
ಹಣ
ಸಾಂದರ್ಭಿಕ ಚಿತ್ರ
ಅರ್ಹರಿಗೆ ತಲುಪದ ಹಣ | ಶೇ 95ರಷ್ಟು ಮಂದಿಯ ವಿವರಗಳು ಲಭ್ಯವಿಲ್ಲ | ನೈಜತೆಯ ಬಗ್ಗೆಯೇ ಅನುಮಾನ
ಬೆಂಗಳೂರು: ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ ಅಡಿ ಕೇಂದ್ರ ಸರ್ಕಾರವು 2015ರಿಂದ 2024ರ ಮಧ್ಯೆ ₹10,194 ಕೋಟಿ ವೆಚ್ಚ ಮಾಡಿದೆ. ಆದರೆ ಈ ಹಣ ಅರ್ಹ ಫಲಾನುಭವಿಗಳಿಗೇ ತಲುಪಿದೆ ಎಂಬುದನ್ನು ಪುಷ್ಟೀಕರಿಸುವ ದಾಖಲೆ ಕೇಂದ್ರ ಸರ್ಕಾರದ ಬಳಿ ಇಲ್ಲ. ಇರುವ ದಾಖಲೆ ಸರಿಯಾಗಿಲ್ಲ ಎಂದು ಮಹಾಲೇಖಪಾಲರು (ಸಿಎಜಿ) ಆಕ್ಷೇಪ ಎತ್ತಿದ್ದಾರೆ.
ಯೋಜನೆಯ ಫಲಾನುಭವಿಗಳಲ್ಲಿ ಶೇ 95ರಷ್ಟು ಮಂದಿಯ ವಿವರಗಳು ಲಭ್ಯವಿಲ್ಲ, ಯೋಜನಾ ವೆಚ್ಚದ ಅಷ್ಟೇ ಪ್ರಮಾಣದ ಮೊತ್ತ ಸರಿಯಾಗಿ ಬಳಕೆಯಾಗಿರುವ ಬಗ್ಗೆ ಅನುಮಾನವಿದೆ ಎಂದು ಸಿಎಜಿ ಬೊಟ್ಟು ಮಾಡಿದೆ.
ಈಚೆಗೆ ಸಂಸತ್ತಿನಲ್ಲಿ ಮಂಡಿಸಲಾದ ‘ಪ್ರಧಾನ ಮಂತ್ರಿ ಕೌಶಲ್ಯ ಅಭಿವೃದ್ಧಿ ಯೋಜನೆ–ಲೆಕ್ಕಪರಿಶೋಧನೆ’ ವರದಿಯಲ್ಲಿ ಈ ಮಾಹಿತಿ ಇದೆ.
ಯುವಜನರಲ್ಲಿ ಉದ್ಯೋಗಾರ್ಹತೆ ಹೆಚ್ಚಿಸುವ ಉದ್ದೇಶದಿಂದ ಪ್ರಧಾನಿ ನರೇಂದ್ರ ಮೋದಿ ಅವರ ಸರ್ಕಾರವು 2015ರಲ್ಲಿ ಕೌಶಲ್ಯಾಭಿವೃದ್ಧಿ ಅಭಿಯಾನ ಆರಂಭಿಸಿತ್ತು. ಇದರ ಅನುಷ್ಠಾನಕ್ಕೆ ರಾಷ್ಟ್ರೀಯ ಕೌಶಲ್ಯ ಅಭಿವೃದ್ಧಿ ನಿಗಮವನ್ನು (ಎನ್‌ಎಸ್‌ಡಿಸಿ) ಸ್ಥಾಪಿಸಿತ್ತು. 2015 ರಿಂದ 2024ರ ಮಧ್ಯೆ ಕೇಂದ್ರವು ಒಟ್ಟು ಮೂರು ಹಂತಗಳಲ್ಲಿ ಯೋಜನೆಯ ಅನುಷ್ಠಾನಕ್ಕೆ ₹14,448 ಕೋಟಿ ಘೋಷಿಸಿತ್ತು ಮತ್ತು ಅದರಲ್ಲಿ ₹13,288 ಕೋಟಿ ಬಿಡುಗಡೆ ಮಾಡಿತ್ತು.
ಯುವಜನರಲ್ಲಿ ಕೌಶಲಾಭಿವೃದ್ಧಿಗಾಗಿ ತರಬೇತುದಾರರು ಮತ್ತು ತರಬೇತಿ ಕೇಂದ್ರಗಳ ಶುಲ್ಕ, ತರಬೇತಿ ಪಡೆದವರಿಗೆ ಶಿಷ್ಯವೇತನ ನೀಡಲಾಗುತ್ತದೆ. ಇದಕ್ಕೆಂದೇ ₹10,194 ಕೋಟಿ ವೆಚ್ಚ ಮಾಡಲಾಗಿದೆ. ಫಲಾನುಭವಿಗಳು ಮತ್ತು ತರಬೇತುದಾರರ ವಿವರಗಳ ಮಾಹಿತಿ ಸರಿಯಿಲ್ಲದ ಕಾರಣ, ಯೋಜನೆ ಅನುಷ್ಠಾನ ಮತ್ತು ಫಲಾನುಭವಿಗಳ ನೈಜತೆಯ ಬಗ್ಗೆಯೇ ಅನುಮಾನ ಮೂಡಿದೆ ಎಂದು ಸಿಎಜಿ ಆಕ್ಷೇಪ ದಾಖಲಿಸಿದೆ.
ಯೋಜನೆಯ ಮೂರೂ ಹಂತಗಳಲ್ಲಿ ಒಟ್ಟು 1.36 ಕೋಟಿ ಜನರಿಗೆ ತರಬೇತಿ ನೀಡಲಾಗಿದ್ದು, 1.05 ಕೋಟಿ ಫಲಾನುಭವಿಗಳ ವೈಯಕ್ತಿಕ ಮಾಹಿತಿ, ಬ್ಯಾಂಕ್ ಖಾತೆ ವಿವರ ಮತ್ತು ಅವರಿಗೆ ಹಣ ಜಮೆಯಾದುದರ ಬಗ್ಗೆ ಕೇಂದ್ರ ಸರ್ಕಾರದ ಬಳಿ ದಾಖಲೆಗಳು ಇಲ್ಲ. ಫಲಾನುಭವಿಗಳಿಗೆ ನೇರ ವರ್ಗಾವಣೆ ಮೂಲಕ ಹಣ ಜಮೆ ಮಾಡಲಾಗಿದೆ ಎಂದು ಕೌಶಲ್ಯಾಭಿವೃದ್ಧಿ ಸಚಿವಾಲಯ ಹೇಳುತ್ತಿದೆಯಾದರೂ, ಅದಕ್ಕೆ ಪೂರಕ ದಾಖಲೆಗಳನ್ನು ಒದಗಿಸಿಲ್ಲ. ಹೀಗಾಗಿ, ಈ ಬಗ್ಗೆ ಸಚಿವಾಲಯವು ನೀಡಿರುವ ವಿವರಣೆಯನ್ನು ಒಪ್ಪಿಕೊಳ್ಳಲು ಸಾಧ್ಯವಿಲ್ಲ ಎಂದು ಸಿಎಜಿ ಹೇಳಿದೆ.
ಏನೆಲ್ಲಾ ನಿಯಮ ಉಲ್ಲಂಘನೆ...
*ಯೋಜನೆ ಅಡಿ ತರಬೇತಿಗೆ ಆಯ್ಕೆಯಾದ ಫಲಾನುಭವಿಗಳ ವೈಯಕ್ತಿಕ ಮಾಹಿತಿ, ಸಂಪರ್ಕ ಸಂಖ್ಯೆ, ಆಧಾರ್ ಮತ್ತು ಬ್ಯಾಂಕ್ ಖಾತೆ ವಿವರಗಳನ್ನು ಕಡ್ಡಾಯವಾಗಿ ಸಂಗ್ರಹಿಸಬೇಕು ಎಂಬುದು ನಿಯಮ.
*ತರಬೇತಿ ಪಡೆದು, ಪ್ರಮಾಣ ಪತ್ರ ಸ್ವೀಕರಿಸಿದ 1.10 ಕೋಟಿ ಫಲಾನುಭವಿಗಳ ಪೈಕಿ 5 ಲಕ್ಷ ಮಂದಿಯ ಬ್ಯಾಂಕ್ ವಿವರ ಮಾತ್ರ ಲಭ್ಯವಿದೆ. ಅಕ್ರಮ ನಡೆದಿದೆ ಎಂಬುದನ್ನು ಪುಷ್ಟೀಕರಿಸುವ ನಿದರ್ಶನಗಳಿವೆ ಎಂದು ಸಿಎಜಿ ಹೇಳಿದೆ.
19.56 ಲಕ್ಷ: ಮೊದಲ ಹಂತದ ಯೋಜನೆಯ ಫಲಾನುಭವಿಗಳು. ಇದರಲ್ಲಿ ಒಬ್ಬರ ವಿವರವನ್ನೂ ಸರ್ಕಾರ ಸರಿಯಾಗಿ ಸಂಗ್ರಹಿಸಿಲ್ಲ
95.90 ಲಕ್ಷ: ಎರಡು ಮತ್ತು ಮೂರನೇ ಹಂತದ ಫಲಾನುಭವಿಗಳ ಸಂಖ್ಯೆ. ಇದರಲ್ಲಿ 90.60 ಲಕ್ಷ ಫಲಾನುಭವಿಗಳ ಯಾವ ಮಾಹಿತಿಯನ್ನೂ ಸರ್ಕಾರ ಸರಿಯಾಗಿ ನಿರ್ವಹಣೆ ಮಾಡಿಲ್ಲ
* ಫಲಾನುಭವಿಗಳ ಬ್ಯಾಂಕ್ ಖಾತೆಯ ಸಂಖ್ಯೆ ಮುಂದೆ, ‘1111111...’, ‘00000....’, ‘12345678...’ ಎಂದು ನಮೂದಿಸಲಾಗಿದೆ. ಬ್ಯಾಂಕ್ ಹೆಸರು, ಐಎಫ್‌ಎಸ್‌ಸಿ ಕೋಡ್ ಲಭ್ಯವಿಲ್ಲ
* ಲೆಕ್ಕ ಪರಿಶೋಧನೆ ವೇಳೆ 12,172 ಬ್ಯಾಂಕ್ ಖಾತೆಗಳ ವಿವರ ಲಭ್ಯವಾಗಿದ್ದು, ಅವುಗಳನ್ನೇ 52,381 ಅಭ್ಯರ್ಥಿಗಳ ಹೆಸರ ಮುಂದೆ ನಮೂದಿಸಲಾಗಿದೆ
* ಒಂದೇ ಬ್ಯಾಂಕ್ ಖಾತೆಯ ಮೂಲಕ ಮಧ್ಯಪ್ರದೇಶ, ರಾಜಸ್ಥಾನ, ಬಿಹಾರ, ಕೇರಳ ಮತ್ತು ಒಡಿಶಾದಲ್ಲಿನ ಫಲಾನುಭವಿಗಳ ಹೆಸರಿಗೆ ಶಿಷ್ಯವೇತನ ಮತ್ತು ಬಹುಮಾನದ ಮೊತ್ತ ಜಮೆ ಮಾಡಲಾಗಿದೆ
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.