ADVERTISEMENT

ಆಹಾರದ ಕಿಟ್ ವಿತರಣೆ ವದಂತಿ: ಸಚಿವ ಅಂಗಡಿಗೆ ಮುತ್ತಿಗೆ!

ಬರಿಗೈಲಿ ವಾಪಸಾದ ನೂರಾರು ಮಂದಿ

​ಪ್ರಜಾವಾಣಿ ವಾರ್ತೆ
Published 26 ಮೇ 2020, 10:31 IST
Last Updated 26 ಮೇ 2020, 10:31 IST
   

ಬೆಳಗಾವಿ: ‘ನಗರದ ಕಾಡಾ ಕಚೇರಿ ಆವರಣದಲ್ಲಿ ಬೆಳಗಾವಿ ಸಂಸದರೂ ಆಗಿರುವ ರೈಲ್ವೆ ಖಾತೆ ರಾಜ್ಯ ಸಚಿವ ಸುರೇಶ ಅಂಗಡಿ ಅವರ ನೇತೃತ್ವದಲ್ಲಿ ಮಂಗಳವಾರ ಆಹಾರಧಾನ್ಯದ ಕಿಟ್ ವಿತರಿಸಲಾಗುವುದು’ ಎಂಬ ವದಂತಿ ನಂಬಿ ನೂರಾರು ಮಹಿಳೆಯರು, ನೇಕಾರ ಸಮುದಾಯದವರು ಹಾಗೂ ಕಟ್ಟಡ ನಿರ್ಮಾಣ ಕಾರ್ಮಿಕರು ಅಂತರವನ್ನೂ ಮರೆತು ಜಮಾಯಿಸಿದ್ದರು.

ಕೋವಿಡ್–19 ಲಾಕ್‌ಡೌನ್‌ನಿಂದ ಕೆಲಸವಿಲ್ಲದೆ ಸಂಕಷ್ಟಕ್ಕೆ ಒಳಗಾಗಿದ್ದ ಅವರು, ಸಚಿವರಿಂದ ನೆರವು ದೊರೆಯಬಹುದು ಎಂದು ಭಾವಿಸಿ ಬಂದು ಬರಿಗೈಲಿ ವಾಪಸಾದರು. ಇವರಲ್ಲಿ ವಡಗಾವಿ ಹಾಗೂ ಖಾಸಬಾಗ್‌ ಪ್ರದೇಶದವರೆ ಹೆಚ್ಚಿದ್ದರು.

ಜನರು ಜಮಾಯಿಸಿದ್ದ ಸುದ್ದಿ ತಿಳಿದು ಕಚೇರಿಯಿಂದ ಹೊರ ಬಂದ ಸುರೇಶ ಅಂಗಡಿ, ‘ಕೇಂದ್ರ ಹಾಗೂ ರಾಜ್ಯ ಸರ್ಕಾರದಿಂದ ಪಡಿತರ ಮೊದಲಾದ ಸೌಲಭ್ಯಗಳನ್ನು ಒದಗಿಸಲಾಗುತ್ತಿದೆ. ಅವುಗಳನ್ನು ಫಲಾನುಭವಿಗಳಿಗೆ ಒದಗಿಸಲು ಕ್ರಮ ವಹಿಸಲಾಗಿದೆ. ನಾನು ವೈಯಕ್ತಿಕವಾಗಿ ಆಹಾರ ಧಾನ್ಯ ಕಿಟ್ ವಿತರಿಸುತ್ತೇನೆ ಎಂದು ಎಲ್ಲಿಯೂ ತಿಳಿಸಿಲ್ಲ. ದಾನಿಗಳು ನೀಡಿದ್ದನ್ನು ಜನರಿಗೆ ಹಂಚಿದ್ದೇನೆ. ಆದಾಗ್ಯೂ ನೀವೆಲ್ಲ ಇಲ್ಲಿಗೆ ಏಕೆ ಬಂದಿರಿ’ ಎಂದು ಅಚ್ಚರಿಯಿಂದ ಕೇಳಿದರು.

ADVERTISEMENT

ತಮಗೆ ಮುತ್ತಿಗೆ ಹಾಕಿದ ಜನರು ಏನಾದರೂ ಸಹಾಯ ಮಾಡಬೇಕು ಎಂದು ಪಟ್ಟು ಹಿಡಿದಿದ್ದರಿಂದ ಸಚಿವರು ಮುಜುಗರಕ್ಕೆ ಒಳಗಾದರು.

ಬಳಿಕ ಜಿಲ್ಲಾಧಿಕಾರಿ ಡಾ.ಎಸ್.ಬಿ. ಬೊಮ್ಮನಹಳ್ಳಿ, ನಗರ ಪೊಲೀಸ್ ಆಯುಕ್ತ ಬಿ.ಎಸ್. ಲೋಕೇಶ್‌ಕುಮಾರ್‌ ಅವರನ್ನು ಸ್ಥಳಕ್ಕೆ ಕರೆಸಿಕೊಂಡು ಚರ್ಚಿಸಿದ ಸಚಿವರು, ‘ರಾಜ್ಯ ಸರ್ಕಾರದಿಂದ ನೆರವು ಕಲ್ಪಿಸಬೇಕು’ ಎಂದು ಸೂಚಿಸಿದರು.

‘ಪಡಿತರ ಚೀಟಿ ಇರುವವರಿಗೆ ಹಾಗೂ ಅರ್ಜಿ ಸಲ್ಲಿಸಿದವರಿಗೆ ಸರ್ಕಾರ ನಿಗದಿಪಡಿಸಿದ ಆಹಾರಧಾನ್ಯ ವಿತರಿಸಬೇಕು’ ಎಂದು ನಿರ್ದೇಶನ ನೀಡಿದರು. ‘ಈಗಾಗಲೇ ಪಡಿತರ ವಿತರಣೆ ಪ್ರಕ್ರಿಯೆ ನಡೆದಿದೆ. ಆದಾಗ್ಯೂ ಪರಿಶೀಲಿಸಲಾಗುವುದು’ ಎಂದು ಜಿಲ್ಲಾಧಿಕಾರಿ ಬೊಮ್ಮನಹಳ್ಳಿ ತಿಳಿಸಿದರು.

ಬಳಿಕ ಜನರನ್ನು ಪೊಲೀಸರು ಅಲ್ಲಿಂದ ಕಳುಹಿಸಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.