ADVERTISEMENT

ಸರ್ಕಾರ ಹಾದಿನೂ ತಪ್ಪಿಲ್ಲ, ನಾನು ಅಸಹಾಯಕನೂ ಅಲ್ಲ: ಸಿದ್ದರಾಮಯ್ಯ

​ಪ್ರಜಾವಾಣಿ ವಾರ್ತೆ
Published 2 ಫೆಬ್ರುವರಿ 2026, 20:33 IST
Last Updated 2 ಫೆಬ್ರುವರಿ 2026, 20:33 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಸರ್ಕಾರ ಹಾದಿನೂ ತಪ್ಪಿಲ್ಲ. ನಾನು ಅಸಹಾಯಕ ಮುಖ್ಯಮಂತ್ರಿನೂ ಅಲ್ಲ. ಜನರಿಗೆ ನೀಡಿರುವ ಭರವಸೆಗಳನ್ನು ಎರಡೂವರೆ ವರ್ಷದಲ್ಲಿ ಈಡೇರಿಸಿದ್ದೇವೆ’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ರಾಜ್ಯ ಸರ್ಕಾರದ ಸಾಧನೆಗಳನ್ನು ಎದೆ ತಟ್ಟಿಕೊಂಡು ಸಮರ್ಥಿಸಿಕೊಂಡರು.

ರಾಜ್ಯಪಾಲರ ಭಾಷಣದ ವಂದನಾ ನಿರ್ಣಯದ ಮೇಲಿನ ಚರ್ಚೆಗೆ ಎರಡೂ ಸದನಗಳಲ್ಲಿ ಅವರು ಸೋಮವಾರ ಸುದೀರ್ಘ ಉತ್ತರ ನೀಡಿದರು.

ADVERTISEMENT

ವಿಧಾನಸಭೆಯಲ್ಲಿ ಮಾತನಾಡಿದ ಅವರು, ‘ಸರ್ಕಾರದ ಆಡಳಿತ ಹದಗೆಟ್ಟಿದೆ. ಸಂವಿಧಾನರಹಿತ ಸರ್ಕಾರ. ಅಸಹಾಯಕ ಮುಖ್ಯಮಂತ್ರಿ ಎಂದೆಲ್ಲ ನೀವು (ವಿರೋಧ ಪಕ್ಷ) ಟೀಕಿಸಿದ್ದೀರಿ. ಕೆಲವು ಬಾರಿ ಅಸತ್ಯದ ಎದುರು ಸತ್ಯ ಅಸಹಾಯಕವಾಗಿ ಬಿಡುತ್ತದೆ’ ಎಂದು ತಮ್ಮ ನಡೆಯನ್ನು ಸಮರ್ಥಿಸಿಕೊಂಡರು.

ಮುಖ್ಯಮಂತ್ರಿ ನೀಡಿದ ಉತ್ತರಕ್ಕೆ ತೃಪ್ತರಾಗದ ಬಿಜೆಪಿ, ಜೆಡಿಎಸ್‌ ಸದಸ್ಯರು, ಸರ್ಕಾರದ ವಿರುದ್ಧ ಧಿಕ್ಕಾರ ಕೂಗುತ್ತಾ ಸಭಾತ್ಯಾಗ ಮಾಡಿದರು.

‘ನಾವು ಜನಪರ, ಸಮಾಜಮುಖಿ ಆಡಳಿತ ನೀಡುತ್ತಿದ್ದು, ಕರ್ನಾಟಕದ್ದು ಅಭಿವೃದ್ಧಿ ಮಾದರಿ ಸರ್ಕಾರವಾಗಿದೆ. ಈ ಅಭಿವೃದ್ಧಿ ಮಾದರಿಯನ್ನು 21ಕ್ಕಿಂತಲೂ ಹೆಚ್ಚು ಕೇಂದ್ರ ಸಚಿವರು ಮತ್ತು ವಿವಿಧ ರಾಜ್ಯಗಳ ಮುಖ್ಯಮಂತ್ರಿಗಳು ಶ್ಲಾಘಿಸಿದ್ದಾರೆ. ಸರ್ಕಾರದ ಭಾಷಣವನ್ನು ರಾಜ್ಯಪಾಲರು, ಓದಿದ್ದರೆ, ನಮ್ಮ ಜನಪರ ಆಡಳಿತದ ಬಗ್ಗೆ ಜನರಿಗೆ ಅರಿವು ನೀಡಿದಂತಾಗು ತ್ತಿತ್ತು’ ಎಂದು ಮುಖ್ಯಮಂತ್ರಿ ತಿಳಿಸಿದರು.

‘2013-2018ರವರೆಗಿನ ಸಿದ್ದರಾಮಯ್ಯ ಬೇರೆ, ಈಗಿನ‌ವರೇ ಬೇರೆ ಅಂದಿದ್ದಾರೆ’ ಎಂದು ಕೆಲವರು ಹೇಳಿದ್ದಾರೆ. ಆದರೆ, ಸಿದ್ದರಾಮಯ್ಯ ಬದಲಾವಣೆ ಆಗಲು ಸಾಧ್ಯನೇ ಇಲ್ಲ’ ಎಂದು ಮುಖ್ಯಮಂತ್ರಿ ಹೇಳಿದರು.

‘ಸಿದ್ದರಾಮಯ್ಯ ಈಗ ಮೃದು ಆಗಿದ್ದಾರೆ, ಸಂವೇದನೆ ಇಲ್ಲ ಅಂದಿದ್ದಾರೆ. ನಿಮ್ಮ (ಬಿಜೆಪಿ) ಸರ್ಕಾರದ ವೇಳೆ ಆಕ್ಸಿಜನ್ ಇಲ್ಲದೇ ನೂರಾರು ಜನ‌ ಸತ್ತರು ಆಗ ಸಂವೇದನೆ ಇತ್ತಾ? ನೀವು ಕೃಷಿ ಸಾಲ ನಿಲ್ಲಿಸಿದಿರಿ. ಕೃಷಿ ಭಾಗ್ಯ ನಿಲ್ಲಿಸಿದಿರಿ. ಅನುಗ್ರಹ ಕಾರ್ಯಕ್ರಮವನ್ನೂ ನಿಲ್ಲಿಸಿದಿರಿ. ರೈತರ ಬಗ್ಗೆ ನಿಮಗೆ ಸಂವೇದನೆ ಇರಲಿಲ್ಲ’ ಎಂದು ವಿರೋಧ ಪಕ್ಷದ ಮೇಲೆ ಹರಿಹಾಯ್ದರು.

‘ಮುಧೋಳದಲ್ಲಿ ಕಬ್ಬು ಟ್ರ್ಯಾಕ್ಟರ್‌ಗಳಿಗೆ ಬೆಂಕಿ ಹಚ್ಚಿದಾಗ ನಾವು ಗೋಲಿಬಾರ್ ಮಾಡಲಿಲ್ಲ. ಅದರ‌ ಬಗ್ಗೆ ವಿಚಾರಣೆ ಮಾಡುತ್ತೇವೆಂದು ಹೇಳಿದೆವು. ಕಬ್ಬು ಬೆಳಗಾರರ ಕಷ್ಟಕ್ಕೆ ಸ್ಪಂದಿಸಿ ಸಂವೇದನೆ ತೋರಿದೆವು. ಮೆಕ್ಕೆಜೋಳ ಬೆಳೆಗಾರರಿಗೆ ಬೆಂಬಲ ಬೆಲೆ ಕೊಟ್ಟೆವು. ಇದು ಸ್ಪಂದನೆ ಅಲ್ಲವೇ. ಸಂವೇದನೆ ಬಗ್ಗೆ ಮಾತನಾಡುವವರಿಗೆ ಸಂವೇದನೆ ಬಗ್ಗೆ ಗೊತ್ತಿರಬೇಕಲ್ಲವೇ’ ಎಂದು ಮುಖ್ಯಮಂತ್ರಿ ಪ್ರಶ್ನಿಸಿದರು.

ಸಿ.ಎಂ ಹೇಳಿದ್ದೇನು?
ಜಿಎಸ್‌ಟಿ ಪರಿಹಾರ ನಷ್ಟ, 16ನೇ ಹಣಕಾಸು ಆಯೋಗದ ಶಿಫಾರಸಿ ನಿಂದ ಅನ್ಯಾಯ ಆಗಿರುವ ಬಗ್ಗೆ ಪ್ರಸ್ತಾಪಿಸಿದ ಮುಖ್ಯಮಂತ್ರಿ, ‘ಸಂಪನ್ಮೂಲ ಕ್ರೋಡೀಕರಣಕ್ಕೆ ತೆರಿಗೆ ಏರಿಕೆ ಅನಿವಾರ್ಯ. ಆದರೆ, ನಾವು ಹಾಕಿದ ತೆರಿಗೆ ಬೇರೆ ರಾಜ್ಯಗಳಿಗೆ ಹೋಲಿಸಿದರೆ ಕಡಿಮೆ ಇದೆ’ ಎಂದು ಪ್ರತಿಪಾದಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.