ADVERTISEMENT

ಥಗ್‌ಲೈಫ್ ಬಿಡುಗಡೆಗೆ ರಕ್ಷಣೆ ನೀಡಿ: ಕರ್ನಾಟಕ ಹೈಕೋರ್ಟ್‌ಗೆ ಕಮಲ್ ಅರ್ಜಿ

ಪಿಟಿಐ
Published 2 ಜೂನ್ 2025, 11:29 IST
Last Updated 2 ಜೂನ್ 2025, 11:29 IST
<div class="paragraphs"><p>ಕರ್ನಾಟಕ ಹೈಕೋರ್ಟ್ ಹಾಗೂ ಕಮಲ್ ಹಾಸನ್</p></div>

ಕರ್ನಾಟಕ ಹೈಕೋರ್ಟ್ ಹಾಗೂ ಕಮಲ್ ಹಾಸನ್

   

– ಎ.ಐ ಚಿತ್ರ

ಬೆಂಗಳೂರು: ನಟ ಕಮಲ್‌ ಹಾಸನ್‌ ಅಭಿನಯದ ‘ಥಗ್ ಲೈಫ್’ ಸಿನಿಮಾದ ಬಿಡುಗಡೆ ಹಾಗೂ ಪ್ರದರ್ಶನಕ್ಕೆ ಕರ್ನಾಟಕದಲ್ಲಿ ವಿರೋಧ ವ್ಯಕ್ತವಾಗಿರುವ ಬೆನ್ನಲ್ಲೇ, ‘ಸಿನಿಮಾದ ಹಂಚಿಕೆ ಮತ್ತು ಬಿಡುಗಡೆಗೆ ಅಗತ್ಯ ಬಂದೋಬಸ್ತ್‌ ಒದಗಿಸಲು ರಾಜ್ಯ ಸರ್ಕಾರಕ್ಕೆ ನಿರ್ದೇಶಿಸಬೇಕು’  ಎಂದು ಕೋರಿ ಸಿನಿಮಾ ನಿರ್ಮಾಣ ಸಂಸ್ಥೆಯಾದ, ‘ರಾಜ್‌ಕಮಲ್‌ ಫಿಲ್ಮ್ಸ್‌ ಇಂಟರ್‌ನ್ಯಾಷನಲ್‌’ ಹೈಕೋರ್ಟ್‌ ಮೆಟ್ಟಿಲೇರಿದೆ.

ADVERTISEMENT

ಈ ಸಂಬಂಧ ಸಂಸ್ಥೆಯ ಮುಖ್ಯ ಕಾರ್ಯನಿರ್ವಹಣಾಧಿಕಾರಿ ವಿ.ನಾರಾಯಣನ್‌ ಕರ್ನಾಟಕ ಹೈಕೋರ್ಟ್‌ನಲ್ಲಿ ರಿಟ್‌ ಅರ್ಜಿ ಸಲ್ಲಿಸಿದ್ದು, ಇದು ಇನ್ನಷ್ಟೇ ವಿಚಾರಣೆಗೆ ನಿಗದಿಯಾಗಬೇಕಿದೆ.

‘ಇದೇ 5ಕ್ಕೆ ಸಿನಿಮಾ ಬಿಡುಗೆಯಾಗಲಿದೆ. ಹೀಗಾಗಿ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಸಿನಿಮಾದ ಬಿಡುಗಡೆ, ಪ್ರದರ್ಶನ ಮತ್ತು ವಿತರಣೆಗೆ ಪ್ರತ್ಯಕ್ಷವಾಗಿ ಅಥವಾ ಅಪ್ರತ್ಯಕ್ಷವಾಗಿ ತೊಂದರೆ ಉಂಟು ಮಾಡುವುದನ್ನು ರಾಜ್ಯ ಗೃಹ ಇಲಾಖೆ ನಿರ್ಬಂಧಿಸಬೇಕು. ನಿರ್ದೇಶಕರು, ನಿರ್ಮಾಪಕರು, ಕಲಾವಿದರು, ಹಂಚಿಕೆದಾರರು ಸೇರಿದಂತೆ, ಸಿನಿಮಾ ಮಂದಿರಗಳಿಗೆ ಮತ್ತು ಸಿನಿಮಾ ನೋಡಲು ಬಂದು ಹೋಗುವ ಜನರಿಗೆ ಸೂಕ್ತ ಭದ್ರತೆ ಒದಗಿಸುವಂತೆ ನಿರ್ದೇಶಿಸಬೇಕು’ ಎಂದು ಅರ್ಜಿದಾರ ಸಂಸ್ಥೆಯು ಮನವಿ ಮಾಡಿದೆ.

‘ಸಿನಿಮಾ ನಿಷೇಧಿಸಲು ಕರ್ನಾಟಕ ರಾಜ್ಯ ಚಲನಚಿತ್ರ ವಾಣಿಜ್ಯ ಮಂಡಳಿಗೆ ಯಾವುದೇ ಹಕ್ಕು ಇಲ್ಲ. ಸಿನಿಮಾ ಬಿಡುಗಡೆಗೆ ನಿಷೇಧ ಹೇರುವುದರಿಂದ ಕೋಟ್ಯಂತರ ರೂಪಾಯಿ ನಷ್ಟವಾಗಲಿದ್ದು, ಸಿನಿಮಾ ಪ್ರದರ್ಶಿಸುವ ಮತ್ತು ಅದನ್ನು ವೀಕ್ಷಿಸುವ ಜನರ ಹಕ್ಕಿಗೆ ಹಾನಿಯಾಗುತ್ತದೆ’ ಎಂದು ಅರ್ಜಿದಾರರು ಆಕ್ಷೇಪಿಸಿದ್ದಾರೆ. 

ಪ್ರಕರಣದಲ್ಲಿ ರಾಜ್ಯ ಗೃಹ ಇಲಾಖೆ ಕಾರ್ಯದರ್ಶಿ, ಡಿಜಿ–ಐಜಿಪಿ, ಬೆಂಗಳೂರು ನಗರ ಪೊಲೀಸ್‌ ಆಯುಕ್ತ, ಕೇಂದ್ರೀಯ ಚಲನಚಿತ್ರ ಪ್ರಮಾಣೀಕರಣ ಮಂಡಳಿ (ಸಿಬಿಎಫ್‌ಎಸ್‌) ಮುಖ್ಯ ಕಾರ್ಯ ನಿರ್ವಾಹಕ, ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರನ್ನು ಪ್ರತಿವಾದಿಗಳನ್ನಾಗಿ ಮಾಡಲಾಗಿದೆ. ಅರ್ಜಿದಾರರ ಪರ ಹೈಕೋರ್ಟ್‌ ವಕೀಲ ವಿಕ್ರಮ್ ಉನ್ನಿ ರಾಜಗೋಪಾಲ ವಕಾಲತ್ತು ವಹಿಸಿದ್ದಾರೆ.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.