ADVERTISEMENT

ಅತ್ಯಾಚಾರ ಕುರಿತ ರಮೇಶ್‌ ಕುಮಾರ್ ಮಾತು: ರಾಜ್ಯದ ಮಹಿಳೆಯರ ಕ್ಷಮೆ ಯಾಚಿಸಿದ ಡಿಕೆಶಿ

ಪ್ರಜಾವಾಣಿ ವೆಬ್‌ ಡೆಸ್ಕ್‌ 
Published 17 ಡಿಸೆಂಬರ್ 2021, 12:20 IST
Last Updated 17 ಡಿಸೆಂಬರ್ 2021, 12:20 IST
ರಮೇಶ್‌ಕುಮಾರ್‌ ಮತ್ತು ಡಿ.ಕೆ ಶಿವಕುಮಾರ್‌
ರಮೇಶ್‌ಕುಮಾರ್‌ ಮತ್ತು ಡಿ.ಕೆ ಶಿವಕುಮಾರ್‌   

ಬೆಂಗಳೂರು: ಅತ್ಯಾಚಾರದ ಕುರಿತ ಶಾಸಕ ರಮೇಶ್‌ ಕುಮಾರ್‌ ಅವರ ಮಾತಿಗೆ ಕಾಂಗ್ರೆಸ್‌ ಅಧ್ಯಕ್ಷ ಡಿ.ಕೆ ಶಿವಕುಮಾರ್‌ ಅವರು ಇಡೀ ರಾಜ್ಯದ ಮಹಿಳೆಯರ ಕ್ಷಮೆ ಕೋರಿದ್ದಾರೆ.

ಈ ಬಗ್ಗೆ ಶುಕ್ರವಾರ ಟ್ವೀಟ್‌ ಮಾಡಿರುವ ಶಿವಕುಮಾರ್, ‘ನಾನು ಕರ್ನಾಟಕದ ಎಲ್ಲಾ ಮಹಿಳೆಯರ ಕ್ಷಮೆ ಯಾಚಿಸುತ್ತೇನೆ. ಈ ರೀತಿಯ ಮಾತುಗಳು ಎಂದಿಗೂ ಪುನರಾವರ್ತನೆಯಾಗುವುದಿಲ್ಲ ಎಂದು ನಾನು ಈ ಮೂಲಕ ಖಾತ್ರಿಪಡಿಸುತ್ತೇನೆ,’ ಎಂದು ಭರವಸೆ ನೀಡಿದ್ದಾರೆ.

‘ರಮೇಶ್‌ ಕುಮಾರ್‌ ಅವರ ಮಾತಿನ ಬಗ್ಗೆ ನಾನು ತೀವ್ರ ದುಃಖಿತನಾಗಿದ್ದೇನೆ’ ಎಂದು ಅವರು ಹೇಳಿದ್ದಾರೆ.

ADVERTISEMENT

‘ಕರ್ನಾಟಕ ವಿಧಾನಸಭೆಯಲ್ಲಿ ನಮ್ಮದೇ ಶಾಸಕರೊಬ್ಬರು ಆಡಿದ ಮಾತನ್ನು ಕಾಂಗ್ರೆಸ್ ಪಕ್ಷ ಖಂಡಿಸುತ್ತದೆ. ಮಹಿಳೆಯರ ವಿರುದ್ಧದ ಸಂವೇದನಾ ರಹಿತ ಹೇಳಿಕೆಯು ಕಾಂಗ್ರೆಸ್‌ ಪ್ರತಿಪಾದಿಸುವ ಲಿಂಗ ಸಮಾನತೆಯ ಮೌಲ್ಯಗಳಿಗೆ ವಿರುದ್ಧವಾಗಿದೆ,’ ಎಂದು ಅವರು ಬರೆದುಕೊಂಡಿದ್ದಾರೆ.

ಘಟನೆಗೆ ಇಡೀ ವಿಧಾನಸಭೆಯೇ ಕ್ಷಮೆ ಯಾಚಿಸಬೇಕು ಎಂದು ಕಾಂಗ್ರೆಸ್ ಶಾಸಕಿ ಅಂಜಲಿ ನಿಂಬಾಳ್ಕರ್ ಅವರು ಆಗ್ರಹಿಸಿದ್ದಾರೆ.

ಕರ್ನಾಟಕ ವಿಧಾನಸಭೆಯಲ್ಲಿ ಗುರುವಾರ ನಡೆದ ಚರ್ಚೆಯ ವೇಳೆ ಶಾಸಕರ ಅಸಹಕಾರದ ಬಗ್ಗೆ ಸ್ಪೀಕರ್ ವಿಶ್ವೇಶ್ವರ ಹೆಗಡೆ ಕಾಗೇರಿ ಅಸಮಾಧಾನ ವ್ಯಕ್ತಪಡಿಸಿದ್ದರು. ಎಷ್ಟು ಶಾಸಕರು ಬೇಕಾದರೂ ಮಾತನಾಡಲಿ, ನಾನು ಕೇಳುತ್ತಾ ಆನಂದಿಸುವುದನ್ನು ಬಿಟ್ಟರೆ ಇನ್ನೇನು ಮಾಡಲಿ. ಅಜೆಂಡಾದಲ್ಲಿರುವ ಬೇರೆ ಯಾವುದೇ ವಿಷಯಗಳನ್ನು ಕೈಗೆತ್ತಿಕೊಳ್ಳಲು ಸಾಧ್ಯವಾಗುವುದಿಲ್ಲ. ಇದಕ್ಕೆ ಒಂದು ಮಾತಿದೆಯಲ್ಲವೇ, ರಮೇಶ್ ಕುಮಾರ್ ಎಂದು ಪ್ರಶ್ನಿಸಿದ್ದರು. ಇದಕ್ಕುತ್ತರಿಸಿದ್ದ ಕಾಂಗ್ರೆಸ್ ಶಾಸಕ, ‘ದೇರ್‌ ಈಸ್‌ ಎ ಸೇಯಿಂಗ್‌, ವೆನ್‌ ರೇಪ್‌ ಈಸ್‌ ಇನೆವಿಟೆಬಲ್‌ ಲೆಟ್‌ ಲೇ ಡೌನ್‌ ಅಂಡ್‌ ಎಂಜಾಯ್‌’ (ಅಂದರೆ, ಅತ್ಯಾಚಾರದಿಂದ ತಪ್ಪಿಸಿಕೊಳ್ಳಲು ಸಾಧ್ಯವಾಗದಿದ್ದರೆ, ಮಲಗಿ ಆನಂದಿಸಿ) ಎಂದು ಹೇಳಿದ್ದರು. ಇದನ್ನು ಕೇಳಿ ಕಾಗೇರಿ ನಗಾಡಿದ್ದರು.

ಹೇಳಿಕೆ ವಿವಾದಕ್ಕೀಡಾಗುತ್ತಿದ್ದಂತೆ ರಮೇಶ್‌ ಕುಮಾರ್ ಕ್ಷಮೆ ಯಾಚಿಸಿದ್ದಾರೆ.

ತಾಜಾ ಸುದ್ದಿಗಾಗಿ ಪ್ರಜಾವಾಣಿ ಟೆಲಿಗ್ರಾಂ ಚಾನೆಲ್ ಸೇರಿಕೊಳ್ಳಿ | ಪ್ರಜಾವಾಣಿ ಆ್ಯಪ್ ಇಲ್ಲಿದೆ: ಆಂಡ್ರಾಯ್ಡ್ | ಐಒಎಸ್ | ನಮ್ಮ ಫೇಸ್‌ಬುಕ್ ಪುಟ ಫಾಲೋ ಮಾಡಿ.