ADVERTISEMENT

ಕಮಲ್ ಹಾಸನ್ ಸಿನಿಮಾ 'ಥಗ್‌ ಲೈಫ್‌' ಪ್ರದರ್ಶನಕ್ಕೆ ನಿರ್ಬಂಧ ಹೇರಿಲ್ಲ: ಸರ್ಕಾರ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 19 ಜೂನ್ 2025, 5:43 IST
Last Updated 19 ಜೂನ್ 2025, 5:43 IST
   

ಬೆಂಗಳೂರು: ನಟ ಕಮಲ್ ಹಾಸನ್ ನಟನೆಯ 'ಥಗ್‌ ಲೈಫ್‌' ಸಿನಿಮಾ ಬಿಡುಗಡೆ ವಿಚಾರವಾಗಿ ಚಾಟಿ ಬೀಸಿದ್ದ ಸುಪ್ರೀಂ ಕೋರ್ಟ್‌ಗೆ ರಾಜ್ಯ ಸರ್ಕಾರ ಪ್ರತಿಕ್ರಿಯೆ ನೀಡಿದೆ.

ಕರ್ನಾಟಕದ ಚಿತ್ರಮಂದಿರಗಳಲ್ಲಿ 'ಥಗ್‌ ಲೈಫ್‌' ಸಿನಿಮಾ ಪ್ರದರ್ಶನಕ್ಕೆ ಚ್ಯುತಿ ಬರದಂತೆ ನೋಡಿಕೊಳ್ಳುವುದು ರಾಜ್ಯ ಸರ್ಕಾರದ ಹೊಣೆ ಎಂದು ಜೂನ್ 17ರಂದು ಹೇಳಿದ್ದ ಕೋರ್ಟ್‌, 'ಯಾರಾದರೂ ಏನಾದರೂ ಮೌಖಿಕ ಹೇಳಿಕೆ ನೀಡಿದ್ದರೆ, ಅದಕ್ಕೆ ಹೇಳಿಕೆಯಿಂದಲೇ ಪ್ರತ್ಯುತ್ತರ ನೀಡಿ. ಯಾರಾದರೂ ಏನಾದರೂ ಬರೆದಿದ್ದರೆ, ಬರಹ ರೂಪದಲ್ಲೇ ಅದಕ್ಕೆ ಪ್ರತ್ಯುತ್ತರ ನೀಡಿ. ಆದರೆ, ಹೀಗೆ ನಿಷೇಧದ ಸನ್ನಿವೇಶ ಸೃಷ್ಟಿಸಲು ಅವಕಾಶ ಇಲ್ಲ' ಎಂದಿತ್ತು. ಹಾಗೆಯೇ, ಈ ವಿಚಾರವಾಗಿ ಪ್ರತಿಕ್ರಿಯೆ ಸಲ್ಲಿಸುವಂತೆ ನಿರ್ದೇಶನ ನೀಡಿತ್ತು.

ಘನ ನ್ಯಾಯಾಲಯದ ಆದೇಶಕ್ಕೆ ಅನುಸಾರವಾಗಿ ಪ್ರತಿಕ್ರಿಯೆ ಸಲ್ಲಿಸುತ್ತಿರುವುದಾಗಿ ಹೇಳಿರುವ ಸರ್ಕಾರ, ಕೇಂದ್ರ ಚಲನಚಿತ್ರ ಪ್ರಮಾಣೀಕರಣ ಮಂಡಳಿಯಿಂದ (ಸಿಬಿಎಫ್‌ಸಿ) ಪ್ರಮಾಣೀಕರಿಸಲ್ಪಟ್ಟ 'ಥಗ್‌ ಲೈಫ್‌' ಚಿತ್ರ ಬಿಡುಗಡೆಗೆ ರಾಜ್ಯ ಸರ್ಕಾರ ಯಾವುದೇ ನಿರ್ಬಂಧ ಹೇರಿಲ್ಲ. ನಿರ್ಮಾಪಕರು ಚಿತ್ರವನ್ನು ಕರ್ನಾಟಕದಲ್ಲಿ ಬಿಡುಗಡೆ ಮಾಡಲು ನಿರ್ಧರಿಸಿದರೆ, ಸರ್ಕಾರವು ತನ್ನ ಕರ್ತವ್ಯ  ನಿರ್ವಹಿಸಲಿದೆ. ಸಿನಿಮಾಗೆ ಸಂಬಂಧಿಸಿದವರು ಅಂದರೆ, ನಟರು, ನಿರ್ದೇಶಕರು, ನಿರ್ಮಾಪಕರು, ವಿತರಕರು ಹಾಗೂ ಪ್ರೇಕ್ಷಕರಿಗೆ ಸೂಕ್ತ ಭದ್ರತೆ ಒದಗಿಸುತ್ತದೆ ಎಂದು ಸ್ಪಷ್ಟಪಡಿಸಿದೆ.

ADVERTISEMENT

ಮುಂದುವರಿದು, ಸಿನಿಮಾದ ನಾಯಕ ನಟ ಪ್ರಚಾರ ಕಾರ್ಯಕ್ರಮದ ವೇಳೆ ನೀಡಿರುವ ಕೆಲವು ಹೇಳಿಕೆಗಳಿಗೆ ಸಂಬಂಧಿಸಿದಂತೆ ಅಸಮಾಧಾನ ವ್ಯಕ್ತಪಡಿಸಿರುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು, 2025ರ ಮೇ 30ರಂದು ಪತ್ರ ಬರೆದು ಕ್ಷಮೆಯಾಚಿಸುವಂತೆ ಕೋರಿದೆ ಎಂದು ತಿಳಿಸಿದೆ.

ಹಾಗೆಯೇ, ಸಿನಿಮಾ ನಿರ್ಮಾಣ ಸಂಸ್ಥೆ ರಾಜ್‌ ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌, 'ಥಗ್‌ ಲೈಫ್‌' ಚಿತ್ರ ಬಿಡುಗಡೆಗೆ ಸೂಕ್ತ ಭದ್ರತೆ ಒದಗಿಸುವಂತೆ ಕೋರಿ ಕರ್ನಾಟಕ ಹೈಕೋರ್ಟ್‌ಗೆ ರಿಟ್‌ ಅರ್ಜಿ ಸಲ್ಲಿಸಿತ್ತು. ಈ ವಿಚಾರವಾಗಿ ಜೂನ್‌ 3ರಂದು ನಡೆದ ವಿಚಾರಣೆ ಸಂದರ್ಭದಲ್ಲಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಜೊತೆಗಿನ ವಿವಾದ ಬಗೆಹರಿಯುವವರೆಗೆ ರಾಜ್ಯದಲ್ಲಿ ಸಿನಿಮಾ ಬಿಡುಗಡೆ ಮಾಡುವುದಿಲ್ಲ ಎಂದು ಹೈಕೋರ್ಟ್‌ಗೆ ವಾಗ್ದಾನ ಮಾಡಿದೆ ಎಂದೂ ಉಲ್ಲೇಖಿಸಿದೆ.

ರಾಜ್ಯದಲ್ಲಿ ಕಾನೂನು ಸುವ್ಯವಸ್ಥೆ ಕಾಪಾಡುವುದು, ನಾಗರಿಕರ ಮೂಲಭೂತ ಹಕ್ಕುಗಳನ್ನು ಎತ್ತಿಹಿಡಿಯುವುದು ಹಾಗೂ ವಿವಾದದಲ್ಲಿ ಭಾಗಿಯಾಗಿರುವವರ ಹಕ್ಕುಗಳನ್ನು ರಕ್ಷಿಸುವುದು ತನ್ನ ಕರ್ತವ್ಯವಾಗಿದೆ ಎಂದು ರಾಜ್ಯ ಸರ್ಕಾರ ಪ್ರತಿಪಾದಿಸಿದೆ.

ಕಳೆದ ತಿಂಗಳು 'ಥಗ್‌ ಲೈಫ್‌' ಸಿನಿಮಾ ಪ್ರಚಾರ ಕಾರ್ಯಕ್ರಮದಲ್ಲಿ ಮಾತನಾಡಿದ್ದ ನಟ ಕಮಲ್ ಹಾಸನ್‌, 'ಕನ್ನಡವು ತಮಿಳಿನಿಂದ ಹುಟ್ಟಿದೆ' ಎಂದು ಹೇಳಿದ್ದರು. ಇದಕ್ಕೆ ರಾಜ್ಯದಾದ್ಯಂತ ತೀವ್ರ ಆಕ್ಷೇಪ ವ್ಯಕ್ತವಾಗಿತ್ತು. ಇದರ ಬೆನ್ನಲ್ಲೇ, ಕಮಲ್ ಕ್ಷಮೆಯಾಚಿಸಬೇಕೆಂಬ ಒತ್ತಾಯ ಬಲವಾಗಿ ಕೇಳಿ ಬಂದಿತ್ತು. ಸಿನಿಮಾ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ಅವಕಾಶ ಕೊಡುವುದಿಲ್ಲ ಎಂದು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಸ್ಪಷ್ಟವಾಗಿ ಹೇಳಿತ್ತು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.