
ಯು.ಟಿ. ಖಾದರ್
ಮಂಗಳೂರು: ವಿಧಾನಸಭೆಯ 224 ಶಾಸಕರಲ್ಲಿ ಕೆಲವು ಶಾಸಕರ ವರ್ತನೆ ಮಾತ್ರ ಅಶಿಸ್ತಿನಿಂದ ಇರುತ್ತದೆ. ಬೇರೆ ಶಾಸಕರ ವರ್ತನೆ ಈ ರೀತಿ ಇರುವುದಿಲ್ಲ. ಸದನದಲ್ಲಿ ತಪ್ಪು ಮಾಡಿದವರಿಂದಲೇ ಮತ್ತೆ ಅಂತಹ ತಪ್ಪುಗಳು ಪುನರಾವರ್ತನೆ (ಹೆಬಿಚುವಲ್ ಒಫೆಂಡರ್ಸ್) ಆಗುತ್ತಿರುತ್ತವೆ ಎಂದು ಸ್ಪೀಕರ್ ಯು.ಟಿ. ಖಾದರ್ ಹೇಳಿದರು.
ಶನಿವಾರ ಇಲ್ಲಿ ಸುದ್ದಿಗೋಷ್ಠಿಯಲ್ಲಿ ಶಾಸಕ ಶಿವಲಿಂಗೇಗೌಡರು ಸದನದಲ್ಲಿ ಬಳಕೆ ಮಾಡಿರುವ ಪದಗಳ ಕುರಿತು ಆಕ್ಷೇಪ ವ್ಯಕ್ತವಾಗಿರುವ ಬಗ್ಗೆ ಮಾಧ್ಯಮ ಪ್ರತಿನಿಧಿಗಳು ಕೇಳಿದ ಪ್ರಶ್ನೆಗೆ ಅವರು ಉತ್ತರಿಸಿದರು.
ಸದನ ಎಂದರೆ ಕುಟುಂಬ ಇದ್ದಂತೆ. ಇಂತಹ ಚರ್ಚೆಗಳು ಹಿಂದೆಯೂ ಆಗಿವೆ. ಪ್ರೀತಿಯಿಂದ ಮಾತಾಡುವಾಗ, ಅಣ್ಣ ತಮ್ಮಂದಿರ ನಡುವಿನ ಚರ್ಚೆಯಂತೆ ಆಚೀಚೆ ಆಗಿರಬಹುದು.
ಕೆಲವು ಸಂದರ್ಭಗಳಲ್ಲಿ ಪ್ರತಿಕ್ರಿಯಿಸುವಾಗ ಭಾವನಾತ್ಮಕ ಮಾತುಗಳು ಬಂದು ಬಿಡುತ್ತವೆ. ಅದನ್ನು ಬಗೆಹರಿಸಿಕೊಂಡು ಹೋಗುವುದು ಸದನದ ಸಂಸ್ಕೃತಿ ಎಂದರು.
ಸದನವನ್ನು ಶಿಸ್ತಿನಿಂದ ನಡೆಸುವುದು ಸಭಾಧ್ಯಕ್ಷರ ಜವಾಬ್ದಾರಿ ಮಾತ್ರವಲ್ಲ. ಎಲ್ಲ ಸದಸ್ಯರ ಜವಾಬ್ದಾರಿಯಾಗಿದೆ. ಜನರು ಸಭೆಯ ಕಲಾಪ ವೀಕ್ಷಿಸುತ್ತಾರೆ, ನಮ್ಮನ್ನು ಗಮನಿಸುತ್ತಾರೆ ಎನ್ನುವ ಅರಿವು ಪ್ರತಿ ಶಾಸಕನಲ್ಲೂ ಇರಬೇಕು. ಶಾಸಕರು ತಮ್ಮ ಗೌರವ ಉಳಿಸಿಕೊಳ್ಳಬೇಕು.
ಎಲ್ಲವನ್ನೂ ಕಾನೂನು, ನಿಯಮಗಳಿಂದಲೇ ಜಾರಿಗೆ ತರಲು ಸಾಧ್ಯವಾಗದು. ಶಾಸಕರಿಗೆ ತಮ್ಮ ಹೊಣೆಗಾರಿಕೆಯ ಅರಿವು ಇರಬೇಕು. ಕಾನೂನು ಮತ್ತು ನಿಯಮದ ಬಗ್ಗೆ ತಿಳಿವಳಿಕೆ ಇರುವವರೇ ಶಾಸಕರಾಗಿ ಆಯ್ಕೆಯಾಗಿ ಬರುವವರು ಎಂದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.