ADVERTISEMENT

ಶಿವಮೊಗ್ಗ- ಬೆಂಗಳೂರು: ವಿಮಾನ ಹಾರಾಟ ನಾಳೆ ಆರಂಭ

​ಪ್ರಜಾವಾಣಿ ವಾರ್ತೆ
Published 29 ಆಗಸ್ಟ್ 2023, 16:34 IST
Last Updated 29 ಆಗಸ್ಟ್ 2023, 16:34 IST
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ
ಶಿವಮೊಗ್ಗದ ಸೋಗಾನೆ ವಿಮಾನ ನಿಲ್ದಾಣ    

ಬೆಂಗಳೂರು: ‘ಶಿವಮೊಗ್ಗ ವಿಮಾನ ನಿಲ್ದಾಣದಿಂದ ಗುರುವಾರದಿಂದ (ಆ.31)  ವಿಮಾನಯಾನ ಆರಂಭವಾಗಲಿವೆ’ ಎಂದು ಮೂಲಸೌಕರ್ಯ ಅಭಿವೃದ್ಧಿ ಸಚಿವ ಎಂ.ಬಿ. ಪಾಟೀಲ ತಿಳಿಸಿದ್ದಾರೆ.

‘ಇಂಡಿಗೋ ಸಂಸ್ಥೆಯು ವಿಮಾನ ಗುರುವಾರ ಬೆಳಿಗ್ಗೆ 9.50 ಕ್ಕೆ ಬೆಂಗಳೂರಿನ ಕೆಂಪೇಗೌಡ ಅಂತರರಾಷ್ಟ್ರೀಯ ವಿಮಾನ ನಿಲ್ದಾಣದಿಂದ ಹೊರಟು 11.05ಕ್ಕೆ ಶಿವಮೊಗ್ಗ ತಲುಪಲಿದೆ. ಮುಂದಿನ ಮೂರು ವಾರಗಳ ವಿಮಾನಯಾನ ಟಿಕೆಟ್‌ ಮುಂಗಡವಾಗಿ ಬುಕಿಂಗ್‌ ಆಗಿದೆ’ ಎಂದಿದ್ದಾರೆ.

‘ಮೊದಲ ಯಾನದಲ್ಲಿ ನಾನು, ಶಿವಮೊಗ್ಗ ಜಿಲ್ಲಾ ಉಸ್ತುವಾರಿ ಸಚಿವ ಮಧು ಬಂಗಾರಪ್ಪ, ಮಾಜಿ‌ ಮುಖ್ಯಮಂತ್ರಿ ಬಿ.ಎಸ್. ಯಡಿಯೂರಪ್ಪ, ಸಂಸದ ಬಿ.ವೈ. ರಾಘವೇಂದ್ರ ಸೇರಿದಂತೆ ಮಲೆನಾಡು ಭಾಗದ ಜನಪ್ರತಿನಿಧಿಗಳು ಇರಲಿದ್ದಾರೆ. ಶಿವಮೊಗ್ಗ ವಿಮಾನ ನಿಲ್ದಾಣದಲ್ಲಿ ಇಳಿದ ತಕ್ಷಣ ವಾಟರ್ ಸೆಲ್ಯೂಟ್‌ ಮೂಲಕ ಸಂಭ್ರಮಾಚರಣೆ ಮಾಡಲಾಗುವುದು’ ಎಂದಿದ್ದಾರೆ.

ADVERTISEMENT

‘ಶಿವಮೊಗ್ಗದಿಂದ 15 ಕಿ.ಮೀ. ದೂರದಲ್ಲಿರುವ ಸೋಗಾನೆ ಎಂಬಲ್ಲಿ 779 ಎಕರೆ ಜಾಗದಲ್ಲಿ ವಿಮಾನ ನಿಲ್ದಾಣ ನಿರ್ಮಾಣವಾಗಿದ್ದು, ₹ 450 ಕೋಟಿ ವಿನಿಯೋಗಿಸಲಾಗಿದೆ. ಮಲೆನಾಡು ಭಾಗದಲ್ಲಿ ನಿರ್ಮಾಣವಾಗಿರುವ ಮೊದಲ ವಿಮಾನ ನಿಲ್ದಾಣವಿದು. ಇಲ್ಲಿ ಏರ್‌ಬಸ್‌ ಮಾದರಿಯ ವಿಮಾನಗಳೂ ಇಳಿಯಬಹುದು. ಶಿವಮೊಗ್ಗ, ಚಿಕ್ಕಮಗಳೂರು, ಚಿತ್ರದುರ್ಗ, ದಾವಣಗೆರೆ, ಹಾವೇರಿ ಜಿಲ್ಲೆಗಳ ಜನರಿಗೆ ಇದರಿಂದ ಅನುಕೂಲವಾಗಲಿದೆ’ ಎಂದು ಅವರು ವಿವರಿಸಿದ್ದಾರೆ.

‘ಶಿವಮೊಗ್ಗದಿಂದ ದೆಹಲಿ, ಮುಂಬೈ, ಹೈದರಾಬಾದ್, ಚೆನ್ನೈ, ಗೋವಾ ಮುಂತಾದ ನಗರಗಳಿಗೆ ನೇರ ವಿಮಾನ ಸಂಪರ್ಕ ಕಲ್ಪಿಸಲು ಪ್ರಯತ್ನಿಸಲಾಗುವುದು. ತಕ್ಷಣಕ್ಕೆ ಬೆಂಗಳೂರಿನಲ್ಲಿ ಈ ಸ್ಥಳಗಳಿಗೆ ಸಂಪರ್ಕ ವಿಮಾನಗಳು ಲಭ್ಯ ಇರಲಿವೆ. ಉಡಾನ್‌ ಯೋಜನೆಯಡಿ ವಿಮಾನಯಾನ ಸೇವೆ ವಿಸ್ತರಿಸಲು ಟೆಂಡರ್ ಕರೆಯಲಾಗಿದೆ’ ಎಂದೂ ಮಾಹಿತಿ ನೀಡಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.