ADVERTISEMENT

ಕುರಿ ಕಾಯುತ್ತಿದ್ದವ CM ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ: ಸಿದ್ದರಾಮಯ್ಯ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 20 ಫೆಬ್ರುವರಿ 2026, 14:45 IST
Last Updated 20 ಫೆಬ್ರುವರಿ 2026, 14:45 IST
<div class="paragraphs"><p>ಡಿ.ಕೆ. ಶಿವಕುಮಾರ್&nbsp;ಮತ್ತು&nbsp;ಸಿದ್ದರಾಮಯ್ಯ&nbsp; </p></div>

ಡಿ.ಕೆ. ಶಿವಕುಮಾರ್ ಮತ್ತು ಸಿದ್ದರಾಮಯ್ಯ 

   

– ಪ್ರಜಾವಾಣಿ ಚಿತ್ರ

ಬೆಂಗಳೂರು: ರಾಜ್ಯದಲ್ಲಿ ‘ಮುಖ್ಯಮಂತ್ರಿ’ ಬದಲಾವಣೆ ಕುರಿತು ಚರ್ಚೆಗಳು ನಡೆಯುತ್ತಿರುವ ಬೆನ್ನಲ್ಲೇ ಸಿದ್ದರಾಮಯ್ಯ ಅವರು ಫೇಸ್‌ಬುಕ್‌ನಲ್ಲಿ ಮಾಡಿರುವ ಪೋಸ್ಟ್‌ಗಳು ಭಾರೀ ಚರ್ಚೆಗೆ ಗ್ರಾಸವಾಗಿವೆ.

ADVERTISEMENT

‘ಕುರಿ ಕಾಯುತ್ತಿದ್ದವನು ಸಿಎಂ ಆದದ್ದೇ ಪಟ್ಟಭದ್ರರ ಕಣ್ಣು ಕೆಂಪಾಗಲು ಕಾರಣ. ನನ್ನ ಮೇಲೆ ವಿರೋಧಿಗಳು ನಡೆಸುತ್ತಿರುವ ಬಹುತೇಕ ದಾಳಿಗಳು, ಮಾಡುತ್ತಿರುವ ಟೀಕೆ-ಆರೋಪಗಳಿಗೆ ನಾನು ಹುಟ್ಟಿದ ಜಾತಿಯೂ ಒಂದು ಕಾರಣ. ಕುರಿ ಕಾಯುತ್ತಾ ಇರಬೇಕಾದವನು ಮುಖ್ಯಮಂತ್ರಿ ಆಗಿ ಬಿಟ್ಟನಲ್ಲಾ, ಆರ್ಥಿಕ ತಜ್ಞರಿಗೆ ಸರಿಸಮನಾಗಿ ನಿಂತು ಸಾಲು–ಸಾಲು ಬಜೆಟ್ ಮಂಡಿಸಿ ಶಹಬ್ಬಾಸ್ ಗಿರಿ ಗಳಿಸುತ್ತಿದ್ದಾನಲ್ಲಾ ಎನ್ನುವ ಅಸಹನೆ, ಅವರೊಳಗೆ ದ್ವೇಷ, ಅಸೂಯೆ ಕುದಿಯುತ್ತಿದೆ. ಇವನೊಬ್ಬನನ್ನು ರಾಜಕೀಯವಾಗಿ ಮುಗಿಸಿಬಿಟ್ಟರೆ ಅದರ ನಂತರ ನಮ್ಮೆಲ್ಲರ ಹಾದಿ ಸುಲಭವಾಗುತ್ತದೆ ಎನ್ನುವ ರಾಜಕೀಯ ದುರುದ್ದೇಶದ ಲೆಕ್ಕಾಚಾರ ಅವರ ಮನಸ್ಸಿನಲ್ಲಿದೆ’ ಎಂದು ಯಾರ ಹೆಸರನ್ನು ಉಲ್ಲೇಖಿಸದೆ ಪರೋಕ್ಷವಾಗಿ ವಾಗ್ದಾಳಿ ನಡೆಸಿದ್ದಾರೆ.

‘ಸಾಮಾಜಿಕ ಬದಲಾವಣೆಗೆ ಕೈ ಹಾಕಿದವರೆಲ್ಲರ ವಿರುದ್ಧ ಇಂತಹ ಷಡ್ಯಂತ್ರಗಳು ನಡೆದಿರುವುದನ್ನು ಇತಿಹಾಸದ ಪುಟದಲ್ಲಿ ಕಾಣಬಹುದು. ಬುದ್ಧ, ಬಸವಣ್ಣ, ಅಂಬೇಡ್ಕರ್, ಗಾಂಧೀಜಿ, ಪೆರಿಯಾರ್, ನಾರಾಯಣ ಗುರು, ಕನಕದಾಸರಾದಿಯಾಗಿ ಸಾಮಾಜಿಕ ಪರಿವರ್ತನೆಗೆ ಹೋರಾಟ ನಡೆಸಿದವರೆಲ್ಲರನ್ನು ಹಣಿಯುವ, ದಮನಿಸುವ, ಮುಗಿಸುವ ಸಂಚು-ಒಳಸಂಚುಗಳು ನಡೆಯುತ್ತಲೇ ಬಂದಿದೆ. ಬಸವಣ್ಣ ಏನು ತಪ್ಪು ಮಾಡಿದ್ದರು?, ಜಾತಿ ವಿನಾಶಕ್ಕೆ ಪ್ರಯತ್ನ ಮಾಡಿದ್ದರು. ಅಂತರಜಾತಿ ಮದುವೆ ಮಾಡಿಸಿದ್ದರು. ಅವಕಾಶ ವಂಚಿತ ತಬ್ಬಲಿ ಜಾತಿಗಳಿಗೆ ಸ್ವಾಭಿಮಾನದ ದೀಕ್ಷೆ ಕೊಟ್ಟು ಸಮಾಜದ ಮುಖ್ಯವಾಹಿನಿಯಲ್ಲಿ ಸೇರಿಸುವ ಪ್ರಯತ್ನ ಮಾಡಿದ್ದರು. ಈ ಕಾರಣಕ್ಕಾಗಿ ಅವರನ್ನು ವ್ಯವಸ್ಥಿತ ಸಂಚಿನ ಮೂಲಕ ಮುಗಿಸಲಾಯಿತು’ ಎಂದು ಹೇಳಿದ್ದಾರೆ.

‘ಸಾಮಾಜಿಕ ನ್ಯಾಯದ ಪರ ನಿಂತಿರುವುದೇ ರಾಹುಲ್ ಗಾಂಧಿ ವಿರುದ್ಧದ ಸಂಚುಗಳಿಗೆ ಕಾರಣ. ಈಗ ರಾಹುಲ್ ಗಾಂಧಿ ಅವರ ವಿರುದ್ಧವೂ ಸಂಚು ನಡೆಯುತ್ತಿದೆ. ಯಾವಾಗ ರಾಹುಲ್ ಗಾಂಧಿ ಅವರು ಜಾತಿ, ಮತ, ಪಂಥ, ವರ್ಗವನ್ನು ಮೀರಿ ಎಲ್ಲ ಭಾರತೀಯರನ್ನು ಜೋಡಿಸುವ ಕೆಲಸ ಶುರು ಮಾಡಿದರೋ.... ಯಾವಾಗ ಅವರು ಸಾಮಾಜಿಕ ನ್ಯಾಯದ ಪ್ರಶ್ನೆಗಳನ್ನು ಎತ್ತಲು ಶುರುಮಾಡಿದರೋ... ಯಾವಾಗ ಅವರು ಜಾತಿಗಣತಿ ಬಗ್ಗೆ, ಮೀಸಲಾತಿ ಹೆಚ್ಚಳದ ಬಗ್ಗೆ ಧ್ವನಿ ಎತ್ತಲು ಪ್ರಾರಂಭಿಸಿದರೋ... ಅಂದಿನಿಂದ ಅವರನ್ನು ಹಣಿಯುವ ಕೆಲಸ ಜೋರಾಗಿ ನಡೆಯುತ್ತಿದೆ. ಆದರೆ, ಕಾಲ ಬದಲಾಗಿದೆ, ನಾವು ಮನುವಿನ ಕಾಲದಲ್ಲಿಯೂ ಇಲ್ಲ, ರಾಜ-ಮಹಾರಾಜರ ಗುಲಾಮರೂ ಅಲ್ಲ. ನಾವು ಪ್ರಜಾಪ್ರಭುತ್ವ ವ್ಯವಸ್ಥೆಯಲ್ಲಿದ್ದೇವೆ. ನಮಗಿರುವ ದೊಡ್ಡ ರಕ್ಷಣೆ ಬಾಬಾ ಸಾಹೇಬ್ ಅಂಬೇಡ್ಕರ್ ಅವರು ಕೊಟ್ಟ ಸಂವಿಧಾನ’ ಎಂದು ತಿಳಿಸಿದ್ದಾರೆ.

‘ಸಾಮಾಜಿಕ ನ್ಯಾಯಕ್ಕಾಗಿ ನನ್ನ ಉಸಿರಿರುವವರೆಗೂ ಹೋರಾಡುತ್ತೇನೆ. ನನ್ನ ನಾಲ್ಕು ದಶಕಗಳ ರಾಜಕೀಯ ಜೀವನ ಎಂದಿಗೂ ಹೂವಿನ ಹಾಸಿಗೆ ಆಗಿರಲಿಲ್ಲ. ಅದು ಕಲ್ಲು-ಮುಳ್ಳುಗಳ ಹಾದಿಯಾಗಿತ್ತು. ನನ್ನನ್ನು ರಾಜಕೀಯವಾಗಿ ಮುಗಿಸಲು ಹಲವಾರು ದೊಡ್ಡ ದೊಡ್ಡ ನಾಯಕರು ಹಲವಾರು ಬಗೆಯ ಕುಟಿಲ ಕಾರಸ್ತಾನಗಳನ್ನು ಮಾಡಿದ್ದಾರೆ. ಅವುಗಳನ್ನೆಲ್ಲವನ್ನೂ ಜನತೆಯ ಆಶೀರ್ವಾದದಿಂದ ಗೆದ್ದು ಬಂದಿದ್ದೇನೆ. ಇದು ನನ್ನ ವಿರುದ್ಧ ನಡೆಯುತ್ತಿರುವ ಷಡ್ಯಂತ್ರಗಳಲ್ಲ, ಇದು ನನ್ನನ್ನು ನಂಬಿರುವ, ಪ್ರೀತಿಸುತ್ತಿರುವ, ನನಗೆ ನಿರಂತರವಾಗಿ ಆಶೀರ್ವಾದ ನೀಡಿ ಬೆಂಬಲಿಸುತ್ತಿರುವ ನಿಮ್ಮ ವಿರುದ್ಧ ನಡೆಯುತ್ತಿರುವ ಷಡ್ಯಂತ್ರ ಎನ್ನುವುದು ನನಗೆ ಚೆನ್ನಾಗಿ ಗೊತ್ತು. ಆದ್ದರಿಂದ ನನ್ನ ಉಸಿರು ಇರುವವರೆಗೆ ಈ ರಾಜಕೀಯ ಷಡ್ಯಂತ್ರ, ದ್ವೇಷ-ಅಸೂಯೆಯ ರಾಜಕಾರಣದ ವಿರುದ್ಧ ಹೋರಾಡುತ್ತೇನೆ. ಇದು ಸತ್ಯ, ನ್ಯಾಯ ಮತ್ತು ಧರ್ಮಕ್ಕಾಗಿ ನಡೆಯುತ್ತಿರುವ ಹೋರಾಟ. ನಿಮ್ಮೆಲ್ಲರ ಬೆಂಬಲದೊಂದಿಗೆ ಈ ಹೋರಾಟವನ್ನು ನನ್ನ ಉಸಿರು ಇರುವ ವರೆಗೆ ನಡೆಸುತ್ತೇನೆ, ರಣರಂಗವನ್ನು ಬಿಟ್ಟು ಓಡಿ ಹೋಗುವ ಹೇಡಿ ನಾನಾಗಲಾರೆ’ ಎಂದಿದ್ದಾರೆ.

‘ಅವಕಾಶ ವಂಚಿತರ ಪರ ನಿಂತವರನ್ನು ವರ್ತಮಾನವು ಕ್ರೂರವಾಗಿ ನಡೆಸಿಕೊಂಡಿದೆ. ಸಾಮಾಜಿಕ ನ್ಯಾಯದ ಬಂಡಿಯನ್ನು ಮುಂದಕ್ಕೆ ಎಳೆದುಕೊಂಡು ಹೋಗುವುದು ಸುಲಭದ ಕೆಲಸ ಅಲ್ಲ ಎನ್ನುವುದನ್ನು ನಾನು ಅನುಭವದ ಮೂಲಕ ಅರಿತುಕೊಂಡಿದ್ದೇನೆ. ಈ ಪ್ರಯತ್ನ ನಡೆಸಿದವರೆಲ್ಲರನ್ನು ವರ್ತಮಾನ ಬಹಳ ಕ್ರೂರವಾಗಿ ನಡೆಸಿಕೊಂಡಿದೆ. ನಾನು ಸಾಮಾಜಿಕ ನ್ಯಾಯದ ಪರವಾಗಿ ದನಿ ಎತ್ತುವ ಮತ್ತು ಕಾರ್ಯಕ್ರಮಗಳನ್ನು ಅನುಷ್ಠಾನಕ್ಕೆ ತರುವ ಪ್ರಯತ್ನವನ್ನು ಮಾಡಿದಾಗೆಲ್ಲ ನನ್ನ ವಿರುದ್ಧ ದಾಳಿಗಳು ನಡೆದಿವೆ, ಇದು ಈಗಲೂ ಮುಂದುವರಿಯುತ್ತಿದೆ’ ಎಂದಿದ್ದಾರೆ.

‘ನನ್ನ ವಿರುದ್ಧ ಯಾಕೆ ಷಡ್ಯಂತ್ರ ಮಾಡುತ್ತಿದ್ದಾರೆ ಎನ್ನುವುದೂ ನನಗೆ ಗೊತ್ತಿದೆ. ನಾನು ಈ ರಾಜ್ಯದ ಬಡವರು, ಶೋಷಿತರು, ಅವಕಾಶ ವಂಚಿತರ ಪರವಾಗಿದ್ದೇನೆ, ಸಾಮಾಜಿಕ ನ್ಯಾಯದ ಪರವಾಗಿದ್ದೇನೆ. ಸಂವಿಧಾನದ ಪರವಾಗಿದ್ದೇನೆ. ಶೋಷಿತರ ಅಭಿವೃದ್ದಿಗಾಗಿ ಕಾರ್ಯಕ್ರಮಗಳನ್ನು ರೂಪಿಸಿ ಜಾರಿಗೆ ತಂದಿದ್ದೇನೆ. ದುರ್ಬಲರಿಗೆ ಅನ್ಯಾಯವಾದಾಗ ಧ್ವನಿ ಎತ್ತಿದ್ದೇನೆ. ಇದಕ್ಕಾಗಿ ರಾಜ್ಯದ ಜನತೆ 136 ಸ್ಥಾನಗಳಲ್ಲಿ ಕಾಂಗ್ರೆಸ್ ಪಕ್ಷವನ್ನು ಗೆಲ್ಲಿಸಿ ಅಧಿಕಾರಕ್ಕೆ ತಂದಿದ್ದಾರೆ. ಇದು ನಮ್ಮ ರಾಜಕೀಯ ವಿರೋಧಿಗಳಿಗೆ ಸಹಿಸಲಾಗುತ್ತಿಲ್ಲ’ ಎಂದು ಕಿಡಿಕಾರಿದ್ದಾರೆ.

‘ಕಾಯ್ದೆಗಳ ಮೂಲಕ‌ ಸಾಮಾಜಿಕ ನ್ಯಾಯಕ್ಕೆ ಹೊಸ ಆಯಾಮ ಕೊಟ್ಟ ತೃಪ್ತಿ ನನ್ನದು. ಸಾಮಾಜಿಕವಾದ ಜನಪರ ಯೋಜನೆಗಳ ಜೊತೆಯಲ್ಲಿ ಯಾವ ಪಕ್ಷದ ಸರ್ಕಾರ ಬಂದರೂ ಸಾರ್ವಕಾಲಿಕವಾಗಿ ನಿಲ್ಲುವಂತಹ ಕೆಲವು ಕಾಯ್ದೆಗಳ ಜಾರಿ ನನ್ನ ಆಡಳಿತಾವಧಿಯಲ್ಲಿ ನನಗೆ ಬಹಳ ತೃಪ್ತಿ ನೀಡಿದೆ. ಇವುಗಳಲ್ಲಿ ಐತಿಹಾಸಿಕವಾದ ‘ಕರ್ನಾಟಕ ಪರಿಶಿಷ್ಟ ಜಾತಿಗಳ ಉಪಹಂಚಿಕೆ ಮತ್ತು ಪರಿಶಿಷ್ಟ ಪಂಗಡ ಉಪಹಂಚಿಕೆ ಕಾಯ್ದೆ (2013) ಪ್ರಮುಖವಾದುದು. ಇದರ ಪ್ರಕಾರ ಪರಿಶಿಷ್ಟಜಾತಿ ಮತ್ತು ಪರಿಶಿಷ್ಟ ಪಂಗಡಗಳ ಕಲ್ಯಾಣಕ್ಕಾಗಿ ಇವರ ಜನಸಂಖ್ಯೆ ಪ್ರಮಾಣ ಶೇ 24.10ಕ್ಕೆ ಅನುಗುಣವಾಗಿ ಸಂಪನ್ಮೂಲವನ್ನು ಆಯವ್ಯಯದಲ್ಲಿ ಮೀಸಲಿಡಲಾಗುತ್ತಿದೆ’ ಎಂದು ವಿವರಿಸಿದ್ದಾರೆ.

‘ದಲಿತರ ಬಡ್ತಿ ಮೀಸಲಾತಿಯನ್ನು ಸುಪ್ರೀಂ ಕೋರ್ಟ್ ರದ್ದುಪಡಿಸಿದಾಗ ತೀವ್ರವಾದ ವಿರೋಧ ವ್ಯಕ್ತವಾದರೂ ಬಡ್ತಿ ಮೀಸಲಾತಿಗೆ ಕಾನೂನಿನ ರಕ್ಷಣೆ ನೀಡಿದ್ದು ನಮ್ಮ ಸರ್ಕಾರ. ಇಡೀ ದೇಶದಲ್ಲಿಯೇ ಮೊದಲ ಬಾರಿ ಒಂದು ಕೋಟಿ ರೂಪಾಯಿ ವರೆಗಿನ ಸರ್ಕಾರದ ಗುತ್ತಿಗೆ ಕಾಮಗಾರಿಗಳಲನ್ನು ಪರಿಶಿಷ್ಟ ಜಾತಿ/ಪಂಗಡಕ್ಕೆ ಮೀಸಲಿಡುವ ಕಾಯ್ದೆಯನ್ನು ಜಾರಿಗೊಳಿಸಿರುವುದು ಕೂಡಾ ನಾವು. ಇನ್ನೊಂದು ಐತಿಹಾಸಿಕ ಕಾಯ್ದೆ- ವಾಸವಿದ್ದವರನ್ನೇ ಮನೆ ಒಡೆಯರನ್ನಾಗಿ ಮಾಡುವ ಕ್ರಾಂತಿಕಾರಿ ಆಶಯದ ‘ಭೂ ಸುಧಾರಣಾ (ತಿದ್ದುಪಡಿ) ಕಾಯ್ದೆ -2016', ಇದರಿಂದಾಗಿ ಭೂದಾಖಲೆಗಳೇ ಇಲ್ಲದ ಲಂಬಾಣಿ ತಾಂಡಾ, ವಡ್ಡರು, ಗೊಲ್ಲ, ಕುರುಬ ಮತ್ತು ನಾಯಕರ ಹಟ್ಟಿಗಳು, ಮಜರೆ ಗ್ರಾಮಗಳು, ಪಾಳ್ಯಗಳನ್ನು ಕಂದಾಯ ಗ್ರಾಮಗಳೆಂದು ಘೋಷಿಸಲಾಯಿತು’ ಎಂದಿದ್ದಾರೆ.

‘ಗ್ಯಾರಂಟಿ ಯೋಜನೆಗಳ ಮೂಲಕ ಸಂವಿಧಾನಬದ್ಧ ಕರ್ತವ್ಯ ನಿರ್ವಹಿಸಿದ್ದೇವೆ. ಹಣಕಾಸು ಸಚಿವನಾಗಿ ನಾನು ಮಂಡಿಸಿರುವ ಹದಿನಾರು ಬಜೆಟ್‌ಗಳನ್ನು ಅವಲೋಕಿಸಿದರೆ ನನ್ನ ಕಲ್ಪನೆಯ ಸಾಮಾಜಿಕ ನ್ಯಾಯದ ಪರಿಚಯ ಆಗುತ್ತದೆ. ಎರಡನೇ ಬಾರಿ ರಾಜ್ಯದ ಮುಖ್ಯಮಂತ್ರಿಯಾದ ನಂತರದ ಈ ಮೂರು ವರ್ಷಗಳ ಅವಧಿಯಲ್ಲಿ ಸಾಮಾಜಿಕ ನ್ಯಾಯದ ಗಡಿರೇಖೆಗಳನ್ನು ಇನ್ನಷ್ಟು ವಿಸ್ತರಿಸುವ ಪ್ರಯತ್ನದ ಅಂಗವಾಗಿಯೇ ನಾವು ಪಂಚ ಗ್ಯಾರಂಟಿ ಯೋಜನೆಗಳನ್ನು ಅನುಷ್ಠಾನಕ್ಕೆ ತಂದಿದ್ದೇವೆ’ ಎಂದು ಹೇಳಿದ್ದಾರೆ.

‘ಜನತೆಯ ಬಡತನ, ಅನಾರೋಗ್ಯ, ಅನಕ್ಷರತೆ, ಅಪೌಷ್ಠಿಕತೆಯನ್ನು ನಿವಾರಿಸಿ ಹಸಿವು, ಅನಾರೋಗ್ಯ, ಭಯಮುಕ್ತ ಸಮಾಜವನ್ನು ನಿರ್ಮಿಸುವುದು ಚುನಾಯಿತ ಸರ್ಕಾರದ ಸಂವಿಧಾನಬದ್ಧ ಕರ್ತವ್ಯ. ಪ್ರತಿಯೊಬ್ಬ ಪ್ರಜೆಗೂ ಜೀವನ ನಿರ್ವಹಣೆಯ ಹಕ್ಕನ್ನು ಅಂದರೆ ಬದುಕುವ ಹಕ್ಕನ್ನು ನೀಡಬೇಕೇಂದು ಸಂವಿಧಾನದ ಪರಿಚ್ಚೇದ 39 ಹೇಳಿದೆ. ಪರಿಚ್ಚೇದ 15 (3) ಪ್ರತಿಯೊಬ್ಬ ಮಹಿಳೆ ಮತ್ತು ಮಕ್ಕಳಿಗೆ ಸಂಬಂಧಿಸಿದ ವಿಶೇಷ ಕಾನೂನು ಮಾಡಲು ಅವಕಾಶ ನೀಡಿದೆ. ಗ್ಯಾರಂಟಿ ಯೋಜನೆಗಳ ಜಾರಿ ಮೂಲಕ ನಮ್ಮ ಸರ್ಕಾರ ಸಂವಿಧಾನಬದ್ಧ ಕರ್ತವ್ಯವನ್ನಷ್ಟೇ ನಿರ್ವಹಿಸಿದೆ’ ಎಂದು ನುಡಿದಿದ್ದಾರೆ.

‘ಕೋಮುವಾದವು ಸಾಮಾಜಿಕ ಅನ್ಯಾಯದ ರಾಜಕೀಯ ಮಾದರಿ. ಜನರಿಗೆ ತಲ್ವಾರು-ಕತ್ತಿ-ತ್ರಿಶೂಲ ಹಂಚುವುದು, ದೇವಸ್ಥಾನ, ಮಸೀದಿ, ಚರ್ಚ್ ಗಳ ಮೇಲೆ ದಾಳಿ ಮಾಡುವುದು, ಪ್ರಜೆಗಳ ಊಟದ ತಟ್ಟೆಯಲ್ಲಿ, ಮನೆಯ ಫ್ರಿಜ್ ಗಳಲ್ಲಿ ಆಹಾರ ಏನಿದೆ ಎಂದು ಇಣುಕಿ ನೋಡಿ ಹಲ್ಲೆ ನಡೆಸುವುದು, ಜಾತಿ-ಧರ್ಮದ ಹೆಸರಲ್ಲಿ ದ್ವೇಷ, ಅಸೂಯೆ, ಹಿಂಸೆಯನ್ನು ಹರಡುವುದು ಸಂವಿಧಾನ ವಿರೋಧಿ, ಕಾನೂನು ವಿರೋಧಿ ಮತ್ತು ಜನವಿರೋಧಿಯಾದುದು. ಇದು ‘ಸಾಮಾಜಿಕ ಅನ್ಯಾಯ’ದ ರಾಜಕೀಯ ಮಾದರಿ. ವಿಪರ್ಯಾಸದ ಸಂಗತಿಯೆಂದರೆ ಈ ರೀತಿ ದ್ವೇಷ ಹಂಚುವುದರಲ್ಲಿ ನಿರತರಾಗಿರುವ ಮತ್ತು ಜಾತಿ ಧರ್ಮಗಳ ನಡುವೆ ಕಲಹ ಹುಟ್ಟಿಸುತ್ತಿರುವ ಪಕ್ಷ-ಸಂಘಟನೆಗಳೆಲ್ಲ ಇಂದು ಗ್ಯಾರಂಟಿ ಯೋಜನೆಗಳನ್ನು ವಿರೋಧಿಸುತ್ತಿವೆ’ ಎಂದು ಅವರು ಕುಟುಕಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.