ವಿಧಾನಸೌಧ (ಸಾಂದರ್ಭಿಕ ಚಿತ್ರ)
ಬೆಂಗಳೂರು: ಸೌಹಾರ್ದ ಸಹಕಾರಿ ಮಂಡಳಿಗಳ ಸದಸ್ಯರು ಪ್ರತಿ ವರ್ಷ ತಮ್ಮ ಕುಟುಂಬದ ಆಸ್ತಿ ವಿವರ ಸಲ್ಲಿಸುವುದನ್ನು ಕಡ್ಡಾಯ ಮಾಡಲು ಸರ್ಕಾರ ತಂದಿದ್ದ ‘ಕರ್ನಾಟಕ ಸೌಹಾರ್ದ ಸಹಕಾರಿ (ತಿದ್ದುಪಡಿ) ಮಸೂದೆ’ಯು ವಿಧಾನ ಪರಿಷತ್ತಿನಲ್ಲಿ ಸೋಲು ಕಂಡಿತು.
ವಿಧಾನ ಪರಿಷತ್ತಿನ ಬುಧವಾರದ ಕಲಾಪದ ಅವಧಿಯಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರ ಪರವಾಗಿ ಕಾನೂನು ಸಚಿವ ಎಚ್.ಕೆ.ಪಾಟೀಲ ಅವರು ಸದರಿ ಮಸೂದೆ ಮಂಡಿಸಿದರು.
ಚರ್ಚೆ ಬಳಿಕ ಮಸೂದೆಗೆ ಅನುಮೋದನೆ ಪಡೆಯುವ ವೇಳೆ, ಆಡಳಿತ ಪಕ್ಷದ ಸದಸ್ಯರ ಸಂಖ್ಯೆ ಕಡಿಮೆ ಇರುವುದನ್ನು ಗಮನಿಸಿದ ವಿರೋಧ ಪಕ್ಷದ ನಾಯಕ ಛಲವಾದಿ ನಾರಾಯಣಸ್ವಾಮಿ, ವಿಭಜನೆ ಮತಕ್ಕೆ ಆಗ್ರಹಿಸಿದರು.
ಮಸೂದೆಯನ್ನು ಮತಕ್ಕೆ ಹಾಕುವುದಾಗಿ ಪ್ರಕಟಿಸಿದ ಸಭಾಪತಿ ಬಸವರಾಜ ಹೊರಟ್ಟಿ ಅವರು, ಹೊರಹೋಗಿರುವ ಸದಸ್ಯರು ಸದನಕ್ಕೆ ಮರಳಲು ಎರಡು ನಿಮಿಷ ಅವಕಾಶ ನೀಡಿದರು. ಈ ವೇಳೆ ಆಡಳಿತ ಪಕ್ಷದ ಮೂವರು ಸದಸ್ಯರಷ್ಟೇ ಸದನಕ್ಕೆ ಮರಳಿದರು.
ಆಗ ಮಾತನಾಡಿದ ಸಚಿವ ಎಚ್.ಕೆ.ಪಾಟೀಲ ಅವರು, ‘ರಿಜಿಸ್ಟ್ರಾರ್ ಅವರ ಪೂರ್ವಾನುಮತಿ ಪಡೆದು ಸಹಕಾರಿ ಬ್ಯಾಂಕ್‌ಗಳಲ್ಲೂ ಎಸ್‌ಎಲ್‌ಆರ್ ಠೇವಣಿ ಇರಿಸಬಹುದು ಮತ್ತು ಸೌಹಾರ್ದ ಸಹಕಾರಿ ಮಂಡಳಿ ಸದಸ್ಯರು ಆಸ್ತಿ ವಿವರ ಸಲ್ಲಿಸಬೇಕಾದ ಅವಧಿಯನ್ನು ಎರಡು ವರ್ಷಕ್ಕೆ ಹೆಚ್ಚಿಸುವ ತಿದ್ದುಪಡಿ ತರುತ್ತೇವೆ. ಈಗಲೂ ಮಸೂದೆಯನ್ನು ಮತಕ್ಕೆ ಹಾಕಬೇಕೆ’ ಎಂದು ಪ್ರಶ್ನಿಸಿದರು.
ಮತಕ್ಕೆ ಹಾಕಲೇಬೇಕು ಎಂದು ವಿರೋಧ ಪಕ್ಷಗಳ ಸದಸ್ಯರು ಪಟ್ಟು ಹಿಡಿದರು. ‘ಮೇಲ್ಮನೆಯಲ್ಲಿ ಮಸೂದೆಗೆ ಸಂಬಂಧಿಸಿದಂತೆ ಈ ರೀತಿಯ ರಾಜಕಾರಣ ಸರಿಯಲ್ಲ. ವಿಧಾನ ಪರಿಷತ್ತಿಗೆ ಇದು ಶೋಭೆ ತರುವುದಿಲ್ಲ’ ಎಂದು ಎಚ್.ಕೆ.ಪಾಟೀಲರು ಅಸಮಾಧಾನ ವ್ಯಕ್ತಪಡಿಸಿದರು.
ಮಸೂದೆಯನ್ನು ಮತಕ್ಕೆ ಹಾಕಿದಾಗ, ಅದರ ಪರವಾಗಿ 23 ಮತಗಳಷ್ಟೇ ಬಂದವು. ವಿರುದ್ಧವಾಗಿ 26 ಮತಗಳು ಬಂದವು. ಮತ ವಿಭಜನೆಯಿಂದಾಗಿ ಮಸೂದೆಯು ತಿರಸ್ಕೃತವಾಯಿತು.
ಸೌಹಾರ್ದ ಸಹಕಾರಿ ಮಂಡಳಿಗಳ ಸದಸ್ಯರು ತಮ್ಮ ಮತ್ತು ತಮ್ಮ ಕುಟುಂಬದವರ ಹೆಸರಿನಲ್ಲಿ ಇರುವ ಎಲ್ಲ ಸ್ವರೂಪದ ಆಸ್ತಿಗಳ ವಿವರವನ್ನು ಪ್ರತಿ ವರ್ಷ ಸರ್ಕಾರಕ್ಕೆ ಸಲ್ಲಿಸಬೇಕು ಎಂಬ ಷರತ್ತನ್ನು ಮಸೂದೆಯು ಒಳಗೊಂಡಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.