ADVERTISEMENT

ಕ್ಲಿನಿಕ್ ತೆರೆಯದಿದ್ದರೆ ಕ್ರಮ ಕೈಗೊಳ್ಳಿ: ಶ್ರೀರಾಮುಲು

​ಪ್ರಜಾವಾಣಿ ವಾರ್ತೆ
Published 14 ಏಪ್ರಿಲ್ 2020, 15:53 IST
Last Updated 14 ಏಪ್ರಿಲ್ 2020, 15:53 IST
   

ಹಾವೇರಿ: ಗಡಿ ಪ್ರದೇಶದಲ್ಲಿ ತುರ್ತು ಆರೋಗ್ಯ ಸೇವೆಗಳಿಗೆ ಯಾವುದೇ ತೊಂದರೆಯಾಗುವುದು ಬೇಡ. ಖಾಸಗಿ ಆಸ್ಪತ್ರೆಗಳ ಸೇವೆಯನ್ನು ಆರಂಭಿಸಲು ಕ್ರಮವಹಿಸಿ. ಖಾಸಗಿ ಆಸ್ಪತ್ರೆಗಳು ತೆರೆಯದಿದ್ದರೆ ಸರ್ಕಾರಿ ಆಸ್ಪತ್ರೆಗಳ ಮೇಲೆ ಒತ್ತಡ ಹೆಚ್ಚಾಗುತ್ತದೆ. ಈಗಾಗಲೇ ರಾಜ್ಯ ಮಟ್ಟದಲ್ಲಿ ವೈದ್ಯಕೀಯ ಸಂಘಗಳೊಂದಿಗೆ ಮಾತುಕತೆ ನಡೆಸಲಾಗಿದೆ. ಸ್ಥಳೀಯವಾಗಿ ಆಸ್ಪತ್ರೆಗಳು ತೆರೆಯಬೇಕು. ಆಸ್ಪತ್ರೆ ತೆರೆಯದ ಖಾಸಗಿ ಕ್ಲಿನಿಕ್‍ಗಳ ಮೇಲೆ ಕ್ರಮವಹಿಸಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.‌

ಕೊರೊನಾ ನಿಯಂತ್ರಣಕ್ಕೆ ವಿಪತ್ತು ನಿರ್ವಹಣಾ ಅನುದಾನ ಬಳಸಿ

ಕೋವಿಡ್ ನಿಯಂತ್ರಣಕ್ಕೆ ಯಾವುದೇ ಕೊರತೆಯಾಗಬಾರದು. ಅಗತ್ಯವಾದ ಎಲ್ಲ ವೈದ್ಯಕೀಯ ಉಪಕರಣಗಳನ್ನು ವಿಪತ್ತು ನಿರ್ವಹಣಾ ಅನುದಾನದಲ್ಲಿ ಖರೀದಿಸುವಂತೆ ಜಿಲ್ಲಾಡಳಿತಕ್ಕೆ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಮತ್ತು ಹಿಂದುಳಿದ ವರ್ಗಗಳ ಕಲ್ಯಾಣ ಸಚಿವರಾದ ಬಿ.ಶ್ರೀರಾಮುಲು ನಿರ್ದೇಶನ ನೀಡಿದರು.

ADVERTISEMENT

ಕೋವಿಡ್ -19 ಕುರಿತಂತೆ ಜಿಲ್ಲಾಡಳಿತ ಕೈಗೊಂಡಿರುವ ಕ್ರಮದ ಬಗ್ಗೆ ಜಿಲ್ಲಾಧಿಕಾರಿ ಕಚೇರಿ ಸಭಾಂಗಣದಲ್ಲಿ ಮಂಗಳವಾರ ಪರಿಶೀಲನಾ ಸಭೆ ನಡೆಸಿದ ಅವರು ಮುಂದಿನ ಎರಡು ವಾರಗಳ ಕಾಲ ಅತ್ಯಂತ ಸಂದಿಗ್ಧ ಸಮಯ. ಈ ಸಂದರ್ಭದಲ್ಲಿ ಎಚ್ಚರಿಕೆಯಿಂದ ಕಾರ್ಯನಿರ್ವಹಿಸಬೇಕು ಎಂದು ಸೂಚಿಸಿದರು.

ಕೊರೊನಾ ಸೋಂಕು ಪತ್ತೆಯಾದ ತಕ್ಷಣ ಅವರನ್ನು ಸಾಗಾಣಿಕೆಗೆ ಪ್ರತ್ಯೇಕವಾದ ಆ್ಯಂಬುಲೆನ್ಸ್‌ ಕಾಯ್ದಿರಿಸಿಕೊಳ್ಳಬೇಕು. ಜಿಲ್ಲೆಯ ಯಾವುದೇ ಮೂಲೆಯಿಂದ ಕರೆ ಬಂದರೂ ಅರ್ಧ ತಾಸಿನೊಳಗೆ ಆ ಸ್ಥಳದಲ್ಲಿ ಆ್ಯಂಬುಲೆನ್ಸ್‌ ಧಾವಿಸಬೇಕು. ಜನರಿಗೆ ಯಾವುದೇ ರೀತಿಯ ಸಮಸ್ಯೆಯಾಗದಂತೆ ಮುಂಜಾಗ್ರತೆ ವಹಿಸುವಂತೆ ಜಿಲ್ಲಾಡಳಿತಕ್ಕೆ ಸೂಚನೆ ನೀಡಿದರು.

ಮಾಸ್ಕ್‌, ವೆಂಟಿಲೇಟರ್‌ ಖರೀದಿಸಿ

ಈಗಾಗಲೇ ಸರ್ಕಾರ, ವೈದ್ಯರು ಹಾಗೂ ವೈದ್ಯಕೀಯ ಸಿಬ್ಬಂದಿ ನೇಮಕಾತಿಗಾಗಿ ಅನುಮತಿ ನೀಡಿದೆ. ತುರ್ತಾಗಿ ಕೊರತೆ ಇರುವ ವೈದ್ಯರನ್ನು ನೇಮಕ ಮಾಡಿಕೊಳ್ಳುವಂತೆ ಸಲಹೆ ನೀಡಿದರು. ಮಾಸ್ಕ್, ವೆಂಟಿಲೇಟರ್, ಕೇಂದ್ರೀಕೃತ ಆ್ಯಕ್ಸಿಜನ್ ವ್ಯವಸ್ಥೆಗೆ ಯಾವುದೇ ತರಹದ ಹಿಂಜರಿಕೆ ಬೇಡ. ಅಗತ್ಯವಾದ ಉಪಕರಣಗಳನ್ನು ಖರೀದಿಸುವಂತೆ ಸೂಚನೆ ನೀಡಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಅವರು ಆರೋಗ್ಯ ಇಲಾಖೆಯ ಮಾರ್ಗಸೂಚಿಯಂತೆ ಕೋವಿಡ್ ನಿಯಂತ್ರಣಕ್ಕೆ ಐಸೋಲೇಷನ್ ವಾರ್ಡ್, ಫಿವರ್ ಕ್ಲಿನಿಕ್ ವ್ಯವಸ್ಥೆ, ಸ್ಕ್ರೀನಿಂಗ್‌ ವ್ಯವಸ್ಥೆ, ಕೋವಿಡ್ ಚಿಕಿತ್ಸೆಗೆ ಜಿಲ್ಲಾ ಆಸ್ಪತ್ರೆಯಲ್ಲಿ ಕೈಗೊಂಡಿರುವ ಸಿದ್ಧತೆ, ಆ್ಯಂಬುಲೆನ್ಸ್‌ ವ್ಯವಸ್ಥೆ, ವೆಂಟಿಲೇಟರ್ ವ್ಯವಸ್ಥೆ ಕುರಿತಂತೆ ವಿವರಿಸಿದರು.

ಮನೆ–ಮನೆಗೆ ಆರೋಗ್ಯ ತಪಾಸಣೆ ಕಾರ್ಯಕ್ರಮಗಳ ಕುರಿತಂತೆ ಸಚಿವರಿಗೆ ಜಿಲ್ಲಾ ಪಂಚಾಯತ್ ಮುಖ್ಯ ಕಾರ್ಯನಿರ್ವಾಹಣಾಧಿಕಾರಿ ರಮೇಶ ದೇಸಾಯಿ ವಿವರಿಸಿದರು.

ಕಳ್ಳಬಟ್ಟಿ ನಿಯಂತ್ರಿಸಿ

ರಾಜ್ಯ ಉಗ್ರಾಣ ನಿಗಮದ ಅಧ್ಯಕ್ಷ ಯು.ಬಿ.ಬಣಕಾರ, ಶಾಸಕರಾದ ನೆಹರು ಓಲೇಕಾರ, ವಿರುಪಾಕ್ಷಪ್ಪ ಬಳ್ಳಾರಿ, ಅರುಣಕುಮಾರ ಗುತ್ತೂರ ಅವರು ಸಭೆಯಲ್ಲಿ ಮಾತನಾಡಿ, ಗಡಿಭಾಗದಲ್ಲಿ ತಪಾಸಣೆಯನ್ನು ಮತ್ತಷ್ಟು ಬಿಗಿಗೊಳಿಸಬೇಕು. ಮದ್ಯ ಮಾರಾಟ ನಿಷೇಧದಿಂದ ಗ್ರಾಮೀಣ ಭಾಗದಲ್ಲಿ ಕಳ್ಳಬಟ್ಟಿ ಮಾರಾಟ ಹೆಚ್ಚಾಗಿದೆ. ಅಬಕಾರಿ ಇಲಾಖೆ ನಿಯಂತ್ರಣಕ್ಕೆ ಕ್ರಮವಹಿಸಬೇಕು. ಉಚಿತ ಹಾಲು ವಿತರಣೆ ಪ್ರಮಾಣವನ್ನು ಹೆಚ್ಚಳ ಮಾಡಬೇಕು ಎಂದು ಮನವಿ ಮಾಡಿಕೊಂಡರು.

ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಕೆ.ಜಿ.ದೇವರಾಜ, ಹೆಚ್ಚುವರಿ ಜಿಲ್ಲಾಧಿಕಾರಿ ಯೋಗೇಶ್ವರ, ಜಿಲ್ಲಾ ಆರೋಗ್ಯ ಮತ್ತು ಕುಟುಂಬ ಕಲ್ಯಾಣಾಧಿಕಾರಿ ಡಾ.ರಾಜೇಂದ್ರ ದೊಡ್ಮನಿ ವಿವಿಧ ಜಿಲ್ಲಾ ಮಟ್ಟದ ಅಧಿಕಾರಿಗಳು ಇದ್ದರು.

ಆಸ್ಪತ್ರೆ ಭೇಟಿ- ಪರಿಶೀಲನೆ

ಜಿಲ್ಲಾ ಆಸ್ಪತ್ರೆಗೆ ಭೇಟಿ ನೀಡಿದ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆ ಸಚಿವರಾದ ಬಿ.ಶ್ರೀರಾಮುಲು ಅವರು ಕೋವಿಡ್ ಚಿಕಿತ್ಸೆಗಾಗಿ ಸಿದ್ಧಪಡಿಸಿರುವ ವಿಶೇಷ ವಾರ್ಡ್ ಹಾಗೂ ಐಸೋಲೇಷನ್ ವಾರ್ಡ್‍ಗಳನ್ನು ಪರಿಶೀಲನೆ ನಡೆಸಿದರು. ವೈದ್ಯರು ಹಾಗೂ ದಾದಿಯರೊಂದಿಗೆ ಮಾತನಾಡಿ, ಅವರಿಗೆ ಆತ್ಮವಿಶ್ವಾಸ ತುಂಬಿದರು.

ಜಿಲ್ಲಾಧಿಕಾರಿ ಕೃಷ್ಣ ಬಾಜಪೇಯಿ ಹಾಗೂ ಜಿಲ್ಲಾ ಶಸ್ತ್ರ ಚಿಕಿತ್ಸಕ ನಾಗರಾಜ ನಾಯಕ್, ಸಿದ್ಧತೆಗಳ ಕುರಿತಂತೆ ಮಾಹಿತಿ ನೀಡಿದರು.

‘ಲಾಕ್‌ಡೌನ್‌ ನಂತರ 2 ಸಾವಿರ ವೈದ್ಯರ ನೇಮಕ’

‘ಕೋವಿಡ್‌–19 ತುರ್ತು ಸೇವೆಗಾಗಿ ಖಾಸಗಿ ವೈದ್ಯರು ಸ್ವಯಂಪ್ರೇರಿತವಾಗಿ ಬಂದು ಸೇವೆ ಮಾಡಲು ಕೋರುತ್ತೇನೆ. ಸಮಾನ ಕೆಲಸಕ್ಕೆ ಸಮಾನ ವೇತನ ನೀಡಬೇಕು ಎಂಬ ಅವರ ಬೇಡಿಕೆಯನ್ನು ಪರಿಶೀಲಿಸುತ್ತೇನೆ’ ಎಂದು ಆರೋಗ್ಯ ಸಚಿವ ಶ್ರೀರಾಮುಲು ಹೇಳಿದರು.

ಮಾಧ್ಯಮದವರೊಂದಿಗೆ ಮಂಗಳವಾರ ಅವರು ಮಾತನಾಡಿ, ‘ರಾಜ್ಯದಲ್ಲಿ ಒಟ್ಟು 2 ಸಾವಿರ ವೈದ್ಯರ ನೇಮಕಾತಿಯನ್ನು ಏಪ್ರಿಲ್‌ ಅಂತ್ಯದೊಳಗೆ ಮಾಡುವುದಾಗಿ ಸದನದಲ್ಲಿ ಹೇಳಿಕೆ ನೀಡಿದ್ದೆ. ಆದರೆ, ಲಾಕ್‌ಡೌನ್‌ ಹಿನ್ನೆಲೆಯಲ್ಲಿ ನೇಮಕಾತಿ ಸಾಧ್ಯವಾಗಿಲ್ಲ. ಲಾಕ್‌ಡೌನ್‌ ಮುಗಿದ ನಂತರ ಪ್ರಕ್ರಿಯೆ ಕೈಗೊಳ್ಳಲಾಗುವುದು’ ಎಂದರು.

ಕೋವಿಡ್‌–19 ತುರ್ತು ಸೇವೆಗಾಗಿ 6 ತಿಂಗಳ ಅವಧಿಗೆ ತಾತ್ಕಾಲಿಕವಾಗಿ ವೈದ್ಯರನ್ನು ನೇಮಕ ಮಾಡಿಕೊಳ್ಳಿ. ತಜ್ಞ ವೈದ್ಯರು ಸಿಗುವುದು ಕಷ್ಟ. ಹಾಗಾಗಿ ಎಂಬಿಬಿಎಸ್‌ ವೈದ್ಯರು, ಆಯುಷ್‌ ವೈದ್ಯರು ಮತ್ತು ಶುಶ್ರೂಷಕರನ್ನು ಕೂಡಲೇ ನೇಮಕ ಮಾಡಿಕೊಳ್ಳಿ ಎಂದು ಜಿಲ್ಲಾಧಿಕಾರಿಗೆ ಸೂಚನೆ ನೀಡಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.