
ಬೆಂಗಳೂರು: ಕರ್ನಾಟಕ ಸಾಬೂನು ಮತ್ತು ಮಾರ್ಜಕ ನಿಗಮದ (ಕೆಎಸ್‌ಡಿಎಲ್) ರಾಯಭಾರಿಯಾಗಿ ನಟಿ ತಮನ್ನಾ ಭಾಟಿಯಾ ಅವರ ನೇಮಕಕ್ಕೆ ವಿರೋಧ ಪಕ್ಷದ ನಾಯಕರು, ಸಂಸದರು ಸೇರಿದಂತೆ ಹಲವರು ಮತ್ತೆ ಅಪಸ್ವರ ಎತ್ತಿದ್ದು, ರಾಜ್ಯ ಸರ್ಕಾರದ ವಿರುದ್ಧ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಕೆಎಸ್‌ಡಿಎಲ್ ರಾಯಭಾರಿಯ ಹೊಣೆಯನ್ನು ಮಂಗಳವಾರ(ಫೆ.10) ಹೊತ್ತ ನಟಿ ತಮನ್ನಾ ಭಾಟಿಯಾ ಅವರು, ನಿಗಮದ 57 ಹೊಸ ಉತ್ಪನ್ನಗಳನ್ನು ಮಾರುಕಟ್ಟೆಗೆ ಬಿಡುಗಡೆ ಮಾಡಿದರು. ತಾಜ್ ವೆಸ್ಟ್ಎಂಡ್ ಹೋಟೆಲ್‌ನಲ್ಲಿ ನಡೆದ ಕಾರ್ಯಕ್ರಮದಲ್ಲಿ ತಮನ್ನಾ ಅವರು ಕೆಎಸ್‌ಡಿಎಲ್‌ನ ರಾಯಭಾರಿಯಾಗಿ ಪ್ರಚಾರ ಆರಂಭಿಸಿದ್ದಾರೆ.
ಕನ್ನಡ ನಟಿಯರ ಬದಲಿಗೆ ತಮನ್ನಾ ಅವರನ್ನು ಆಯ್ಕೆ ಮಾಡಿರುವ ರಾಜ್ಯ ಸರ್ಕಾರದ ನಿರ್ಧಾರವನ್ನು ಟೀಕಿಸಿದ ಚಿಕ್ಕಬಳ್ಳಾಪುರದ ಬಿಜೆಪಿ ಸಂಸದ ಕೆ. ಸುಧಾಕರ್, ನಾಡದ್ರೋಹಿ ಕಾಂಗ್ರೆಸ್ ಸರ್ಕಾರಕ್ಕೆ ಕನ್ನಡದ ಸಿನಿತಾರೆಗಳು ಕಣ್ಣಿಗೆ ಕಾಣುತ್ತಿಲ್ಲವೇ ಎಂದು ಪ್ರಶ್ನಿಸಿದ್ದಾರೆ.
ಸಾಮಾಜಿಕ ಮಾಧ್ಯಮ ಎಕ್ಸ್‌ನಲ್ಲಿ ಪೋಸ್ಟ್ ಮಾಡಿರುವ, 'ಕರ್ನಾಟಕದ ಸುಪ್ರಸಿದ್ಧ ಅಂತರರಾಷ್ಟ್ರೀಯ ಬ್ರ್ಯಾಂಡ್ ಮೈಸೂರು ಸ್ಯಾಂಡಲ್ ಸೋಪ್‌ಗೆ ರಾಯಭಾರಿ ನೇಮಿಸಲು ನಮ್ಮದೇ ಕನ್ನಡ ನಾಡಿನ ಅನೇಕ ತಾರೆಗಳು ಇದ್ದರೂ ಪರ ರಾಜ್ಯದ, ಅನ್ಯಭಾಷೆಯ ಸಿನಿಮಾ ನಟಿಯೊಬ್ಬರನ್ನು ಕೋಟ್ಯಂತರ ರೂಪಾಯಿ ಸಂಭಾವನೆ ಕೊಟ್ಟು ರಾಯಭಾರಿಯನ್ನಾಗಿ ನೇಮಿಸಿರುವುದು ಕಾಂಗ್ರೆಸ್ ಪಕ್ಷದ ಕನ್ನಡ ವಿರೋಧಿ ಮನಸ್ಥಿತಿಗೆ ಮತ್ತೊಂದು ಸಾಕ್ಷಿ' ಎಂದು ಕುಟುಕಿದ್ದಾರೆ.
ಕನ್ನಡ ಸಿನಿ ತಾರೆಯರಾದ ರಮ್ಯಾ, ರಶ್ಮಿಕಾ ಮಂದಣ್ಣ, ಶ್ರೀನಿಧಿ ಶೆಟ್ಟಿ, ಪೂಜಾ ಹೆಗ್ಡೆ, ರುಕ್ಮಿಣಿ ವಸಂತ್ ಸೇರಿದಂತೆ ಅನೇಕ ನಟಿಯರು ಅನೇಕ ಭಾಷೆಗಳ ಚಿತ್ರರಂಗದಲ್ಲಿ ಬೇಡಿಕೆಯುಳ್ಳ ಜನಪ್ರಿಯ ನಟಿಯರಾಗಿ ಕನ್ನಡದ ಕೀರ್ತಿ ಪತಾಕೆಯನ್ನ ರಾಷ್ಟ್ರ, ಅಂತರರಾಷ್ಟ್ರೀಯ ಮಟ್ಟದಲ್ಲಿ ಹಾರಿಸಿದ್ದಾರೆ.
ನಮ್ಮದೇ ನಾಡಿನ ನಟಿಯರನ್ನು ಬಿಟ್ಟು ಬೇರೆಯವರಿಗೆ ಮಣೆ ಹಾಕುವ ಕಾಂಗ್ರೆಸ್ ಪಕ್ಷದ ಧೋರಣೆ ಕನ್ನಡ ನಾಡಿನ ಪ್ರತಿಭೆಗಳಿಗೆ ಮಾಡಿರುವ ಅವಮಾನ ಮಾತ್ರವಲ್ಲ, ಮೈಸೂರು ಸ್ಯಾಂಡಲ್ ಸೋಪಿನ ಅಸ್ಮಿತೆಗೂ ಮಾಡಿರುವ ಘೋರ ಅಪಮಾನ. ಈ ಕನ್ನಡ ವಿರೋಧಿ, ನಾಡದ್ರೋಹಿ ಕಾಂಗ್ರೆಸ್ ಪಕ್ಷವನ್ನ ಕನ್ನಡಿಗರು ಎಂದಿಗೂ ಕ್ಷಮಿಸುವುದಿಲ್ಲ ಎಂದಿದ್ದಾರೆ.
ಈ ಕುರಿತು ಮಾತನಾಡಿದ್ದ ಕೈಗಾರಿಕಾ ಸಚಿವ ಎಂ.ಬಿ. ಪಾಟೀಲ, ‘ಮೈಸೂರು ಸ್ಯಾಂಡಲ್ ಸೋಪ್ ಸೇರಿ ನಿಗಮದ ಉತ್ಪನ್ನಗಳು ಕರ್ನಾಟಕದ ಮನೆಮಾತಾಗಿವೆ. ಇವುಗಳನ್ನು ಜಾಗತಿಕ ಮಟ್ಟಕ್ಕೆ ಪರಿಚಯಿಸಲು ತಮನ್ನಾ ಅವರನ್ನು ಪ್ರಚಾರ ರಾಯಭಾರಿಯಾಗಿ ನೇಮಿಸಲಾಗಿದೆ. ಅವರ ವರ್ಚಸ್ಸು, ಡಿಜಿಟಲ್ ಪ್ರಸ್ತುತಿ ಮತ್ತು ಯುವಜನರ ಜತೆಗಿನ ಸಂಪರ್ಕ ಪರಿಗಣಿಸಿ ಆಯ್ಕೆ ಮಾಡಲಾಗಿದೆ’ ಎಂದು ಈ ಹಿಂದೆ ಸಮರ್ಥಿಸಿಕೊಂಡಿದ್ದರು.
ತಮನ್ನಾ ಆಯ್ಕೆಗೆ ಕೆಲವರು ಅಪಸ್ವರ ಎತ್ತಿದ್ದಾರೆ. 2024–25ನೇ ಸಾಲಿನಲ್ಲಿ ಕೆಎಸ್‌ಡಿಎಲ್ ₹1,785 ಕೋಟಿ ವಹಿವಾಟು ನಡೆಸಿದೆ. ಇದರಲ್ಲಿ ಕರ್ನಾಟಕದ ಪಾಲು ಶೇ 18. ಉಳಿದದ್ದು ಆಂಧ್ರಪ್ರದೇಶ, ತೆಲಂಗಾಣ, ತಮಿಳುನಾಡು, ಕೇರಳ ಮತ್ತು ಮಹಾರಾಷ್ಟ್ರದಲ್ಲಿನ ಮಾರಾಟದಿಂದ ಬಂದಿದೆ. 2030ರ ವೇಳೆಗೆ ವಹಿವಾಟು ₹5,000 ಕೋಟಿ ತಲುಪುವ ಗುರಿ ಇದೆ. ಯೂರೋಪ್ ಮತ್ತು ಮಧ್ಯಪ್ರಾಚ್ಯ ರಾಷ್ಟ್ರಗಳಲ್ಲೂ ಮಾರುಕಟ್ಟೆ ವಿಸ್ತರಣೆಗೆ ಮಾರುಕಟ್ಟೆಯ ತಂತ್ರಗಾರಿಕೆ ಭಾಗವಾಗಿ ಮಾರುಕಟ್ಟೆ ಪರಿಣತರ ಸಮಿತಿ ಈ ಆಯ್ಕೆ ಮಾಡಿಕೊಂಡಿದೆ’ ಎಂದು ಹೇಳಿದ್ದರು.
ದೀಪಿಕಾ ಪಡುಕೋಣೆ, ರಶ್ಮಿಕಾ ಮಂದಣ್ಣ, ಪೂಜಾ ಹೆಗಡೆ, ಕಿಯಾರಾ ಅಡ್ವಾಣಿ ಅವರೂ ಆಯ್ಕೆಪಟ್ಟಿಯಲ್ಲಿ ಇದ್ದರು. ಜಾಲತಾಣದಲ್ಲಿ ತಮನ್ನಾ ಅವರಿಗೆ 2.8 ಕೋಟಿ ಬೆಂಬಲಿಗರಿದ್ದಾರೆ. ಈ ಅಂಶಗಳ ಆಧಾರದಲ್ಲಿ ಅವರ ಆಯ್ಕೆ ಮಾಡಲಾಗಿದೆ ಎಂದು ಸಚಿವ ಪಾಟೀಲ ವಿವರ ನೀಡಿದ್ದರು.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.