ADVERTISEMENT

ಯಾರ ಒತ್ತಡಕ್ಕೂ ಒಳಗಾಗಿಲ್ಲ, ಮೊಟ್ಟೆ ಎಸೆದ ಘಟನೆ ಖಂಡಿಸುವೆ: ಕೊಡಗು ಎಸ್‌ಪಿ

​ಪ್ರಜಾವಾಣಿ ವಾರ್ತೆ
Published 19 ಆಗಸ್ಟ್ 2022, 10:17 IST
Last Updated 19 ಆಗಸ್ಟ್ 2022, 10:17 IST
ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವೀಕ್ಷಿಸಿದರು
ಕೊಡಗು ಜಿಲ್ಲಾಧಿಕಾರಿ ಕಚೇರಿ ತಡೆಗೋಡೆಯನ್ನು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಗುರುವಾರ ವೀಕ್ಷಿಸಿದರು   

ಮಡಿಕೇರಿ: ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಅವರ ಕಾರಿನ ಮೇಲೆ ಮೊಟ್ಟೆ ಎಸೆದ ಕೃತ್ಯ ಖಂಡಿಸಿ ಕಾಂಗ್ರೆಸ್ ಮುಖಂಡರು ಹಾಗೂ ಕಾರ್ಯಕರ್ತರು ಶುಕ್ರವಾರ ಕೊಡಗು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕಚೇರಿ ಮುಂಭಾಗ ಪ್ರತಿಭಟನೆ ನಡೆಸಿದರು.

ಪೊಲೀಸರ ವಿರುದ್ಧ ಘೋಷಣೆ ಕೂಗಿದ ಅವರು ವಿಜಯ ವಿನಾಯಕ ದೇಗುಲದಿಂದ ಮೆರವಣಿಗೆ ಹೊರಟರು.

ಪೊಲೀಸರು ಬಿಜೆಪಿ ಕೈಗೊಂಬೆಗಳಾಗಿದ್ದಾರೆ ಎಂದು ಆರೋಪಿಸಿದ ಪ್ರತಿಭಟನಾಕಾರರು ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಬದಲಾವಣೆ ಆಗಬೇಕು ಎಂದು ಆಗ್ರಹಿಸಿದರು.

ADVERTISEMENT

ಆಗಸ್ಟ್ 26ರಂದು ಸಿದ್ದರಾಮಯ್ಯ ನೇತೃತ್ವದಲ್ಲಿ ಮಡಿಕೇರಿಯಲ್ಲಿ ಬೃಹತ್ ಪ್ರತಿಭಟನೆ ನಡೆಸುತ್ತೇವೆ ಎಂದೂ ಸವಾಲೆಸೆದರು.

ಬಿಜೆಪಿ ಶಾಸಕರು ಮೊಟ್ಟೆ ಎಸೆದವರಿಗೆ ಬೆಂಬಲ ನೀಡುತ್ತಿದ್ದಾರೆ. ಶಾಸಕರು ಭಾವನಾತ್ಮಕ ವಿಚಾರಗಳನ್ನು ಮುಂದಿಟ್ಟುಕೊಂಡು ಆಯ್ಕೆಯಾಗಿದ್ದಾರೆ. ಅಭಿವೃದ್ಧಿ ಕೆಲಸ ಮಾಡುವಲ್ಲಿ ಅವರು ವಿಫಲವಾಗಿದ್ದಾರೆ. ಜನರ ದಿಕ್ಕು ತಪ್ಪಿಸಲು, ಸಿದ್ದರಾಮಯ್ಯ ಶಕ್ತಿ ಕುಂದಿಸಲು ಮೊಟ್ಟೆ ಎಸೆಯಲಾಯಿತು ಎಂದು ದೂರಿದರು.

ಘಟನೆ ಖಂಡಿಸಿದ ಎಸ್‌ಪಿ ಅಯ್ಯಪ್ಪ

ಪ್ರತಿಭಟನೆ ನಡೆಸುತ್ತಿದ್ದ ಕಾಂಗ್ರೆಸ್ ಕಾರ್ಯಕರ್ತರ ಜತೆ ಮಾತನಾಡಿದ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಅಯ್ಯಪ್ಪ, ‘ಮೊಟ್ಟೆ ಎಸೆತದಂತಹ ಘಟನೆ ನಡೆಯಬಾರದಿತ್ತು. ಅಂತಹ ಘಟನೆಯನ್ನು ಖಂಡಿಸುವೆ’ ಎಂದು ಹೇಳಿದರು.

ಮಾಜಿ ಮುಖ್ಯಮಂತ್ರಿ ಒಬ್ಬರಿಗೆ ನೀಡಬೇಕಿರುವ ಎಲ್ಲ ಭದ್ರತೆಯನ್ನೂ ನೀಡಲಾಗಿತ್ತು. ಅದರ ಹೊರತಾಗಿಯೂ ಇಂತಹ ಘಟನೆ ನಡೆದಿದೆ. ಕೆಲವು ಆರೋಪಿಗಳನ್ನು ಬಂಧಿಸಲಾಗಿದೆ. ಯಾರ ಒತ್ತಡಕ್ಕೂ ನಾವು ಒಳಗಾಗಿಲ್ಲ ಎಂದು ಸ್ಪಷ್ಟಪಡಿಸಿದರು.

ಇವನ್ನೂ ಓದಿ...

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.