ADVERTISEMENT

ನನ್ನದು ಈಸಿ ಪ್ರೆಗ್ನೆನ್ಸಿ ಆಗಿರಲಿಲ್ಲ: ತಾಯ್ತನ ಅನುಭವ ಬಿಚ್ಚಿಟ್ಟ ಶಿಲ್ಪಾಶೆಟ್ಟಿ

ಮಂಗಳೂರಿನಲ್ಲಿ ಆಕರ್ಷಣೆಯ ಬಿಂದುವಾದ ‘ಕುಡ್ಲದ ಪೊಣ್ಣು’

​ಪ್ರಜಾವಾಣಿ ವಾರ್ತೆ
Published 27 ಸೆಪ್ಟೆಂಬರ್ 2019, 2:29 IST
Last Updated 27 ಸೆಪ್ಟೆಂಬರ್ 2019, 2:29 IST
ಶಿಲ್ಪಾ ಶೆಟ್ಟಿ
ಶಿಲ್ಪಾ ಶೆಟ್ಟಿ   

ಮಂಗಳೂರು: ‘ಶಿಲ್ಪ’ದಂತಹ ಕಟೆದ ಸೌಂದರ್ಯದ ಒಡತಿ, ಬಾಲಿವುಡ್‌ ನಟಿ ಶಿಲ್ಪಾಶೆಟ್ಟಿ ಯೂತ್‌ ಐಕಾನ್‌ ಆಗಿ ಇಂದಿಗೂ ಜನಮಾನಸದಲ್ಲಿ ಮುಂಚೂಣಿಯಲ್ಲಿ ಇರುವವರು. ವಯಸ್ಸು 44 ಆದರೂ ಕೂಡ ಅವರ ತುಟಿಬಟ್ಟಲಿನಿಂದ ತುಳುಕುವ ನಗುವಿನ ಸೊಗಸಿನಂತೆ; ಅವರ ಚೆಲುವು ಇಂದಿಗೂ ತಾಜಾತನ ಉಳಿಸಿಕೊಂಡಿದೆ.

ಯೋಗ, ಅಡುಗೆ ಕುರಿತಾದ ಯೂಟ್ಯೂಬ್‌ ಚಾನೆಲ್‌, ಮಹಿಳಾ ಉದ್ಯಮಿ, ನಟಿಯಾಗಿ ಸದಾ ಸುದ್ದಿಯಲ್ಲಿರುವ ‘ಕುಡ್ಲದ ಪೊಣ್ಣು’ ಶಿಲ್ಪಾಶೆಟ್ಟಿ ಗುರುವಾರ ಮಂಗಳೂರಿನ ಜನರ ಆಕರ್ಷಣೆಯ ಕೇಂದ್ರಬಿಂದುವಾಗಿದ್ದರು. ಕೆಎಂಸಿ ಆಸ್ಪತ್ರೆಯ ‘ಮಹಿಳಾ ಮತ್ತು ಮಕ್ಕಳ ಕೇಂದ್ರ’ವನ್ನು ಉದ್ಘಾಟಿಸುವುದರ ಜತೆಗೆ ‘ಎಲ್ಲರಿಗೂ ನಮಸ್ಕಾರ’ ಎಂದು ತುಳುವಿನಲ್ಲಿ ಹೇಳಿ ತಮ್ಮ ತಾಯ್ತನದ ಅನುಭವಗಳನ್ನು ಹಂಚಿಕೊಂಡರು.

‘ತಾಯ್ತನ ಪ್ರತಿಯೊಂದು ಹೆಣ್ಣಿನ ಬಾಳಲ್ಲೂ ವಿಶೇಷ ಅನುಭೂತಿ ನೀಡುವಂತಹ ಸಂಗತಿ. ಆದರೆ, ನವಮಾಸಗಳ ಸಂಭ್ರಮ ಎಲ್ಲ ಮಹಿಳೆಯರ ಜೀವನದಲ್ಲೂ ಒಂದೇ ತೆರನಾಗಿ ಇರುವುದಿಲ್ಲ. ನಾನೊಬ್ಬಳು ಅದ್ಭುತ ಫಿಟ್‌ನೆಸ್‌ ಐಕಾನ್‌ ಎಂದು ಗುರುತಿಸುವ ಈ ಜಗತ್ತಿಗೆ ನನ್ನ ಮೊದಲ ಪ್ರೆಗ್ನಿಸ್ಸಿ ಅಷ್ಟು ಸರಳವಾಗಿರಲಿಲ್ಲ ಎಂಬ ವಿಚಾರ ತಿಳಿದಿಲ್ಲ. ಆಟೊಇಮ್ಯುನ್‌ ಡಿಸಾರ್ಡರ್‌ ನನ್ನನ್ನು ಬಾಧಿಸಿತ್ತು. ನಾನು ಆರೋಗ್ಯವಂತೆ. ದೈಹಿಕ ಮತ್ತು ಮಾನಸಿಕ ಆರೋಗ್ಯ ಕಾಪಿಟ್ಟುಕೊಳ್ಳುವಲ್ಲಿ ಸದಾ ಜಾಗೃತಿ ವಹಿಸುತ್ತಿದ್ದೆ. ಆದರೂ, ಹೀಗಾಯ್ತು. ಎರಡನೇ ಬಾರಿ ಗರ್ಭಿಣಿ ಆದಾಗ ತುಂಬಾ ಎಚ್ಚರಿಕೆ ತೆಗೆದುಕೊಂಡೆ. ಈ ನಿಟ್ಟಿನಲ್ಲಿ ವೈದ್ಯರ ಸಲಹೆ ಮತ್ತು ಮಾರ್ಗದರ್ಶನವನ್ನು ಎಂದಿಗೂ ಮರೆಯುವಂತಿಲ್ಲ’ ಎಂದು ಶಿಲ್ಪಾಶೆಟ್ಟಿ ಹೇಳಿದರು.

‘ಗರ್ಭಿಣಿಯರು ತಮ್ಮ ಆರೋಗ್ಯದ ಬಗ್ಗೆ ಕಾಳಜಿ ವಹಿಸಬೇಕು. ತಾಯಿಯಾಗುವ ಸಂಭ್ರಮದಲ್ಲಿರುವ ಮಹಿಳೆಯರು, ನಾನು ಏನು ಮಾಡುತ್ತಿದ್ದೇನೆ; ಹೇಗೆ ಯೋಚಿಸುತ್ತಿದ್ದೇನೆ ಎಂಬುದರ ಬಗ್ಗೆ ಅತ್ಯಂತ ಜಾಗರೂಕರಾಗಿರಬೇಕು. ಏಕೆಂದರೆ ಅದು ನಿಮ್ಮ ಒಡಲಿನಲ್ಲಿರುವ ಮಗುವಿನ ಮಾನಸಿಕ ಆರೋಗ್ಯದ ಮೇಲೆ ನೇರ ಪರಿಣಾಮ ಬೀರುತ್ತದೆ. ಗರ್ಭ ಧರಿಸಿದ ದಿನದಿಂದ ಮಗು ನಿಮ್ಮ ಮಡಿಲಿಗೆ ಬರುವವರೆಗೂ ತಾಯಿ ಮತ್ತು ಮಗುವಿನ ಆರೋಗ್ಯವನ್ನು ಕೆಎಂಸಿಯ ‘ಮಹಿಳಾ ಮತ್ತು ಮಕ್ಕಳ ಕೇಂದ್ರ’ ಕಾಳಜಿ ಮಾಡಲಿದೆ’ ಎಂದು ಹೇಳಿದರು.

‘ಭಾರತೀಯ ಮಹಿಳೆಯರು ಕುಟುಂಬದ ಆರೋಗ್ಯದ ಬಗ್ಗೆ ಕಾಳಜಿವಹಿಸುವಷ್ಟು ತಮ್ಮ ಸ್ವಂತ ಆರೋಗ್ಯದ ಬಗ್ಗೆ ನಿಗಾ ವಹಿಸುವುದಿಲ್ಲ. ಗಂಡ, ಮಕ್ಕಳು ಎಂದು ಮೂರು ಹೊತ್ತು ಆಲೋಚಿಸುವ ಅವಳು, ತನ್ನ ಆರೋಗ್ಯವನ್ನೂ ಎಲ್ಲ ಸಮಯದಲ್ಲೂ ನಿರ್ಲಕ್ಷ್ಯ ಮಾಡುತ್ತಲೇ ಬರುತ್ತಾಳೆ. ಏಕಕಾಲಕ್ಕೆ ಹಲವು ರಂಗಗಳಲ್ಲಿ ತೊಡಗಿಸಿಕೊಂಡಿರುವ ನನಗೆ ಈಗ ಸಮಯ ತುಂಬ ದುಬಾರಿ ಎನಿಸಿದೆ. ಆದರೂ ಕೂಡ ಮುಂದಿನ ದಿನಗಳಲ್ಲಿ ಮಹಿಳೆಯರ ಆರೋಗ್ಯ ಮತ್ತು ಅವರಲ್ಲಿ ಫಿಟ್‌ನೆಸ್‌ ಬಗ್ಗೆ ಜಾಗೃತಿ ಮೂಡಿಸುವ ಕಾರ್ಯದಲ್ಲಿ ತೊಡಗಿಸಿಕೊಳ್ಳುತ್ತೇನೆ’ ಎಂದು ಹೇಳಿದರು.

‘ಮಂಗಳೂರಿಗೆ ಬಂದಿದ್ದು, ಖುಷಿ ಕೊಟ್ಟಿದೆ’

‘ಮಂಗಳೂರಿಗೆ ಬಂದದ್ದು ಅತ್ಯಂತ ಖುಷಿಯ ಕ್ಷಣಗಳನ್ನು ಮೊಗೆದು ಕೊಟ್ಟಿದೆ. ಈ ಊರಿನೊಂದಿಗೆ ಬೆರೆತುಹೋಗಿರುವ ನನ್ನ ಜೀವನದ ಹಳೆಯ ನೆನಪುಗಳೊಂದಿಗೆ ಜೀಕಲು ಅವಕಾಶ ಮಾಡಿಕೊಟ್ಟ ಈ ಕಾರ್ಯಕ್ರಮ ನನ್ನ ಖುಷಿಯ ತಿಜೋರಿಗೆ ಮತ್ತಷ್ಟು ಸಂಭ್ರಮದ ಕ್ಷಣಗಳನ್ನು ಜಮೆ ಮಾಡಿದೆ’ ಎಂದು ಹೇಳಿ ಹೂ ನಗುವೊಂದನ್ನು ತುಳುಕಿಸಿ, ಮಾತು ಮುಗಿಸಿದರು ಶಿಲ್ಪಾಶೆಟ್ಟಿ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.