ADVERTISEMENT

ಜಿ–ರಾಮ್‌ ಜಿ ವಾಪಸ್‌ ಪಡೆಯಿರಿ, ನರೇಗಾ ಮರುಸ್ಥಾಪಿಸಿ: ಪ್ರಧಾನಿಗೆ ಸಿಎಂ ಪತ್ರ

ನರೇಗಾ ಮರುಸ್ಥಾಪನೆಗೆ ಒತ್ತಾಯಿಸಿ ಪ್ರಧಾನಿಗೆ ಸಿಎಂ ಸಿದ್ದರಾಮಯ್ಯ ಪತ್ರ

​ಪ್ರಜಾವಾಣಿ ವಾರ್ತೆ
Published 30 ಡಿಸೆಂಬರ್ 2025, 18:43 IST
Last Updated 30 ಡಿಸೆಂಬರ್ 2025, 18:43 IST
<div class="paragraphs"><p>ಸಿದ್ದರಾಮಯ್ಯ</p></div>

ಸಿದ್ದರಾಮಯ್ಯ

   

ಬೆಂಗಳೂರು: ‘ಉದ್ಯೋಗ ಖಾತರಿಯನ್ನು ಇಲ್ಲವಾಗಿಸುವ ಮತ್ತು ಒಕ್ಕೂಟ ವ್ಯವಸ್ಥೆಯ ಆಶಯಗಳಿಗೆ ವ್ಯತಿರಿಕ್ತವಾಗಿರುವ ‘ವಿಕಸಿತ ಭಾರತ– ಉದ್ಯೋಗ ಖಾತರಿ ಮತ್ತು ಜೀವನೋಪಾಯ ಮಿಷನ್‌ (ಗ್ರಾಮೀಣ) (ವಿಬಿ–ಜಿ ರಾಮ್‌ ಜಿ) ಕಾಯ್ದೆ’ಯನ್ನು ವಾಪಸ್ ಪಡೆಯಿರಿ’ ಎಂದು ಒತ್ತಾಯಿಸಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಪ್ರಧಾನಿ ನರೇಂದ್ರ ಮೋದಿ ಅವರಿಗೆ ಪತ್ರ ಬರೆದಿದ್ದಾರೆ.

‘ವಿಬಿ–ಜಿ ರಾಮ್‌ ಜಿ’ ಕಾಯ್ದೆಯನ್ನು ವಿರೋಧಿಸಿ ಮಂಗಳವಾರ ಪತ್ರ ಬರೆದಿರುವ ಅವರು, ‘ನರೇಗಾ ಯೋಜನೆ ಅಡಿ ಇದ್ದ 100 ದಿನಗಳ ಕೆಲಸದ ಗ್ಯಾರಂಟಿಯನ್ನು ವಿಬಿ–ಜಿ ರಾಮ್‌ ಜಿಯಲ್ಲಿ 125 ದಿನಕ್ಕೆ ಹೆಚ್ಚಿಸಿದ್ದೀರಿ. ಮೇಲ್ನೋಟಕ್ಕೆ ಉದ್ಯೋಗದ ದಿನಗಳು ಹೆಚ್ಚಾದಂತೆ ಕಾಣುತ್ತದೆ. ಆದರೆ ವಾಸ್ತವದಲ್ಲಿ ಈ ಕಾಯ್ದೆಯು ಉದ್ಯೋಗ ಖಾತರಿಯನ್ನೇ ಇಲ್ಲವಾಗಿಸುತ್ತದೆ’ ಎಂದು ಕಳವಳ ವ್ಯಕ್ತಪಡಿಸಿದ್ದಾರೆ.

ADVERTISEMENT

‘ನರೇಗಾವು ಬೇಡಿಕೆ ಆಧಾರಿತ ಯೋಜನೆಯಾಗಿತ್ತು. ಗ್ರಾಮೀಣ ಪ್ರದೇಶದಲ್ಲಿ ಉದ್ಯೋಗದ ಅಗತ್ಯವನ್ನು ಅಧರಿಸಿ, ಕೆಲಸದ ದಿನಗಳನ್ನು ಸೃಷ್ಟಿಸಲಾಗುತ್ತಿತ್ತು. ರಾಜ್ಯದ ಯಾವುದೇ ಭಾಗದಲ್ಲಿಯಾದರೂ ಉದ್ಯೋಗ ಸೃಷ್ಟಿಗೆ ಅವಕಾಶವಿತ್ತು. ಆದರೆ ವಿಬಿ–ಜಿ ರಾಮ್‌ ಜಿಯು ಇದಕ್ಕೆ ಸಂಪೂರ್ಣ ವಿರುದ್ಧವಾಗಿದೆ’ ಎಂದಿದ್ದಾರೆ.

‘ಕೇಂದ್ರ ಸರ್ಕಾರವು ಅಧಿಸೂಚಿಸಿದ ಪ್ರದೇಶದಲ್ಲಿ ಮಾತ್ರವೇ ವಿಬಿ–ಜಿ ರಾಮ್‌ ಜಿ ಅಡಿಯಲ್ಲಿ ಉದ್ಯೋಗ ನೀಡಬೇಕಾಗುತ್ತದೆ. ಅಂದರೆ, ರಾಜ್ಯದ ಎಲ್ಲ ಭಾಗದ ಜನರಿಗೆ ಉದ್ಯೋಗ ಸಿಗುವುದಿಲ್ಲ. ಕೇಂದ್ರವು ಸೂಚಿಸಿದ ಪ್ರದೇಶದಲ್ಲಿ, ಕೇಂದ್ರವು ಸೂಚಿಸಿದ ಸ್ವರೂಪದ ಕೆಲಸಗಳನ್ನಷ್ಟೇ ಮಾಡಬೇಕಾಗುತ್ತದೆ. ನರೇಗಾವು ನೀಡಿದ್ದ ಉದ್ಯೋಗ ಖಾತರಿಯನ್ನು ನೂತನ ಕಾಯ್ದೆಯು ಸಂಪೂರ್ಣವಾಗಿ ನಾಶಪಡಿಸುತ್ತದೆ’ ಎಂದು ವಿವರಿಸಿದ್ದಾರೆ.

‘ನರೇಗಾದ ಅಡಿಯಲ್ಲಿ ಗ್ರಾಮ ಪಂಚಾಯತಿಗಳು ಉದ್ಯೋಗ ಖಾತರಿಯ ಕಾಮಗಾರಿಗಳನ್ನು ನಿರ್ಧರಿಸುತ್ತಿದ್ದವು. ಈಗ ಕೇಂದ್ರ ಸರ್ಕಾರವು ಆ ಅಧಿಕಾರವನ್ನು ಕಸಿದುಕೊಂಡಿದೆ. ಅಧಿಕಾರ ವಿಕೇಂದ್ರೀಕರಣಕ್ಕೆ ಅವಕಾಶ ಮಾಡಿಕೊಟ್ಟಿದ್ದ ಸಂವಿಧಾನದ 73ನೇ ತಿದ್ದುಪಡಿಯ ಉದ್ದೇಶವನ್ನೇ ವಿಬಿ–ಜಿ ರಾಮ್‌ ಜಿ ಕಾಯ್ದೆಯು ಬುಡಮೇಲು ಮಾಡುತ್ತದೆ’ ಎಂದು ಆರೋಪಿಸಿದ್ದಾರೆ.

‘ನರೇಗಾವು ಕೇಂದ್ರ ಪ್ರಾಯೋಜಿತ ಕಾರ್ಯಕ್ರಮವಾಗಿದ್ದು, ಶೇ 90ರಷ್ಟು ವೆಚ್ಚವನ್ನು ಕೇಂದ್ರವೇ ಭರಿಸುತ್ತಿತ್ತು. ರಾಜ್ಯವು ಶೇ 10ರಷ್ಟು ವೆಚ್ಚ ಭರಿಸಿದರೆ ಸಾಕಿತ್ತು. ಆದರೆ ನೂತನ ಯೋಜನೆಯಲ್ಲಿ ಕೇಂದ್ರ ಮತ್ತು ರಾಜ್ಯ ಸರ್ಕಾರದ ವೆಚ್ಚದ ಪಾಲನ್ನು ಕ್ರಮವಾಗಿ ಶೇ 60 ಮತ್ತು ಶೇ 40ರಷ್ಟಕ್ಕೆ ನಿಗದಿ ಮಾಡಲಾಗಿದೆ. ಜಿಎಸ್‌ಟಿ ನೀತಿಯಿಂದ ಆದಾಯ ಖೋತಾ ಎದುರಿಸುತ್ತಿರುವ ರಾಜ್ಯಗಳು, ಇಷ್ಟು ಪ್ರಮಾಣದ ವೆಚ್ಚವನ್ನು ಭರಿಸಲಾಗದೆ ಯೋಜನೆಯ ಅನುಷ್ಠಾನವೇ ಅಸಾಧ್ಯವಾಗಬಹುದು’ ಎಂದು ಆತಂಕ ವ್ಯಕ್ತಪಡಿಸಿದ್ದಾರೆ.

‘ಒಕ್ಕೂಟ ವ್ಯವಸ್ಥೆಗೆ ಧಕ್ಕೆ’

‘ರಾಜ್ಯ ಸರ್ಕಾರಗಳ ಜತೆಗೆ ಸಮಾಲೋಚನೆ ನಡೆಸದೆಯೇ ಕೇಂದ್ರವು ನಿರ್ಧಾರ ತೆಗೆದುಕೊಳ್ಳಲು ಅವಕಾಶವಿರುವ ವಿಬಿ–ಜಿ ರಾಮ್‌ ಜಿ ಕಾಯ್ದೆಯು ಒಕ್ಕೂಟ ವ್ಯವಸ್ಥೆಗೆ ಧಕ್ಕೆ ತರುತ್ತದೆ. ಇದು ಸಂವಿಧಾನದ 258 ಮತ್ತು 280ನೇ ವಿಧಿಗಳ ಸ್ಪಷ್ಟ ಉಲ್ಲಂಘನೆ’ ಎಂದು ಸಿದ್ದರಾಮಯ್ಯ ಪ್ರತಿಪಾದಿಸಿದ್ದಾರೆ.

‘ಕೇಂದ್ರ ಸರ್ಕಾರವು ಯಾವ ಆಧಾರದಲ್ಲಿ ಅಧಿಸೂಚಿತ ಪ್ರದೇಶಗಳನ್ನು ಆಯ್ಕೆ ಮಾಡುತ್ತದೆ ಮತ್ತು ಕೆಲಸದ ಸ್ವರೂಪಗಳು ಎಂತಹವು ಎಂಬುದನ್ನು ಕಾಯ್ದೆಯಲ್ಲಿ ಉಲ್ಲೇಖಿಸಿಲ್ಲ. ಕೇಂದ್ರವು ತನ್ನ ಇಚ್ಛೆಯಂತೆ ಈ ನಿಯಮ, ಷರತ್ತು, ಮಾನದಂಡಗಳನ್ನು ಬದಲಿಸಲು ಅವಕಾಶವಿದೆ. ಇದು ರಾಜ್ಯ ಸರ್ಕಾರಗಳ ಹಕ್ಕು ಮತ್ತು ಅಧಿಕಾರವನ್ನು ಮೊಟಕು ಮಾಡುತ್ತದೆ’ ಎಂದಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.