ADVERTISEMENT

‘ಪಠ್ಯದಿಂದ ಟಿಪ್ಪು ಹೊರಕ್ಕೆ: ವರದಿ ಬಳಿಕ ನಿರ್ಧಾರ’

​ಪ್ರಜಾವಾಣಿ ವಾರ್ತೆ
Published 4 ನವೆಂಬರ್ 2019, 19:11 IST
Last Updated 4 ನವೆಂಬರ್ 2019, 19:11 IST
ಎಸ್‌.ಸುರೇಶ್‌ ಕುಮಾರ್‌
ಎಸ್‌.ಸುರೇಶ್‌ ಕುಮಾರ್‌   

ಚಾಮರಾಜನಗರ: ‘ಶಾಲಾ ಪಠ್ಯದಿಂದ ಟಿಪ್ಪು ಸುಲ್ತಾನ್‌ಗೆ ಸಂಬಂಧಿಸಿದ ವಿಚಾರವನ್ನು ತೆಗೆಯುವ ಬಗ್ಗೆ ಇನ್ನೂ ನಿರ್ಧರಿಸಿಲ್ಲ. ಟಿಪ್ಪು ಪರಿಚಯಿಸುವ ಅಧ್ಯಾಯ ತೆಗೆಯಬೇಕು ಎಂದು ಪತ್ರ ಬರೆದಿರುವ ಶಾಸಕ ಅಪ್ಪಚ್ಚು ರಂಜನ್‌ ಅವರಿಂದ ವಿವರಣೆ ಪಡೆದು ವರದಿ ನೀಡುವಂತೆ ಪಠ್ಯಪುಸ್ತಕ ವಿಭಾಗಕ್ಕೆ ಸೂಚಿಸಿದ್ದೇನೆ’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್‌.ಸುರೇಶ್‌ಕುಮಾರ್‌ ಹೇಳಿದರು.

ಸೋಮವಾರ ಸುದ್ದಿಗಾರರೊಂದಿಗೆ ಮಾತನಾಡಿದ ಅವರು, ‘ರಂಜನ್‌ ಬರೆದಿರುವ ಪತ್ರವನ್ನು ಪಠ್ಯಪುಸ್ತಕ ವಿಭಾಗಕ್ಕೆ ಕಳುಹಿಸಿದ್ದೇನೆ. ಈ ಬಗ್ಗೆ ಚರ್ಚೆ ನಡೆಸಬೇಕು. ಅವರನ್ನೂ ಆಹ್ವಾನಿಸಿ, ಯಾವ ಕಾರಣಗಳಿಗಾಗಿ ಪಠ್ಯದಿಂದ ಟಿಪ್ಪು ವಿಷಯವನ್ನು ತೆಗೆಯಬೇಕು ಎಂಬುದನ್ನು ವಿವರಣೆ ಪಡೆಯಬೇಕು ಎಂದು ಹೇಳಿದ್ದೇನೆ. ವಿಭಾಗ ವರದಿ ಸಲ್ಲಿಸಿದ ನಂತರ ನಿಲುವು ಸ್ಪಷ್ಟಪಡಿಸುತ್ತೇವೆ’ ಎಂದರು.

ಅಪ್ಪಚ್ಚು ರಂಜನ್‌ ಪತ್ರ ಬರೆದಿದ್ದಕ್ಕೆ ಟಿಪ್ಪು ಜಯಂತಿ ರದ್ದುಗೊಳಿಸುವ ತೀರ್ಮಾನವನ್ನು ಸರ್ಕಾರ ತೆಗೆದುಕೊಂಡಿದ್ದಲ್ಲವೇ ಎಂಬುವುದಕ್ಕೆ, ‘ಟಿಪ್ಪು ಜಯಂ‌ತಿ ಮಾಡಬಾರದು ಎಂಬುದು ಅನೇಕರ ಭಾವನೆ. ಜಯಂತಿ ಮಾಡುತ್ತಿದ್ದವರಲ್ಲೇ ಅನೇಕರು ಇದು ಯೋಗ್ಯವಲ್ಲ ಎಂಬ ಅಭಿಪ್ರಾಯ ಹೊಂದಿದ್ದರು. ಮುಸ್ಲಿಮರು ಕೂಡ ಯಾವುದೇ ವ್ಯಕ್ತಿಯ ವೈಭವೀಕರಣವನ್ನು ಇಷ್ಟಪಡುವುದಿಲ್ಲ, ಜಯಂತಿ ಆಚರಿಸುವ ಪದ್ಧತಿಯೂ ಇಲ್ಲ. ಆಚರಣೆ ಬೇಡ ಎಂದು ನಾವು ಹೇಳುತ್ತಲೇ ಬಂದಿದ್ದೆವು. ಜಯಂತಿಯ ದಿನದ ವಾತಾವರಣ, ವಿಶೇಷ ಬಂದೋಬಸ್ತ್‌... ‌ಮುಂತಾದ ವಿಚಾರಗಳನ್ನು ಮನಗಂಡು ಸರ್ಕಾರ ಈ ನಿರ್ಧಾರ ಕೈಗೊಂಡಿದೆ. ಪತ್ರದ ಕಾರಣಕ್ಕಾಗಿ ಅಲ್ಲ’ ಎಂದು ಉತ್ತರಿಸಿದರು.

ADVERTISEMENT

ಮಕ್ಕಳಿಗೆ ಕಳಪೆ ಶೂ: ತನಿಖೆ
ಚಾಮರಾಜನಗರ: ‘ಕೆಲವೆಡೆ ಶಾಲಾ ಮಕ್ಕಳಿಗೆ ಕಳಪೆ ಗುಣಮಟ್ಟದ ಶೂ ವಿತರಿಸುವುದು ಗಮನಕ್ಕೆ ಬಂದಿದ್ದು, ಈ ಬಗ್ಗೆ ತನಿಖೆ ನಡೆಸಲು ಅಧಿಕಾರಿಗಳಿಗೆ ಸೂಚಿಸಲಾಗಿದೆ. ಇದರ ಹಿಂದಿರುವ ವ್ಯಕ್ತಿಯನ್ನು ಪತ್ತೆ ಹಚ್ಚಲಾಗುವುದು’ ಎಂದು ಪ್ರಾಥಮಿಕ ಮತ್ತು ಪ್ರೌಢಶಿಕ್ಷಣ ಸಚಿವ ಎಸ್. ಸುರೇಶ್‌ ಕುಮಾರ್‌ ಹೇಳಿದರು.

‘ಎಸ್‌ಡಿಎಂಸಿಗಳ ಮೇಲೆ ನಂಬಿಕೆ ಇಟ್ಟು, ಶೂ, ಕಾಲು ಚೀಲ ವಿತರಿಸುವ ಹೊಣೆಯನ್ನು ನೀಡಲಾಗಿತ್ತು. ಖರೀದಿಸಬಹುದಾದ ಶೂ ಬ್ರ್ಯಾಂಡ್‌ಗಳನ್ನೂ ಪಟ್ಟಿ ಮಾಡಲಾಗಿತ್ತು. ಆದರೆ, ಅತ್ಯಂತ ಕಳಪೆ ಗುಣಮಟ್ಟದ ಶೂಗಳನ್ನು ವಿತರಿಸುತ್ತಿರುವುದರ ಬಗ್ಗೆ ಹಲವು ಕಡೆಗಳಿಂದ ದೂರುಗಳು ಬಂದಿವೆ. ಮುಂದಿನ ವರ್ಷದಿಂದ ಸರ್ಕಾರಿ ಸ್ವಾಮ್ಯದ ಲಿಡ್‌ಕರ್‌ ಸಂಸ್ಥೆಗೆ ಶೂ ವಿತರಿಸುವ ಜವಾಬ್ದಾರಿ ನೀಡಲು ಚಿಂತನೆ ನಡೆದಿದೆ’ ಎಂದರು.

ಗುರುವಾರ ನಿರ್ಧಾರ: ‘ಪಿಯುಸಿ ಫಲಿತಾಂಶ ಬರುವುದಕ್ಕೂ ಮೊದಲು ನೀಟ್‌ ನಡೆದರೆ ವಿದ್ಯಾರ್ಥಿಗಳ ಮೇಲೆ ಹೆಚ್ಚು ಒತ್ತಡ ಇರುವುದಿಲ್ಲ ಎಂಬ ಸಲಹೆ ಬಂದಿದೆ. ಗುರುವಾರ ಪಿಯುಸಿ ನಿರ್ದೇಶಕರು ಹಾಗೂ ಹಿಂದಿನ ನಿರ್ದೇಶಕರ ಸಭೆ ಕರೆಯಲಾಗಿದೆ. ಸಭೆಯಲ್ಲಿ ಈ ಬಗ್ಗೆ ಚರ್ಚಿಸಿ ನಿರ್ಧಾರ ಕೈಗೊಳ್ಳಲಾಗುವುದು’ ಎಂದು ಹೇಳಿದರು.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.