ADVERTISEMENT

ತಿರುಮಲದ ಜಾಗ ವಾಪಸ್: ಆಂಧ್ರ ರಾಜ್ಯಪಾಲರು ಭರವಸೆ ನೀಡಿದ್ದಾರೆ; ರಾಮಲಿಂಗಾ ರೆಡ್ಡಿ

​ಪ್ರಜಾವಾಣಿ ವಾರ್ತೆ
Published 2 ಸೆಪ್ಟೆಂಬರ್ 2025, 23:18 IST
Last Updated 2 ಸೆಪ್ಟೆಂಬರ್ 2025, 23:18 IST
ರಾಮಲಿಂಗಾರೆಡ್ಡಿ
ರಾಮಲಿಂಗಾರೆಡ್ಡಿ   

ಬೆಂಗಳೂರು: ‘ತಿರುಮಲದಲ್ಲಿ ಕರ್ನಾಟಕಕ್ಕೆ ಹಂಚಿಕೆಯಾಗಿದ್ದ ಭೂಮಿಯನ್ನು ಮರಳಿ ಪಡೆಯಲು ಸಹಾಯ ಮಾಡುವುದಾಗಿ ಆಂಧ್ರಪ್ರದೇಶದ ರಾಜ್ಯಪಾಲ ನ್ಯಾಯಮೂರ್ತಿ ಎಸ್. ಅಬ್ದುಲ್ ನಜೀರ್ ಅವರು ಭರವಸೆ ನೀಡಿದ್ದಾರೆ’ ಎಂದು ಮುಜರಾಯಿ ಸಚಿವ ಆರ್. ರಾಮಲಿಂಗಾ ರೆಡ್ಡಿ ತಿಳಿಸಿದರು.

ಕುಮಾರಕೃಪ ಅತಿಥಿಗೃಹದಲ್ಲಿ ನಜೀರ್ ಅಹಮದ್ ಅವರನ್ನು ಸೋಮವಾರ ಭೇಟಿ ಮಾಡಿದ ನಂತರ ಸುದ್ದಿಗಾರರ ಜೊತೆ ಮಾತನಾಡಿದ ಅವರು, ‘ತಿರುಮಲದಲ್ಲಿ ನೀಡಿರುವ ವಸತಿಗೃಹಗಳ ಭೋಗ್ಯದ ಅವಧಿಯನ್ನು 30 ವರ್ಷದಿಂದ 100 ವರ್ಷಕ್ಕೆ ಏರಿಸುವ ಬಗ್ಗೆ, ಮಂತ್ರಾಲಯದಲ್ಲಿರುವ ಜಾಗದ ಕುರಿತಾದ ತಕರಾರು ಮತ್ತು ಶ್ರೀಶೈಲಂನಲ್ಲಿ ಕರ್ನಾಟಕ ಸರ್ಕಾರಕ್ಕೆ ಹಸ್ತಾಂತರಿಸಬೇಕಾದ ಜಾಗದ ಬಗ್ಗೆ ಶೀಘ್ರ ಇತ್ಯರ್ಥಪಡಿಸುವ ವಿಚಾರವಾಗಿ ಅವರ ಜೊತೆ ಚರ್ಚೆ ನಡೆಸಿದ್ದೇನೆ’ ಎಂದರು.

‘ತಿರುಪತಿಯ ತಿರುಮಲದ ಜಾಗವನ್ನು ರಾಜರು ನೀಡಿದ್ದರು. ಶ್ರೀಶೈಲದಲ್ಲಿ ಕರ್ನಾಟಕಕ್ಕೆ 10 ಎಕರೆ ಹಂಚಿಕೆ ಮಾಡಲಾಗಿತ್ತು. ಈ ಭೂಮಿಯ ಅಭಿವೃದ್ಧಿಗೆ ನಾವು ₹ 85 ಕೋಟಿ ಖರ್ಚು ಮಾಡಿದ್ದೇವೆ. ಈಗ, ಈ ಭೂಮಿಯನ್ನು ಆಂಧ್ರ ಪ್ರದೇಶ ಸರ್ಕಾರ ಮರಳಿ ಪಡೆಯಲು ಯತ್ನಿಸುತ್ತಿದೆ. ಇದು ಸರಿಯಲ್ಲ. ಜೊತೆಗೆ ಮಂತ್ರಾಲಯದಲ್ಲೂ ಜಾಗದ ವಿಷಯ ಇತ್ಯರ್ಥ ಆಗಬೇಕಿದೆ. ಈ ವಿಚಾರದಲ್ಲಿ ಮಧ್ಯಪ್ರವೇಶಿಸಿ, ಆಂಧ್ರ ಸರ್ಕಾರ ತನ್ನ ಪ್ರಸ್ತಾವ ಕೈಬಿಡುವಂತೆ ಒತ್ತಾಯಿಸಬೇಕೆಂದು ರಾಜ್ಯಪಾಲರ ಬಳಿ ವಿನಂತಿಸಲಾಗಿದೆ’ ಎಂದರು.

ADVERTISEMENT

‘ಈ ವಿಷಯದ ಬಗ್ಗೆ ಸಂಬಂಧಿಸಿದ ಅಧಿಕಾರಿಗಳಿಗೆ ಈಗಾಗಲೇ ಸೂಚನೆ ನೀಡಲಾಗಿದೆ. ಅಲ್ಲದೆ, ಪರಿಹಾರ ನೀಡುವ ಬಗ್ಗೆಯೂ ಭರವಸೆ ನೀಡಲಾಗಿದೆ’ ಎಂದೂ ಸಚಿವರು ಹೇಳಿದರು.

‘ಚಾಮುಂಡಿ ಬೆಟ್ಟ ಹಿಂದೂಗಳ ಆಸ್ತಿ ಅಲ್ಲ’ ಎಂದು ಉಪ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್‌ ನೀಡಿದ್ದ ಹೇಳಿಕೆಯ ಬಗ್ಗೆ ಗಮನಸೆಳೆದಾಗ ಪ್ರತಿಕ್ರಿಯಿಸಿದ ರೆಡ್ಡಿ, ‘ಅಲ್ಲಿನ ಸುಮಾರು 38 ಎಕರೆ ಮುಜರಾಯಿ ಇಲಾಖೆಗೆ ಸೇರಿದ್ದು. ಮಹಾರಾಜರು ನ್ಯಾಯಾಲಯದ ಮೆಟ್ಟಿಲೇರಿದ್ದರು. ವಿಚಾರಣೆ ಮುಂದುವರಿದಿದೆ’ ಎಂದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.