ADVERTISEMENT

ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ: ಎಸ್‌.ನರೇಶ್‌ ಕುಮಾರ್

​ಪ್ರಜಾವಾಣಿ ವಾರ್ತೆ
Published 20 ಸೆಪ್ಟೆಂಬರ್ 2025, 14:06 IST
Last Updated 20 ಸೆಪ್ಟೆಂಬರ್ 2025, 14:06 IST
ಎಸ್. ನರೇಶ್ ಕುಮಾರ್
ಎಸ್. ನರೇಶ್ ಕುಮಾರ್   

ಬೆಂಗಳೂರು: ಬೆಳಗಾವಿಯಲ್ಲಿ ತಿರುಮಲ ತಿರುಪತಿ ದೇವಸ್ಥಾನ ನಿರ್ಮಿಸಲು ನಿರ್ಧರಿಸಲಾಗಿದೆ ಎಂದು ತಿರುಮಲ ತಿರುಪತಿ ದೇವಸ್ಥಾನ (ಟಿಟಿಡಿ) ಆಡಳಿತ ಮಂಡಳಿಯ ಕರ್ನಾಟಕ ಸದಸ್ಯ ಎಸ್‌.ನರೇಶ್‌ ಕುಮಾರ್ ತಿಳಿಸಿದರು.

ಮಲ್ಲೇಶ್ವರದಲ್ಲಿ ಇರುವ ಟಿಟಿಡಿ ದೇವಾಲಯದಲ್ಲಿ ಶನಿವಾರ ಸುದ್ದಿಗೋಷ್ಠಿಯಲ್ಲಿ ಮಾತನಾಡಿದ ಅವರು, ‘ಬೆಳಗಾವಿ ಬಾಲಾಜಿ ಟ್ರಸ್ಟ್‌ ಎಂಬ ಸಂಸ್ಥೆಯು ಸುವರ್ಣ ಸೌಧದ ಎದುರು ಏಳು ಎಕರೆ ಜಾಗವನ್ನು ಖರೀದಿಸಿದೆ. ಅಲ್ಲಿ ಅಂದಾಜು ₹100 ಕೋಟಿ ವೆಚ್ಚದಲ್ಲಿ ದೇವಾಲಯ ನಿರ್ಮಿಸಲು ಟಿಟಿಡಿ ಆಡಳಿತ ಮಂಡಳಿ ಅನುಮೋದನೆ ನೀಡಿದೆ’ ಎಂದರು.

‘ಮುಂದಿನ ತಿಂಗಳಿನಲ್ಲಿ ಟಿಟಿಡಿ ಆಡಳಿತ ಮಂಡಳಿ ಸದಸ್ಯರು ಸ್ಥಳಕ್ಕೆ ಭೇಟಿ ನೀಡಿ ಪರಿಶೀಲಿಸಲಿದ್ದಾರೆ. 2025ರ ಅಂತ್ಯದೊಳಗೆ ನಿರ್ಮಾಣ ಕಾಮಗಾರಿ ಆರಂಭವಾಗುವ ನಿರೀಕ್ಷೆ ಇದೆ’ ಎಂದು ಮಾಹಿತಿ ನೀಡಿದರು.

ADVERTISEMENT

ವೈಷ್ಣವ ದೇವಾಲಯಗಳಿಗೆ ನೆರವು: ‘ಜೀರ್ಣೋದ್ಧಾರ ಅಗತ್ಯವಿರುವ, ದೈನಂದಿನ ಪೂಜೆ ವಿಧಿವಿಧಾನಗಳನ್ನು ನಡೆಸಲು ಆರ್ಥಿಕ ನೆರವು ಅಗತ್ಯವಿರುವ ವೈಷ್ಣವ ಸಂಬಂಧಿ ದೇವಾಲಯಗಳು ಟಿಟಿಡಿ ಮಂಡಳಿಗೆ ಮನವಿ ಪತ್ರ ಸಲ್ಲಿಸಿದರೆ, ಅಗತ್ಯ ಹಣಕಾಸು ನೆರವು ಒದಗಿಸುತ್ತೇವೆ’ ಎಂದು ನರೇಶ್‌ ಕುಮಾರ್ ಅವರು ಪ್ರಶ್ನೆಯೊಂದಕ್ಕೆ ಉತ್ತರಿಸಿದರು.

‘ರಾಜ್ಯ ಮತ್ತು ದೇಶದ ಯಾವುದೇ ಭಾಗದಲ್ಲಿರುವ ದೇವಾಲಯಗಳು ಜೀರ್ಣೋದ್ಧಾರಕ್ಕೆ ಅರ್ಜಿ ಸಲ್ಲಿಸಿದರೆ, ಅದನ್ನು ಪರಿಶೀಲನೆ ನಡೆಸಲಾಗುತ್ತದೆ. ಟಿಟಿಡಿ ಮಂಡಳಿ ಸಭೆಯಲ್ಲಿ ಆ ಬಗ್ಗೆ ಚರ್ಚಿಸಿ, ಹಣಕಾಸು ನೆರವು ಒದಗಿಸಲಾಗುತ್ತದೆ’ ಎಂದರು.

‘ತಿರುಮಲ ತಿರುಪತಿ ದೇವಾಲಯ ದರ್ಶನಕ್ಕೆ ಈಗ ಇರುವ ಪಾಸ್‌–ಟಿಕೆಟ್‌ ವ್ಯವಸ್ಥೆಯನ್ನು ಸಂಪೂರ್ಣವಾಗಿ ಕೈಬಿಡುವ ಬಗ್ಗೆ ಪರಿಶೀಲನೆ ನಡೆಸಲಾಗುತ್ತಿದೆ. ಜನದಟ್ಟಣೆ ನಿರ್ವಹಣೆ ಬಗ್ಗೆ ಗೂಗಲ್‌ ಮತ್ತು ಟಿಸಿಎಸ್‌ ಕಂಪನಿಗಳು ಪ್ರಸ್ತಾವ ಸಿದ್ಧಪಡಿಸಿವೆ. ಅವುಗಳ ಕಾರ್ಯಸಾಧ್ಯತೆಯನ್ನು ಪರಿಗಣಿಸಿ, ಕ್ರಮ ತೆಗೆದುಕೊಳ್ಳಲಾಗುತ್ತದೆ’ ಎಂದು ಪ್ರಶ್ನೆಗೆ ಉತ್ತರಿಸಿದರು.

24ರಿಂದ ಬ್ರಹ್ಮೋತ್ಸವ

‘ಇದೇ 24ರಿಂದ ಅಕ್ಟೋಬರ್ 2ರವರೆಗೆ ತಿರುಮಲ ತಿರುಪತಿಯಲ್ಲಿ ಸಾಲಕಟ್ಲ ಬ್ರಹ್ಮೋತ್ಸವನ್ನು ಆಯೋಜಿಸಲಾಗಿದೆ. ಪ್ರತಿದಿನ 2–3 ಲಕ್ಷ ಭಕ್ತರು ಭೇಟಿ ನೀಡುವ ನಿರೀಕ್ಷೆ ಇದ್ದು ಭದ್ರತೆಗೆ ಧಕ್ಕೆಯಾಗದ ರೀತಿಯಲ್ಲಿ ಎಲ್ಲ ಸಿದ್ಧತೆಗಳನ್ನು ಮಾಡಿಕೊಳ್ಳಲಾಗಿದೆ’ ಎಂದು ನರೇಶ್‌ ಕುಮಾರ್ ಹೇಳಿದರು.

‘24ರಂದು ಧ್ವಜಾರೋಹಣ 28ರಂದು ಗರುಡ ಸೇವೆ ಅಕ್ಟೋಬರ್ 1ರಂದು ರಥೋತ್ಸವ ಅಕ್ಟೋಬರ್ 2ರಂದು ಚಕ್ರ ಸ್ನಾನ ಮತ್ತು ಧ್ವಜಾವರೋಹಣ ವಿಧಿಗಳು ನಡೆಯಲಿವೆ. ಬ್ರಹ್ಮರಥೋತ್ಸವ ನಡೆಯಲಿರುವ ಅಷ್ಟೂ ದಿನ ಆನ್‌ಲೈನ್‌ನಲ್ಲಿ 1.16 ಲಕ್ಷ ಟಿಕೆಟ್‌ಗಳು ಮತ್ತು 25000 ಎಸ್‌ಎಸ್‌ಡಿ ಟೋಕನ್‌ಗಳನ್ನು ವಿತರಿಸಲಾಗುತ್ತದೆ’ ಎಂದು ತಿಳಿಸಿದರು.

‘ವಿಐಪಿ ಟಿಕೆಟ್‌ ವಿಐಪಿ ಪಾಸುಗಳು ಇರುವುದಿಲ್ಲ. ದೇವಾಲಯಕ್ಕೆ ಭೇಟಿ ನೀಡುವ ಸರ್ಕಾರದ ಉನ್ನತ ಪ್ರತಿನಿಧಿಗಳಿಗೆ ಮಾತ್ರವೇ ಶಿಷ್ಟಾಚಾರದ ವ್ಯವಸ್ಥೆ ಮಾಡಲಾಗುತ್ತದೆ. ಬ್ರಹ್ಮರಥೋತ್ಸವದ ವೇಳೆ ನೂಕುನುಗ್ಗಲು ತಪ್ಪಿಸಲು ಹಲವೆಡೆ ಎಲ್‌ಇಡಿ ಪರದೆಗಳನ್ನು ಅಳವಡಿಸಿ ರಥೋತ್ಸವ ವೀಕ್ಷಣೆಗೆ ಅವಕಾಶ ಮಾಡಿಕೊಡಲಾಗುತ್ತದೆ’ ಎಂದರು.

‘ತಿರುಪತಿ ಟೋಲ್‌ ಬಳಿಯಲ್ಲಿಯೇ ವಿಶಾಲವಾದ ವಾಹನ ನಿಲುಗಡೆ ಪ್ರದೇಶವನ್ನು ಸಜ್ಜುಗೊಳಿಸಲಾಗಿದೆ. ಏಕಕಾಲದಲ್ಲಿ 4000 ಕಾರುಗಳು 2500ರಿಂದ 4000 ದ್ವಿಚಕ್ರವಾಹನಗಳನ್ನು ಅಲ್ಲಿ ನಿಲ್ಲಿಸಬಹುದಾಗಿದೆ. ಅಲ್ಲಿಂದ ಬೆಟ್ಟಕ್ಕೆ ಪ್ರತಿದಿನ 3200 ಟ್ರಿಪ್‌ಗಳಷ್ಟು ಬಸ್‌ ವ್ಯವಸ್ಥೆ ಇರಲಿದೆ’ ಎಂದು ವಿವರಿಸಿದರು.

ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ವಾಟ್ಸ್ಆ್ಯಪ್, ಎಕ್ಸ್, ಫೇಸ್‌ಬುಕ್ ಮತ್ತು ಇನ್‌ಸ್ಟಾಗ್ರಾಂನಲ್ಲಿ ಪ್ರಜಾವಾಣಿ ಫಾಲೋ ಮಾಡಿ.