
ಬೆಂಗಳೂರು: ಕೇಂದ್ರ ಮತ್ತು ರಾಜ್ಯ ಸರ್ಕಾರಗಳ ಸಹಭಾಗಿತ್ವದಲ್ಲಿ ಕಲಬುರಗಿಯಲ್ಲಿ ಸಮಗ್ರ ಜವಳಿ ಪಾರ್ಕ್ ನಿರ್ಮಾಣ ಮಾಡಲಾಗುತ್ತಿದ್ದು, ಮೂಲ ಸೌಕರ್ಯ ಕಲ್ಪಿಸಲು ₹390.26 ಕೋಟಿ ಬಿಡುಗಡೆಗೆ ಸಚಿವ ಸಂಪುಟ ಅನುಮೋದನೆ ನೀಡಿದೆ ಎಂದು ಜವಳಿ ಸಚಿವ ಶಿವಾನಂದ ಪಾಟೀಲ ಹೇಳಿದರು.
ಮಹಾಲಕ್ಷ್ಮಿಪುರ ಬಡಾವಣೆಯ ರಾಣಿ ಅಬ್ಬಕ್ಕ ಮೈದಾನದಲ್ಲಿ ಆಯೋಜಿಸಿರುವ 15 ದಿನಗಳ ರಾಷ್ಟ್ರೀಯ ಕೈಮಗ್ಗ ಮೇಳವನ್ನು ಶುಕ್ರವಾರ ಉದ್ಘಾಟಿಸಿ ಅವರು ಮಾತನಾಡಿದರು.
ಜವಳಿ ಪಾರ್ಕ್‌ಗೆ 180 ಮೆಗಾವಾಟ್ ವಿದ್ಯುತ್ ಪೂರೈಕೆಗೆ ವಿದ್ಯುತ್ ಉಪಕೇಂದ್ರ ನಿರ್ಮಾಣ ಕಾರ್ಯ ಪ್ರಗತಿಯಲ್ಲಿದೆ. ಈ ಯೋಜನೆಗೆ ನಂದಿಕೂರು ಗ್ರಾಮದ ಎಸ್‌ಟಿಪಿಯಿಂದ 12.09 ಎಂಎಲ್‌ಡಿ ನೀರು ಪೂರೈಕೆ ಮಾಡಲು ಸಮೀಕ್ಷೆ ಕೈಗೊಂಡಿದ್ದು, ಪೈಪ್‌ಲೈನ್ ಕಾರ್ಯ ಪ್ರಗತಿಯಲ್ಲಿದೆ ಎಂದು ತಿಳಿಸಿದರು.
ಕೈಮಗ್ಗ ಉತ್ತೇಜನಕ್ಕೆ ಪೂರಕವಾದ ಅಂಶಗಳನ್ನು ನೂತನ ಜವಳಿ ನೀತಿಯಲ್ಲಿ ಸೇರ್ಪಡೆ ಮಾಡಲಾಗುವುದು. ಹೊಸತನ ಅಳವಡಿಸಿಕೊಂಡರೆ ಮಾತ್ರ ಕೈಮಗ್ಗ ಉದ್ಯಮಕ್ಕೆ ಭವಿಷ್ಯ ಇದೆ ಎಂದರು.
ಕೈಮಗ್ಗ ಉತ್ಪನ್ನಗಳ ಮಾರಾಟವನ್ನು ಉತ್ತೇಜಿಸಲು ಪ್ರತಿಶತ 20 ರಷ್ಟು ರಿಯಾಯಿತಿ ನೀಡಲಾಗುತ್ತಿದ್ದು, 2024-25ನೇ ಸಾಲಿನಲ್ಲಿ ಈ ಉದ್ದೇಶಕ್ಕೆ ₹5.04 ಕೋಟಿ, 2025-26ನೇ ಸಾಲಿನಲ್ಲಿ ₹54.93 ಲಕ್ಷವನ್ನು ಸರ್ಕಾರವು ಕೈಮಗ್ಗ ನೇಕಾರರ ಸಹಕಾರ ಸಂಘ ಹಾಗೂ ಕೈಮಗ್ಗ ಮಹಾಮಂಡಳಗಳಿಗೆ ನೀಡಿದೆ ಎಂದರು.
ಅಧ್ಯಕ್ಷತೆ ವಹಿಸಿದ್ದ ಶಾಸಕ ಗೋಪಾಲಯ್ಯ ಅವರು, ‘ತಮ್ಮ ಕ್ಷೇತ್ರದ ವ್ಯಾಪ್ತಿಯಲ್ಲಿ ನೇಕಾರರ ಸಂಖ್ಯೆ ಅಧಿಕ ಪ್ರಮಾಣದಲ್ಲಿದ್ದು, ಶಾಸಕನಾಗಿ ಕೈಮಗ್ಗ ಅಭಿವೃದ್ಧಿಗೆ ಅಗತ್ಯ ಸಹಕಾರ ನೀಡುತ್ತೇನೆ’ ಎಂದು ಹೇಳಿದರು.
ರಾಜ್ಯ ಸಹಕಾರ ಕೈ ಮಗ್ಗ ನೇಕಾರರ ಮಹಾಮಂಡಳ ( ಕಾವೇರಿ ಹ್ಯಾಂಡ್‌ಲೂಮ್) ಅಧ್ಯಕ್ಷ ಬಿ.ಜೆ. ಗಣೇಶ್ ಮಾತನಾಡಿ, ಕಾವೇರಿ ಹ್ಯಾಂಡ್‌ಲೂಮ್ಸ್ ಅಂದಾಜು ಹತ್ತು ಕೋಟಿ ರೂಪಾಯಿ ನಷ್ಟದಲ್ಲಿದ್ದು, ಪುನಶ್ಚೇತನಕ್ಕೆ ಸರ್ಕಾರದಿಂದ ₹25 ಕೋಟಿ ನೆರವು ಕೊಡಿಸಬೇಕು. ಕೆಎಚ್‌ಡಿಸಿ ಮಾದರಿಯಲ್ಲಿ 4 ಎಚ್ ಸೌಲಭ್ಯ ನೀಡಬೇಕು ಎಂದು ಜವಳಿ ಸಚಿವರಿಗೆ ಮನವಿ ಮಾಡಿದರು.
ವಾಣಿಜ್ಯ ಮತ್ತು ಕೈಗಾರಿಕೆ ಇಲಾಖೆ ಕಾರ್ಯದರ್ಶಿ ರೋಹಿಣಿ ಸಿಂಧೂರಿ, ಜವಳಿ ಅಭಿವೃದ್ಧಿ ಆಯುಕ್ತೆ ಕೆ. ಜ್ಯೋತಿ, ಕೆಎಸ್‌ಟಿಐಡಿಸಿ ಅಧ್ಯಕ್ಷ ಚೇತನ್, ಉಪಾಧ್ಯಕ್ಷ ಬಾಲಾಜಿ ಉಪಸ್ಥಿತರಿದ್ದರು.
ರಾಷ್ಟ್ರೀಯ ಕೈಮಗ್ಗ ಮೇಳ ಜನವರಿ 16ರವರೆಗೆ ನಡೆಯಲಿದೆ. ಈ ಅವಧಿಯಲ್ಲಿ ಒಂದು ದಿನ ಮುಖ್ಯಮಂತ್ರಿ ಅಥವಾ ಉಪಮುಖ್ಯಮಂತ್ರಿ ಆಹ್ವಾನಿಸಿ ಮತ್ತೊಂದು ಕಾರ್ಯಕ್ರಮ ಆಯೋಜನೆ ಮಾಡಲಾಗುವುದು.ಶಿವಾನಂದ ಎಸ್. ಪಾಟೀಲ ಜವಳಿ ಸಚಿವ
84 ಮಳಿಗೆಗಳಲ್ಲಿ ಮಾರಾಟ
ವಿವಿಧ ರಾಜ್ಯಗಳ ಕೈಮಗ್ಗ ಸಂಘ ಸಂಸ್ಥೆಗಳು ಉತ್ಪಾದಿಸಿರುವ ಪಾರಂಪರಿಕ ಉತ್ನನ್ನಗಳ ಪ್ರದರ್ಶನ ಮತ್ತು ಮಾರಾಟಕ್ಕೆ 85 ಮಳಿಗೆಗಳನ್ನು ತೆರೆಯಲಾಗಿದೆ. ಉತ್ತರ ಪ್ರದೇಶ ಪಶ್ಚಿಮ ಬಂಗಾಳ ತೆಲಂಗಾಣ ಬಿಹಾರ ಮಹಾರಾಷ್ಟ್ರ ರಾಜಸ್ಥಾನ ಜಮ್ಮು ಮತ್ತು ಕಾಶ್ಮೀರ ಉತ್ತರಾಖಂಡ ಮಧ್ಯಪ್ರದೇಶ ಸೇರಿ ಹಲವು ರಾಜ್ಯಗಳ ವೈವಿಧ್ಯಮಯ ಕೈಮಗ್ಗ ಉತ್ಪನ್ನಗಳು ಪ್ರದರ್ಶನದಲ್ಲಿವೆ. ಪಾರಂಪರಿಕ ಹಾಗೂ ಜಿಐ ನೋಂದಾಯಿತ ಮೊಳಕಾಲ್ಮೂರು ಸೀರೆಗಳು ಇಳಕಲ್ ಉಡುಪಿ ಸೀರೆಗಳು ನವಲಗುಂದ ಜಮಖಾನ ಕಂಬಳಿ ಬೆಡ್‌ಶೀಟ್‌ಗಳನ್ನು ರಿಯಾಯಿತಿ ದರದಲ್ಲಿ ಗ್ರಾಹಕರಿಗೆ ಮಾರಾಟ ಮಾಡಲಾಗುತ್ತಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.