ADVERTISEMENT

ಅಗಲಿದ ತಾಯಿಯ ಮೂರ್ತಿ ಪ್ರತಿಷ್ಠಾಪಿಸಿ, ಪೂಜೆ ಆರಂಭಿಸಿದ ಮಗ

ಅಗಲಿದ ಅಮ್ಮನ ಫೈಬರ್ ಮೂರ್ತಿ ಮಾಡಿಸಿದ ಪುತ್ರ ದೇವಣ್ಣ ಬೆನಕನವಾರಿ

ಶ್ರೀಶೈಲ ಎಂ.ಕುಂಬಾರ
Published 6 ಜೂನ್ 2022, 3:12 IST
Last Updated 6 ಜೂನ್ 2022, 3:12 IST
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದ ದೇವಣ್ಣ ಬೆನಕನವಾರಿ ಅವರ ಮನೆಯಲ್ಲಿ ಶ್ರೀಗಳಿಂದ ಶಿವಗಂಗಮ್ಮ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ ಕ್ಷಣ(ಸಂಗ್ರಹ ಚಿತ್ರ)
ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದ ದೇವಣ್ಣ ಬೆನಕನವಾರಿ ಅವರ ಮನೆಯಲ್ಲಿ ಶ್ರೀಗಳಿಂದ ಶಿವಗಂಗಮ್ಮ ಅವರ ಮೂರ್ತಿ ಪ್ರತಿಷ್ಠಾಪನೆ ಮಾಡಿಸಿದ ಕ್ಷಣ(ಸಂಗ್ರಹ ಚಿತ್ರ)   

ಗಜೇಂದ್ರಗಡ: ಮಮತೆ, ವಾತ್ಸಲ್ಯದ ಮೂರ್ತರೂಪವಾದ ಹೆತ್ತ ತಾಯಿಯ ಅಗಲಿಕೆಯನ್ನು ಭರಿಸಿಕೊಳ್ಳುವ ನಿಟ್ಟಿನಲ್ಲಿ ಮಗನೊಬ್ಬ ಫೈಬರ್ ಹಾಗೂ ಪಂಚಲೋಹದ ತಾಯಿಯ ಮೂರ್ತಿಯನ್ನು ಮನೆಯಲ್ಲಿ ಪ್ರತಿಷ್ಠಾಪಿಸಿ ಪೂಜೆ ಸಲ್ಲಿಸುತ್ತಿದ್ದಾರೆ.

ಗಜೇಂದ್ರಗಡ ಸಮೀಪದ ಲಕ್ಕಲಕಟ್ಟಿ ಗ್ರಾಮದ ದೇವಣ್ಣ ಲಿಂಗಪ್ಪ ಬೆನಕನವಾರಿ ಅವರ ತಾಯಿ ಶಿವಗಂಗಮ್ಮ ಲಿಂಗಪ್ಪ ಬೆನಕನವಾರಿ (90) ಕಳೆದ ವರ್ಷ ಮೇ 31ರಂದು ನಿಧನರಾದರು. ತಾಯಿಯ ಪ್ರಥಮ ಪುಣ್ಯಸ್ಮರಣೆ ಅಂಗವಾಗಿ ಮೇ 31ರಂದು ಗದ್ದನಕೇರಿ ಮಳೆರಾಜೇಂದ್ರ ಮಠದ ಜಗನ್ನಾಥ ಸ್ವಾಮೀಜಿ ನೇತೃತ್ವದಲ್ಲಿ ಮನೆಯಲ್ಲಿ ಪಂಚಲೋಹದ ತಾಯಿಯ ಮೂರ್ತಿಗೆ ಪ್ರಾಣ ಪ್ರತಿಷ್ಠಾಪಿಸಿ, ಧರ್ಮಸಭೆ ನಡೆಸಿದ್ದಾರೆ. ಜೊತೆಗೆ ತಾಯಿ ಕುಳಿತುಕೊಳ್ಳುತ್ತಿದ್ದ ಜಾಗದಲ್ಲಿ ಫೈಬರ್ ಮೂರ್ತಿಯನ್ನೂ ಪ್ರತಿಷ್ಠಾಪಿಸಿದ್ದಾರೆ.

ಕೃಷಿಕ ಕುಟುಂಬದ ಶಿವಗಂಗಮ್ಮ ಅವರಿಗೆ ನಾಲ್ವರು ಪುತ್ರರು, ಏಳು ಜನ ಪುತ್ರಿಯರು. ಹತ್ತನೇಯವರಾದ ದೇವಣ್ಣ ಅವರು ಸದ್ಯ ಬೀಳಗಿಯಲ್ಲಿ ಉಪನ್ಯಾಸಕರಾಗಿ ಕೆಲಸ ಮಾಡುತ್ತಿದ್ದಾರೆ. ದೇವಣ್ಣ ಬೆಂಗಳೂರಿನಲ್ಲಿರುವ ತಮ್ಮ ದೊಡ್ಡ ಅಕ್ಕ ಭಾಗ್ಯಲಕ್ಷ್ಮೀ ಗುರಿಕಾರ ಅವರ ಬಳಿ ತಾಯಿಯ ಮೂರ್ತಿ ಮಾಡಿಸುವ ಕುರಿತು ಪ್ರಸ್ತಾಪಿಸಿದಾಗ ಸಕಾರಾತ್ಮಕ ಸ್ಪಂದನೆ ಸಿಕ್ಕಿದ್ದರಿಂದ, ಬೆಂಗಳೂರಿನ ಮುರಳೀಧರ್ ಆಚಾರ್ಯ ಅವರ ಬಳಿ ₹3 ಲಕ್ಷ ವೆಚ್ಚದಲ್ಲಿ ಫೈಬರ್ ಮೂರ್ತಿ ಹಾಗೂ ಹೊನ್ನಪ್ಪ ಆಚಾರ್ಯ ಅವರ ಬಳಿ ₹95 ಸಾವಿರ ವೆಚ್ಚದಲ್ಲಿ 16 ಕೆ.ಜಿ. ತೂಕದ ಪಂಚಲೋಹದ ಮೂರ್ತಿಗಳನ್ನು ಮಾಡಿಸಿದ್ದಾರೆ.

ADVERTISEMENT

‘ಕೆಲವರು ಮನೆಯಲ್ಲಿ ತಾಯಿಯ ಮೂರ್ತಿ ಇಡಬಾರದು ಒಳ್ಳೆಯದಲ್ಲ ಎಂದಿದ್ದರು. ಅದಕ್ಕೆ ಅಮ್ಮನ ಮೂರ್ತಿ ಇಟ್ಟುಕೊಳ್ಳುವುದರಿಂದ ಕೆಟ್ಟದಾಗುವುದಾದರೆ ಅದು ನನಗೆ ಆಗಲಿ. ನಾನು ಏನೇ ಮಾಡಿದರು ಅಮ್ಮನನ್ನು ಕೇಳುತ್ತಿದ್ದೆ. ಅಮ್ಮ ಇಲ್ಲವಾದ ಮೇಲೆ ಒಂದು ನಿರ್ವಾತ ಸೃಷ್ಟಿಯಾಯಿತು. ಈಗ, ಯಾರು ಏನೇ ಹೇಳಲಿ ಮನೆಗೆ ಅಮ್ಮನನ್ನು ಕರೆ ತಂದ ಖುಷಿ ನನಗಿದೆ' ಎನ್ನುತ್ತಾರೆ ದೇವಣ್ಣ.

ನಮ್ಮ ತಾಯಿಯ ಮೂರ್ತಿ ಮಾಡಿಸಲು ಮುಂದಾದಾಗ ನನಗೆ ದುಡ್ಡಿನ ಬೆಲೆ ಗೊತ್ತಿಲ್ಲ ಎಂದು ಹಲವರು ಕುಹಕವಾಡಿದರು. ಆದರೆ ಅವರಿಗೆ ತಾಯಿಯ ಬೆಲೆ ಗೊತ್ತಿಲ್ಲ

ದೇವಣ್ಣ ಬೆನಕನವಾರಿ, ತಾಯಿ ಮೂರ್ತಿ ಮಾಡಿಸಿದವರು

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.