ADVERTISEMENT

ಡಿಕೆಶಿ ಬಂಧನ: ರಾಮನಗರ ಜಿಲ್ಲೆಯಾದ್ಯಂತ ಬಂದ್ ಆರಂಭ

​ಪ್ರಜಾವಾಣಿ ವಾರ್ತೆ
Published 5 ಸೆಪ್ಟೆಂಬರ್ 2019, 2:46 IST
Last Updated 5 ಸೆಪ್ಟೆಂಬರ್ 2019, 2:46 IST
   

ರಾಮನಗರ:ಕಾಂಗ್ರೆಸ್‌ ಮುಖಂಡ ಡಿ.ಕೆ. ಶಿವಕುಮಾರ್‌ ಬಂಧನ ಖಂಡಿಸಿಜಿಲ್ಲೆಯಾದ್ಯಂತ ಗುರುವಾರ ಬಂದ್ ಆಚರಣೆಗೆ ಕಾಂಗ್ರೆಸ್ ಹಾಗೂ ಜೆಡಿಎಸ್ ಕರೆ ನೀಡಿದ್ದು, ಸದ್ಯಕ್ಕೆ ಯಾವುದೇ ತೊಂದರೆಯಾಗಿಲ್ಲ.

ಬೆಂಗಳೂರು-ಮೈಸೂರು ಹೆದ್ದಾರಿಯಲ್ಲಿ ಸದ್ಯ ವಾಹನಗಳ ಸಂಚಾರ ಎಂದಿನಂತೆ ಇದೆ. ಕೆಎಸ್‌ಆರ್‌ಟಿಸಿಬಸ್‌ಗಳು ವಿರಳವಾಗಿ ಸಂಚರಿಸುತ್ತಿವೆ. ಆದರೆ ಗ್ರಾಮಾಂತರ ಪ್ರದೇಶಗಳಿಗೆ ಸಾರಿಗೆ ಸೇವೆಯನ್ನು ಸ್ಥಗಿತಗೊಳಿಸಲಾಗಿದೆ.

ಶಾಲಾ – ಕಾಲೇಜುಗಳಿಗೆ ರಜೆ ಘೋಷಿಸಲಾಗಿದೆ. ಪೆಟ್ರೋಲ್ ಹಾಕಿಸಲು ಬಂಕ್‌ಗಳಲ್ಲಿ ಜನರ ಸಾಲು ಇದೆ.

ADVERTISEMENT

ಭಾರಿ ಭದ್ರತೆ: ಸರ್ಕಾರ ಜಿಲ್ಲೆಯಲ್ಲಿ ಭಾರಿ ಬಂದೋಬಸ್ತ್ ಕೈಗೊಂಡಿದ್ದು, ಸದ್ಯ ಮೂವರು ಐಪಿಎಸ್, ಹತ್ತು ಡಿವೈಎಸ್ಪಿ, ಮೂವತ್ತು ಇನ್ಸ್ಪೆಕ್ಟರ್‌ಗಳು ಸೇರಿದಂತೆ ಸಾವಿರ ಪೊಲೀಸರು ಕರ್ತವ್ಯಕ್ಕೆ ಹಾಜರಾಗಿದ್ದಾರೆ. 15 ಕೆಎಸ್‌ಆರ್‌ಪಿ, 21 ಡಿಎಆರ್ ತುಕಡಿಗಳನ್ನು ನಿಯೋಜಿಸಲಾಗಿದೆ.

ಇಂದು ಮಾಗಡಿ ಬಂದ್‌ಗೆ ಕರೆ
ಮಾಗಡಿ:
‘ಡಿ.ಕೆ.ಶಿವಕುಮಾರ್‌ ಬಂಧನ ಖಂಡಿಸಿ ಕಾಂಗ್ರೆಸ್‌ ಪಕ್ಷದ ವತಿಯಿಂದ ಗುರುವಾರಬೆಳಿಗ್ಗೆ 8ಗಂಟೆಯಿಂದ ಸಂಜೆ 6ರವರೆಗೆ ಮಾಗಡಿ ತಾಲ್ಲೂಕಿನಲ್ಲಿ ಬಂದ್‌ ಕೈಗೊಳ್ಳಲಾಗುವುದು. ಸಾರ್ವಜನಿಕರು ಸಹಕರಿಸಬೇಕು’ ಎಂದು ಜಿಲ್ಲಾ ಪಂಚಾಯಿತಿ ಸದಸ್ಯ ಎಚ್‌.ಎನ್‌.ಅಶೋಕ್‌ ತಿಳಿಸಿದರು.

ಸುದ್ದಿಗಾರರೊಂದಿಗೆ ಅವರು ಮಾತನಾಡಿ, ‘ಬಿಜೆಪಿಯ ಜನ ವಿರೋಧಿ ನೀತಿಯನ್ನು ಎಲ್ಲರೂ ಖಂಡಿಸಲೇಬೇಕು. ದೇಶದಲ್ಲಿ ಅಘೋಷಿತ ತುರ್ತುಪರಿಸ್ಥಿತಿ ತಯಾರಿ ನಡೆದಿದೆ. ಕಾಂಗ್ರೆಸ್‌ ಪಕ್ಷದ ಪ್ರಬಲ ನಾಯಕರಿಗೆ ಕಿರುಕುಳ ನೀಡಿ, ಪಕ್ಷವನ್ನು ನಿರ್ನಾಮ ಮಾಡುತ್ತೇವೆ ಎಂಬ ಭ್ರಮೆಯಲ್ಲಿ ಇರುವ ಮೋದಿ ಮತ್ತು ಅಮಿತ್‌ ಶಾ ಜೋಡಿ ಪ್ರಜಾರಾಜ್ಯದ ವಿರುದ್ಧ ನಡೆಯುತ್ತಿದ್ದಾರೆ’ ಎಂದರು.

ಬೆಂಗಳೂರು ಹಾಲು ಒಕ್ಕೂಟದ ಅಧ್ಯಕ್ಷ ನರಸಿಂಹಮೂರ್ತಿ ಮಾತನಾಡಿ, ‘ಡಿ.ಕೆ.ಶಿವಕುಮಾರ್‌ರನ್ನು ರಾಜಕೀಯವಾಗಿ ಮುಗಿಸಲು ಸಾಧ್ಯವಿಲ್ಲ. ಶಾಂತಿಯುತ ಬಂದ್‌ಗೆ ಎಲ್ಲರೂ ಸಹಕರಿಸಬೇಕು’ ಎಂದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.