾರಿ ಚುನಾವಣೆ ವೇಳೆ ಪುಲ್ವಾಮಾದಲ್ಲಿ ಬರೋಬ್ಬರಿ 300 ಕೆ.ಜಿಯಷ್ಟು ಆರ್‌ಡಿಎಕ್ಸ್‌ ಸ್ಫೋಟಿಸಿ ಸೈನಿಕರ ಅಮೂಲ್ಯ ಜೀವ ಹೋಗುವಂತಾಗಿತ್ತು. ಆರ್‌ಡಿಎಕ್ಸ್‌ ಹೇಗೆ ಬಂತು ಎಂಬುದರ ಬಗ್ಗೆ ಯಾವ ತನಿಖೆಯೂ ಆಗಿಲ್ಲ’ ಎಂದಿದ್ದಾರೆ. ರಾಜೀನಾಮೆ ನೀಡಲಿ: ‘ಸಂಸದ ಪ್ರತಾಪಸಿಂಹ ನೀಡಿದ ಪಾಸ್‌ ಬಳಸಿಯೇ ಲೋಕಸಭೆ ಮೇಲೆ ದಾಳಿ ನಡೆದಿದ್ದು ದುಷ್ಕೃತ್ಯದ ನೈತಿಕ ಹೊಣೆ ಹೊತ್ತು ರಾಜೀನಾಮೆ ನೀಡಬೇಕು. ರಾಷ್ಟ್ರಪೇಮಿ ಎಂದು ಹೇಳಿಕೊಳ್ಳುವ ಅವರ ವಿರುದ್ಧವೂ ತನಿಖೆ ನಡೆಯಬೇಕು’ ಎಂದು ಎಸ್‌ಡಿಪಿಐ ರಾಜ್ಯ ಮುಖಂಡ ಅಬ್ದುಲ್‌ ಮಜೀದ್‌ ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.