
ವಿಧಾನಸೌಧದಲ್ಲಿ ಶುಕ್ರವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ನಡೆದ ಸಭೆ
– ಪ್ರಜಾವಾಣಿ ಚಿತ್ರ
ಬೆಂಗಳೂರು: ಸಕ್ಕರೆ ಕಾರ್ಖಾನೆ ಮಾಲೀಕರು, ರೈತ ಮುಖಂಡರ ಜತೆ ನಡೆಸಿದ ಸುದೀರ್ಘ ಮಾತುಕತೆಯ ನಂತರ ರಾಜ್ಯ ಸರ್ಕಾರ ಪ್ರತಿ ಟನ್ ಕಬ್ಬಿನ ಪರಿಷ್ಕೃತ ಬೆಲೆಯನ್ನು ₹3,300ಕ್ಕೆ ನಿಗದಿ ಮಾಡಿದೆ.
ವಿಧಾನಸೌಧದಲ್ಲಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಧ್ಯಕ್ಷತೆಯಲ್ಲಿ ಶುಕ್ರವಾರ ಸತತ ಏಳು ಗಂಟೆ ನಡೆದ ಸಭೆಯಲ್ಲಿ ಈ ನಿರ್ಧಾರಕ್ಕೆ ಬರಲಾಗಿದೆ. ಕಾರ್ಖಾನೆಗಳು ಒಂದು ಟನ್‌ಗೆ ಹಿಂದೆ ನಿಗದಿಯಾಗಿದ್ದ ₹3,200ರ ಜತೆಗೆ ಹೆಚ್ಚುವರಿಯಾಗಿ ₹50 ಹಾಗೂ ರಾಜ್ಯ ಸರ್ಕಾರವು ಒಂದು ಅವಧಿಯ ಪ್ರೋತ್ಸಾಹ ಧನವಾಗಿ ₹50 ಪಾವತಿಸಲಿದೆ. ಸಾಗಣೆ ಮತ್ತು ಕಟಾವು ವೆಚ್ಚ ಹೊರತುಪಡಿಸಿ ಶೇ 11.25 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ₹3,300 ಹಾಗೂ ಶೇ 10.5 ಇಳುವರಿ ಪ್ರಮಾಣ ಇರುವ ಕಬ್ಬಿಗೆ ₹3,200 ದರ ಸಿಗಲಿದೆ.
ಕೇಂದ್ರ ಸರ್ಕಾರ ಕಟಾವು ಮತ್ತು ಸಾಗಣೆ ವೆಚ್ಚ ಸೇರಿಸಿ ಶೇ 10.5 ಇಳುವರಿ ಪ್ರಮಾಣ ಇರುವ ಪ್ರತಿ ಟನ್ ಕಬ್ಬಿಗೆ ನ್ಯಾಯಯುತ ಮತ್ತು ಲಾಭದಾಯಕ ದರ (ಎಫ್‌ಆರ್‌ಪಿ) ₹3,550 ನಿಗದಿಪಡಿಸಿದೆ. ಸಾಗಣೆ, ಕಟಾವು ವೆಚ್ಚ ಹೊರತುಪಡಿಸಿ ಸಕ್ಕರೆ ಕಾರ್ಖಾನೆಗಳಿಗೆ ಪೂರೈಸುವ ಕಬ್ಬಿಗೆ ₹3,500 ದರ ನೀಡಬೇಕು ಎಂದು ಆಗ್ರಹಿಸಿ ಬೆಳಗಾವಿ, ವಿಜಯಪುರ, ಬಾಗಲಕೋಟೆ, ಹಾವೇರಿ ಮತ್ತು ಕಲಬುರಗಿ ಸೇರಿದಂತೆ ವಿವಿಧೆಡೆ ರೈತರು ಅ.30ರಿಂದ ಪ್ರತಿಭಟನೆ ನಡೆಸುತ್ತಿದ್ದರು. ಸಚಿವರು ಸ್ಥಳಕ್ಕೆ ತೆರಳಿ ಮಾತುಕತೆ ನಡೆಸಿದರೂ ರೈತರು ಪಟ್ಟು ಸಡಿಲಿಸಿರಲಿಲ್ಲ. ಬೆಳಗಾವಿ ಜಿಲ್ಲಾಧಿಕಾರಿ ನಿಗದಿ ಮಾಡಿದ್ದ ₹3,200 ದರವನ್ನೂ ಬೆಳೆಗಾರರು ತಿರಸ್ಕರಿಸಿದ್ದರು.
ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಸಕ್ಕರೆ ಕಾರ್ಖಾನೆ ಮಾಲೀಕರು ಮತ್ತು ರೈತ ಮುಖಂಡರ ಸಭೆ ನಡೆಸಿ, ಪರಿಷ್ಕೃತ ದರ ಘೋಷಣೆ ಮಾಡಿದರು. ಕಬ್ಬಿನ ಇಳುವರಿ ಪ್ರಮಾಣ ಜಿಲ್ಲೆಯಿಂದ ಜಿಲ್ಲೆಗೆ ವ್ಯತ್ಯಾಸವಾಗುತ್ತದೆ. ಹಾಗಾಗಿ, ಎಲ್ಲ ಇಳುವರಿ ಪ್ರಮಾಣದ ಕಬ್ಬಿಗೂ ಪ್ರತಿ ಟನ್‌ಗೆ ₹100ರೂ ಹೆಚ್ಚಳ ಅನ್ವಯವಾಗಲಿದೆ ಎಂದು ಖಚಿತಪಡಿಸಿದರು.
ಕೇಂದ್ರದ ಅಧಿಕಾರ, ರಾಜ್ಯ ಹೇಗೆ ಹೊಣೆ?:
ಸಭೆಯಲ್ಲಿ ಮಾತನಾಡಿದ ಮುಖ್ಯಮಂತ್ರಿ ಸಿದ್ದರಾಮಯ್ಯ, ‘ರಾಜ್ಯ ಸರ್ಕಾರದ ವ್ಯಾಪ್ತಿಗೆ ಬರುವ ಸಮಸ್ಯೆಗಳನ್ನು ಬಗೆಹರಿಸಲು ಸಿದ್ದರಿದ್ದೇವೆ. ಕೇಂದ್ರ ಸರ್ಕಾರ ಪರಿಹರಿಸಬೇಕಾದ ಸಮಸ್ಯೆಗೂ ರಾಜ್ಯ ಸರ್ಕಾರವನ್ನು ಒತ್ತಾಯಿಸಿದರೆ ಹೇಗೆ’ ಎಂದು ರೈತ ಮುಖಂಡರನ್ನು ಪ್ರಶ್ನಿಸಿದರು.
ಸಕ್ಕರೆಗೆ ಕನಿಷ್ಠ ಬೆಂಬಲ ಬೆಲೆ (ಎಂಎಸ್‌ಪಿ), ಕಬ್ಬಿಗೆ ಎಫ್‌ಆರ್‌ಪಿ ನಿಗದಿ ಮಾಡುವುದು ಕೇಂದ್ರ ಸರ್ಕಾರ. ಎಥೆನಾಲ್ ಹಂಚಿಕೆ, ಸಕ್ಕರೆ ರಫ್ತು ಮಿತಿ ನಿಗದಿಪಡಿಸುವುದೂ ಕೇಂದ್ರ ಸರ್ಕಾರ. ಅವರಿಂದ ಆಗಿರುವ ಸಮಸ್ಯೆಗೆ ರಾಜ್ಯ ಸರ್ಕಾರದಿಂದ ಪರಿಹಾರ ಕೇಳಿದರೆ ಹೇಗೆ ಎಂದು ಪ್ರಶ್ನಿಸಿದರು. ತೂಕದಲ್ಲಿ ಮೋಸ, ಇಳುವರಿ ಪ್ರಮಾಣ ಕಡಿಮೆ ತೋರಿಸುವುದು ಸೇರಿದಂತೆ ಸಕ್ಕರೆ ಕಾರ್ಖಾನೆಗಳ ಕುರಿತು ಕಬ್ಬು ಬೆಳೆಗಾರರ ಎಲ್ಲ ಅಹವಾಲುಗಳನ್ನೂ ಬಗೆಹರಿಸಲು ಕ್ರಮ ಕೈಗೊಳ್ಳಲಾಗುವುದು ಎಂದು ಭರವಸೆ ನೀಡಿದರು.
‘ಎಫ್‌ಆರ್‌ಪಿ ನಿಗದಿ ಮಾಡುವಾಗ ಕೇಂದ್ರ ಸರ್ಕಾರ ಅವೈಜ್ಞಾನಿಕ ಕ್ರಮ ಅನುಸರಿಸಿದೆ. ಉತ್ಪಾದನಾ ವೆಚ್ಚ ಹಿಂದಿನ ವರ್ಷಗಳಿಗಿಂತ ₹ 4 ಸಾವಿರ ಕಡಿಮೆ ತೋರಿಸಿದ್ದಾರೆ. ಇದ್ಯಾವ ಲೆಕ್ಕಾಚಾರ. ಕೇಂದ್ರ ಸರ್ಕಾರ ಕಬ್ಬಿಗೆ ನಿಗದಿಪಡಿಸಿರುವ ಎಫ್‌ಆರ್‌ಪಿ ವೈಜ್ಞಾನಿಕವಾಗಿಲ್ಲ. ಕೆಲವು ಕಾರ್ಖಾನೆಗಳು ಹಳೆಯ ಬಾಕಿಯನ್ನು ಉಳಿಸಿಕೊಂಡಿದ್ದು, ಇದರ ಪಾವತಿಗೆ ಕ್ರಮ ಕೈಗೊಳ್ಳಬೇಕು’ ಎಂದು ರೈತ ಮುಖಂಡರು ಮುಖ್ಯಮಂತ್ರಿಗೆ ಮನವಿ ಮಾಡಿದರು.
ಇದಕ್ಕೂ ಮೊದಲು ಸಕ್ಕರೆ ಕಾರ್ಖಾನೆ ಮಾಲೀಕರ ಜತೆ ಸಭೆ ನಡೆಸಿದ ಸಿದ್ದರಾಮಯ್ಯ, ‘ರೈತರ ಬೇಡಿಕೆ ಈಡೇರಿಸುವುದರಲ್ಲಿ ಕೇಂದ್ರ ಸರ್ಕಾರದ ಜತೆಗೆ ಕಾರ್ಖಾನೆಗಳ ಜವಾಬ್ದಾರಿಯೂ ಇದೆ. ರಾಜ್ಯ ಸರ್ಕಾರ ರೈತರ ಪರವಾಗಿ ನಿಲ್ಲಲಿದೆ. ಕಬ್ಬು ಬೆಳೆಗಾರರಿಗೆ ನೆರವಾಗುವುದು ರಾಜ್ಯ ಹಾಗೂ ಕೇಂದ್ರ ಸರ್ಕಾರಗಳ ಜವಾಬ್ದಾರಿ. ಎಫ್‌ಆರ್‌ಪಿಯಲ್ಲಿ ಸಾಗಣೆ ಮತ್ತು ಕಟಾವು ವೆಚ್ಚವೂ ಸೇರಿದೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಮಾಡುವಂತೆ ಕೇಂದ್ರ ಸರ್ಕಾರಕ್ಕೆ ಮನವಿ ಸಲ್ಲಿಸಿದ್ದೇವೆ. ಕೇಂದ್ರ ಸರ್ಕಾರ ಸಮಸ್ಯೆ ಸೃಷ್ಟಿಸಿದೆ’ ಎಂದು ದೂರಿದರು.
ಮಹಾರಾಷ್ಟ್ರದ ಮುಖ್ಯಮಂತ್ರಿ ದೇವೇಂದ್ರ ಫಡಣವೀಸ್ ಅವರು ಎಂಎಸ್‌ಪಿ ಹೆಚ್ಚಿಸುವಂತೆ ಕೇಂದ್ರ ಸರ್ಕಾರಕ್ಕೆ ಬರೆದ ಪತ್ರ ಪ್ರದರ್ಶಿಸಿದ ಸಿದ್ದರಾಮಯ್ಯ, ‘ಈ ಪತ್ರದಂತೆ ಎಂಎಸ್‌ಪಿ ಹೆಚ್ಚಳಕ್ಕೆ ಒತ್ತಾಯಿಸೋಣ. ಸಕ್ಕರೆ ಕಾರ್ಖಾನೆಗಳು ಮಾರಾಟ ಮಾಡುವ ವಿದ್ಯುತ್ ಮೇಲೆ ಪ್ರತಿ ಯೂನಿಟ್‌ಗೆ 60 ಪೈಸೆ ತೆರಿಗೆ ನಿಗದಿಪಡಿಸುವ ಪ್ರಸ್ತಾವನೆಯನ್ನು ಮರು ಪರಿಶೀಲಿಸಲಾಗುವುದು’ ಎಂದು ಭರವಸೆ ನೀಡಿದರು.
ಉಪಮುಖ್ಯಮಂತ್ರಿ ಡಿ.ಕೆ.ಶಿವಕುಮಾರ್, ಸಚಿವರಾದ ಎಚ್.ಕೆ.ಪಾಟೀಲ, ಶಿವಾನಂದ ಪಾಟೀಲ, ಎಂ.ಬಿ.ಪಾಟೀಲ, ಸತೀಶ ಜಾರಕೊಹೊಳಿ, ಆರ್.ಬಿ.ತಿಮ್ಮಾಪುರ, ಪ್ರಿಯಾಂಕ್ ಖರ್ಗೆ, ಸರ್ಕಾರದ ಮುಖ್ಯಕಾರ್ಯದರ್ಶಿ ಶಾಲಿನಿ ರಜನೀಶ್ ಉಪಸ್ಥಿತರಿದ್ದರು.
ಸಕ್ಕರೆ ಕಾರ್ಖಾನೆ ನಡೆಸುವುದು ಕಷ್ಟವಾಗಿದ್ದರೆ ಒಂದು ಕಾರ್ಖಾನೆ ಇದ್ದವರು ಎರಡು ಮೂರು ಕಾರ್ಖಾನೆ ಮಾಲೀಕರಾಗಿದ್ದು ಹೇಗೆ ಎನ್ನುವ ರೈತರ ಪ್ರಶ್ನೆಗೆ ಏನು ಉತ್ತರ ಹೇಳುತ್ತೀರಿ?ಸಿದ್ದರಾಮಯ್ಯ ಮುಖ್ಯಮಂತ್ರಿ
ಕೇಂದ್ರಕ್ಕೆ ನಿಯೋಗ: ಸಿದ್ದರಾಮಯ್ಯ
‘ಕೇಂದ್ರದಿಂದ ಸಕ್ಕರೆ ಕಾರ್ಖಾನೆ ಮಾಲೀಕರು ಹಾಗೂ ರೈತರಿಗೆ ಅನ್ಯಾಯವಾಗಿದೆ. ರಾಜಕೀಯ ಪಕ್ಷಗಳ ಪ್ರತಿನಿಧಿಗಳು ಮಾಲೀಕರು ರೈತರನ್ನು ಒಳಗೊಂಡು ಕೇಂದ್ರಕ್ಕೆ ನಿಯೋಗ ತೆಗೆದುಕೊಂಡು ಹೋಗಲಾಗುವುದು’ ಎಂದು ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದರು. ಸಭೆಯ ನಂತರ ಸುದ್ದಿಗಾರರ ಜತೆ ಮಾತನಾಡಿದ ಅವರು ‘ಕೇಂದ್ರದಿಂದ ಆಗುತ್ತಿರುವ ತೊಂದರೆ ಬಗ್ಗೆ ಚರ್ಚಿಸಲು ಕೇಂದ್ರಕ್ಕೆ ನಿಯೋಗ ಹೋಗಲು ಎಲ್ಲರೂ ಒಪ್ಪಿಕೊಂಡಿದ್ದಾರೆ. ಸಕ್ಕರೆಯ ಎಂಎಸ್‌ಪಿ ಹೆಚ್ಚಳ ಎಥೆನಾಲ್ ಹಂಚಿಕೆ ಹೆಚ್ಚಳ ಸಕ್ಕರೆ ರಫ್ತು ಮಿತಿಯನ್ನು ಹೆಚ್ಚಿಸುವುದು ಸೇರಿದಂತೆ ಕೇಂದ್ರ ಸರ್ಕಾರವನ್ನು ಒತ್ತಾಯಿಸಲಾಗುವುದು’ ಎಂದರು. ‘ಸಕ್ಕರೆ ಕಾರ್ಖಾನೆಗಳು ಎದುರಿಸುತ್ತಿರುವ ಸಮಸ್ಯೆಗಳು ಹಾಗೂ ಕಾರ್ಖಾನೆಗಳಿಂದ ಕಬ್ಬು ಬೆಳೆಗಾರರು ಎದುರಿಸುತ್ತಿರುವ ಸಮಸ್ಯೆ ಕುರಿತು ಪ್ರತ್ಯೇಕ ಸಮಾಲೋಚನೆ ನಡೆಸಲಾಗುವುದು’ ಎಂದರು.
ಕಬ್ಬು ಬೆಳೆಗಾರರ ಬೇಡಿಕೆ
* ಕೇಂದ್ರ ಸರ್ಕಾರ ಕಬ್ಬಿಗೆ ವೈಜ್ಞಾನಿಕವಾಗಿ ಎಫ್‌ಆರ್‌ಪಿ ನಿಗದಿ ಮಾಡಬೇಕು
* ಸಕ್ಕರೆ ಕಾರ್ಖಾನೆಗಳು ಕಬ್ಬಿನ ಇಳುವರಿ ಪ್ರಮಾಣ ಕಡಿಮೆ ತೋರಿಸುತ್ತಿವೆ
* ಪ್ರತಿ ಕಾರ್ಖಾನೆ ಎದುರು ಸರ್ಕಾರವೇ ಇಳುವರಿ ಪ್ರಮಾಣ ಖಚಿತಪಡಿಸುವ ಯಂತ್ರ ಸ್ಥಾಪಿಸಬೇಕು
* ತೂಕದಲ್ಲಿ ಮೋಸ ಮಾಡುವ ಕಾರ್ಖಾನೆಗಳ ವಿರುದ್ಧ ಕ್ರಮಕೈಗೊಳ್ಳಬೇಕು
* ಕಾರ್ಖಾನೆಗಳು ನೀಡಬೇಕಿರುವ ಹಳೆಯ ಬಾಕಿ ಪಾವತಿಗೆ ಕ್ರಮ ಕೈಗೊಳ್ಳಬೇಕು
ಕಾರ್ಖಾನೆ ಮಾಲೀಕರ ಬೇಡಿಕೆ
* ಪ್ರತಿ ಯೂನಿಟ್ ವಿದ್ಯುತ್‌ಗೆ ನಿಗದಿ ಮಾಡಿದ 60 ಪೈಸೆ ತೆರಿಗೆ ಪ್ರಸ್ತಾವನೆ ಪರಿಶೀಲಿಸಬೇಕು
* ಸಕ್ಕರೆಗೆ ಎಂಎಸ್‌ಪಿ ₹41 ನಿಗದಿ ಮಾಡಲು ಕೇಂದ್ರದ ಮೇಲೆ ರಾಜ್ಯ ಒತ್ತಡ ಹಾಕಬೇಕು
* ಸಕ್ಕರೆ ಕಾರ್ಖಾನೆಗಳ ನಡುವಿನ ಅಂತರ ಕನಿಷ್ಠ 25 ಕಿ.ಮೀ ನಿಗದಿಪಡಿಸಬೇಕು
* ಸಕ್ಕರೆ ಕಾರ್ಖಾನೆಗಳಿಂದ ವಿದ್ಯುತ್ ಖರೀದಿ ಒಪ್ಪಂದವನ್ನು ನವೀಕರಣ ಮಾಡಬೇಕು
* ಸಕ್ಕರೆ ರಫ್ತಿನ ಮೇಲೆ ಕೇಂದ್ರ ಸರ್ಕಾರ ಏರಿದ ನಿರ್ಬಂಧ ತೆರವುಗೊಳಿಸಬೇಕು
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.