ADVERTISEMENT

ಪಕ್ಷಾಂತರ ಮಾಡಿದವರಿಗೆ ಅಂತರಪಿಶಾಚಿ ಸ್ಥಿತಿ: ಸಿದ್ದರಾಮಯ್ಯ ಲೇವಡಿ

​ಪ್ರಜಾವಾಣಿ ವಾರ್ತೆ
Published 20 ಜನವರಿ 2020, 20:28 IST
Last Updated 20 ಜನವರಿ 2020, 20:28 IST
ಸಿದ್ದರಾಮಯ್ಯ
ಸಿದ್ದರಾಮಯ್ಯ   

ಮೈಸೂರು: ‘ಪಕ್ಷಾಂತರ ಮಾಡಿ, ಉಪಚುನಾವಣೆಯಲ್ಲಿ ಗೆದ್ದ ಬಿಜೆಪಿ ಶಾಸಕರು ಈಗ ಅಂತರಪಿಶಾಚಿಗಳಾಗಿದ್ದಾರೆ. ಕಾಂಗ್ರೆಸ್, ಜೆಡಿಎಸ್ ಪಕ್ಷ ತೊರೆದಿದ್ದ ಇವರ ಪರಿಸ್ಥಿತಿ ಅತಂತ್ರವಾಗಿದೆ’ ಎಂದು ವಿರೋಧ ಪಕ್ಷದ ನಾಯಕ ಸಿದ್ದರಾಮಯ್ಯ ಸೋಮವಾರ ಇಲ್ಲಿ ಲೇವಡಿ ಮಾಡಿದರು.

‘ಗೆದ್ದ 24 ಗಂಟೆಗಳಲ್ಲಿ ಸಚಿವರನ್ನಾಗಿ ಮಾಡುವ ಭರವಸೆ ನೀಡಲಾಗಿತ್ತು. ಆದರೆ, ಈ ಶಾಸಕರಿಗೆ ಅಮಿತ್ ಶಾ ಭೇಟಿಗೂ ಅವಕಾಶ ಸಿಕ್ಕಿಲ್ಲ. ಸಂಪುಟ ವಿಸ್ತರಣೆಯಾದರೆ ಬಿಜೆಪಿಯಲ್ಲಿ ದೊಡ್ಡ ಸ್ಫೋಟವಾಗಲಿದೆ. ಗೆದ್ದ ಎಲ್ಲಾ ಶಾಸಕರಿಗೂ ಮಂತ್ರಿ ಸ್ಥಾನ ಕೊಡುತ್ತಿಲ್ಲ. ಅಲ್ಲದೇ, ತಮಗೂ ಮಂತ್ರಿ ಸ್ಥಾನ ಬೇಕೆಂದು ಎಚ್‌.ವಿಶ್ವನಾಥ್ ಎಚ್ಚರಿಕೆ ನೀಡಿದ್ದಾರೆ. ಮುಂದೆ ಏನಾಗಲಿದೆ ಎಂಬುದನ್ನು ನೀವೇ ನೋಡಿ’ ಎಂದರು.

‘ಬಿಜೆಪಿ ಸರ್ಕಾರ ಅಧಿಕಾರಕ್ಕೆ ಬಂದು ಆರು ತಿಂಗಳಾಗಿದೆ. ಅಂದಿನಿಂದ ರಾಜ್ಯದಲ್ಲಿ ಸರ್ಕಾರವೇ ಇಲ್ಲದಂತಾಗಿದೆ. 18 ಇಲಾಖೆಗಳಿಗೆ ಮಂತ್ರಿಗಳು ಇಲ್ಲ. ಈ ಇಲಾಖೆಗಳು ಹೆಣದಂತಾಗಿವೆ. ಇನ್ನುಳಿದವರು ಸುಳ್ಳು ಹೇಳಿಕೊಂಡು ತಿರುಗಾಡುತ್ತಿದ್ದಾರೆ. ಉಸ್ತುವಾರಿಗಳು ಜಿಲ್ಲೆಗಳಿಗೆ ಹೋಗುತ್ತಿಲ್ಲ. ಮಂತ್ರಿಮಂಡಲ ಪೂರ್ಣವಾಗಿ ರಚನೆಯಾಗದೆ ಸರ್ಕಾರ ಟೇಕಾಫ್ ಆಗುತ್ತಿಲ್ಲ’ ಎಂದು ಟೀಕಿಸಿದರು.

ADVERTISEMENT

ಕೆಪಿಸಿಸಿ ಅಧ್ಯಕ್ಷರ ನೇಮಕಾತಿ ವಿಚಾರವಾಗಿ ಪ್ರತಿಕ್ರಿಯಿಸಿದ ಸಿದ್ದರಾಮಯ್ಯ, ‘ಈ ವಿಚಾರವನ್ನು ಹೈಕಮಾಂಡ್ ತೀರ್ಮಾನಿಸುತ್ತದೆ. ಆದಷ್ಟು ಬೇಗ ನೇಮಕ ಮಾಡಬೇಕೆಂದು ಮನವಿ ಮಾಡಿದ್ದೇನೆ. ಆ ಸ್ಥಾನ ಯಾರಿಗೆ ಒಲಿಯಲಿದೆ ಎಂಬುದನ್ನು ಇಲ್ಲಿ ಹೇಳಲು ಸಾಧ್ಯವಿಲ್ಲ’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.