ADVERTISEMENT

ಖರ್ಗೆ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ‌ ಸಂಗತಿ: ಅಭಿನಂದಿಸಿದ ಸಿದ್ದು, ಡಿಕೆಶಿ 

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಅಕ್ಟೋಬರ್ 2022, 9:44 IST
Last Updated 19 ಅಕ್ಟೋಬರ್ 2022, 9:44 IST
ಮಲ್ಲಿಕಾರ್ಜುನ ಖರ್ಗೆ
ಮಲ್ಲಿಕಾರ್ಜುನ ಖರ್ಗೆ   

ನವದೆಹಲಿ: ಕಾಂಗ್ರೆಸ್ ಪಕ್ಷದ ಅಧ್ಯಕ್ಷ ಸ್ಥಾನಕ್ಕೆ ನಡೆದ ಚುನಾವಣೆಯಲ್ಲಿ ಹಿರಿಯ ನಾಯಕ ಮಲ್ಲಿಕಾರ್ಜುನ ಖರ್ಗೆ ಅವರು ಸಂಸದ ಶಶಿ ತರೂರ್‌ ಎದುರು ಗೆಲುವು ಸಾಧಿಸಿದ್ದಾರೆ.

ಚುನಾವಣೆಯಲ್ಲಿ ಗೆಲುವು ಸಾಧಿಸಿದ ಹಿನ್ನೆಲೆಯಲ್ಲಿ ಕಾಂಗ್ರೆಸ್‌ ನಾಯಕರು ಸೇರಿದಂತೆ ಕಾರ್ಯಕರ್ತರು ಖರ್ಗೆ ಅವರಿಗೆ ಶುಭ ಹಾರೈಸಿದ್ದಾರೆ.

‘ಕಾಂಗ್ರೆಸ್ ಪಕ್ಷದ ನೂತನ‌ ಅಧ್ಯಕ್ಷರಾಗಿ ಆಯ್ಕೆಯಾದ ಖರ್ಗೆ ಅವರಿಗೆ ಹಾರ್ದಿಕ ಅಭಿನಂದನೆಗಳು. ಪ್ರತಿಭೆ ಮತ್ತು ಅನುಭವವನ್ನು‌ ಮೈಗೂಡಿಸಿಕೊಂಡ ಖರ್ಗೆಯವರಿಗೆ ಕಾಂಗ್ರೆಸ್ ಪಕ್ಷವನ್ನು ಯಶಸ್ಸಿಹಾದಿಯಲ್ಲಿ ಮುನ್ನಡೆಸುವ ಶಕ್ತಿ ಇದೆ. ಖರ್ಗೆಯವರ ಆಯ್ಕೆ ಕನ್ನಡಿಗರಿಗೂ ಹೆಮ್ಮೆಯ‌ ಸಂಗತಿ’ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಟ್ವೀಟ್ ಮಾಡಿದ್ದಾರೆ.

ADVERTISEMENT

‘ಅಖಿಲ ಭಾರತ ಕಾಂಗ್ರೆಸ್‌ ಸಮಿತಿಯ ನೂತನ ಅಧ್ಯಕ್ಷರಾಗಿ ನೇಮಕಗೊಂಡಿರುವ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಹೃದಯ ಪೂರ್ವಕ ಅಭಿನಂದನೆಗಳು. ಅವರ ನಾಯಕತ್ವದಲ್ಲಿ ಕಾಂಗ್ರೆಸ್‌ ಪಕ್ಷ ಇನ್ನಷ್ಟು ಎತ್ತರಕ್ಕೇರಲಿದೆ ಎನ್ನುವ ವಿಶ್ವಾಸವಿದೆ’ ಎಂದು ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಟ್ವೀಟ್ ಮಾಡಿದ್ದಾರೆ.

‘ಎಐಸಿಸಿ ಅಧ್ಯಕ್ಷರಾಗಿ ಚುನಾಯಿತರಾದ ಕಾಂಗ್ರೆಸ್ ಪಕ್ಷದ ಹಿರಿಯ ನಾಯಕರಾದ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಅಭಿನಂದನೆಗಳು. ಖರ್ಗೆ ಅವರ ಸುದೀರ್ಘ ರಾಜಕೀಯ ಅನುಭವ, ಅಧ್ಯಯನ, ಜ್ಞಾನ, ಬದ್ಧತೆಗಳು ಕಾಂಗ್ರೆಸ್ ಪಕ್ಷವನ್ನು ಸೈದ್ಧಾಂತಿಕವಾಗಿ ಹಾಗೂ ರಾಜಕೀಯವಾಗಿ ಇನ್ನಷ್ಟು ಗಟ್ಟಿಯಾಗಿ ಕಟ್ಟುವಲ್ಲಿ ಸಹಕಾರಿಯಾಗಲಿದೆ’ ಎಂದು ಕಾಂಗ್ರೆಸ್ ರಾಜ್ಯ ಘಟಕ ಟ್ವೀಟ್ ಮಾಡಿದೆ.

ಕಾಂಗ್ರೆಸ್ ಅಧ್ಯಕ್ಷ ಸ್ಥಾನಕ್ಕೆ ಸೋಮವಾರ ನಡೆದ ಚುನಾವಣೆಯಲ್ಲಿ ಶೇ 96ರಷ್ಟು ಮತದಾನವಾಗಿತ್ತು. 9,915 ಪ್ರತಿನಿಧಿಗಳ ಪೈಕಿ 9,500 ಪ್ರತಿನಿಧಿಗಳು ತಮ್ಮ ಹಕ್ಕು ಚಲಾಯಿಸಿದ್ದರು.

ಇಂದು ಮತ ಎಣಿಕೆ ಕಾರ್ಯ ನಡೆದಿದ್ದು, ಮಲ್ಲಿಕಾರ್ಜುನ ಖರ್ಗೆ ಅವರು 7897, ಶ‌ಶಿ ತರೂರ್ 1000 ಮತಗಳನ್ನು ಪಡೆದಿದ್ದಾರೆ. 416 ಮತಗಳು ತಿರಸ್ಕೃತಗೊಂಡಿವೆ. ಇದರೊಂದಿಗೆ 6,897 ಮತಗಳ ಅಂತರದಲ್ಲಿ ಖರ್ಗೆ, ತರೂರ್ ಅವರನ್ನು ಸೋಲಿಸಿದ್ದಾರೆ.

ಕಾಂಗ್ರೆಸ್ ಪಕ್ಷದ 137 ವರ್ಷಗಳ ಇತಿಹಾಸದಲ್ಲಿ ಆರನೇ ಬಾರಿ ನಡೆದ ಚುನಾವಣೆ ಇದಾಗಿದೆ. ಹಾಗೆಯೇ 22 ವರ್ಷಗಳ ಬಳಿಕ ನೆಹರೂ-ಗಾಂಧಿ ಕುಟುಂಬದ ಹೊರಗಿನ ವ್ಯಕ್ತಿಗೆ ಅಧ್ಯಕ್ಷ ಸ್ಥಾನ ಸಿಕ್ಕಿದೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.