ADVERTISEMENT

ಅತಂತ್ರ ಸ್ಥಿತಿಯಲ್ಲಿ 532 ಶಿಕ್ಷಕರು

ಸಂಪುಟ ಸಭೆ ಟಿಪ್ಪಣಿಯಲ್ಲಿ ಮಾಡಿದ ಎಡವಟ್ಟು: ಮುಖ್ಯಮಂತ್ರಿ ಪತ್ರಕ್ಕೇ ಬೆಲೆ ಇಲ್ಲ

ಎಂ.ಜಿ.ಬಾಲಕೃಷ್ಣ
Published 11 ಜೂನ್ 2019, 20:00 IST
Last Updated 11 ಜೂನ್ 2019, 20:00 IST
ಪ್ರಿಯಾಂಕ್‌ ಖರ್ಗೆ
ಪ್ರಿಯಾಂಕ್‌ ಖರ್ಗೆ   

ಬೆಂಗಳೂರು: ಸಮಾಜ ಕಲ್ಯಾಣ ಇಲಾಖೆ ವ್ಯಾಪ್ತಿಗೆ ಬರುವ ಕರ್ನಾಟಕ ವಸತಿ ಶಿಕ್ಷಣ ಸಂಸ್ಥೆಗಳ ಸಂಘದ ಅಧೀನದ ಮೊರಾರ್ಜಿ ದೇಸಾಯಿ, ಕಿತ್ತೂರು ರಾಣಿ ಚನ್ನಮ್ಮ ವಸತಿ ಶಾಲೆಗಳಲ್ಲಿ ಹೊರ ಸಂಪನ್ಮೂಲ ಆಧಾರದಲ್ಲಿ ದುಡಿಯುತ್ತಿರುವ 532 ಶಿಕ್ಷಕರು ತಮ್ಮದಲ್ಲದ ತಪ್ಪಿಗೆ ನಿತ್ಯ ಕಣ್ಣೀರಲ್ಲಿ ಕೈತೊಳೆಯುವ ಪರಿಸ್ಥಿತಿ ಸೃಷ್ಟಿಯಾಗಿದೆ.

10ರಿಂದ 15 ವರ್ಷಗಳಿಂದ ಸೇವೆ ಸಲ್ಲಿಸುತ್ತಿರುವ ಈ ಶಿಕ್ಷಕರ ಕುರಿತಂತೆ ಸಂಪುಟ ಸಭೆಗೆ ತಪ್ಪಾಗಿ ಟಿಪ್ಪಣಿ ನೀಡಿದ್ದೇ ಸಮಸ್ಯೆಯ ಮೂಲ.

‘ಈ ಎಲ್ಲ ಅಭ್ಯರ್ಥಿಗಳಿಗೆ ನ್ಯಾಯಾಲಯದ ಆದೇಶದಂತೆ 8 ವರ್ಷಗಳ ಸೇವೆಯನ್ನು ಪರಿಗಣಿಸಿ ಗರಿಷ್ಠ ಶೇ 40ರಷ್ಟು ಸೇವಾ ಕೃಪಾಂಕವನ್ನು ನೀಡಿಯೂ ಅಭ್ಯರ್ಥಿಗಳು ಆಯ್ಕೆಯಾಗಿರುವುದಿಲ್ಲ’ ಎಂಬ ತಪ್ಪು ಉಲ್ಲೇಖದಿಂದಾಗಿ ಸಂಪುಟ ಸಭೆಯಲ್ಲಿ ಈ ಶಿಕ್ಷಕರ ಕಾಯಂ ಪ್ರಸ್ತಾವ ತಿರಸ್ಕೃತಗೊಂಡಿದೆ.

ADVERTISEMENT

‘ಹೊರಗುತ್ತಿಗೆಯ ಈ ಶಿಕ್ಷಕರನ್ನು ಕಾಯಂಗೊಳಿಸಿದರೆ ವಸತಿ ಶಾಲೆಗಳು ಗುಣಮಟ್ಟದ ಸೇವೆ ಪಡೆಯಲು ಸಾಧ್ಯವಿಲ್ಲ‘ ಎಂಬ ಸಮಾಜ ಕಲ್ಯಾಣ ಇಲಾಖೆಯ ಹೆಚ್ಚುವರಿ ಮುಖ್ಯ ಕಾರ್ಯದರ್ಶಿಯವರ ಉಲ್ಲೇಖವೂ ಈ ಅಭ್ಯರ್ಥಿಗಳಿಗೆ ಎದುರಾದ ಮತ್ತೊಂದು ಅಡ್ಡಿ.

ವಾಸ್ತವವಾಗಿ ಈ ಶಿಕ್ಷಕರಿಗೆ ಸಿಕ್ಕಿದ ಸೇವಾ ಕೃಪಾಂಕ 2ರಿಂದ 3 ವರ್ಷ ಮಾತ್ರ (ಶೇ 10ರಿಂದ 15ರಷ್ಟು ಕೃಪಾಂಕ). ಅವರ ಜತೆಯಲ್ಲೇ 2011ರಲ್ಲಿಸಿಇಟಿ ಬರೆದ ಇತರ 559 ಮಂದಿ ಕಾಯಂಗೊಂಡಿದ್ದು ಏಕೆಂದರೆ ಅವರಿಗೆ 5 ವರ್ಷದ ಸೇವಾ ಕೃಪಾಂಕ ದೊರೆತಿತ್ತು.

ಮುಖ್ಯಮಂತ್ರಿ ಪತ್ರಕ್ಕೂ ಬೆಲೆ ಇಲ್ಲ: 532 ಶಿಕ್ಷಕರ ಸೇವೆಯನ್ನು ಕಾಯಂಗೊಳಿಸುವ ಸಲುವಾಗಿ ಮತ್ತೊಮ್ಮೆ ಸಚಿವ ಸಂಪುಟದಲ್ಲಿ ಅನುಮೋದನೆ ಕೊಡಿಸಬೇಕು, ಈ ನಿಟ್ಟಿನಲ್ಲಿ ಕ್ರಮ ಕೈಗೊಳ್ಳಿ ಎಂದು ಮುಖ್ಯಮಂತ್ರಿ ಎಚ್‌.ಡಿ.ಕುಮಾರಸ್ವಾಮಿ ಅವರು ಸಮಾಜ ಕಲ್ಯಾಣ ಇಲಾಖೆಗೆ ಲಿಖಿತವಾಗಿ ಸೂಚಿಸಿದ್ದರೂ ಇದುವರೆಗೆ ಯಾವುದೇ ಕ್ರಮವನ್ನೂ ಜರುಗಿಸಿಲ್ಲ.

‘ನಾವು 10ರಿಂದ 15 ವರ್ಷಗಳ ಕಾಲ ವಸತಿ ಶಾಲೆಗಳ ಮಕ್ಕಳಿಗೆ ಪಾಠ ಮಾಡುತ್ತಲೇ ಇದ್ದೇವೆ. ನಮ್ಮಲ್ಲಿ ಹೆಚ್ಚನವರು ಪರಿಶಿಷ್ಟ ಜಾತಿ/ ಪಂಗಡಕ್ಕೆ ಸೇರಿದವರು. ನಾವೆಲ್ಲ ಶೈಕ್ಷಣಿಕವಾಗಿ ಅರ್ಹತೆ ಪಡೆದವರು ಮತ್ತು ನಮ್ಮ ಬೋಧನೆಯಲ್ಲೆ ಶೇ 100ರಷ್ಟು ಫಲಿತಾಂಶ ತಂದುಕೊಟ್ಟವರು. ಆದರೂ ನಾವೀಗ ಕೇವಲ ₹ 8 ಸಾವಿರಕ್ಕೆ ದುಡಿ
ಯುತ್ತಿದ್ದು, ಕುಟುಂಬ ಬೀದಿ ಪಾಲಾಗುವ ಹಂತಕ್ಕೆ ಬಂದಿದೆ. 2013ರವರೆಗಾದರೂ ಸೇವಾ ಕೃಪಾಂಕ ಕೊಟ್ಟರೆ ನಮ್ಮ ಸೇವೆ ಕಾಯಂಗೊಳ್ಳುತ್ತದೆ’ ಎಂದು ಹಲವು ಶಿಕ್ಷಕರು ‘ಪ್ರಜಾವಾಣಿ’ಗೆ ತಿಳಿಸಿದರು.

‘ಈ ಶಿಕ್ಷಕರು ಮಾಡದ ತಪ್ಪಿಗೆ ಇಂದು ಅತಂತ್ರ ಜೀವನ ಸಾಗಿಸುವಂತಾಗಿದೆ. ಸರ್ಕಾರ ತಕ್ಷಣ ತನ್ನ ತಪ್ಪನ್ನು ತಿದ್ದಿಕೊಂಡು ಇವರಿಗೆ ನ್ಯಾಯ ಕೊಡಿಸಬೇಕು. ಇಲ್ಲವಾದರೆ ಹೋರಾಟ ಅನಿವಾರ್ಯವಾಗುತ್ತದೆ’ ಎಂದು ಕರ್ನಾಟಕ ರಾಜ್ಯ ದಲಿತ ಪದವೀಧರರ ಸಂಘದ ಅಧ್ಯಕ್ಷ ಲೋಕೇಶ್‌ ವಿ.ಹೇಳಿದರು.

***

ಸಮಸ್ಯೆಯ ಬಗ್ಗೆ ಸರ್ಕಾರಕ್ಕೆ ಅರಿವಿದೆ. ಈ ಶಿಕ್ಷಕರಿಗೆ ನ್ಯಾಯ ಕೊಡಿಸುವ ನಿಟ್ಟಿನಲ್ಲಿ ಕ್ರಮ ಜರುಗಿಸಲಾಗುತ್ತಿದೆ.

– ಪ್ರಿಯಾಂಕ್‌ ಖರ್ಗೆ,ಸಮಾಜ ಕಲ್ಯಾಣ ಸಚಿವ

* ಶಿಕ್ಷಕರಿಂದ 10–15 ವರ್ಷಗಳಿಂದ ಸೇವೆ

* ರಾಜ್ಯದಲ್ಲಿ 824 ಮೊರಾರ್ಜಿ, ಕಿತ್ತೂರು ಚನ್ನಮ್ಮ ಇತರ ಶಾಲೆಗಳು

* 532 ಶಿಕ್ಷಕರನ್ನು ಕೆಲಸದಿಂದ ತೆಗೆಯದಂತೆ ಹೈಕೋರ್ಟ್‌ನಿಂದಲೇ ಆದೇಶ

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.