ADVERTISEMENT

ಹಿಂದಿ ಹೇರಿಕೆಗೆ ಆಕ್ಷೇಪ ಸರಿಯಲ್ಲ: ಮೈತ್ರಿ ಸರ್ಕಾರದ ವಿರುದ್ಧ ಸಂಸದೆ ಶೋಭಾ ಕಿಡಿ

​ಪ್ರಜಾವಾಣಿ ವಾರ್ತೆ
Published 4 ಜೂನ್ 2019, 8:47 IST
Last Updated 4 ಜೂನ್ 2019, 8:47 IST
ಶೋಭಾ ಕರಂದ್ಲಾಜೆ
ಶೋಭಾ ಕರಂದ್ಲಾಜೆ   

ಉಡುಪಿ:‌‌ ಯಾವುದೇ ಭಾಷೆಯನ್ನು ಕಲಿಯಲು ಆಕ್ಷೇಪ ಮಾಡುವುದು ಸರಿಯಲ್ಲ. ಎಲ್ಲ ಭಾಷೆಗಳನ್ನು ಕಲಿಯಲು ಮುಕ್ತ ಅವಕಾಶ ಕಲ್ಪಿಸಬೇಕು. ಹಿಂದಿ ಹೇರಿಕೆಗೆ ಆಕ್ಷೇಪ ಮಾಡುವವರು ರಾಜ್ಯದಲ್ಲಿ ಕನ್ನಡ ಕಡ್ಡಾಯ ಮಾಡಲಿ. ಕನ್ನಡದ ಬೆಳವಣಿಗೆಗೆ ಆದ್ಯತೆ ನೀಡಲಿ ಎಂದು ಸಂಸದೆ ಶೋಭಾ ಕರಂದ್ಲಾಜೆ ಹೇಳಿದರು.

ಉಡುಪಿಯಲ್ಲಿ ಮಾತನಾಡಿದ ಅವರು, ಕನ್ನಡ ಕಡ್ಡಾಯ ಮಾಡುವ ಕೆಲಸವನ್ನು ರಾಜ್ಯ ಸರ್ಕಾರ ಮೊದಲು ಮಾಡಬೇಕು. ಕರ್ನಾಟಕದ ರಾಜಧಾನಿ ಬೆಂಗಳೂರಿನಲ್ಲಿಯೇ ಕನ್ನಡ ಮಾತನಾಡುವುದಿಲ್ಲ. ಅನ್ಯಭಾಷಿಕರ ಭಾಷೆಯಲ್ಲಿ ಮಾತನಾಡಬೇಕಾದ ಪರಿಸ್ಥಿತಿ ಇದೆ. ಕನ್ನಡ ಕಡ್ಡಾಯಕ್ಕೆ ಸರ್ಕಾರ ಕ್ರಮಕೈಗೊಳ್ಳಲಿ. ನಂತರ ಇಂಗ್ಲಿಷ್‌, ಹಿಂದಿ ಹೇರಿಕೆ ವಿರುದ್ಧ ಆಕ್ಷೇಪ ವ್ಯಕ್ತಪಡಿಸಲಿ ಎಂದು ತಿರುಗೇಟು ನೀಡಿದರು.

ಸಿದ್ದರಾಮಯ್ಯನವರ ಸರ್ಕಾರದಲ್ಲಿ ಕನ್ನಡ ಮತ್ತು ಸಂಸ್ಕೃತಿ ಇಲಾಖೆಗೆ ನೀಡಿದ ಅನುದಾನವನ್ನು ಕನ್ನಡದ ಬೆಳವಣಿಗೆಗೆ ಬಳಕೆ ಮಾಡಿಲ್ಲ. ಅನುದಾನ ಅಮೆರಿಕಾ ಪ್ರವಾಸ ಹೋಗಲು ವಿನಿಯೋಗವಾಗಿದೆ. ಇದಕ್ಕೆ ಸಿದ್ದರಾಮಯ್ಯ ಉತ್ತರ ಕೊಡಲಿ. ನಂತರ ಆಕ್ರೋಶ ವ್ಯಕ್ತಪಡಿಸಲಿ ಎಂದು ಟೀಕಿಸಿದರು.

ADVERTISEMENT

ವಾಸ್ತವ್ಯದಿಂದ ಅಭಿವೃದ್ಧಿ ಆಗಲ್ಲ:ಗ್ರಾಮ ವಾಸ್ತವ್ಯದಿಂದ ಅಭಿವೃದ್ಧಿ ಆಗುವುದಿಲ್ಲ. ಜನ ಅಧಿಕಾರ ಕೊಟ್ಟಿರುವುದು ಕೇವಲ ಗ್ರಾಮ ವಾಸ್ತವ್ಯ ಮಾಡುವುದಕ್ಕಾಗಿ ಅಲ್ಲ. ಬದಲಾಗಿ ವಿಧಾನಸೌಧದಲ್ಲಿ ಕುಳಿತು ಕೆಲಸ ಮಾಡಲು. ಆದರೆ ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ವಿಧಾನಸೌಧದಲ್ಲಿ ಒಂದು ದಿನವೂ ಕುಳಿತುಕೊಳ್ಳುತ್ತಿಲ್ಲ. ಹೊಟೇಲ್‌ ವೆಸ್ಟ್‌ ಎಂಡ್‌ನಿಂದಲೇ ಆಡಳಿತ ನಡೆಸುತ್ತಿದ್ದಾರೆ ಎಂದು ಲೇವಡಿ ಮಾಡಿದರು.

ರಾಜ್ಯದ ಇತಿಹಾಸದಲ್ಲಿ ಹೊಟೇಲ್‌ ಕೊಠಡಿಯಲ್ಲಿ ಕುಳಿತು ಆಡಳಿತ ನಡೆಸುತ್ತಿರುವ ಮೊದಲ ಸಿಎಂ ಕುಮಾರಸ್ವಾಮಿ. ಇದರಿಂದ ವ್ಯವಹಾರಕ್ಕೆ ಬರುವವರಿಗೆ ಅನುಕೂಲವಾಗುತ್ತಿದ್ದು, ಸಾಮಾನ್ಯ ಜನರಿಗೆ ಭೇಟಿ ಮಾಡಲು ಕಷ್ಟವಾಗುತ್ತಿದೆ. ವಿಧಾನಸೌಧದಲ್ಲಿ ವಾಸ್ತು ಸರಿಯಿಲ್ಲವೇ, ವೆಸ್ಟ್‌ಎಂಡ್‌ನಲ್ಲಿ ಕುಳಿತಿರುವುದು ಏಕೆ, ವಿಧಾನಸೌಧದ ಮೂರನೇ ಮಹಡಿ ಇರುವುದು ಯಾರಿಗಾಗಿ ಎಂದು ಶೋಭಾ ಪ್ರಶ್ನಿಸಿದರು.

‘ಬೆಂಬಲಿಸುವುದು ಸುಮಲತಾಗೆ ಬಿಟ್ಟವಿಚಾರ’
ಮಂಡ್ಯದ ಕುಟುಂಬ ರಾಜಕಾರಣದ ವಿರುದ್ಧ ಸುಮತಲಾ ಗೆದ್ದಿದ್ದಾರೆ. ಬಿಜೆಪಿ ಬೆಂಬಲ ಪಡೆದ ಅವರು ಬಿಜೆಪಿಗೆ ಬೆಂಬಲ ಕೊಡುವ ವಿಶ್ವಾಸ ವಿದೆ. ಪಕ್ಷೇತರರಾಗಿ ಯಾವುದೇ ತೀರ್ಮಾನ ತೆಗೆದುಕೊಳ್ಳಲು ಅವರು ಸ್ವತಂತ್ರರಾಗಿದ್ದಾರೆ ಎಂದರು.

ಮಗನಿಂದಲೇ ಅಪ್ಪ ಸೋತರು
ಪ್ರಿಯಾಂಕ್ ಖರ್ಗೆ ಅವರಿಂದಲೇ ಮಲ್ಲಿಕಾರ್ಜುನ ಖರ್ಗೆ ಸೋತರು. ಅವರಿಂದ ಅಮಿತ್‌ ಶಾ ಪಾಠ ಕಲಿಯುವ ಅಗತ್ಯವಿಲ್ಲ. ದೇಶ ದ್ರೋಹಿಗಳಿಗೆ ಅಮಿತ್‌ ಶಾ ಸಿಂಹಸ್ವಪ್ನ ಆಗಲಿದ್ದು, ಅವ್ಯವಹಾರ ಮಾಡುವವರಿಗೆ ತಕ್ಕ ಪಾಠ ಕಲಿಸಲಿದ್ದಾರೆ ಎಂದು ಹೇಳಿದರು.

ಸನ್ಯಾಸ ಸ್ವೀಕರಿಸಿದರೆ ರಾಜ್ಯಕ್ಕೆ ಒಳ್ಳೆಯದು
ಸನ್ಯಾಸ ಸ್ವೀಕಾರಕ್ಕೆ ಸಚಿವ ರೇವಣ್ಣ ಗುರುಗಳನ್ನು ಹುಡುಕುತ್ತಿರಬಹುದು. ಅವರ ಕುಟುಂಬದವರು ‌ರಾಜಕೀಯ ಸನ್ಯಾಸ ಪಡೆದರೆ ರಾಜ್ಯಕ್ಕೆ ಒಳ್ಳೆಯದು ಎಂದು ಶೋಭಾ ಕರಂದ್ಲಾಜೆ ವ್ಯಂಗ್ಯವಾಡಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.