ಬೆಂಗಳೂರು: ‘ಗ್ಯಾರಂಟಿ’ ಯೋಜನೆಗಳಿಂದಾಗಿ ಕ್ಷೇತ್ರಗಳ ಅಭಿವೃದ್ಧಿ ಕಾರ್ಯಗಳು ಕುಂಠಿತವಾಗಿದೆ ಎಂಬ ಸ್ವಪಕ್ಷೀಯ ಶಾಸಕರ ಆರೋಪ, ಸರ್ಕಾರದ ಬಗೆಗಿನ ಮುನಿಸು ಶಮನದತ್ತ ಹೆಜ್ಜೆ ಇಟ್ಟಿರುವ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಪಕ್ಷ ಭೇದವಿಲ್ಲದೇ ಪ್ರತಿ ವಿಧಾನಸಭಾ ಕ್ಷೇತ್ರಕ್ಕೂ ₹50 ಕೋಟಿ ವಿಶೇಷ ಅನುದಾನ ನೀಡಲು ಮುಂದಾಗಿದ್ದಾರೆ.
ಮುಖ್ಯಮಂತ್ರಿಯವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಅಡಿ 2025–26ನೇ ಸಾಲಿನಲ್ಲಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ತಲಾ ₹50 ಕೋಟಿ ನೀಡುವುದಾಗಿ ಬಜೆಟ್‌ನಲ್ಲೇ ಘೊಷಣೆ ಮಾಡಿದ್ದರು. ನಾಲ್ಕು ತಿಂಗಳಲ್ಲೇ ಅನುದಾನವನ್ನು ಹಂಚಿಕೆ ಮಾಡಲು ಕ್ರಮ ಕೈಗೊಂಡಿದ್ದಾರೆ.
ಈ ಯೋಜನೆಯಡಿ ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತು ಮಾರ್ಗಸೂಚಿಗಳನ್ನು ಹೊರಡಿಸಲಾಗಿದ್ದು, ಲೋಕೋಪಯೋಗಿ ಇಲಾಖೆಯ ರಸ್ತೆ, ಸೇತುವೆ ಕಾಮಗಾರಿಗಳು, ಗ್ರಾಮೀಣ ರಸ್ತೆ, ಸೇತುವೆ ಹಾಗೂ ನಗರ ಪ್ರದೇಶದ ಕೆಲವು ಕಾಮಗಾರಿಗಳಿಗೆ ಶೇ 75ರಷ್ಟು ಬಳಸಬೇಕು. ಶಾಸಕರು ತಮ್ಮ ವಿವೇಚನಾ ಕೋಟಾದಲ್ಲಿ ಶೇ 25ರಷ್ಟು ಬಳಕೆ ಮಾಡಬಹುದು ಎಂಬ ಷರತ್ತು ವಿಧಿಸಲಾಗಿದೆ. ಅದರಲ್ಲೂ ಶೇ 50ರಷ್ಟು ಅನುದಾನವನ್ನು ಲೋಕೋಪಯೋಗಿ ಕಾಮಗಾರಿಗಳಿಗೆ, ಶೇ 25ರಷ್ಟು ಗ್ರಾಮೀಣ ಮೂಲಸೌಕರ್ಯ ಕಾಮಗಾರಿಗಳಿಗೆ ವಿನಿಯೋಗಿಸಲು ಸೂಚಿಸಲಾಗಿದೆ.
ವಿವೇಚನಾ ಕೋಟಾದಲ್ಲೂ ಶಿಕ್ಷಣ, ಆರೋಗ್ಯ, ಕುಡಿಯುವ ನೀರು ಮತ್ತು ನೈರ್ಮಲ್ಯ ಒದಗಿಸುವುದು. ಕೃಷಿ ಮತ್ತು ಕೈಗಾರಿಕಾ ಕ್ಷೇತ್ರದ ಅಭಿವೃದ್ಧಿಗೆ ಅಗತ್ಯ ರಸ್ತೆಗಳ ನಿರ್ಮಾಣ, ಜನರ ದೈನಂದಿನ ಕಾರ್ಯಗಳಿಗೆ ಅಗತ್ಯವಾದ ಮೂಲಸೌಕರ್ಯ ಅನುಷ್ಠಾನಗೊಳಿಸಲು ಅನುದಾನ ಬಳಕೆ ಮಾಡಬೇಕು ಎಂದು ಷರತ್ತು ವಿಧಿಸಲಾಗಿದೆ.
₹10 ಕೋಟಿವರೆಗಿನ ಕಾಮಗಾರಿಗಳಿಗೆ ಆಯಾ ಜಿಲ್ಲೆಯ ಜಿಲ್ಲಾಧಿಕಾರಿ ಆಡಳಿತಾತ್ಮಕ ಅನುಮೋದನೆ ನೀಡಬೇಕು. ₹10 ಕೋಟಿಗೂ ಅಧಿಕ ಮೊತ್ತಕ್ಕೆ ಸಚಿವ ಸಂಪುಟದ ಅನುಮೋದನೆ ಪಡೆಯಬೇಕು. ಲೋಕೋಪಯೋಗಿ ಇಲಾಖೆಯ ವ್ಯಾಪ್ತಿಯ ಕಾಮಗಾರಿಗಳ ಕನಿಷ್ಠ ಮೊತ್ತ ₹1 ಕೋಟಿ, ಗ್ರಾಮೀಣಾಭಿವೃದ್ಧಿ ಮತ್ತು ಇತರೆ ಇಲಾಖೆಗಳ ಕಾಮಗಾರಿಗಳ ಕನಿಷ್ಠ ಮೊತ್ತ ₹20 ಲಕ್ಷಕ್ಕೆ ನಿಗದಿ ಮಾಡಲಾಗಿದೆ.
ಭೂಸ್ವಾಧೀನ ಕಾಮಗಾರಿ, ಆಡಳಿತಾತ್ಮಕ ವೆಚ್ಚಗಳಿಗೆ ಮುಖ್ಯಮಂತ್ರಿ ಅವರ ಮೂಲಸೌಕರ್ಯ ಅಭಿವೃದ್ಧಿ ಯೋಜನೆ ಬಳಕೆ ಮಾಡಿಕೊಳ್ಳುವುದಕ್ಕೆ ನಿರ್ಬಂಧ ವಿಧಿಸಲಾಗಿದೆ.
ಕಾಂಗ್ರೆಸ್ ಶಾಸಕರ ಕ್ಷೇತ್ರಗಳಿಗೆ ತಲಾ ₹50 ಕೋಟಿ, ಬಿಜೆಪಿ–ಜೆಡಿಎಸ್ ಶಾಸಕರ ಕ್ಷೇತ್ರಗಳಿಗೆ ₹25 ಕೋಟಿ ಅನುದಾನ ನೀಡುವುದಾಗಿ ಮುಖ್ಯಮಂತ್ರಿ ಹೇಳಿದ್ದಾರೆ. ಈ ತಾರತಮ್ಯ ಏಕೆ?ಆರ್.ಅಶೋಕ, ವಿರೋಧಪಕ್ಷದ ನಾಯಕ
ಶಾಸಕರ ವಿವೇಚನೆಗೂ ಅವಕಾಶ ನೀಡಿ ಪ್ರತಿ ವಿಧಾನಸಭಾ ಕ್ಷೇತ್ರಕ್ಕೆ ಮುಖ್ಯಮಂತ್ರಿ ₹50 ಕೋಟಿ ಅನುದಾನ ಬಿಡುಗಡೆ ಮಾಡಿದ್ದಾರೆ. ಬಿಡುಗಡೆ ಪ್ರಕ್ರಿಯೆ ಈಗಷ್ಟೇ ಆರಂಭವಾಗಿದೆ. ಬಿಜೆಪಿ ಮತ್ತು ಜೆಡಿಎಸ್‌ನವರು ತಾಳ್ಮೆಯಿಂದ ಇರಬೇಕುಡಿ.ಕೆ.ಶಿವಕುಮಾರ್, ಉಪ ಮುಖ್ಯಮಂತ್ರಿ
30, 31ರಂದು ಶಾಸಕರ ಸಭೆ
ಅನುದಾನ ಹಂಚಿಕೆಯ ಬಗ್ಗೆ ಚರ್ಚಿಸಲು ಜಿಲ್ಲಾವಾರು ಶಾಸಕರ ಸಭೆಯನ್ನು ಜುಲೈ 30 ಮತ್ತು 31ರಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಕರೆದಿದ್ದಾರೆ.
ಕಾಮಗಾರಿಗಳನ್ನು ಅನುಷ್ಠಾನಗೊಳಿಸುವ ಕುರಿತು ಆರ್ಥಿಕ ಇಲಾಖೆ ಹೊರಡಿಸಿರುವ ಮಾರ್ಗಸೂಚಿ ಅನ್ವಯ ಕಾಮಗಾರಿಗಳ ವಿವರ ಒಳಗೊಂಡ ಕ್ರಿಯಾ ಯೋಜನೆಗಳನ್ನು ಸಿದ್ಧಪಡಿಸಿಕೊಂಡು ಬರುವಂತೆ ಎಲ್ಲ ಶಾಸಕರಿಗೂ ಸೂಚಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.