
ಕಲಬುರಗಿ: ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದ ಪ್ರಯಾಣಿಕರಿಂದ ಮಧ್ಯ ರೈಲ್ವೆಯ ಸೋಲಾಪುರ ವಿಭಾಗವು 2025ರ ಏಪ್ರಿಲ್‌ನಿಂದ ಡಿಸೆಂಬರ್‌ವರೆಗೆ ₹ 8.39 ಕೋಟಿ ದಂಡ ಸಂಗ್ರಹ ಮಾಡಿದೆ.
ಈ ಕುರಿತು ಪತ್ರಿಕಾ ಹೇಳಿಕೆ ಬಿಡುಗಡೆ ಮಾಡಿರುವ ಮಧ್ಯ ರೈಲ್ವೆಯು, ಈ ಅವಧಿಯಲ್ಲಿ 1.81 ಲಕ್ಷ ಪ್ರಕರಣಗಳನ್ನು ದಾಖಲಿಸಿ ₹ 8.39 ಕೋಟಿ ದಂಡ ಸಂಗ್ರಹಿಸಿದೆ. ಮಧ್ಯ ರೈಲ್ವೆ ವ್ಯಾಪ್ತಿಯ ಸೋಲಾಪುರ, ಭುಸಾವಲ್, ಮುಂಬೈ, ಪುಣೆ, ನಾಗಪುರ, ಕೇಂದ್ರ ವಲಯದಲ್ಲಿ ಒಟ್ಟಾರೆ ₹ 183.16 ಕೋಟಿ ದಂಡ ಸಂಗ್ರಹಿಸಲಾಗಿದೆ.
ಕಲಬುರಗಿ, ಗಾಣಗಾಪುರ, ಕುಲಾಲಿ ರೈಲು ನಿಲ್ದಾಣಗಳು ಸೋಲಾಪುರ ವಿಭಾಗದ ವ್ಯಾಪ್ತಿಗೆ ಬರುತ್ತವೆ.
ಪ್ಯಾಸೆಂಜರ್, ಎಕ್ಸ್‌ಪ್ರೆಸ್, ರಾಜಧಾನಿ, ವಂದೇ ಭಾರತ್ ಸೇರಿದಂತೆ ವಿವಿಧ ರೈಲುಗಳಲ್ಲಿ ದಿಢೀರ್ ತಪಾಸಣೆ, ರೈಲು ನಿಲ್ದಾಣಗಳಲ್ಲಿ ಸಾಮಾನ್ಯ ತಪಾಸಣೆಯ ಸಂದರ್ಭದಲ್ಲಿ ಟಿಕೆಟ್ ಇಲ್ಲದೇ ಪ್ರಯಾಣಿಸುತ್ತಿದ್ದವರನ್ನು ಪತ್ತೆ ಹಚ್ಚಿ ದಂಡ ವಸೂಲಿ ಮಾಡಲಾಗಿದೆ. ಟಿಕೆಟ್ ಇಲ್ಲದೇ ಪ್ರಯಾಣಿಸುವವರ ಬಗ್ಗೆ ರೈಲ್ವೆ ಇಲಾಖೆಯು ಶೂನ್ಯ ಸಹಿಷ್ಣುತೆ ಹೊಂದಿದ್ದು, ಏಳು ವರ್ಷಗಳವರೆಗೆ ಜೈಲು ಶಿಕ್ಷೆಯನ್ನೂ ವಿಧಿಸಬಹುದಾಗಿದೆ. ಹೀಗಾಗಿ, ರೈಲ್ವೆ ನಿಲ್ದಾಣಗಳಲ್ಲಿನ ಟಿಕೆಟ್ ಕೌಂಟರ್‌ಗಳಲ್ಲಿ ಅಧಿಕೃತ ಟಿಕೆಟ್ ಪಡೆದು ಪ್ರಯಾಣಿಸಬೇಕು ಎಂದು ಮಧ್ಯ ರೈಲ್ವೆಯ ಸಾರ್ವಜನಿಕ ಸಂಪರ್ಕಾಧಿಕಾರಿ ಸ್ವಪ್ನಿಲ್ ನೀಲಾ ಸಲಹೆ ನೀಡಿದ್ದಾರೆ.
ಮಧ್ಯ ರೈಲ್ವೆಯ ಭುಸಾವಲ್ ವಿಭಾಗದಲ್ಲಿ ಅತಿ ಹೆಚ್ಚು ₹ 63.83 ಕೋಟಿ ದಂಡ ಸಂಗ್ರಹಿಸಲಾಗಿದೆ.
ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.