ADVERTISEMENT

ಕೇರಳ ಗಡಿ ಪ್ರವೇಶಿಸದಂತೆ ಆಂಬುಲೆನ್ಸ್ ತಡೆದ ಪೊಲೀಸರು: ಬಂಟ್ವಾಳದ ಮಹಿಳೆ ಸಾವು

​ಪ್ರಜಾವಾಣಿ ವಾರ್ತೆ
Published 30 ಮಾರ್ಚ್ 2020, 1:47 IST
Last Updated 30 ಮಾರ್ಚ್ 2020, 1:47 IST
   

ಮಂಗಳೂರು: ಕೇರಳದ ಕಾಸರಗೋಡು ಜಿಲ್ಲೆಯ ಮಂಜೇಶ್ವರದಲ್ಲಿ ಮೊಮ್ಮಗಳ ಮನೆಯಲ್ಲಿದ್ದ ಬಂಟ್ವಾಳ ನಿವಾಸಿ ಮಹಿಳೆಯೊಬ್ಬರನ್ನು ಚಿಕಿತ್ಸೆಗಾಗಿ ಕರೆತಂದಿದ್ದ ಆಂಬುಲೆನ್ಸ್‌ಗೆ ಶನಿವಾರ ಪೊಲೀಸರು ರಾಜ್ಯದ ಗಡಿ ಪ್ರವೇಶಿಸಲು ತಡೆಯೊಡ್ಡಿದ್ದು, ವಾಪಸ್‌ ತೆರಳಿದ್ದ ರೋಗಿ ಅಲ್ಲಿಯೇ ಮೃತಪಟ್ಟಿದ್ದಾರೆ.

ಬಂಟ್ವಾಳ ನಿವಾಸಿ ಪಾತುಞಿ (70) ಮೃತರು. ಇವರು ಮಂಜೇಶ್ವರ ತಾಲ್ಲೂಕಿನ ಉದ್ಯಾವರ ಮಾಡ ಎಂಬಲ್ಲಿರುವ ತನ್ನ ಮೊಮ್ಮಗಳ ಮನೆಗೆ ತರೆಳಿದ್ದರು. ಶನಿವಾರ ಆರೋಗ್ಯದಲ್ಲಿ ಏರುಪೇರಾಗಿತ್ತು. ಈ ಹಿಂದೆ ಮಂಗಳೂರಿನ ಆಸ್ಪತ್ರೆಯಲ್ಲಿ ಅವರು ಚಿಕಿತ್ಸೆ ಪಡೆದಿದ್ದರು. ಅಲ್ಲಿಯೇ ಚಿಕಿತ್ಸೆ ಕೊಡಿಸಲು ಕುಟುಂಬದ ಸದಸ್ಯರು ಶನಿವಾರ ಸಂಜೆ ಆಂಬುಲೆನ್ಸ್‌ನಲ್ಲಿ ಮಂಗಳೂರಿನತ್ತ ಕರೆತಂದಿದ್ದರು.

ಕೊರೊನಾ ವೈರಸ್‌ ಸೋಂಕು ಹರಡದಂತೆ ತಡೆಯುವ ಉದ್ದೇಶದಿಂದ ಕೇರಳ ರಾಜ್ಯವನ್ನು ಸಂಪರ್ಕಿಸುವ ಎಲ್ಲ ರಸ್ತೆಗಳಲ್ಲಿ ಪ್ರಯಾಣಿಕ ವಾಹನ ಸಂಚಾರ ಬಂದ್‌ ಮಾಡಲಾಗಿದೆ. ಅಗತ್ಯ ವಸ್ತುಗಳನ್ನು ಸಾಗಿಸುವ ಸರಕು ಸಾಗಣೆ ವಾಹನಗಳ ಸಂಚಾರಕ್ಕೆ ಮಾತ್ರ ಅವಕಾಶ ನೀಡಲಾಗಿದೆ. ಆಂಬುಲೆನ್ಸ್‌ಗಳನ್ನೂ ದಕ್ಷಿಣ ಕನ್ನಡ ಜಿಲ್ಲೆಯೊಳಕ್ಕೆ ಬಿಡುತ್ತಿಲ್ಲ. ಪಾತುಞಿ ಅವರನ್ನು ಕರೆ ತಂದ ಆಂಬುಲೆನ್ಸ್‌ ಅನ್ನು ತಲಪಾಡಿ ಗಡಿಯಲ್ಲಿ ತಡೆದ ಪೊಲೀಸರು, ವಾಪಸ್‌ ಕಳುಹಿಸಿದ್ದರು. ಬೇರೆ ಮಾರ್ಗಗಳಲ್ಲಿ ಮಂಗಳೂರಿಗೆ ಬರಲು ಆಂಬುಲೆನ್ಸ್‌ ಚಾಲಕ ಯತ್ನಿಸಿದ್ದರೂ ಸಾಧ್ಯವಾಗಿರಲಿಲ್ಲ. ಬಳಿಕ ರೋಗಿಯನ್ನು ಮಾಡದಲ್ಲಿರುವ ಮೊಮ್ಮಗಳ ಮನೆಗೆ ವಾಪಸ್‌ ಕರೆದೊಯ್ಯಲಾಗಿತ್ತು. ಭಾನುವಾರ ಬೆಳಿಗ್ಗೆ ಅವರು ಮೃತಪಟ್ಟಿದ್ದಾರೆ.

ADVERTISEMENT

‘ಲಾಕ್‌ಡೌನ್‌ ಕಾರಣದಿಂದ ಮಹಿಳೆ ಕೇರಳದಲ್ಲಿ ಉಳಿದಿದ್ದರು. ಅವರು ಕರ್ನಾಟಕದ ನಿವಾಸಿ ಎಂದು ನಾನು ಹೇಳಿದರೂ ಪೊಲೀಸರು ಕೇಳಿಸಿಕೊಳ್ಳಲಿಲ್ಲ. ಪರಿಣಾಮವಾಗಿ ಅವರ ಜೀವವೇ ಹೋಯಿತು’ ಎಂದು ಆಂಬುಲೆನ್ಸ್‌ ಚಾಲಕ ಅಸ್ಲಾಂ ಕುಂಜತ್ತೂರು ದೂರಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.