ADVERTISEMENT

ದೆಹಲಿ ರೈತ ಸ್ಮಾರಕಕ್ಕೆ ಕರ್ನಾಟಕದ ಮಣ್ಣು!

ಮುಷ್ಕರ ಬೆಂಬಲಿಸಿದ ಪಾದಯಾತ್ರೆ ಬಳ್ಳಾರಿಯಲ್ಲಿ ನಾಳೆ ಮುಕ್ತಾಯ

ಕೆ.ನರಸಿಂಹ ಮೂರ್ತಿ
Published 22 ಮಾರ್ಚ್ 2021, 6:30 IST
Last Updated 22 ಮಾರ್ಚ್ 2021, 6:30 IST
ದೆಹಲಿ ರೈತರ ಮುಷ್ಕರವನ್ನು ಬೆಂಬಲಿಸಿ ಬಸವ ಕಲ್ಯಾಣದಿಂದ ನಡೆದಿರುವ ಪಾದಯಾತ್ರೆಯುದ್ದಕ್ಕೂ ಸಂಗ್ರಹಿಸಿದ ಮಣ್ಣಿನೊಂದಿಗೆ ಮುಖಂಡರು ಸೋಮವಾರ ಬಳ್ಳಾರಿ ತಾಲ್ಲೂಕಿನ ಕಕ್ಕಬೇವಿನಹಳ್ಳಿ ತಲುಪಿದರು. 
ದೆಹಲಿ ರೈತರ ಮುಷ್ಕರವನ್ನು ಬೆಂಬಲಿಸಿ ಬಸವ ಕಲ್ಯಾಣದಿಂದ ನಡೆದಿರುವ ಪಾದಯಾತ್ರೆಯುದ್ದಕ್ಕೂ ಸಂಗ್ರಹಿಸಿದ ಮಣ್ಣಿನೊಂದಿಗೆ ಮುಖಂಡರು ಸೋಮವಾರ ಬಳ್ಳಾರಿ ತಾಲ್ಲೂಕಿನ ಕಕ್ಕಬೇವಿನಹಳ್ಳಿ ತಲುಪಿದರು.    

ಬಳ್ಳಾರಿ: ದೆಹಲಿಯ ಮೂರು ಗಡಿಗಳಲ್ಲಿ ಏಪ್ರಿಲ್‌ನಲ್ಲಿ ನಿರ್ಮಾಣವಾಗಲಿರುವ ರೈತ ಸ್ಮಾರಕಗಳಿಗೆ ಕರ್ನಾಟಕದ ರೈತ ಹೋರಾಟಗಳ ನೆನಪಿನ ಮಣ್ಣು ಕೂಡ ಸೇರ್ಪಡೆಯಾಗಲಿದೆ.

ರೈತರ ಮುಷ್ಕರವನ್ನು ಬೆಂಬಲಿಸಿ ಮಾ.5ರಿಂದ ಬಸವ ಕಲ್ಯಾಣದಿಂದ ಆರಂಭವಾಗಿರುವ ರೈತರ ಪಾದಯಾತ್ರೆಯು ಬಳ್ಳಾರಿಯಲ್ಲಿ 23ರಂದು ಸಮಾರೋಪಗೊಳ್ಳಲಿದ್ದು, ಮಾರ್ಗ ಮಧ್ಯದ 26 ಗ್ರಾಮಗಳ ಹೊಲಗಳಲ್ಲಿ ಮಣ್ಣನ್ನು ಸಂಗ್ರಹಿಸಲಾಗಿದೆ.

ರೈತ ಸಂಘ, ಚಾಗನೂರು–ಸಿರಿವಾರ ಭೂ ಸಂರಕ್ಷಣಾ ಹೋರಾಟ ಸಮಿತಿಯ ನೇತೃತ್ವದಲ್ಲಿ ನಡೆದಿರುವ ಪಾದಯಾತ್ರೆಯಲ್ಲಿ ಲೇಖಕ ಸ.ರಘುನಾಥ ಪ್ರತಿ ಗ್ರಾಮದಿಂದಲೂ ಒಂದು ಹಿಡಿ ಮಣ್ಣನ್ನು ಸಂಗ್ರಹಿಸಿ ತಂದಿದ್ದಾರೆ. ಬಸವ ಕಲ್ಯಾಣ, ಮುಡುಬಿ, ಕಮಲಾಪುರ, ಕಲಬುರ್ಗಿ, ಶಹಬಾದ್, ಜೇವರ್ಗಿ, ಹನಮಂತವಾಡಿ, ಕಲಮನ ತಾಂಡ, ಕೆಲ್ಲೂರು, ಹುಲಿಕಲ್ಲು, ಬಿ.ಗುಡಿ, ಶಹಾಪುರ, ಸುರಪುರ, ದೇವಲಾಪುರ, ಸಂತೇಕಲ್ಲಹಳ್ಳಿ, ಮಸ್ಕಿ, ಲಿಂಗಸುಗೂರು, ತಿಂಥಿಣಿ, ಸಿಂಧನೂರು, ಸಿರುಗುಪ್ಪ, ಕಪ್ಪಗಲ್ಲು, ಸಿರಿವಾರ, ಚಾಗನೂರು ಗ್ರಾಮಗಳಲ್ಲಿ ಮಣ್ಣು ಸಂಗ್ರಹಿಸಲಾಗಿದೆ.

ADVERTISEMENT

ಆ ಮಣ್ಣಿಗೆ ಪೂಜೆ ಸಲ್ಲಿಸುವ ಮೂಲಕವೇ ಸಮಾರೋಪ ಸಮಾರಂಭ ಉದ್ಘಾಟನೆಗೊಳ್ಳಲಿದೆ. ಹೋರಾಟದ ನೇತೃತ್ವ ವಹಿಸಿರುವ ಮುಖಂಡರಲ್ಲಿ ಒಬ್ಬರಾದ ಬಿ.ಆರ್‌.ಪಾಟೀಲ ಅವರಿಗೆ ಈ ಮಣ್ಣನ್ನು ಕಾರ್ಯಕ್ರಮದಲ್ಲಿ ಹಸ್ತಾಂತರಿಸಲಾಗುತ್ತದೆ.

‘ನರಗುಂದ ರೈತ ಹೋರಾಟದ ನೆನಪಿಗಾಗಿ ಅಲ್ಲಿನ ಮಣ್ಣು ಹಾಗೂ ಹಾವೇರಿಯಲ್ಲಿ ರೈತರ ಮೇಲೆ ನಡೆದ ಗೋಲಿಬಾರ್‌ನ ದುರಂತದ ನೆನಪಿಗಾಗಿ ಅಲ್ಲಿನ ಮಣ್ಣನ್ನು ಕೂಡ ದೆಹಲಿಯ ರೈತ ಸ್ಮಾರಕಗಳ ನಿರ್ಮಾಣಕ್ಕೆ ನೀಡಲಾಗುವುದು’ ಎಂದು ಬಿ.ಆರ್‌.ಪಾಟೀಲ ‘ಪ್ರಜಾವಾಣಿ’ಗೆ ಸೋಮವಾರ ತಿಳಿಸಿದರು.

‘ಏಪ್ರಿಲ್‌ 4ರಿಂದ 6ರವರೆಗೆ ಷಹಜಾನಪುರ, ಟಿಕ್ರಿ ಮತ್ತು ಸಿಂದ್‌ ಗಡಿಯಲ್ಲಿ ರೈತ ಸ್ಮಾರಕವನ್ನು ನಿರ್ಮಿಸಲು ಉದ್ದೇಶಿಸಲಾಗಿದೆ. ಅದಕ್ಕಾಗಿ ಕರ್ನಾಟಕದ ಹೋರಾಟದ ಮಣ್ಣನ್ನು ಕೂಡ ಕೊಡುತ್ತಿದ್ದೇವೆ. ರೈತರ ಮುಷ್ಕರಕ್ಕೆ ನಮ್ಮ ಬೆಂಬಲದ ಸಂಕೇತ ಇದು ’ ಎಂದು ಹೇಳಿದರು.

ಮಣ್ಣಿಗೆ ಪೂಜೆ

‘ಪಾದಯಾತ್ರೆಯಲ್ಲಿ ಸಂಗ್ರಹಿಸಿರುವ ಮಣ್ಣಿನ ಒಂದು ಹಿಡಿಯನ್ನು ನಾನು ಮನೆಗೆ ತೆಗೆದುಕೊಂಡು ಹೋಗುವೆ. ಇನ್ನು ಮುಂದೆ ಯಾರೇ ಯಾವುದೇ ಕಾರ್ಯಕ್ರಮಕ್ಕೆ ನನ್ನನ್ನು ಆಹ್ವಾನಿಸಿದರೂ ಅವರಿಗೆ ವೇದಿಕೆಯಲ್ಲಿ ಮಣ್ಣನ್ನು ಪೂಜಿಸಲು ಕೇಳಿಕೊಳ್ಳುವೆ. ಅದು ಭೂಮಿಪೂಜೆಯ ಸಂಕೇತ. ಅದಕ್ಕೆ ಒಪ್ಪಿದರೆ ಮಾತ್ರ ಕಾರ್ಯಕ್ರಮಕ್ಕೆ ಹೋಗಬೇಕು ಎಂದು ನಿರ್ಧರಿಸಿರುವೆ’ ಎಂದು ಲೇಖಕ ಸ.ರಘುನಾಥ ತಿಳಿಸಿದರು.

ಪಾದಯಾತ್ರೆಯು ತಾಲ್ಲೂಕಿನ ಕಕ್ಕಬೇವಿನಹಳ್ಳಿ ತಲುಪಿದ್ದು, ಸಂಜೆ ಚಾಗನೂರಿನಲ್ಲಿ ಮುಖಂಡರು ತಂಗಲಿದ್ದಾರೆ. ಚಾಗನೂರು ಮಲ್ಲಿಕಾರ್ಜುನ ರೆಡ್ಡಿ, ಮಾಧವರೆಡ್ಡಿ, ಎಂ.ಶ್ರೀಹರಿ, ರೈತ ಸಂಘದ ಅಧ್ಯಕ್ಷ ಡಿ.ಜಿ,ಹಳ್ಳಿ ನಾರಾಯಣಸ್ವಾಮಿ, ಬಸವರಾಜಸ್ವಾಮಿ ಪಾದಯಾತ್ರೆ ನೇತೃತ್ವ ವಹಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.