ADVERTISEMENT

ಶಿವಮೊಗ್ಗ | ಊರಗಡೂರು ರೈತರಿಗೆ ಪರಿಹಾರ ನೀಡುವ ಬಗ್ಗೆ ಪರಿಶೀಲನೆ: ಬೈರತಿ ಸುರೇಶ್‌

​ಪ್ರಜಾವಾಣಿ ವಾರ್ತೆ
Published 18 ಡಿಸೆಂಬರ್ 2025, 14:05 IST
Last Updated 18 ಡಿಸೆಂಬರ್ 2025, 14:05 IST
ಬೈರತಿ ಸುರೇಶ್‌
ಬೈರತಿ ಸುರೇಶ್‌   

ಸುವರ್ಣ ವಿಧಾನಸೌಧ (ಬೆಳಗಾವಿ): ಬಡವರಿಗೆ ವಸತಿ ಕಲ್ಪಿಸಲು ಶಿವಮೊಗ್ಗದ ನಿಧಿಗೆ ಹೋಬಳಿಯ ಊರಗಡೂರು ಗ್ರಾಮದಲ್ಲಿ ಸ್ವಾಧೀನಕ್ಕೆ ತೆಗೆದುಕೊಂಡಿರುವ 60 ಎಕರೆ 33 ಗುಂಟೆಯಷ್ಟು ಜಮೀನಿಗೆ ಸಂಬಂಧಿಸಿದಂತೆ, ಭೂಮಾಲೀಕರಿಗೆ ನಿವೇಶನ ನೀಡುವ ಬಗ್ಗೆ ಪರಿಶೀಲನೆ ನಡೆಸಲಾಗುವುದು ಎಂದು ನಗರಾಭಿವೃದ್ಧಿ ಸಚಿವ ಬೈರತಿ ಸುರೇಶ್‌ ಹೇಳಿದರು.

ವಿಧಾನ ಪರಿಷತ್ತಿನಲ್ಲಿ ಗುರುವಾರ ಬಲ್ಕೀಸ್‌ ಬಾನು, ರಮೇಶ್‌ ಬಾಬು, ಡಿ.ಎಸ್‌.ಅರುಣ್ ಅವರು ಸರ್ಕಾರದ ಗಮನಸೆಳೆದು, ‘ಈ ರೈತರಿಗೆ ಘೋಷಿಸಿರುವ ಪರಿಹಾರ ತೀರಾ ಕಡಿಮೆ. ಅವರಿಗೆ ಈಗಿನ ಮಾರುಕಟ್ಟೆ ದರದಲ್ಲಿ ಪರಿಹಾರ ಒದಗಿಸಬೇಕು’ ಎಂದು ಒತ್ತಾಯಿಸಿದರು.

ಸಚಿವ ಸುರೇಶ್‌, ‘ಸದರಿ ಜಮೀನುಗಳಿಗೆ ಸಂಬಂಧಿಸಿದಂತೆ 1984ರಲ್ಲಿ ಪ್ರಾಥಮಿಕ ಮತ್ತು 1987ರಲ್ಲಿ ಅಂತಿಮ ಅಧಿಸೂಚನೆ ಹೊರಡಿಸಲಾಗಿದೆ. ನ್ಯಾಯಾಲಯಗಳಲ್ಲಿ ಹಲವು ಪ್ರಕರಣಗಳು ನಡೆದು, 1995ನೇ ಸಾಲಿನ ದರದಂತೆ 2006ರಲ್ಲಿ ಪರಿಹಾರ ನಿಗದಿ ಮಾಡಲಾಗಿದೆ. ಪ್ರತಿ ಎಕರೆ ತರಿ ಜಮೀನಿಗೆ ₹19,753 ಮತ್ತು ಪ್ರತಿ ಎಕರೆ ಖುಷ್ಕಿ ಜಮೀನಿಗೆ ₹12,325ರಂತೆ ಒಟ್ಟು ₹20.69 ಲಕ್ಷವನ್ನು ನ್ಯಾಯಾಲಯದಲ್ಲಿ ಠೇವಣಿ ಇರಿಸಲಾಗಿದೆ. ಅದಕ್ಕಿಂತ ಹೆಚ್ಚಿನ ಪರಿಹಾರ ನೀಡಲು ಸಾಧ್ಯವಿಲ್ಲ’ ಎಂದು ಪ್ರತಿಪಾದಿಸಿದರು.

ADVERTISEMENT

ಬಲ್ಕಿಸ್‌ ಬಾನು, ‘ಇದು ನ್ಯಾಯವಲ್ಲ. ಸರ್ಕಾರದ ನಿರ್ಧಾರ ಮತ್ತು ಹೈಕೋರ್ಟ್‌ನ ತೀರ್ಪಿನ ವಿರುದ್ಧ ಮೇಲ್ಮನವಿ ಸಲ್ಲಿಸಲೂ ಆ ಜನರಿಗೆ ಆರ್ಥಿಕ ಶಕ್ತಿಯಿಲ್ಲ. ಇದನ್ನು ಮಾನವೀಯ ದೃಷ್ಟಿಯಿಂದ ನೋಡಬೇಕು’ ಎಂದರು. ಈಗಿನ ಮಾರುಕಟ್ಟೆ ದರದಲ್ಲಿಯೇ ಪರಿಹಾರ ನೀಡಬೇಕು ಎಂದು ಕಾಂಗ್ರೆಸ್‌ನ ರಮೇಶ್‌ ಬಾಬು, ನಸೀರ್ ಅಹ್ಮದ್‌ ಮತ್ತು ಬಿಜೆಪಿಯ ಡಿ.ಎಸ್‌.ಅರುಣ್‌ ಒತ್ತಾಯಿಸಿದರು.

ಒತ್ತಾಯಕ್ಕೆ ಮಣಿದ ಬೈರತಿ ಸುರೇಶ್‌, ‘ಕಾನೂನಿನಲ್ಲಿ ಇದಕ್ಕೆ ಅವಕಾಶವೇ ಇಲ್ಲ. ಆದರೆ ಮಾನವೀಯತೆ ದೃಷ್ಟಿಯಿಂದ ಈ ಬೇಡಿಕೆಗಳನ್ನು ಪರಿಶೀಲಿಸುತ್ತೇವೆ. ಇಲಾಖೆಯ ಪ್ರಧಾನ ಕಾರ್ಯದರ್ಶಿ ಮತ್ತು ಅಡ್ವೊಕೇಟ್‌ ಜನರಲ್‌ ಅವರೊಂದಿಗೆ ಚರ್ಚಿಸಿ ನೋಡುತ್ತೇನೆ. ಸಾಧ್ಯವಿದ್ದರೆ ಮಾತ್ರ ನಿವೇಶನ ನೀಡುತ್ತೇವೆ. ನಿವೇಶನ ಕೊಟ್ಟೇಕೊಡುತ್ತೇವೆ ಎಂದು ಭರವಸೆ ನೀಡುವುದಿಲ್ಲ’ ಎಂದು ಸ್ಪಷ್ಟಪಡಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.