ಸಿಎಂ ಸಿದ್ದರಾಮಯ್ಯ
ಬೆಂಗಳೂರು: ಲೋಕೋಪಯೋಗಿ ಸಚಿವ ಸತೀಶ ಜಾರಕಿಹೊಳಿ ನಿವಾಸದಲ್ಲಿ ಗುರುವಾರ (ಜ.2) ನಡೆದ ‘ಔತಣಕೂಟ’ದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ, ಕೆಲ ಸಚಿವರು, ಶಾಸಕರು ಭಾಗಿಯಾಗಿ ಚರ್ಚಿಸಿದ ಬೆನ್ನಲ್ಲೆ, ಸಭೆಯಲ್ಲಿದ್ದ ಕೆಲ ಸಚಿವರು ಪಕ್ಷದ ವರಿಷ್ಠರನ್ನು ಪ್ರತ್ಯೇಕವಾಗಿ ಭೇಟಿ ಮಾಡಲು ಮುಂದಾಗಿದ್ದಾರೆ.
‘ಗುರುವಾರ ‘ಔತಣಕೂಟ’ದಲ್ಲಿ ಸಂಪುಟ ಪುನಾರಚನೆ, ಸಿ.ಎಂ ಸ್ಥಾನ, ಕೆಪಿಸಿಸಿ ಅಧ್ಯಕ್ಷರ ಬದಲಾವಣೆ ಸೇರಿ ಯಾವುದೇ ರಾಜಕೀಯ ವಿಚಾರ ಚರ್ಚಿಸಿಲ್ಲ’ ಎಂದು ಮುಖ್ಯಮಂತ್ರಿ, ಸಚಿವರು, ಶಾಸಕರು ಈಗಾಗಲೇ ಹೇಳಿದ್ದಾರೆ. ಆದರೆ, ತುರ್ತಾಗಿ ನಿಗದಿಯಾಗಿದ್ದ ಈ ಸಭೆಯಲ್ಲಿ ಕೆಲವು ವಿಚಾರಗಳು ಚರ್ಚೆಯಾಗಿದೆ. ಅಲ್ಲದೆ, ಪಕ್ಷದ ವರಿಷ್ಠರನ್ನು ಭೇಟಿ ಮಾಡಿ ತಮ್ಮ ಅಭಿಪ್ರಾಯ ಮಂಡಿಸಲು ದೆಹಲಿಗೆ ತೆರಳುವ ಬಗ್ಗೆಯೂ ಕೆಲವು ಸಚಿವರು ಸಮಾಲೋಚನೆ ನಡೆಸಿದ್ದಾರೆ ಎನ್ನಲಾಗಿದೆ.
ವರಿಷ್ಠರನ್ನು ಭೇಟಿ ಮಾಡಿ ಮುಖ್ಯಮಂತ್ರಿ, ಕೆಪಿಸಿಸಿ ಅಧ್ಯಕ್ಷ ಸ್ಥಾನ, ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕೆಂಬ ಬೇಡಿಕೆ ಕುರಿತು ನಿಲುವು ತಿಳಿಸಲು ಕೆಲ ಸಚಿವರು ಮುಂದಾಗಿದ್ದಾರೆ. ಸಾಧ್ಯವಾದರೆ ಮುಂದಿನ ವಾರವೇ ದೆಹಲಿಗೆ ತೆರಳಲು ಸಚಿವ ಕೆ.ಎನ್.ರಾಜಣ್ಣ, ಸತೀಶ ಜಾರಕಿಹೊಳಿ ಮತ್ತು ಸಚಿವ ಎಚ್.ಸಿ.ಮಹದೇವಪ್ಪ ಚರ್ಚೆ ನಡೆಸಿದ್ದಾರೆ ಎಂದೂ ಗೊತ್ತಾಗಿದೆ.
ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ವಿದೇಶ ಪ್ರವಾಸದಲ್ಲಿ ಇರುವಾಗಲೇ ಮುಖ್ಯಮಂತ್ರಿ ಆಪ್ತ ಬಳಗದಲ್ಲಿರುವ ಸಚಿವರು, ಶಾಸಕರು ಸಭೆ ನಡೆಸಿರುವುದು ರಾಜಕೀಯ ವಲಯದಲ್ಲಿ ಕುತೂಹಲ ಮೂಡಿಸಿತ್ತು. ಹಿಂದೆಯೇ ಹೈಕಮಾಂಡ್ ಭೇಟಿಗೆ ಸಚಿವರು ಮುಂದಾಗಿರುವುದು ಚರ್ಚೆ ಹುಟ್ಟುಹಾಕಿದೆ.
ಕೆಪಿಸಿಸಿ ಅಧ್ಯಕ್ಷ ಡಿ.ಕೆ.ಶಿವಕುಮಾರ್ ಬಳಿ ಉಪ ಮುಖ್ಯಮಂತ್ರಿ ಹುದ್ದೆಯ ಜೊತೆಗೆ ಜಲಸಂಪನ್ಮೂಲ ಮತ್ತು ಬೆಂಗಳೂರು ಅಭಿವೃದ್ಧಿ ಖಾತೆಗಳಿವೆ. ಒಬ್ಬರಿಗೆ ಒಂದೇ ಹುದ್ದೆ ಎನ್ನುವುದು ಪಕ್ಷದ ನೀತಿ. ಹೀಗಾಗಿ, ಈ ವಿಷಯವೂ ಸೇರಿದಂತೆ ಹಲವು ವಿಚಾರಗಳ ಕುರಿತು ವರಿಷ್ಠರಿಗೆ ತಮ್ಮ ನಿಲುವು ವ್ಯಕ್ತಪಡಿಸಲು ಸಚಿವರು ತೀರ್ಮಾನಿಸಿದ್ದಾರೆ ಎಂದೂ ಹೇಳಲಾಗಿದೆ.
ಮುಖ್ಯಮಂತ್ರಿ ಸ್ಥಾನದಿಂದ ಸಿದ್ದರಾಮಯ್ಯ ಅವರನ್ನು ಯಾವುದೇ ಕಾರಣಕ್ಕೂ
ಬದಲಾಯಿಸಬಾರದು
ಒಂದೊಮ್ಮೆ ಬದಲಾಯಿಸುವುದಾದರೆ ಸಿದ್ದರಾಮಯ್ಯ ಅವರೂ ಒಪ್ಪುವ, ಸರ್ವಸಮ್ಮತ ವ್ಯಕ್ತಿಗೆ ಆ ಸ್ಥಾನ ನೀಡಬೇಕು.
ಜಾತಿವಾರು ಹೆಚ್ಚುವರಿ ಉಪ ಮುಖ್ಯಮಂತ್ರಿ ಹುದ್ದೆ ಸೃಷ್ಟಿಸಬೇಕು
ಡಿ.ಕೆ.ಶಿವಕುಮಾರ್ ಅವರನ್ನು ಕೆಪಿಸಿಸಿ ಅಧ್ಯಕ್ಷ ಸ್ಥಾನದಿಂದ ಮುಕ್ತಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.