ADVERTISEMENT

ಬೀದಿ ವ್ಯಾಪಾರಿಗಳಿಗೆ ಗುರುತಿನ ಚೀಟಿ ವಿತರಿಸಲು ಮನವಿ

​ಪ್ರಜಾವಾಣಿ ವಾರ್ತೆ
Published 17 ಡಿಸೆಂಬರ್ 2025, 23:30 IST
Last Updated 17 ಡಿಸೆಂಬರ್ 2025, 23:30 IST
<div class="paragraphs"><p>ಬೀದಿ ವ್ಯಾಪಾರಿ</p></div>

ಬೀದಿ ವ್ಯಾಪಾರಿ

   

ಬೆಂಗಳೂರು: ನಗರದಲ್ಲಿ ಬೀದಿ ವ್ಯಾಪರಿಗಳಿಗೆ ಕಿರುಕುಳ ನೀಡುವುದನ್ನು ನಿಲ್ಲಿಸಬೇಕು. ಅವರಿಗೆ ಗುರುತಿನ ಚೀಟಿಗಳನ್ನು ವಿತರಿಸಬೇಕು ಎಂದು ಕರ್ನಾಟಕ ಪ್ರಗತಿಪರ ಬೀದಿ ವ್ಯಾಪಾರಿಗಳ ಸಂಘದ (ಕೆಪಿಬಿವಿಎಸ್) ಅಧ್ಯಕ್ಷ ಬಾಬು ಆಗ್ರಹಿಸಿದರು.

ಬುಧವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಈಗಾಗಲೇ ಗುರುತಿನ ಚೀಟಿಗಳು ಮುದ್ರಣಗೊಂಡಿವೆ. ಆದರೂ ಬೀದಿ ವ್ಯಾಪಾರಿಗಳಿಗೆ ವಿತರಿಸಿಲ್ಲ. ಪೊಲೀಸರು ಕಾನೂನುಬಾಹಿರವಾಗಿ ದಂಡ ವಿಧಿಸುತ್ತಿದ್ದಾರೆ. ಹಲವೆಡೆ ಎತ್ತಂಗಡಿಯನ್ನೂ ಮಾಡಲಾಗುತ್ತಿದೆ’ ಎಂದು ತಿಳಿಸಿದರು.

ADVERTISEMENT

ಗಾಂಧಿ ಬಜಾರ್‌ನ ಹೂವಿನ ವ್ಯಾಪಾರಿ ವನಜಾಕ್ಷಿ ಮಾತನಾಡಿ, ‘ನಗರದ ಎಲ್ಲ ಮಾರುಕಟ್ಟೆಗಳಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಬೇಕು. ಮಹಿಳಾ ವ್ಯಾಪಾರಿಗಳಿಗೆ ಉಚಿತವಾಗಿ ಶೌಚಾಲಯ ವ್ಯವಸ್ಥೆ ಕಲ್ಪಿಸಿಕೊಡಬೇಕು’ ಎಂದು ಒತ್ತಾಯಿಸಿದರು. 

ಮಳೆ, ಚಳಿ, ಬಿಸಿಲುಗಳಿಂದ ರಕ್ಷಿಸಿಕೊಳ್ಳಲು ಛತ್ರಿ, ಟೆಂಟ್‌, ಟಾರ್ಪಲ್‌ಗಳನ್ನು ಅಳವಡಿಸಿಕೊಳ್ಳಲು ಪಾಲಿಕೆ ಅವಕಾಶ ನೀಡಬೇಕು. ಇಲ್ಲವಾದಲ್ಲಿ ರಕ್ಷಣಾ ಸಾಮಗ್ರಿಗಳನ್ನು ವಿತರಿಸಬೇಕು ಎಂದು ಶಿವಾಜಿನಗರ ಪಟ್ಟಣ ವ್ಯಾಪಾರ ಸಮಿತಿ ಸದಸ್ಯ ಜಮೀರ್ ಆಗ್ರಹಿಸಿದರು.

ಬೀದಿ ವ್ಯಾಪಾರಿಗಳ ರಕ್ಷಣೆಗಾಗಿ ಪಟ್ಟಣ ವ್ಯಾಪಾರ ಸಮಿತಿ ರಚನೆಯಾಗಬೇಕು. ಅವರ ಮೇಲಿನ ಕಿರುಕುಳ ತಡೆದು, ಎಲ್ಲ ಮೂಲ ಸೌಕರ್ಯಗಳನ್ನು ಒದಗಿಸಿಕೊಡಬೇಕು ಎಂದು ಕೆಪಿಬಿವಿಎಸ್‌ನ ಕಾನೂನು ಸಲಹಾ ಅಧಿಕಾರಿ ವಿನಯ್ ಶ್ರೀನಿವಾಸ್ ತಿಳಿಸಿದರು.

‘ಡಿಸೆಂಬರ್‌ ಅಂತ್ಯದೊಳಗೆ ನಮ್ಮ ಎಲ್ಲ ಹಕ್ಕೊತ್ತಾಯಗಳನ್ನು ಈಡೇರಿಸದಿದ್ದಲ್ಲಿ, ಜನವರಿಯಲ್ಲಿ ಬೃಹತ್ ಪ್ರತಿಭಟನೆ ಕೈಗೊಳ್ಳಲಾಗುವುದು’ ಎಂದು ಬೀದಿ ವ್ಯಾಪಾರಿಗಳು ಎಚ್ಚರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.