ADVERTISEMENT

ಇಂಥ ರಾಜಕೀಯ ಮಾಡಿ ನೀವು ಸಾಧಿಸಿದ್ದೇನು?

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 25 ಜುಲೈ 2019, 3:56 IST
Last Updated 25 ಜುಲೈ 2019, 3:56 IST
   

ಕ್ಷಿಪ್ರ ರಾಜಕೀಯ ಬೆಳವಣಿಗೆಗಳಿಂದ ನಮ್ಮ ರಾಜ್ಯದೇಶದ ಗಮನವನ್ನು ತನ್ನೆಡೆಗೆ ಸೆಳೆದುಕೊಂಡಿತು. ‘ಇದರಿಂದ ನಮ್ಮ ನಾಯಕರು ಸಾಧಿಸಿದ್ದೇನು?’ ಜುಲೈ 24ರಂದು ದೇಶದ ಪ್ರಮುಖ ದಿನಪತ್ರಿಕೆಗಳಲ್ಲಿ ಪ್ರಕಟವಾಗಿರುವ ಕರ್ನಾಟಕಕ್ಕೆ ಸಂಬಂಧಿಸಿದ ವರದಿಗಳನ್ನು ಗಮನಿಸಿದ ಬಾಕಿ ಉಳಿದ ಪ್ರಶ್ನೆಯಿದು...

***

ಅಧಿಕಾರಕ್ಕಾಗಿರಾಜ್ಯ ರಾಜಕಾರಣದಲ್ಲಿ ನಡೆದ ಹೈಡ್ರಾಮ ಜಾಗತಿಕ ಮಟ್ಟದಲ್ಲಿಸುದ್ದಿಯಾಗಿದೆ. ದಿ ಸ್ಟೇಟ್ಸ್‌ಮನ್, ದಿ ಟೆಲಿಗ್ರಾಫ್‌,ಪಯನಿಯರ್‌ಸೇರಿದಂತೆ ಹಲವು ರಾಷ್ಟ್ರೀಯ ದಿನಪತ್ರಿಕೆಗಳಲ್ಲಿ ಮೊದಲ ಪುಟದಲ್ಲಿಯೇ ಕರ್ನಾಟಕದ ರಾಜಕೀಯ ಬೆಳವಣಿಗೆಗೆ ಸ್ಥಾನ ದೊರೆತಿದೆ. ‘ನ್ಯೂಯಾರ್ಕ್‌ ಟೈಮ್ಸ್‌’ ಸಹ ಕರ್ನಾಟಕ ರಾಜಕಾರಣ ಬೆಳವಣಿಗೆ ಬಗ್ಗೆ ಸುದ್ದಿ ಪ್ರಕಟಿಸಿದೆ.

ADVERTISEMENT

‘Indian PM Modi's Party Wins Confidence Vote in Key Southern State’ (ದಕ್ಷಿಣ ಭಾರತದ ಪ್ರಮುಖ ರಾಜ್ಯದಲ್ಲಿ ಪ್ರಧಾನಿ ನರೇಂದ್ರ ಮೋದಿ ಅವರ ಪಕ್ಷ ವಿಶ್ವಾಸಮತದಲ್ಲಿ ಗೆದ್ದಿದೆ) ಎನ್ನುವುದುದಿ ನ್ಯೂಯಾರ್ಕ್‌ ಟೈಮ್ಸ್‌ಕೊಟ್ಟಿರುವ ಶೀರ್ಷಿಕೆ. ಇದು ಜಾಗತಿಕ ಸುದ್ದಿಸಂಸ್ಥೆ ‘ರಾಯಿಟರ್ಸ್‌’ ಒದಗಿಸಿರುವ ಬರಹ ಎನ್ನುವುದೂ ಉಲ್ಲೇಖಾರ್ಹ.

ಕರ್ನಾಟಕದ ವಿದ್ಯಮಾನ ‘ದಿ ಸ್ಟೇಟ್ಸ್‌ಮನ್’ ಪತ್ರಿಕೆಯ ಲೀಡ್

ಪೂರ್ವ ಮತ್ತು ಈಶಾನ್ಯ ಭಾರತದ ರಾಜ್ಯಗಳಲ್ಲಿ ಜನಪ್ರಿಯವಾಗಿರುವ ‘ದಿ ಟೆಲಿಗ್ರಾಫ್’ ಪತ್ರಿಕೆಯು ‘No surprise, Kumara loses’(ಯಾವುದೇ ಅಚ್ಚರಿಯಿಲ್ಲ– ಕುಮಾರಸ್ವಾಮಿ ಸೋತರು) ಶೀರ್ಷಿಕೆಯಡಿ ಮೊದಲ ಪುಟದಲ್ಲಿಯೇ ಸುದ್ದಿ ಪ್ರಕಟಿಸಿದೆ.

‘14 ತಿಂಗಳಲ್ಲಿಯೇ ಉರುಳಿತು ಕುಮಾರಸ್ವಾಮಿ ಸರ್ಕಾರ’ ಎಂಬರ್ಥದ ಶೀರ್ಷಿಕೆಯೊಂದಿಗೆ ಹಿಂದಿ ದಿನಪತ್ರಿಕೆಅಮರ್‌ ಉಜಾಲ, ‘ನಾಟಕ್ ಖತಂ; ಸರ್ಕಾರ್ ಗಿರ್‌’ ಎಂಬಶೀರ್ಷಿಕೆಯಡಿ ‘ದೈನಿಕ್‌ ಭಾಸ್ಕರ್‌’, ‘ಕರ್‌’ ನಾಟಕ ಅಂತ್ಯ ಎಂದು ಜನಪ್ರಿಯ ಮಲಯಾಳ ದಿನಪತ್ರಿಕೆ ‘ಮಾತೃಭೂಮಿ’ ಮುಖಪುಟದಲ್ಲಿಯೇ ವರದಿ ಪ್ರಕಟಿಸಿವೆ.

‘ಪಯನಿಯರ್’ ಪತ್ರಿಕೆಯಲ್ಲಿ ಕರ್ನಾಟಕದ ರಾಜಕಾರಣ

ರಾಜಕೀಯ ಕಚ್ಚಾಟದಕಾರಣದಿಂದ ನಮ್ಮ ರಾಜ್ಯ, ದೇಶದೆಲ್ಲೆಡೆ ಸುದ್ದಿಯಾಗಿರುವುದು ಕನ್ನಡಿಗರಿಗೆ ಮುಜುಗರದ ವಿಷಯವೇ ಸರಿ. ಅಧಿಕಾರಕ್ಕಾಗಿ ಒಂದು ಪಕ್ಷದಿಂದ ಮತ್ತೊಂದು ಪಕ್ಷಕ್ಕೆ ಹಾರುವ ಶಾಸಕರು, ಮನವೊಲಿಸಿದರೂ ತಿರುಗಿ ನೋಡದ ಶಾಸಕರಿಗಾಗಿ ಹರಸಾಹಸ ಪಡುವ ಮೈತ್ರಿ ಪಕ್ಷದ ನಾಯಕರು, ಮುಖ್ಯಮಂತ್ರಿ ಪಟ್ಟಕ್ಕಾಗಿ ಹಾತೊರೆಯುತ್ತಿರುವ ಬಿಜೆಪಿ ನಾಯಕರು ರಾಜ್ಯ ಮರ್ಯಾದೆಯನ್ನು ಹರಾಜು ಹಾಕುವಲ್ಲಿ ನಿಜಕ್ಕೂ ಯಶಸ್ವಿಯಾಗಿದ್ದಾರೆ ಎಂಬುದು ಇಂದಿನ ದಿನಪತ್ರಿಕೆಗಳನ್ನು ನೋಡಿದರೆ ಅರ್ಥವಾಗುತ್ತೆ.

ಜಿಂದಾಲ್‌ ಕಂಪನಿಗೆ ಭೂಮಿ ನೀಡಬಾರದು ಎನ್ನುವ ಕೂಗಿನೊಂದಿಗೆ ಮೊದಲು ಶಾಸಕ ಆನಂದ್‌ ಸಿಂಗ್ ರಾಜೀನಾಮೆ ನೀಡಿದರು. ಆನಂತರ ಕಾಂಗ್ರೆಸ್‌ ಪಕ್ಷದ ಹಿರಿಯ ಮುಖಂಡ ರಾಮಲಿಂಗಾರೆಡ್ಡಿ ರಾಜೀನಾಮೆ ನೀಡಿ ಮೈತ್ರಿ ನಾಯಕರಲ್ಲಿ ಆತಂಕ ಹೆಚ್ಚಿಸಿದರು. ಇದಾದ ನಂತರ ಒಬ್ಬೊಬ್ಬರೆ ಅತೃಪ್ತ ಶಾಸಕರು ರಾಜೀನಾಮೆ ಸೊಲ್ಲೆತ್ತುತ್ತಾ ವಿಧಾನಸೌಧದ ಮೆಟ್ಟಿಲೇರಿದರು. ಇಲ್ಲಿಂದ ರಾಜೀನಾಮೆಯ ನಾಟಕ ಶುರುವಾಯಿತು.

‘ಅಮರ್ ಉಜಾಲಾ’ ಹಿಂದಿ ಪತ್ರಿಕೆ

ರಾಜ್ಯದಲ್ಲಿಯೇ ನಡೆಯುತ್ತಿದ್ದ ಈ ಗದ್ದಲ–ಗಲಭೆ ಮುಂಬೈಗೆ ಶಿಫ್ಟ್‌ ಆಯಿತು. ಅಲ್ಲಿಯವರೆಗೆ ರಾಜ್ಯದಲ್ಲಿ ಮಾತ್ರ ಪ್ರಮುಖ ಸುದ್ದಿಯಾಗಿದ್ದ ರಾಜ್ಯ ರಾಜಕಾರಣ ರಾಷ್ಟ್ರಮಟ್ಟದ ಸುದ್ದಿಪತ್ರಿಕೆಗಳಲ್ಲಿಯೂ ಸುದ್ದಿಯಾಯಿತು. ‘ಕರ್ನಾಟಕ ಬಿಕ್ಕಟ್ಟು’, ‘ಕರ್‌ ನಾಟಕ’ ಎನ್ನುವ ಟ್ಯಾಗ್‌ಲೈನ್‌ನಲ್ಲಿ ದೇಶದ ಬಹುತೇಕ ಸುದ್ದಿವಾಹಿನಿ, ಪತ್ರಿಕೆಗಳಲ್ಲಿರಾಜ್ಯದ ಶಾಸಕರ ನಡವಳಿಕೆಗಳು ಚಿತ್ರಿತವಾದವು. ಇಲ್ಲಿಗೆ ಮುಗಿಯಲಿಲ್ಲ, ಈ ವಿಷಯ ಸುಪ್ರೀಂಕೋರ್ಟ್‌ ಮೆಟ್ಟಿಲೇರಿತು. ತಮ್ಮ ರಾಜೀನಾಮೆಯನ್ನು ಸ್ಪೀಕರ್ ಅಂಗೀಕರಿಸುತ್ತಿಲ್ಲ ಎಂದು ಅತೃಪ್ತ ಶಾಸಕರು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿದರು. ಆಗಿನಿಂದ ರಾಜ್ಯ ರಾಜಕಾರಣ ಬೃಹನ್ನಾಟಕ ಲೋಕವಿಖ್ಯಾತವಾಯಿತು.

ವಿಧಾನಸಭಾ ಅಧಿವೇಶ ಪ್ರಾರಂಭವಾದಾಗ ಈ ಎಲ್ಲಾ ಆಟಕ್ಕೆ ಪೂರ್ಣವಿರಾಮ ಸಿಗುತ್ತದೆ ಎಂದೇ ಜನರು ನಿರೀಕ್ಷಿಸಿದ್ದರು. ಆದರೆ, ಆ ನಿರೀಕ್ಷೆ ಹುಸಿಯಾಗಿತ್ತು. ಸದನದಲ್ಲಿ ಒಬ್ಬೊಬ್ಬ ಶಾಸಕರು ಆಡುವ ಮಾತುಗಳು ರಾಜ್ಯ ರಾಜಕಾರಣದಲ್ಲಿನ ಹೊಸಲನ್ನು ಜಗತ್ತಿಗೆ ಪ್ರದರ್ಶಿಸಿತು. ಕುದುರೆ ವ್ಯಾಪಾರ, ಅಧಿಕಾರಕ್ಕೆ ಪಕ್ಷಾಂತರ, ಹಣದ ಆಮೀಷ... ಹೀಗೆ ಅನೇಕ ವಿಚಾರಗಳು ಇಲ್ಲಿ ಬೆತ್ತಲಾಯಿತು. ಅಷ್ಟೇ ಅಲ್ಲ, ಕಲಾಪದ ಕಡತಗಳಲ್ಲಿ ಈ ಬೆತ್ತಲೆ ಜಗತ್ತು ಶಾಶ್ವತವಾಗಿ ಉಳಿದಿರುತ್ತದೆ.

ಉರ್ದು ಪತ್ರಿಕೆ ‘ಸಚ್‌ ಕಿ ಆವಾಜ್‌’

ತಮ್ಮ ಬತ್ತಳಿಕೆಯಲ್ಲಿದ್ದ ಎಲ್ಲಾ ಬಾಣಗಳನ್ನು ಪ್ರಯೋಗಿಸಿದ ನಂತರ ಮೈತ್ರಿ ನಾಯಕರು ಕೊನೆಗೂ ವಿಶ್ವಾಸಮತ ಯಾಚನೆ ಮಾಡಿದರು. ಬಹುಮತ ಸಾಬೀತಾಗದೆ ಕುಮಾರಸ್ವಾಮಿ ನೇತೃತ್ವದ ಸರ್ಕಾರ ಪತನವಾಯಿತು. ಶತಪ್ರಯತ್ನ ಮಾಡಿದ ನಂತರವೂ ಶಾಸಕರು ಬಾರದಿದ್ದಾಗಲೇ ಮುಖ್ಯಮಂತ್ರಿ ಸ್ಥಾನಕ್ಕೆ ಕುಮಾರಸ್ವಾಮಿ ರಾಜೀನಾಮೆ ನೀಡಿದ್ದರೆ, ಜನರ ಬಾಯಿಯಲ್ಲಿ ‘ಹೊಲಸು ರಾಜಕೀಯ’ ಎನ್ನುವ ಮಾತುಗಳು ಬಹುಶಃಬರುತ್ತಿರಲಿಲ್ಲ.

ಸ್ವತಃ ಕುಮಾರಸ್ವಾಮಿ ಅವರೇ ಸದನದಲ್ಲಿ ಈ ಬಗ್ಗೆ ಪ್ರಸ್ತಾಪಿಸಿದರು. 'ಕಳೆದ ನಾಲ್ಕು ದಿನಗಳಿಂದ ನಡೆದ ಘಟನೆಗಳು ಏನಿವೆಯೋ, ಅದಕ್ಕೆ ನಾಡಿನ ಜನತೆ ನಮ್ಮನ್ನು ಕ್ಷಮಿಸಲಾರರು. ಇಷ್ಟು ದಿನ ಆದರೂ ಕುಮಾರಸ್ವಾಮಿ ರಾಜೀನಾಮೆ ಕೊಡದೇ ಅಧಿಕಾರಕ್ಕೆ ಅಂಟಿಕೊಂಡು ಕೂರಲೆಂದೇ ಕಾಲಹರಣ ಮಾಡುತ್ತಿದ್ದಾರೆ ಎಂಬ ಚರ್ಚೆ ನಡೆದಿದೆ. ನಿಮಗಾದ ನೋವಿಗೆ ಕ್ಷಮೆಯಾಚಿಸುತ್ತೇನೆ’ ಎಂದು ರಾಜ್ಯದ ಜನರ ಎದರು ತಲೆಬಾಗಿದರು. ಎಲ್ಲಾ ರಂಪಾಟ ಮಾಡಿ, ರಾಷ್ಟಮಟ್ಟದಲ್ಲಿ ರಾಜ್ಯವನ್ನು ಕೀಳಾಗಿ ಬಿಂಬಿಸಿದ ನಂತರ ಕ್ಷಮೆ ಕೇಳಿದರೆ ಏನು ಪ್ರಯೋಜನ?

‘99 ರನೌಟ್’ ಎಂದ ‘ಸಾಕ್ಷಿ’ ತೆಲುಗು ದಿನಪತ್ರಿಕೆ

ಕಳೆದ ವರ್ಷದಲ್ಲಿ ನಡೆದ ರಾಜ್ಯ ವಿಧಾನಸಭಾ ಚುನಾವಣೆ ಫಲಿತಾಂಶ ಬಂದಾಗಿನಿಂದಲೂ 103 ಸ್ಥಾನಗಳನ್ನು ಪಡೆದಿದ್ದ ಬಿಜೆಪಿ ಅಧಿಕಾರಕ್ಕಾಗಿ ಹಾತೊರೆಯುತ್ತಿತ್ತು. ಮೈತ್ರಿ ಸರ್ಕಾರ ರಚನೆಯಾದ ನಂತರವೂ ಅಲ್ಲಿನ ಶಾಸಕರನ್ನು ಸೆಳೆಯುವ ಪ್ರಯತ್ನವನ್ನು ಬಿಜೆಪಿ ಮಾಡುತ್ತಲೇ ಇದೆ ಎಂದು ಕಾಂಗ್ರೆಸ್‌–ಜೆಡಿಎಸ್‌ ಮುಖಂಡರು ಆರೋಪಿಸಿದ್ದರು. ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷ ಬಿ.ಎಸ್‌.ಯಡಿಯೂರಪ್ಪ ಅವರೇ ಖುದ್ದಾಗಿ ಶಾಸಕರಿಗೆ ಆಮಿಷವೊಡ್ಡಿದ ಆಡಿಯೊವೂ ಬಹಿರಂಗಗೊಂಡು ಕುದುರೆವ್ಯಾಪಾರ ನಡೆಯುತ್ತಿದೆ ಎನ್ನುವುವಕ್ಕೆ ಸಾಕ್ಷಿ ಒದಗಿಸಿತ್ತು. ಈ ಬಾರಿ 15 ಶಾಸಕರು ಮೈತ್ರಿ ಸರ್ಕಾರದಿಂದ ಮುನಿಸಿಕೊಂಡು ರಾಜೀನಾಮೆ ನೀಡಿರುವ ಹಿಂದೆ ಬಿಜೆಪಿ ಕೈವಾಡದ ಬಗ್ಗೆ ಹೊಸದಾಗಿ ಪ್ರಸ್ತಾಪಿಸಬೇಕಾದ ಅಗತ್ಯವಿಲ್ಲ.

ಆದರೆ, ಈ ಎಲ್ಲಾ ಘಟನೆಗಳಿಂದ ದೇಶದ ಜನರ ದೃಷ್ಟಿಯಲ್ಲಿ ಕರ್ನಾಟಕದ ಶಾಸಕರ ಮಾನ ಹರಾಜಾಯಿತು. ಅಷ್ಟೇ ಅಲ್ಲ,ಅವರನ್ನು ಆಯ್ಕೆ ಮಾಡಿದ ಜನರು ತಲೆ ತಗ್ಗಿಸುವಂತೆ ಆಯಿತು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.