ನವದೆಹಲಿ: ‘ನರೇಂದ್ರ ಮೋದಿ ನೇತೃತ್ವದ ಬಿಜೆಪಿ ಸರ್ಕಾರವು ನಿತ್ಯವೂ ಕನ್ನಡಿಗರಿಗೆ ಅವಮಾನ ಮಾಡುತ್ತಿರುವ ಬಗ್ಗೆ ಹಲವು ನಿದರ್ಶನಗಳಿವೆ. ಬಿಜೆಪಿ ನಾಯಕರು ಸುಳ್ಳುಗಳ ಮರೆಯಲ್ಲಿ ಅವಿತುಕೊಳ್ಳುವುದನ್ನು ನಿಲ್ಲಿಸಿ ಕರ್ನಾಟಕದ ಜನತೆಯ ಪ್ರಶ್ನೆಗಳಿಗೆ ಉತ್ತರಿಸಬೇಕು’ ಎಂದು ಕಾಂಗ್ರೆಸ್ ಪಕ್ಷದ ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೇವಾಲಾ ಆಗ್ರಹಿಸಿದ್ದಾರೆ.
ಭೇಟಿಗೆ ಅವಕಾಶ ನೀಡದೆ ಕರ್ನಾಟಕದ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ವಿರೋಧ ಪಕ್ಷದ ನಾಯಕ ರಾಹುಲ್ ಗಾಂಧಿ ಅವಮಾನ ಮಾಡಿದ್ದಾರೆ ಎಂದು ಬಿಜೆಪಿ ಮುಖಂಡ ಅಮಿತ್ ಮಾಳವೀಯ ಟೀಕಿಸಿದ್ದರು. ಇದಕ್ಕೆ ಸಾಮಾಜಿಕ ಜಾಲ ತಾಣ ‘ಎಕ್ಸ್’ನಲ್ಲಿ ಪ್ರತಿಕ್ರಿಯೆ ನೀಡಿರುವ ಸುರ್ಜೇವಾಲಾ, ‘ಮಾಳವೀಯ ಅವರ ವಿಕೃತ, ನೀಚ ಸ್ವಭಾವಕ್ಕೆ ಮಿತಿಯೇ ಇಲ್ಲದಂತಾಗಿದೆ. ಕರ್ನಾಟಕದಲ್ಲಿ ಬಿಜೆಪಿ ರಾಜ್ಯ ಘಟಕದ ಅಧ್ಯಕ್ಷರನ್ನು ನಿರ್ಧರಿಸಲಾಗದೆ ಬಿಜೆಪಿ ಸಹೋದರರ ನಡುವಿನ ಹತ್ಯಾ ಯುದ್ಧದಿಂದ ನುಣುಚಿಕೊಳ್ಳಲು ಮಾಳವೀಯ ಅವರು ರಾಹುಲ್ ಗಾಂಧಿ ಅವರ ಬಗ್ಗೆ ಟೀಕಿಸಿ ವಿಕೃತಿ ಮೆರೆದಿದ್ದಾರೆ’ ಎಂದಿದ್ದಾರೆ.
‘ಮೊದಲು ಕೇಂದ್ರ ಸರ್ಕಾರವು ಕರ್ನಾಟಕಕ್ಕೆ ಮಾಡುತ್ತಿರುವ ಅನ್ಯಾಯ ಹಾಗೂ ಕನ್ನಡಿಗರ ಮೇಲೆ ತೋರುತ್ತಿರುವ ದ್ವೇಷದ ಬಗ್ಗೆ ಉತ್ತರಿಸಲಿ. ವಾಸ್ತವವಾಗಿ, ಸಿದ್ದರಾಮಯ್ಯ ಹಾಗೂ ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಅವರು ನವದೆಹಲಿಗೆ ಬಂದು 7 ಕೋಟಿ ಕನ್ನಡಿಗರ ಮೇಲಿನ ಬಿಜೆಪಿ ಸರ್ಕಾರ ಮಾಡುತ್ತಿರುವ ದ್ವೇಷ ನಿಲ್ಲಿಸುವಂತೆ ಒತ್ತಾಯಿಸಿದ್ದಾರೆ. ರಾಜಧರ್ಮದ ಬಗ್ಗೆ ನೆನಪಿಸಲು ಹಲವಾರು ಕೇಂದ್ರ ಸಚಿವರನ್ನು ಭೇಟಿಯಾಗಿದ್ದಾರೆ’ ಎಂದು ಅವರು ಹೇಳಿದ್ದಾರೆ.
ಜಿಎಸ್‌ಟಿಯಲ್ಲಿ ಕರ್ನಾಟಕದ ನ್ಯಾಯಯುತ ಪಾಲು ನೀಡದೆ ₹1 ಸಂಗ್ರಹಿಸಿ ಕೇವಲ 13 ಪೈಸೆ ನೀಡುತ್ತಿರುವುದು ಯಾಕೆ? 2023-24ರ ಕೇಂದ್ರ ಬಜೆಟ್‌ನಲ್ಲಿ ₹5,300 ಕೋಟಿ ವಿಶೇಷ ಅನುದಾನ ಭರವಸೆ ನೀಡಿ ಒಂದು ರೂಪಾಯಿ ಕೂಡ ಯಾಕೆ ಬಿಡುಗಡೆ ಮಾಡಲಿಲ್ಲ? ಉತ್ತರ ಕರ್ನಾಟಕದ ಲಕ್ಷಾಂತರ ಜನರಿಗೆ ಅನುಕೂಲವಾಗುವ ಕೃಷ್ಣಾ ಜಲವಿವಾದ ನ್ಯಾಯಮಂಡಳಿಯ ತೀರ್ಮಾನದ ಬಗ್ಗೆ ಯಾಕೆ ಅಧಿಸೂಚನೆ ಹೊರಡಿಸಿಲ್ಲ? ಎತ್ತಿನಹೊಳೆ ಮತ್ತು ಕಳಸಾ-ಬಂಡೂರಿ ಯೋಜನೆಗಳಿಗೆ ಯಾಕೆ ಅನುಮೋದನೆ ನೀಡುತ್ತಿಲ್ಲ. ಈ ಎಲ್ಲ ಪ್ರಶ್ನೆಗಳಿಗೆ ಬಿಜೆಪಿಯವರು ಉತ್ತರಿಸಬೇಕು ಎಂದು ಅವರು ಆಗ್ರಹಿಸಿದ್ದಾರೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.