ADVERTISEMENT

ಪೊಲೀಸ್ ನೇಮಕಾತಿ ವಿಭಾಗದ ನೌಕರರ ಬಂಧನ

ಪಿಎಸ್‌ಐ ನೇಮಕಾತಿ ಅಕ್ರಮ: ಒಎಂಆರ್‌ ತಿದ್ದಿರುವ ಆರೋಪ

​ಪ್ರಜಾವಾಣಿ ವಾರ್ತೆ
Published 10 ಮೇ 2022, 21:11 IST
Last Updated 10 ಮೇ 2022, 21:11 IST
   

ಬೆಂಗಳೂರು: ‍ಪೊಲೀಸ್ ಸಬ್‌ ಇನ್‌ಸ್ಪೆಕ್ಟರ್ (ಪಿಎಸ್‌ಐ) ನೇಮಕಾತಿ ಅಕ್ರಮ ಪ್ರಕರಣದ ತನಿಖೆ ಚುರುಕುಗೊಳಿಸಿರುವ ಸಿಐಡಿ ಅಧಿಕಾರಿಗಳು, ಪೊಲೀಸ್ ನೇಮಕಾತಿ ವಿಭಾಗದ ನೌಕರರು ಸೇರಿ 6 ಮಂದಿಯನ್ನು ಮಂಗಳವಾರ ಬಂಧಿಸಿದ್ದಾರೆ.

‘ನೇಮಕಾತಿ ವಿಭಾಗದ ಡಿಐಜಿ ಆಪ್ತ ಸಹಾಯಕ ಶ್ರೀನಿವಾಸ್, ಎಫ್‌ಡಿಎ ಹರ್ಷ್, ಭದ್ರತೆಗೆ ನಿಯೋಜನೆಗೊಂಡಿದ್ದ ನಗರ ಸಶಸ್ತ್ರ ಮೀಸಲು ಪಡೆಯ ಸಬ್‌ ಇನ್‌ಸ್ಪೆಕ್ಟರ್‌ಗಳಾದ ಲೋಕೇಶ್, ಮಂಜುನಾಥ್, ಶ್ರೀಧರ್ ಹಾಗೂ ಮಧ್ಯವರ್ತಿ ಶರತ್ ಬಂಧಿತರು. ಇವರನ್ನು ನ್ಯಾಯಾಲಯಕ್ಕೆ ಹಾಜರುಪಡಿಸಿ, ವಿಚಾರಣೆಗೆಂದು 9 ದಿನಗಳವರೆಗೆ ಕಸ್ಟಡಿಗೆ ಪಡೆಯಲಾಗಿದೆ’ ಎಂದು ಸಿಐಡಿ ಮೂಲಗಳು ತಿಳಿಸಿವೆ.

₹40 ಲಕ್ಷವರೆಗೆ ಸಂದಾಯ?: ‘ಮಧ್ಯವರ್ತಿ ಶರತ್ ಹಾಗೂ ಇತರರು, ಪ್ರತಿ ಅಭ್ಯರ್ಥಿಯಿಂದ ₹ 60 ಲಕ್ಷದಿಂದ ₹ 80 ಲಕ್ಷ ವಸೂಲಿ ಮಾಡಿದ್ದರು. ಅದರಲ್ಲಿ ₹ 30 ಲಕ್ಷದಿಂದ ₹ 40 ಲಕ್ಷವನ್ನು ನೇಮಕಾತಿ ವಿಭಾಗದ ನೌಕರರಿಗೆ ನೀಡಿದ್ದರು’ ಎಂದೂ ಮೂಲಗಳು ತಿಳಿಸಿವೆ.

ADVERTISEMENT

ಭದ್ರತಾ ಕೊಠಡಿಯಲ್ಲಿ ಕೃತ್ಯ: ‘ನೇಮಕಾತಿ ವಿಭಾಗದ ಭದ್ರತಾ ಕೊಠಡಿಯಲ್ಲಿ ಒಎಂಆರ್ ಪ್ರತಿಗಳನ್ನು ಇರಿಸಲಾಗಿತ್ತು. ಭದ್ರತೆಗೆ ನಿಯೋಜಿಸಿದ್ದ ಸಿಬ್ಬಂದಿ, ಭದ್ರತಾ ಕೊಠಡಿಯಲ್ಲಿದ್ದ ಒಎಂಆರ್‌ ಪ್ರತಿಗಳ ತಿದ್ದಲು ಸಹಕಾರ ನೀಡಿದ್ದರು’ ಎಂದೂ ಸಿಐಡಿ ಮೂಲಗಳು ತಿಳಿಸಿವೆ.

‘ಭದ್ರತಾ ಕೊಠಡಿಯಲ್ಲಿರುವ ಒಎಂಆರ್ ಪ್ರತಿಗಳನ್ನು, ಬೇರೆಡೆ ತೆಗೆದುಕೊಂಡು ಹೋಗಿ ಭರ್ತಿ ಮಾಡಿರುವ ಅನುಮಾನವೂ ಇದೆ. ಆ ಬಗ್ಗೆ ತನಿಖೆ ಮುಂದುವರಿದಿದೆ’ ಎಂದೂ ಹೇಳಿವೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.