ADVERTISEMENT

ಪುಠ್ಯಪುಸ್ತಕ ಪರಿಷ್ಕರಣೆಯಲ್ಲಿ ಲೋಪ ಸರಿಪಡಿಸಲು 10 ದಿನ ಗಡುವು: ಮಠಾಧೀಶರು ಆಗ್ರಹ

ನಾವೇ ಪಠ್ಯ ಪರಿಷ್ಕರಿಸಿ ಸರ್ಕಾರಕ್ಕೆ ನೀಡುತ್ತೇವೆ: ಸಾಣೇಹಳ್ಳಿ ಸ್ವಾಮೀಜಿ

​ಪ್ರಜಾವಾಣಿ ವಾರ್ತೆ
Published 7 ಜೂನ್ 2022, 19:32 IST
Last Updated 7 ಜೂನ್ 2022, 19:32 IST
ಧಾರವಾಡದಲ್ಲಿ ಮಂಗಳವಾರ ನಡೆದ ವಿವಿಧ ಮಠಾಧೀಶರ ಸಭೆಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು
ಧಾರವಾಡದಲ್ಲಿ ಮಂಗಳವಾರ ನಡೆದ ವಿವಿಧ ಮಠಾಧೀಶರ ಸಭೆಯಲ್ಲಿ ಸಾಣೇಹಳ್ಳಿಯ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಮಾತನಾಡಿದರು   

ಧಾರವಾಡ: ‘ಪುಠ್ಯಪುಸ್ತಕ ಪರಿಷ್ಕರಣೆಯಲ್ಲಿ ಆಗಿರುವ ಲೋಪವನ್ನು ಹತ್ತು ದಿನಗಳ ಒಳಗಾಗಿ ಸರಿಪಡಿಸಬೇಕು’ ಎಂದು ಉತ್ತರ ಕರ್ನಾಟಕ ಪ್ರಮುಖ ಮಠಗಳ ಮಠಾಧೀಶರು ಸರ್ಕಾರವನ್ನು ಆಗ್ರಹಿಸಿದ್ದಾರೆ.

ಉತ್ತರ ಕರ್ನಾಟಕದ 21 ಪ್ರಮುಖ ಮಠಗಳ ಮಠಾಧೀಶರೊಂದಿಗೆ ಮಂಗಳವಾರ ಸಭೆ ನಡೆಸಿದ ನಂತರ ಸಾಣೇಹಳ್ಳಿ ತರಳಬಾಳು ಮಠದ ಪಂಡಿತಾರಾಧ್ಯ ಶಿವಾಚಾರ್ಯ ಸ್ವಾಮೀಜಿ ಅವರು ಮಾಧ್ಯಮಗಳಿಗೆ ಮಾಹಿತಿ ನೀಡಿದರು.

‘9ನೇ ತರಗತಿಯ ಸಮಾಜ ವಿಜ್ಞಾನ ಪುಸ್ತಕದ ಮೊದಲ ಭಾಗದಲ್ಲಿ ವೈದಿಕ ಧರ್ಮವನ್ನು ಮಕ್ಕಳ ಮೇಲೆ ಹೇರುವ ಕೆಲಸವನ್ನು ಪಠ್ಯಪುಸ್ತಕ ಪರಿಷ್ಕರಣೆ ಸಮಿತಿ ಮಾಡಿದೆ. ವೈದಿಕ ಪರಂಪರೆ ಹಾಗೂ ಜನಿವಾರವನ್ನು ಧಿಕ್ಕರಿಸಿ ಅರಿವೇ ಗುರು ಎಂದ ಬಸವಣ್ಣನವರು ಲಿಂಗಾಯತ ಧರ್ಮ ಪ್ರತಿಷ್ಠಾಪಿತರು. ಆದರೆ ಅವರ ತತ್ವಕ್ಕೆ ಅಪಚಾರ ಎಸಗುವ ಕೆಲಸವನ್ನು ಸಮಿತಿ ಮಾಡಿದೆ’ ಎಂದು ಆರೋಪಿಸಿದರು.

ADVERTISEMENT

‘ಜಾತಿ, ಲಿಂಗ ಅಸಮಾನತೆ, ಮೌಢ್ಯ, ಯಜ್ಞಯಾಗಾದಿಗಳನ್ನು ವಿರೋಧಿಸಿದ ಬಸವಣ್ಣನವರ ಕುರಿತು ಇಲ್ಲಸಲ್ಲದ ವಿಷಯಗಳನ್ನು ಹೇಳಲಾಗಿದೆ. ಹಾಗೆಯೇ ಕುವೆಂಪು, ಅಂಬೇಡ್ಕರ್ ಹಾಗೂ ಇನ್ನಿತರ ಮಹಾನ್ ನಾಯಕರ ಕುರಿತೂ ತಪ್ಪು ಮಾಹಿತಿಯನ್ನು ಪಠ್ಯಪುಸ್ತಕದಲ್ಲಿ ಮುದ್ರಿಸಲಾಗಿದೆ. ಬಸವಣ್ಣನವರ ಕುರಿತ ಪಠ್ಯವನ್ನು ನಾವೇ ಪರಿಷ್ಕರಿಸಿ ಸರ್ಕಾರಕ್ಕೆ ನೀಡುತ್ತೇವೆ. ಸರ್ಕಾರ ಅದನ್ನಾದರೂ ಒಪ್ಪಬಹುದು, ಇಲ್ಲವೇ ತಾನೇ ಸರಿಪಡಿಸಬಹುದು. ಹತ್ತು ದಿನಗಳ ಒಳಗಾಗಿ ಸರ್ಕಾರ ಯಾವುದೇ ಕ್ರಮ ಕೈಗೊಳ್ಳದಿದ್ದರೆ, ಮುಂದೆ ಮತ್ತೆ ಸಭೆ ಸೇರಿ ಮುಂದಿನ ಹೋರಾಟದ ರೂಪುರೇಷೆ ಕುರಿತು ತೀರ್ಮಾನಿಸಲಾಗುವುದು’ ಎಂದರು.

‘ಇಷ್ಟು ದಿನ ಕೇಳುವವರು ಇಲ್ಲ ಎಂದು ಬಸವಣ್ಣನವರ ಕುರಿತು ಇಲ್ಲಸಲ್ಲದ್ದನ್ನು ಹೇಳಿದ್ದಾರೆ. ಈಗ ಇರುವ ಸತ್ಯವನ್ನು ತಿಳಿಸುವ ಕೆಲಸವನ್ನು ನಾವೆಲ್ಲರೂ ಒಟ್ಟಾಗಿ ಮಾಡಲು ನಿಂತಿದ್ದೇವೆ. ಇತ್ತೀಚೆಗೆ ಮುಖ್ಯಮಂತ್ರಿಗೆ ಬರೆದ ಪತ್ರಕ್ಕೆ ಬಸವರಾಜ ಬೊಮ್ಮಾಯಿ ಹಾಗೂ ಶಿಕ್ಷಣ ಸಚಿವ ನಾಗೇಶ್ ಅವರು ಸಹಿ ಮಾಡಿ ಸರಿಪಡಿಸುವ ಭರವಸೆ ನೀಡಿದ್ದಾರೆ. ಅವರು ಹೇಳಿದಂತೆ ನಡೆದುಕೊಳ್ಳಬೇಕು’ ಎಂದು ಆಗ್ರಹಿಸಿದರು.

ಮೂರುಸಾವಿರ ಮಠದ ಡಾ. ಗುರುಸಿದ್ಧ ರಾಜಯೋಗೀಂದ್ರ ಸ್ವಾಮೀಜಿ, ಆನಂದಪುರದ ಡಾ. ಮಲ್ಲಿಕಾರ್ಜುನ ಮುರುಘರಾಜೇಂದ್ರ ಸ್ವಾಮೀಜಿ, ಗದುಗಿನ ಡಾ. ತೋಂಟದ ಸಿದ್ಧರಾಮ ಸ್ವಾಮೀಜಿ, ನಿಡಸೋಸಿ ಡಾ. ಪಂಚಮ ಶಿವಲಿಂಗೇಶ್ವರ ಸ್ವಾಮೀಜಿ, ಕೂಡಲಸಂಗಮದ ಗಂಗಾಮಾತಾಜಿ, ಬಸವಜಯಮೃತ್ಯುಂಜಯ ಸ್ವಾಮೀಜಿ, ನಿಜಗುಣಪ್ರಭು ತೋಂಟದಾರ್ಯ ಸ್ವಾಮೀಜಿ ಸೇರಿದಂತೆ 21 ಮಠಾಧೀಶರು ಪಾಲ್ಗೊಂಡಿದ್ದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.