ADVERTISEMENT

ಸರ್ಕಾರಿ ಗೌರವದೊಂದಿಗೆ ತೋಂಟದಾರ್ಯ ಶ್ರೀ ಅಂತ್ಯಕ್ರಿಯೆ

​ಪ್ರಜಾವಾಣಿ ವಾರ್ತೆ
Published 21 ಅಕ್ಟೋಬರ್ 2018, 17:55 IST
Last Updated 21 ಅಕ್ಟೋಬರ್ 2018, 17:55 IST
ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅವರು ಸಿದ್ಧಲಿಂಗ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ತೋಂಟದಾರ್ಯ ಮಠದ ನೂತನ ಪೀಠಾಧಿಪತಿ ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ, ಆದಿಚುಂಚನಗಿರಿ  ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ,ಶಾಸಕ ಎಚ್‌.ಕೆ ಪಾಟೀಲ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ನಿಜಗುಣಪ್ರಭು ಸ್ವಾಮೀಜಿ ಇದ್ದಾರೆ
ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ ಅವರು ಸಿದ್ಧಲಿಂಗ ಶ್ರೀಗಳ ಪಾರ್ಥಿವ ಶರೀರದ ಅಂತಿಮ ದರ್ಶನ ಪಡೆದರು. ತೋಂಟದಾರ್ಯ ಮಠದ ನೂತನ ಪೀಠಾಧಿಪತಿ ರುದ್ರಾಕ್ಷಿ ಮಠದ ಸಿದ್ದರಾಮ ಸ್ವಾಮೀಜಿ, ಆದಿಚುಂಚನಗಿರಿ ಮಠದ ಪೀಠಾಧ್ಯಕ್ಷ ನಿರ್ಮಲಾನಂದನಾಥ ಸ್ವಾಮೀಜಿ, ಸುತ್ತೂರು ಮಠದ ಶಿವರಾತ್ರಿ ದೇಶೀಕೇಂದ್ರ ಸ್ವಾಮೀಜಿ,ಶಾಸಕ ಎಚ್‌.ಕೆ ಪಾಟೀಲ, ಬಸವಜಯ ಮೃತ್ಯುಂಜಯ ಸ್ವಾಮೀಜಿ, ಮುಖ್ಯಮಂತ್ರಿ ಎಚ್‌.ಡಿ ಕುಮಾರಸ್ವಾಮಿ, ನಿಜಗುಣಪ್ರಭು ಸ್ವಾಮೀಜಿ ಇದ್ದಾರೆ   

ಗದಗ: ಶನಿವಾರ ಲಿಂಗೈಕ್ಯರಾದ ತೋಂಟದಾರ್ಯ ಸಂಸ್ಥಾನಮಠದ 19ನೇ ಪೀಠಾಧಿಪತಿ ಡಾ. ತೋಂಟದ ಸಿದ್ಧಲಿಂಗ ಸ್ವಾಮೀಜಿ ಅವರ ಅಂತ್ಯಕ್ರಿಯೆ ಭಾನುವಾರ ಸಂಜೆ ಮಠದ ಆವರಣದಲ್ಲಿ ಲಿಂಗಾಯತ ವಿಧಿ ವಿಧಾನಗಳ ಪ್ರಕಾರ, ಸರ್ಕಾರಿ ಗೌರವದೊಂದಿಗೆ ನಡೆಯಿತು.

ಮಠದ ಆವರಣದಲ್ಲಿನ ಅನುಭವ ಮಂಟಪದ ಎದುರಿನ ಸ್ಥಳದಲ್ಲಿ ಶಿವಮೊಗ್ಗದ ಆನಂದಪುರ ಮಠದ ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ ನೇತೃತ್ವದಲ್ಲಿ ಅಂತ್ಯಕ್ರಿಯೆ ನಡೆಯಿತು.

ಶನಿವಾರ ಸಂಜೆಯಿಂದಲೇ ಶ್ರೀಗಳ ಪಾರ್ಥೀವ ಶರೀರವನ್ನು ಮಠದ ಆವರಣದಲ್ಲಿ ಸಾರ್ವಜನಿಕ ದರ್ಶನಕ್ಕೆ ಇಡಲಾಗಿತ್ತು.ನಾಡಿನ ವಿವಿಧೆಡೆಯಿಂದ ಬಂದಿದ್ದ ಸಾವಿರಾರು ಸಂಖ್ಯೆಯ ಭಕ್ತರು ಅಂತಿಮ ದರ್ಶನ ಪಡೆದರು.ವಿವಿಧ ಮಠಗಳ ಮಠಾಧೀಶರು ನುಡಿ ನಮನ ಸಲ್ಲಿಸಿದರು. ಭಕ್ತರು ವಚನ ಪಠಣ,ಭಜನೆ, ಗೀತೆಗಳ ಮೂಲಕ ಗೌರವ ಸಲ್ಲಿಸಿದರು.

ADVERTISEMENT
ತೋಂಟದಾರ್ಯ ಮಠದ ಸಿದ್ಧಲಿಂಗ ಸ್ವಾಮೀಜಿ ಅವರ ಪಾರ್ಥೀವ ಶರೀರದ ಅಂತಿಮ ದರ್ಶನಕ್ಕಾಗಿ ಭಾನುವಾರ ಮಠದ ಆವರಣದಲ್ಲಿ ಸೇರಿದ್ದ ಜನಸ್ತೋಮ

ಮುಖ್ಯಮಂತ್ರಿ ಭೇಟಿ:ಮುಖ್ಯಮಂತ್ರಿ ಎಚ್‌.ಡಿ. ಕುಮಾರಸ್ವಾಮಿ, ಜೆಡಿಎಸ್‌ ವರಿಷ್ಠ ಎಚ್‌.ಡಿ ದೇವೇಗೌಡ, ಕಾಂಗ್ರೆಸ್‌ ಮುಖಂಡ ಸಿದ್ದರಾಮಯ್ಯ, ವಿಧಾನ ಪರಿಷತ್ ಸಭಾಪತಿ ಬಸವರಾಜ ಹೊರಟ್ಟಿ, ಶಾಸಕ ಎಚ್.ಕೆ. ಪಾಟೀಲ, ಸಿ.ಎಂ. ಉದಾಸಿ, ಬಿ.ಶ್ರೀರಾಮುಲು, ಬಸವರಾಜ ಬೊಮ್ಮಾಯಿ, ಗೋವಿಂದ ಕಾರಜೋಳ, ಪ್ರಸಾದ ಅಬ್ಬಯ್ಯ, ವೀರಣ್ಣ ಮತ್ತಿಕಟ್ಟಿ, ಜಿ. ಜನಾರ್ಧನ ರೆಡ್ಡಿ, ಡಿ.ಆರ್. ಪಾಟೀಲ, ಶಿವರಾಜ ಸಜ್ಜನರ ಅಂತಿಮ ದರ್ಶನ ಪಡೆದರು.

‘ತೋಂಟದ ಶ್ರೀಗಳು ನನಗೆ ನೇರವಾಗಿ ಮಾರ್ಗದರ್ಶನ ಮಾಡುತ್ತಿದ್ದರು. ಅವರ ಸಾವಿನ ಸುದ್ದಿಯನ್ನು ನಂಬಲಾಗಲಿಲ್ಲ. ವೈಯಕ್ತಿಕವಾಗಿ ನಾನೊಬ್ಬ ಮಾರ್ಗದರ್ಶಕನನ್ನು ಕಳೆದುಕೊಂಡಂತಾಗಿದೆ’ ಎಂದು ಮುಖ್ಯಮಂತ್ರಿ ಹೇಳಿದರು.

‘ನಾಗನೂರು ಮಠದ ಜತೆಗೆ ಅವಿನಾಭಾವ ಸಂಬಂಧವಿದೆ. 12 ವರ್ಷಗಳ ಹಿಂದೆ ಗ್ರಾಮ ವಾಸ್ತವ್ಯ ಆರಂಭಿಸಿದ್ದು ನಾಗನೂರು ರುದ್ರಾಕ್ಷಿ ಮಠದಲ್ಲಿ ಪ್ರಸಾದ ಸೇವನೆ ಮೂಲಕ. ಇದೀಗ ಅದೇ ಮಠದ ಸ್ವಾಮೀಜಿ, ತೋಂಟದಾರ್ಯ ಮಠದ ಪೀಠಾಧಿಪತಿಯಾಗಿ ನೇಮಕಗೊಂಡಿದ್ದು, ಮಠದ ಜತೆಗಿನ ಸಂಬಂಧ ಮತ್ತಷ್ಟು ಗಟ್ಟಿಗೊಂಡಿದೆ’ ಎಂದು ಅವರು ಹೇಳಿದರು.

ಸಿದ್ಧರಾಮ ಸ್ವಾಮೀಜಿ 20ನೇ ಪೀಠಾಧಿಪತಿ

ತೋಂಟದಾರ್ಯ ಸಂಸ್ಥಾನಮಠದ 20ನೇ ಪೀಠಾಧಿಪತಿಯಾಗಿ ಬೆಳಗಾವಿ ನಾಗನೂರು ರುದ್ರಾಕ್ಷಿ ಮಠದ ಸಿದ್ಧರಾಮ ಸ್ವಾಮೀಜಿ ಅವರು ನೇಮಕಗೊಂಡಿದ್ದಾರೆ.

‘ತಮ್ಮ ಬಳಿಕ ಸಿದ್ಧರಾಮ ಸ್ವಾಮೀಜಿ ಅವರನ್ನೇ ಪೀಠಕ್ಕೆ ನೇಮಿಸಬೇಕೆಂದು’ ಸಿದ್ಧಲಿಂಗ ಸ್ವಾಮೀಜಿ 10 ವರ್ಷಗಳ ಹಿಂದೆಯೇ (10-03-2008) ಅಂದರೆ ತಮ್ಮ 61ನೇ ವಯಸ್ಸಿನಲ್ಲಿ ಉಯಿಲು ಬರೆದಿಟ್ಟಿದ್ದರು.

ಉಯಿಲನ್ನು ಮುಚ್ಚಿದ ಲಕೋಟೆಯಲ್ಲಿ, ಮಠದ ವ್ಯವಸ್ಥಾಪಕರ ಬಳಿ ನೀಡಿದ್ದರು. ಭಾನುವಾರ ಮಠದ ಆಡಳಿತ ಮಂಡಳಿ ಸದಸ್ಯರು, ತೋಂಟದಾರ್ಯ ಶಾಖಾ ಮಠಗಳ ಸ್ವಾಮೀಜಿಗಳ ಸಭೆಯಲ್ಲಿ ಈ ಲಕೋಟೆಯನ್ನು ಒಡೆದು ಓದಲಾಯಿತು.

*ತೋಂಟದ ಸಿದ್ಧಲಿಂಗ ಶ್ರೀಗಳ ತಾಯಿ ಪ್ರೀತಿ, ಮಾರ್ಗದರ್ಶನದಲ್ಲಿ ಬೆಳೆದಿರುವ ನನಗೆ ಈ ಮಠದ ಜವಾಬ್ದಾರಿ ನೀಡಿದ್ದಾರೆ. ಮಠದ ಪರಂಪರೆಯನ್ನು ಉಳಿಸಿಕೊಂಡು ಹೋಗುವ ಕೆಲಸ ಮಾಡುತ್ತೇನೆ

–ಸಿದ್ಧರಾಮ ಸ್ವಾಮೀಜಿ, ಪೀಠಾಧಿಪತಿ, ತೋಂಟದಾರ್ಯ ಮಠ, ಗದಗ.

*ಗದುಗಿನ ಗ್ರಾಮೀಣಾಭಿವೃದ್ಧಿ ಹಾಗೂ ಪಂಚಾಯತ್ ರಾಜ್ ವಿಶ್ವವಿದ್ಯಾಲಯಕ್ಕೆ ತೋಂಟದ ಶ್ರೀಗಳ ಹೆಸರನ್ನಿಡುವ ಬೇಡಿಕೆ ಕುರಿತು ಸಂಪುಟ ಸಭೆಯಲ್ಲಿ ಚರ್ಚಿಸಿ, ಕ್ರಮ ಕೈಗೊಳ್ಳಲಾಗುವುದು

-ಎಚ್.ಡಿ. ಕುಮಾರಸ್ವಾಮಿ, ಮುಖ್ಯಮಂತ್ರಿ

ಇವನ್ನೂ ಓದಿ

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.