ADVERTISEMENT

ಅಕ್ರಮ ಗಣಿಗಾರಿಕೆ ಹಗರಣ: ಜನಾರ್ದನರೆಡ್ಡಿ ಆಪ್ತ ಶ್ರೀನಿವಾಸರೆಡ್ಡಿ ಬಂಧನ

ಆನಂದ್‌ಸಿಂಗ್‌, ನಾಗೇಂದ್ರಗೆ ಜಾಮೀನು ರಹಿತ ವಾರೆಂಟ್‌

​ಪ್ರಜಾವಾಣಿ ವಾರ್ತೆ
Published 3 ಅಕ್ಟೋಬರ್ 2018, 15:49 IST
Last Updated 3 ಅಕ್ಟೋಬರ್ 2018, 15:49 IST
   

ಬೆಂಗಳೂರು: ಬಳ್ಳಾರಿ ಗಣಿ ಉದ್ಯಮಿಗಳಿಗೆ ಪುನಃ ಅಕ್ರಮ ಗಣಿಗಾರಿಕೆ ಉರುಳು ಬಿಗಿದುಕೊಳ್ಳುತ್ತಿದ್ದು, ಗಣಿ ಮಾಲೀಕರೊಬ್ಬರನ್ನು ಬೆದರಿಸಿ 1.48 ಲಕ್ಷ ಟನ್‌ ಅದಿರನ್ನು ಅಕ್ರಮವಾಗಿ ಮಾರಿದ ಆರೋಪದ ಮೇಲೆ ಮಾಜಿ ಸಚಿವ ಜನಾರ್ದನರೆಡ್ಡಿ ಆಪ್ತ ಹಾಗೂ ಶ್ರೀ ಮಿನೆರಲ್ಸ್‌ ಮಾಲೀಕ ಶ್ರೀನಿವಾಸ ರೆಡ್ಡಿ ಅವರನ್ನು ಲೋಕಾಯುಕ್ತ ವಿಶೇಷ ತನಿಖಾ ತಂಡ (ಎಸ್‌ಐಟಿ) ಬುಧವಾರ ಬಂಧಿಸಿದೆ.

ಇನ್ನೊಂದು ಅಕ್ರಮ ಗಣಿಗಾರಿಕೆ ಪ್ರಕರಣದಲ್ಲಿ ಸಿಬಿಐ ವಿಶೇಷ ನ್ಯಾಯಾಲಯಕ್ಕೆ ಗೈರುಹಾಜರಾಗಿದ್ದ ಬಳ್ಳಾರಿ ಜಿಲ್ಲೆಯವರೇ ಆಗಿರುವ ಶಾಸಕರಾದ ಆನಂದ್‌ಸಿಂಗ್‌ ಮತ್ತು ನಾಗೇಂದ್ರ ಅವರಿಗೆ ಇಲ್ಲಿನ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರೆಂಟ್‌ ಜಾರಿ ಮಾಡಿದೆ. ಇಬ್ಬರೂ ಒಂದೆರಡು ದಿನಗಳಲ್ಲಿ ನ್ಯಾಯಾಲಯಕ್ಕೆ ಹಾಜರಾಗಿ ಜಾಮೀನು ಪಡೆಯುವ ಸಾಧ್ಯತೆಯಿದೆ.

ಶ್ರೀನಿವಾಸ ರೆಡ್ಡಿ ವಿರುದ್ಧ ಆರೋಪ ಏನು?
ಸಂಡೂರು ತಾಲೂಕಿನ ಸಿದ್ದಾಪುರ ಗ್ರಾಮದ ‘ಇಂಡಿಯನ್‌ ಮೈನ್ಸ್‌’ ಮಾಲೀಕ ಎನ್‌. ಶೇಖ್‌ ಸಾಬ್ ಮೇಲೆ ಒತ್ತಡ ಹೇರಿದ ಜನಾರ್ದನ ರೆಡ್ಡಿ ಅವರು ತಮ್ಮ ಆಪ್ತ ‘ದೇವಿ ಎಂಟರ್‌ಪ್ರೈಸಸ್‌’ ಮಾಲೀಕ ಕೆ.ಎಂ. ಅಲಿಖಾನ್‌ ಅವರನ್ನು ಇಂಡಿಯನ್‌ ಮೈನ್ಸ್‌ನ ಪಾಲುದಾರರಾಗಿ ಸೇರ್ಪಡೆ ಮಾಡಿದ್ದರು. ಆನಂತರ, ಶೇಖ್‌ಸಾಬ್‌ ಅವರಿಂದ ಪವರ್‌ ಆಫ್‌ ಅಟಾರ್ನಿ ಪಡೆದು ಗಣಿಯನ್ನು ಅಕ್ಷರಶಃ ನಿಯಂತ್ರಣಕ್ಕೆ ತೆಗೆದುಕೊಂಡು 2009ರ ಜುಲೈ ತಿಂಗಳಿಂದ ಡಿಸೆಂಬರ್‌ವರೆಗೆ 1.48 ಲಕ್ಷ ಟನ್‌ ಅದಿರು ತೆಗೆದು ಮಾರಾಟ ಮಾಡಿ ರಾಜ್ಯದ ಬೊಕ್ಕಸಕ್ಕೆ ಭಾರಿ ನಷ್ಟ ಮಾಡಿದ್ದಾರೆ ಎಂಬ ಅಂಶ ತನಿಖೆಯಿಂದ ಖಚಿತವಾಗಿದೆ ಎಂದುಎಸ್‌ಐಟಿ ಐಜಿಪಿ ಎಂ. ಚಂದ್ರಶೇಖರ್‌ ತಿಳಿಸಿದ್ದಾರೆ.

ADVERTISEMENT

ಬಂಧಿತ ಆರೋಪಿ ಶ್ರೀನಿವಾಸ ರೆಡ್ಡಿ, ಇಂಡಿಯನ್‌ ಶೇಖ್‌ಸಾಬ್‌ ಮೇಲೆ ಒತ್ತಡ ಹೇರುವಲ್ಲಿ ಪ್ರಮುಖ ಪಾತ್ರ ವಹಿಸಿದ್ದರು. ಅಕ್ರಮವಾಗಿ ಅದಿರು ತೆಗೆದು, ಸಾಗಣೆ ಮಾಡುವಲ್ಲೂ ಭಾಗಿಯಾಗಿದ್ದರು ಎನ್ನಲಾಗಿದೆ. ರೆಡ್ಡಿ ಅವರನ್ನು ಕೋರ್ಟ್‌ ಈ ತಿಂಗಳ 6ರವರೆಗೆ ಎಸ್‌ಐಟಿ ವಶಕ್ಕೆ ನೀಡಿದೆ. ಜನಾರ್ದನರೆಡ್ಡಿ, ಆಲಿಖಾನ್‌ ಅವರನ್ನು ಈ ಮೊದಲೇ ಬಂಧಿಸಲಾಗಿತ್ತು. ಜಾಮೀನು ಪಡೆದು ಅವರು ಹೊರಗೆ ಬಂದಿದ್ದಾರೆ.

ಜಾಮೀನುರಹಿತ ವಾರೆಂಟ್‌: ಈ ಮಧ್ಯೆ, ಇನ್ನೊಂದು ಪ್ರಕರಣದಲ್ಲಿ ಕಾರವಾರದ ಬೇಲೆಕೇರಿ ಬಂದರಿನಿಂದ ಅಕ್ರಮವಾಗಿ ಅದಿರು ಸಾಗಣೆ ಮಾಡಿದ ಆರೋಪಕ್ಕೊಳಗಾಗಿರುವ ಕಾಂಗ್ರೆಸ್‌ ಶಾಸಕರಾದ ಆನಂದ್‌ ಸಿಂಗ್‌(ವಿಜಯನಗರ), ಶಾಸಕ ಬಿ. ನಾಗೇಂದ್ರ(ಬಳ್ಳಾರಿ ಗ್ರಾಮೀಣ) ಅವರ ವಿರುದ್ಧ ಇಲ್ಲಿನ ಸಿಬಿಐ ವಿಶೇಷ ನ್ಯಾಯಾಲಯ ಜಾಮೀನುರಹಿತ ವಾರೆಂಟ್‌ ಹೊರಡಿಸಿದೆ.

ಸತತವಾಗಿಎರಡು ಸಲ ವಿಚಾರಣೆಗೆ ಗೈರುಹಾಜರಾಗಿದ್ದರಿಂದ ಕೋರ್ಟ್‌ ವಾರೆಂಟ್‌ ಹೊರಡಿಸಿದ್ದು, ಅವರು ಗುರುವಾರ ವಿಚಾರಣೆಗೆ ಹಾಜರಾಗುವ ಸಾಧ್ಯತೆಯಿದೆ. ಬೇಲೆಕೇರಿ ಅದಿರು ಕಳ್ಳಸಾಗಣೆ ಪ್ರಕರಣದಲ್ಲಿ ಸಿಬಿಐ ಈಗಾಗಲೇ ದೋಷಾರೋಪ ಪಟ್ಟಿ ಸಲ್ಲಿಸಿದ್ದು, ಕೋರ್ಟ್‌ ಪ್ರತಿದಿನ ವಿಚಾರಣೆ ನಡೆಸುತ್ತಿದೆ. ಶಾಸಕರಿಬ್ಬರ ಮೇಲೆ ದೋಷಾರೋಪ ಹೊರಿಸುವ ಪ್ರಕ್ರಿಯೆ ಆರಂಭವಾಗಬೇಕಿತ್ತು. ಆದರೆ, ಅವರ ಗೈರುಹಾಜರಿಯಿಂದ ವಿಳಂಬವಾಗುತ್ತಿದೆ ಎನ್ನಲಾಗಿದೆ.

ಆನಂದ್‌ ಸಿಂಗ್‌ ಬೇಲೆಕೇರಿ ಬಂದರಿನಿಂದ ಅದಿರನ್ನು ಅಕ್ರಮವಾಗಿ ಸಾಗಣೆ ಮಾಡಿ, ಎರಡು ಕಂಪನಿಗಳಿಗೆ ಮಾರಿದ್ದ ಆರೋಪ ಹೊತ್ತಿದ್ದಾರೆ. ಈ ಕಂಪನಿಗಳು ಅದಿರನ್ನು ಎಸ್‌.ಬಿ. ಮಿನೆರಲ್ಸ್‌ಗೆ ಮಾರಿದ್ದವು ಎಂದೂ ಹೇಳಲಾಗಿದೆ. ಈ ಪ್ರಕರಣದ ಸಂಬಂಧ ಆನಂದ್‌ ಸಿಂಗ್‌ ಅವರನ್ನು ಸಿಬಿಐನ ಭ್ರಷ್ಟಾಚಾರ ನಿಗ್ರಹ ದಳವು 2013ರ ಅಕ್ಟೋಬರ್‌ನಲ್ಲಿ ಬಂಧಿಸಿತ್ತು. 2015ರ ಏಪ್ರಿಲ್‌ನಲ್ಲಿ ಲೋಕಾಯುಕ್ತ ವಿಶೇಷ ತನಿಖಾ ತಂಡವೂ (ಎಸ್ಐಟಿ) ಇವರನ್ನು ಬಂಧಿಸಿತ್ತು.

ಬಳ್ಳಾರಿ ಮೂಲದ ಈಗಲ್‌ಟನ್‌ ಟ್ರೇಡರ್ಸ್‌‍‍ಪಾಲುದಾರರಾದ ನಾಗೇಂದ್ರ ಅವರೂ ಇದೇ ಬಂದರಿನಿಂದ ಅಕ್ರಮವಾಗಿ ಅದಿರನ್ನು ಸಾಗಿಸಿದ ಆರೋಪ ಎದುರಿಸುತ್ತಿದ್ದಾರೆ. 2013ರ ಅಕ್ಟೋಬರ್‌ನಲ್ಲಿ ಇವರನ್ನೂ ಸಿಬಿಐ ಬಂಧಿಸಿತ್ತು. ಆನಂತರ, ಲೋಕಾಯುಕ್ತ ಎಸ್‌ಐಟಿ 2015ರ ಮಾರ್ಚ್‌ನಲ್ಲಿ ಬಂಧಿಸಿತ್ತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.